आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Sunday 1 November 2015

ಹೋರಾಟದ ಇನ್ನೊಂದು ಮುಖ..

       ಕಾಲವೊಂದಿತ್ತು....... ದಿನ ಬೆಳಗಾಗುವುದರೊಳಗೆ ಪ್ಲೇಗ್ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡುತ್ತಿತ್ತು. ಸಾಂಕ್ರಾಮಿಕ ರೋಗಗಳೇ ಹಾಗೆ, ಬಹಳ ವೇಗವಾಗಿ ಹರಡುತ್ತವೆ. ಪ್ಲೇಗಿಗೇನೋ ಔಷಧಿ ಕಂಡುಹಿಡಿದರು. ಆದರೆ ಈಗ ಮತ್ತೊಂದು ರೋಗ ಅತ್ಯಂತ ವೇಗವಾಗಿ ಹರಡುತ್ತಿದೆ. ಅದಕ್ಕೆ ಯಾವಾಗ ಮದ್ದು ದೊರೆಯುವುದೋ ಕಾದುನೋಡಬೇಕು. ನಾ ಹೇಳಹೊರಟಿರುವುದು ಪ್ರಶಸ್ತಿ ವಾಪಸು ನೀಡುವ ರೋಗ ಹರಡುತ್ತಿದೆಯಲ್ಲಾ ಅದರ ಬಗೆಗೆ. ವ್ಯತ್ಯಾಸ ಇಷ್ಟೇ, ಪ್ಲೇಗ್ ದೈಹಿಕರೋಗವಾದರೆ ಇದು ಮಾನಸಿಕರೋಗ. ಒಬ್ಬರಾದಮೇಲೊಬ್ಬರು ತಮ್ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವುದು ಪ್ರತಿನಿತ್ಯದ ಸುದ್ದಿ.

       ಮೊದಮೊದಲು ಇವರ ಈ ಹೋರಾಟದ ಛಾಪನ್ನು ನೋಡಿ ಏನೋ ಬಲವಾದ ಕಾರಣಗಳಿರಬಹುದೆಂದೇ ತಿಳಿದಿದ್ದೆ. ಆದರೆ ನಂತರ ಇವರ ಹೊರಟದ ಹೊಂದಿರುವ ಸತ್ಯ ಮತ್ತು ಇವರ ನೈತಿಕತೆ ತಿಳಿಯಿತು. ಒಂದು ವರ್ಷದಿಂದ ಈಚೆಗೆ ಈ ದೇಶದಲ್ಲಿ ಮಾನವತೆಯೇ ಮಾಯವಾಗುತ್ತಿದೆ ಎಂದು ಬಿಂಬಿಸಲು ಹೆಣಗಾಡುತ್ತಿರುವ ಇವರು ಧರ್ಮ ಅಸಹಿಷ್ಣುತೆ, ಕೋಮುದ್ವೇಷ, ಅಭಿಪ್ರಾಯ ಸ್ವಾತಂತ್ರ್ಯದ ಕಗ್ಗೊಲೆ ಇನ್ನಿತರೇ ಏನೇನೋ ಪದಗುಚ್ಛಗಳನ್ನು ಪುಂಖಾನುಪುಂಖವಾಗಿ ಹೇಳಲಾರಂಭಿಸಿದ್ದಾರೆ. ಆದರೆ ಇವೆಲ್ಲವೂ ಇವರುಗಳು ಪ್ರಶಸ್ತಿ ಸ್ವೀಕರಿಸುವ ಮೊದಲೂ,  ಹಾಗೂ ನಂತರದಲ್ಲೂ ಇದ್ದುದು ಇವರ ಇಂದ್ರಿಯಗಳಿಗೆ ಗೋಚಾರವಾಗಲಿಲ್ಲವೇನೋ. ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದಹಾಗೆ ಒಮ್ಮೆಲೇ ಇವರಿಗೆ ಈಗ ಜ್ಞಾನೋದಯವಾಗಿರಬೇಕು. ಹಿಂದುವಾಗಲೀ ಮುಸಲ್ಮಾನನಾಗಲೀ ಅಥವಾ ಇನ್ಯಾವ ಧರ್ಮದವನೇ ಆಗಲಿ ಕೋಮುದ್ವೇಶದಿಂದ ಕೊಲ್ಲಲ್ಪಟ್ಟರೆ ಅದು ಚಿಕ್ಕ ವಿಷಯವಲ್ಲ ಸರಿ, ಆದರೆ ಈ ಹಿಂದೆ ನಡೆದ ಸಿಖ್ಖರ ನರಮೇಧದಿಂದ ಹಿಡಿದು ಕಶ್ಮೀರಿ ಪಂಡಿತರ ಹತ್ಯಾಕಾಂಡ, ಉಲ್ಫಾ, ಮಾವೋ, ನಕ್ಸಲೈಟ್, ಜಿಹಾದೀ ಉಗ್ರಗಾಮಿಗಳ ಅಮಾನವೀಯ ಅಟ್ಟಹಾಸಗಳೆಲ್ಲಾ ಇವರಿಗೇಕೆ ಕಾಣಲಿಲ್ಲ ಎಂಬುದೇ ನನ್ನಲ್ಲಿ ಕಾಡುವ ಪ್ರಶ್ನೆ.  


