आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Saturday 23 July 2016

ಶೄoಗದ ಬೆನ್ನೇರುವಾಗ ಹಾರಿದ ಕಪ್ಪೆ.!!




      ಪ್ರತೀಬಾರಿ ಕುದುರೇ ಮುಖದ ತುತ್ತತುದಿ ತಲುಪಿ suicide pointನಂತಿರುವ ಬಂಡೆಯ ಮೇಲೆ ಕೂತು ಎದುರು ನೋಡಿದಾಗ, ಮೋಡಗಳ ಮಧ್ಯದಲ್ಲೊಂದು  ಅಣಬೆಯ ಹಾಗೆ ಧಿಡೀರನೆ ಎದ್ದು ನಿಂತಿರುವ ಮುಸುಕುj ಮುಸುಕಾದ ಆಕೃತಿಯೊಂದು ಕಾಣುತ್ತಲೇ ಇತ್ತು. 'ಅದೊಂದು ಬೆಟ್ಟ ಯಾವುದೋ ಏನೋ' ಎಂದು ಯಾವಾಗಲೂ ಕುತೂಹಲದಿಂದ ನೋಡುತ್ತಿದ್ದೆ. ಇದೇ ಅನುಭವ ಮತ್ತೊಮ್ಮೆ ಬಲ್ಲಾಳರಾಯನ ದುರ್ಗದ ಮೂಲಕ ಬಂಡಾಜೆ-ಅರ್ಬಿ ಜಲಪಾತದ ತುದಿಗೆ ಹೋದಾಗ ಆಯಿತು. ಅಲ್ಲಿಯೂ ಅದೇ ದೃಶ್ಯ. ಕುದುರೇಮುಖ ಶಿಖರಾಗ್ರದಲ್ಲಿ ಕುಳಿತಾಗ ಕಾಣಿಸಿಕೊಂಡ ಬೆಟ್ಟವೇ ಅದು. ಆದರೆ ಅದ್ಯಾವ ಬೆಟ್ಟವೆಂದು ತಿಳಿದುಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಮುಂದೊಂದು ದಿನ ಅಲ್ಲಿಗೆ ಹೋಗುವ ಅವಕಾಶವೂ ಒದಗಿಬಂತು.

"ಗಡಾಯಿಕಲ್ಲು"
ಇದು ಉಜಿರೆಯ ಹೊರವಲಯದಲ್ಲಿರುವ, ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಗಡಿಭಾಗದ ಒಂದು ಬೃಹದಾಕಾರದ ಶಿಲಾವೃತ ಗುಡ್ಡ. ಇದರ ಹೆಸರು ತೇಜಸ್ವಿಯವರ ಪುಸ್ತಕದಲ್ಲಿ ಓದಿದ್ದೆ. ಆದರೆ ಎಲ್ಲೂ ಹೆಚ್ಚು ವಿವರಣೆ ಇರಲಿಲ್ಲ. ಮುಂದೊಂದು ದಿನ ಕೆದಂಬಾಡಿ ಜತ್ತಪ್ಪ ರೈಗಳ ಪುಸ್ತಕದಲ್ಲಿ ವಿಸ್ತೃತ ವಿವರಣೆ ಸಿಕ್ಕಿತು. ಆಗಲೇ ಗಡಾಯಿಕಲ್ಲು ನೋಡುವ ಬಯಕೆ ಇತ್ತು.

ಗಡಾಯಿಕಲ್ಲು ರೂಪುಗೊಂಡ ವಿಚಿತ್ರ ಶೈಲಿ, ಹಾಗೂ ಅದರಲ್ಲಿ ವಾಸವಾಗಿರುವ ವಿಚಿತ್ರ ಜೀವಿ ನನಗೆ ಗಡಾಯಿಕಲ್ಲು ಮತ್ತೆ ಮತ್ತೆ  ನೆನಪಾಗುವುದಕ್ಕೆ ಕಾರಣ.

       ಸ್ವಾತಂತ್ರ್ಯಾಪೂರ್ವದಲ್ಲಿ ಇದು ಟಿಪ್ಪುವಿನ ಆಡಳಿತಕ್ಕೆ ಒಳಪಟ್ಟ ಪ್ರದೇಶ. ಅವನ ರಾಜ್ಯದ ಗಡಿಪ್ರದೇಶದ ಭಾಗವೇ ಆಗಿತ್ತು. ಆದ್ದರಿಂದ ಇಲ್ಲೊಂದು ಅವನ ಗಡಿನಾಡ ಕಾವಲು ಕಾಯುವ ಕೋಟೆಯಂತಹ ಸಣ್ಣ ಅವಶೇಷಗಳಿವೆ. ಹಾಗು ಇದಕ್ಕೆ ಅವನು ಜಮಾಲಾಬಾದ್ ಎಂದು ಮರುನಾಮಕರಣ ಮಾಡಿದ್ದ. ಆದರೆ ಅದಕ್ಕೂ ಮುಂಚೆಯೇ ಇತರೇ ರಾಜರು, ಪಾಳೇಗಾರರೂ ಸಹ ಈ ಪ್ರದೇಶದವನ್ನು ಆಳಿದ್ದರಿಂದ ಇದಕ್ಕೆ ಬೇರೆ ಬೇರೆ ಹೆಸರುಗಳೂ ಇವೆ. ಏನೇ ಆಗಲಿ ಟಿಪ್ಪುವಿನಿಂದ ಹಿಡಿದು ಯಾವುದೇ ರಾಜರಿಂದಲೂ ಈ ಸ್ಥಳಕ್ಕೆ ಸೌಂದರ್ಯ ದೊರೆತಿದ್ದಲ್ಲ ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ಇದಕ್ಕೆ ಇದರ ಸ್ಥಳೀಯ ಹೆಸರನಲ್ಲಿಯೇ ಗುರುತಿಸುವುದು ಸೂಕ್ತವೆನಿಸುವುದು.

      ಇದನ್ನು Google Search ಮಾಡಿದರೆ ಇದರ ಚಿತ್ರಗಳನೇಕವು ಸಿಗುತ್ತವೆ. ಆದರೆ ನಿಜಕ್ಕೂ ಆ ಚಿತ್ರಗಳು ನೋಡುಗನಿಗೆ  ಮಾತನ್ನಾಡಿಸುವುದಿಲ್ಲ. ಗಡಾಯಿಕಲ್ಲಿನ ಅವ್ಯಕ್ತ ಮಾತುಗಳಿಗೆ ಕಿವಿಗೊಡಬೇಕಾದರೆ ಗಡಾಯಿಕಲ್ಲಿಗೇ ಹೋಗಬೇಕು. "ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ" ಅನ್ನುವ ಮಾತು ಎಷ್ಟು ಸತ್ಯ ಎನ್ನುವುದು ಅಲ್ಲಿ ಹೋಗಿ ನೋಡಿದಾಗ ಮಾತ್ರ ತಿಳಿಯುವುದು. ಆ ನಾಣ್ಣುಡಿಯ ಸಾಮಾನ್ಯ ಅರ್ಥ ಕಲ್ಲು ಮುಳ್ಳುಗಳು ಹತ್ತಿರ ಹೋಗಿ ನೋಡಿದಾಗ ಮಾತ್ರ ಕಾಣುವುದು ಎಂದಾದರೆ, ಇಲ್ಲಿ "ದೂರದಿಂದ ಬೆಟ್ಟವನ್ನು ನೋಡಿದರೆ ಯಾವುದೇ ಭಾವನೆ ಪ್ರಚೋದಿಸದ ಜಡತ್ವ ಮನಸ್ಥಿತಿ, ಹತ್ತಿರದಿಂದ ನೋಡಿದಾಗ ಮಾತ್ರಾ ನವೀನ ದೃಶ್ಯವೊಂದನ್ನು ತೋರಿಸುತ್ತದೆ" ಎಂದು ಅರ್ಥೈಸಬಹುದು. ಅಲ್ಲಿನ ಸೌಂದರ್ಯ ಆಸ್ವಾದಿಸಲು ಅಲ್ಲಿಗೆ ಹೋಗಿಯೇ ನೋಡಬೇಕು. ಯಾವ ಕ್ಯಾಮರಾ ಕಣ್ಣಿಗೂ ತನ್ನ ಪೂರ್ತಿ ಸೌಂದರ್ಯವನ್ನು ತೊರಿಸದ, ಎಷ್ಟೇ ಅಕ್ಷರಗಳ ಗೀಚಿದರೂ ತನ್ನೊಡಲ ಆಕರ್ಷಣೆಯ ಅನುಭಾವ ಬಿಟ್ಟುಕೊಡದ ಜಾಗವದು.