       ಅಷ್ಟೇ ಅಲ್ಲ, ಲೈಂಗಿಕ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹೋಗುವಾಗಲೂ ಇವರು ಚಕಾರವೆತ್ತಲಿಲ್ಲ. ಕಾರಣವಾದರೂ ಏನು? ಇವರಿಗೆ ಪ್ರಶಸ್ತಿ ನೀಡಿದವರ ಬಗೆಗಿರುವ ಮೃದುತನ ಹಾಗು ಅವರ ಬಗೆಗಿನ ಹಿತಾಸಕ್ತಿಯೇ? ಕನ್ನಡದ ಒಬ್ಬ ವಿವಾದಿತ ಲೇಖಕನೊಬ್ಬ ಹೇಳಿದ ಸಾಹಿತಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ, ಸಾಹಿತಿಗಳು ಭಯದಿಂದ ಬದುಕುವಹಾಗೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು. ಕೆಲ ತಿಂಗಳ ಹಿಂದೆ ಶ್ರೀಮಾನ್ ನಾರಾಯಣಾಚಾರ್ಯರವರ ವಾಲ್ಮೀಕಿ ಬಗೆಗಿನ ಕೃತಿಯನ್ನು ಅದು ಬಿಡುಗಡೆಗೊಳ್ಳುವ ಮೊದಲೇ ಅದರ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿತಲ್ಲಾ ಅದು ಸಾಹಿತಿಯ ಅಭಿಪ್ರಾಯ ಸ್ವಾತಂತ್ರ್ಯದ ಕೊಲೆಯಲ್ಲವೇ? ಆ ಸಮಯದಲ್ಲಿ ಸಾಹಿತಿಗಳೆಲ್ಲಾ ಎಲ್ಲಿ ಹೋಗಿದ್ದರು? ಬಿಡಿ ಆ ನಿಷೇಧವನ್ನು ನ್ಯಾಯಾಲಯವು ತಳ್ಳಿಹಾಕಿ ಆಚಾರ್ಯರ ಪರ ತೀರ್ಪನ್ನಿತ್ತು, ಸರ್ಕಾರವು ಮುಖಭಂಗ ಅನುಭವಿಸಿದ್ದು ಹಾಸ್ಯಾಸ್ಪದದ  ವಿಷಯ.

       ಸಾಹಿತಿ ತನ್ನ ಬರವಣಿಗೆಗಳ ಮೂಲಕ ತನ್ನ ಅನುಭವ ಮತ್ತು ಸಮಾಜದ ಮಜಲುಗಳನ್ನು ಬಿಂಬಿಸಲು ಪ್ರಯತ್ನಿಸುತ್ತಾನೆ. ಹಾಗು ಹಲವರು ಸಮಾಜ ಸುಧಾರಣೆಗಾಗಿ ಹೋರಾಟಕ್ಕೆ ಧುಮುಕುತ್ತಾರೆ, ಹಾಗಂತ ಎಲ್ಲಾ ಸಾಹಿತಿಗಳೂ ಹೋರಾಟಗಾರರಾಗಲಾರರು. ತಮ್ಮ IDENTITYಗಾಗಿ ಹೋರಾಟದ ಮುಖವಾಡ ತೊಡುವವರಿದ್ದಾರೆ. ಶಿವರಾಮ ಕಾರಂತರು ಎಮರ್ಜೆನ್ಸಿ ವಿರೋಧಿಸಿ ಇಂದಿರಾಗಾಂಧಿಗೆ  ಪತ್ರ ಬರೆದು ತಮಗೆ ನೀಡಿದ "ಪದ್ಮಭೂಷಣ" ಪ್ರಶಸ್ತಿಯನ್ನು ಹಿಂತಿರುಗಿಸಿದ ದಿಟ್ಟತನ ಇಂದು ಪ್ರಶಸ್ತಿ ಹಿಂತಿರುಗಿಸುತ್ತಿರುವವರಿಗೆ ಈ ಹಿಂದೆ ಏಕೆ ಬರಲಿಲ್ಲ? ಕಾರಂತರ ವಿಷಯ ಹಳೆಯದಾಯಿತು ಬಿಡಿ. ಮೊನ್ನೆ ಮೊನ್ನೆ ಕಡಿದಾಳು ಶಾಮಣ್ಣನವರಿಗೆ ದಸರಾ ಉತ್ಸವ ಉದ್ಘಾಟನೆಯ ಆಮಂತ್ರಣ ಬಂದಾಗ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ನಡೆಸುವ ಉತ್ಸವಕ್ಕೆ ನಾನು ಬರುವುದಿಲ್ಲವೆಂದು ಖಂಡತುಂಡವಾಗಿ ಆಹ್ವಾನ ನಿರಾಕರಿಸಿದರಲ್ಲಾ ಅದು ಹೋರಾಟದ ನೈಜತೆ ಹಾಗು ನೈತಿಕತೆ ತೋರುತ್ತದೆ. 


        ಹೂಕೋಸಿನ ಗೆಡ್ಡೆಯನ್ನು ಬಿಸಿಯಾದ ಉಪ್ಪುನೀರಿಗೆ ಹಾಕಿದಾಗ ಅದರೊಳಗಿರುವ ಹುಳಗಳೆಲ್ಲಾ ಸರಣಿ ಸರಣಿಯಾಗಿ ಹೊರ ಬರುತ್ತವಲ್ಲಾ ಹಾಗೆ ಯಾರ್ಯಾರ ಉಪ್ಪು ತಿಂದವರೋ ಏನೋ ಇಂದು ಋಣ ತೀರಿಸಲು ಹೊರಬರುತ್ತಿದ್ದಂತೆ ಕಾಣುತ್ತಿದೆ. ಸಾಹಿತಿಗಳನ್ನು ಸಮಾಜದ ಹಿತರಕ್ಷಕರೆಂದು ಬಿಂಬಿಸಿ ಅವರನ್ನು ಅಟ್ಟಕ್ಕೇರಿಸುವುದನ್ನು ಮೊದಲು ಬಿಡಬೇಕು. 


"ಸಾಹಿತಿ ಲೋಕೋದ್ಧಾರನೆಂಬ ಭಾವನೆಯೇನೂ ಬೇಡ. ಅವನೂ ಎಲ್ಲರಂತೆ ಒಬ್ಬ ಮನುಷ್ಯ. ಆತ ಬರೆದಮಾತ್ರಕ್ಕೆ ಮಹಾನುಭಾವ ಆಗೋಲ್ಲ" ಎಂದ ಕಾರಂತರು ಏಕೋ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ.

No comments:

Post a Comment