      ಜೋರು ಮಳೆಗಾಲದಲ್ಲಿ ಇಲ್ಲಿಗೆ ಪ್ರವೇಶ ನಿರ್ಬಂಧವಿರುವುದರಿಂದ ಮಳೆಗಾಲದ ಇದರ ಚೆಲುವು ನೋಡಲಾಗದು. ಮೊದಲೇ ಘಟ್ಟದ ಕೆಳಗಿನ ಪ್ರದೇಶ. ಜೊತೆಗೆ ಶಿಲಾವೃತ ಬೆಟ್ಟವಾದ್ದರಿಂದ ಉರಿಬೇಸಿಗೆಯಲ್ಲಿ ಹತ್ತಿರ ಹೋಗುವುದೂ ಹಲವರಿಗೆ ದುಃಸ್ಥರ. ಆದರೆ ಆಗಸ್ಟ್  ನಂತರ ವೀಕ್ಷಿಸಬಹುದಾದ ಸ್ಥಳಗಳಲ್ಲಿ ಇದಕ್ಕೆ ಮೊದಲ ಪ್ರಾಶಸ್ತ್ಯ ನೀಡಬಹುದು. ಮಳೆಗಾಲ ಮುಗಿದ ನಂತರ ಹೋಗುವುದಾದರೆ ಗುಡ್ಡದ ಮೇಲಿನಿಂದ ಹರಿದು ಬಂದು, ಬಂಡೆಯ ಮೇಲೇ ಕೆತ್ತಿದ ,ಪಾಚಿ ಕಟ್ಟಿದ, ಮೆಟ್ಟಿಲುಗಳ ಮೇಲೆ ಹರಿದುಬರುವ ನೀರು ನಿಜಕ್ಕೂ ಚಾರಣಿಗನಿಗೆ ಸವಾಲೆಸೆಯುತ್ತವೆ. ಇಲ್ಲಿ ಸ್ವಲ್ಪ ಎಡವಿದರೂ ಅಂಗಾಂಗಗಳ ರಿಪೇರಿ ಮಾಡುವ ಗ್ಯಾರೇಜ್ ಹುಡುಕಿಕೊಂಡು ಹೋಗಬೇಕಾಗಬಹುದು. ಒಮ್ಮೆ ಇದನ್ನೆಲ್ಲಾ ದಾಟಿ ಮೇಲೇರಿ ತುತ್ತತುದಿಯ ತಲುಪಿದರೆ ಒಂದುಬದಿಯಲ್ಲಿ ದೂರದ ಕಡಲತೀರದವರೆಗೆ ಹಾಗು ಮತ್ತೊಂದು ಬದಿಯಲ್ಲಿ ಕುದುರೇಮುಖದ ಬೆಟ್ಟಗಳ  ತುತ್ತತುದಿಯ ಅಂಚಿನವರೆಗೂ ನೋಡಬಹುದಾದ ಅವಕಾಶ ನಮ್ಮದಾಗುತ್ತದೆ. ಈ ವಿಹಂಗಮ ಪಕ್ಷಿನೋಟದ ವರ್ಣನೆ ಪದಗಳಲ್ಲಿ ಕೂಡಿಹಾಕಲು ಆಗದು. ಆಗಸದಲ್ಲಿ ನಿಂತಂತಹ ಭಾವ ಒಂದೆಡೆ ಮೂಡಿದರೆ, ನನ್ನ ತಲುಪಿದರೆ ಇನ್ನೂ ಉತ್ತುಂಗದ ಹಂತ ಮುಟ್ಟಬಹುದೆಂಬ ಭಾವನೆ ಮೂಡಿಸುವ,  ದೃಗ್ಗೋಚರವಾಗುವ ಕುದುರೇಮುಖ  ಇನ್ನೊಂದೆಡೆ. ಅಲ್ಲಿಗೆ ಹೋದಾಗಲೇ ನನಗೆ ತಿಳಿದದ್ದು ಇದೇ ಗುಡ್ಡವೇ ಕುದುರೇಮುಖದಿಂದ, ಬಂಡಾಜೆ ಅರ್ಬಿ ಜಲಪಾತದ ತುದಿಯಿಂದ ಕಾಣುತ್ತಿದ್ದುದು ಎಂದು.

       ಅಂದಾಜು 50 ಎಕರೆ ಒಳಗಿನ ವಿಸ್ತೀರ್ಣವಿರಬಹುದಾದ ಈ ಜಾಗ ನಿಜಕ್ಕೂ ಪ್ರಕೃತಿಯ ವಿಸ್ಮಯ ಕೊಡುಗೆಗಳಲ್ಲೊಂದು. ನನ್ನ ಗಮನ ಆಕರ್ಷಿಸಿದ ಇಲ್ಲಿಯ ಮತ್ತೊಂದು ಅಂಶವೆಂದರೆ ತನ್ನ ದೇಹಕ್ಕಿಂತಲೂ ಉದ್ದವಾದ ಬಾಲ ಹೊಂದಿರುವ ಹಾರುವ ರೀತಿಯಲ್ಲಿ ಜಿಗಿಯುವ ಕಪ್ಪೆ.!!
ಪೂರ್ಣಚಂದ್ರ ತೇಜಸ್ವಿಯವರ 'ಕರ್ವಾಲೋ' ಪುಸ್ತಕದಲ್ಲಿ ಹಾರುವ ಓತಿಯ ಬಗ್ಗೆ ಓದಿದ್ದೆ. ಅದರ ಬಗ್ಗೆ ಕೆಲ ವಿಡಿಯೋಗಳನ್ನೂ ನೋಡಿದ್ದೆ. ಆದರೆ ಅದೇ ರೀತಿ ಉದ್ದ ಬಾಲವಿರುವ, ರೆಕ್ಕೆಯ ಹಾಗೆ ತನ್ನ ದೇಹದ ಪಕ್ಕೆಗಳನ್ನು ಅಗಲಿಸಿ ಜಿಗಿಯುವ ಕಪ್ಪೆಯು ನನ್ನ ಕಲ್ಪನೆಯ ಎಲ್ಲೆ ಮೀರಿದ್ದು. ಅತ್ಯಂತ ಪುಟ್ಟ ಗಾತ್ರದ, ತನ್ನ ದೇಹಕ್ಕಿಂತಲೂ ಉದ್ದವಾದ ಬಾಲ ಹೊಂದಿರುವ ಇವುಗಳು, ಪಾಚೀಕಟ್ಟಿದ ಕಲ್ಲುಗಳ ಬಣ್ಣವೇ ಹೊಲುತ್ತವೆ. ಪಕ್ಕೆಯ ಬದಿಗಳಲ್ಲಿ ರೆಕ್ಕೆಯಂತೆ ಚರ್ಮದ ಪದರ ಹೊಂದಿರುವ ಈ ಕಪ್ಪೆಗಳು ಇಲ್ಲಿನ ಬಂಡೆಗಳಮೇಲೆಲ್ಲಾ ಕಾಣಸಿಗುತ್ತವೆ.  ಮೊದಲು ಇವುಗಳನ್ನು ನೋಡಿದಾಗ ಆಶ್ಚರ್ಯವಾಯಿತು.  ಕೊಡಚಾದ್ರಿ-ಗೇರುಸೊಪ್ಪ-ಶೃಂಗೇರಿ - ಆಗುಂಬೆ - ಕಳಸ ಈ ಭಾಗದಲ್ಲೆಲ್ಲೂ ಕಂಡುಬರದ ಅಥವಾ ಹುಡುಕಿದ ತಕ್ಷಣ ಕಾಣಸಿಗದ ಈ ಜೀವಿಗಳು ಅಲ್ಲಿನ ಬಂಡೆಗಳ ಮೆಟ್ಟಿಲುಗಳ ಮೇಲೆ ಯಥೇಚ್ಛವಾಗಿ ಕಾಣಿಸಿಕೊಳ್ಳುತ್ತವೆ. ಇದನ್ನು ನೋಡಿದಾಗ ಒಮ್ಮೆ ತೇಜಸ್ವಿಯವರ ಹಾರುವ ಓತಿಯೇ ಮನಃಪಟಲದಲ್ಲಿ ಒಮ್ಮೆ ಮಿಂಚಿಹೋದಂತಾಗುವುದು. ಇದರ ಬಗ್ಗೆ ತಿಳಿಯದ ಪಾಮರನಿಗೆ ಇದು ಯಾವುದೋ ಇಂಗ್ಲೀಷ್ ಮೂವಿಗಳಲ್ಲಿ ಸೃಷ್ಟಿಸಿದ ಹೊಸ ಜೀವಿಯ ಹಾಗೆ ಕಂಡುಬರುವುದು. ಇವುಗಳ ಬಣ್ಣವೂ ಬಂಡೆಗಳ ಬಣ್ಣದಂತಿದ್ದರಿಂದ ಅವುಗಳು ನನ್ನ ಕಣ್ಣಿಗೆ ಬೀಳುವ ಮೊದಲು ಅದೆಷ್ಟು ಕಪ್ಪೆಗಳು ಕಾಲ್ಗಳ ಕೆಳಗೆ ಸಮಾಧಿಯಾದವೋ! ಯೋಚಿಸಿದರೆ ಅಯ್ಯೋ ಎನಿಸುತ್ತದೆ. ನನ್ನ ಪಾದಗಳನ್ನು ಕಂಡು ಅವುಗಳು ತಮ್ಮ ಬುದ್ಧಿಗೆ ಕೆಲಸ ಕೊಟ್ಟಿದ್ದರೆ ಸಾಕು.

      ಈ ಸಂದರ್ಭದಲ್ಲಿ ದಾರ್ಶನಿಕರೊಬ್ಬರು ಹೇಳಿದ ಮಾತುಗಳು ನೆನಪಾಯಿತು. ಯತಿಗಳು ಮಾತ್ರ ಚಾತುರ್ಮಾಸ್ಯ ಆಚರಣೆ ಮಾಡುವುದಲ್ಲ. ಪ್ರತಿಯೊಬ್ಬನೂ ಈ ಆಚರಣೆ  ಮಾಡಿದರೆ ಒಳಿತು. ಚಾತುರ್ಮಾಸ್ಯದ ಉದ್ದಿಶ್ಯವೇ ಇತರ ಜೀವಿಗಳಿಗೆ ತೊಂದರೆಯುಂಟುಮಾಡದೇ ಬದುಕುವುದು ಎಂದು. ಈ ಸಮಯದಲ್ಲಿ  ಸೃಷ್ಟಿಯ ಬಹುಪಾಲು ಜೀವಜಂತುಗಳು ತಮ್ಮ ವಂಶಾಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗಿರುತ್ತವೆ. ಕಂಡೋ ಕಾಣದೋ ಅವುಗಳ ತುಳಿದೋ, ಮೊಟ್ಟೆ ಒಡೆದೋ ಮರಿಗಳನ್ನು ತುಳಿದೋ ಅವುಗಳ ಸಂತತಿ ನಾಶಕ್ಕೆ ಕಾರಣವಾಗಬಾರದು. ನಾವೂ ಬದುಕಬೇಕು, ಅವುಗಳನ್ನೂ ಬದುಕಲು ಬಿಡಬೇಕು. ಅವುಗಳ ಬೆಳವಣಿಗೆಗೆ ಪೂರಕವಾದ ಈ ಸಮಯದಲ್ಲಿ ನಮ್ಮಿಂದ ಜೀವಿಗಳಿಗೆ ಯಾವುದೇ ತೊಂದರೆಯಾಗದಿರಲು ನಾಲ್ಕು ತಿಂಗಳು ಒಂದೇ ಕಡೆ ನೆಲಸಬೇಕು. ಹೀಗೆ ಜೀವಿಗಳ  ಬೆಳವಣಿಗೆಗೆ ಅಡಚಣೆಯಾಗದ ಸಮಷ್ಟಿ ಚಿಂತನೆ ಚಾತುರ್ಮಾಸದ ಆಚರಣೆಯಲ್ಲಿದೆ ಎಂದಿದ್ದರು. ಅದು ಅಕ್ಷರಷಃ ಸತ್ಯ. ಪ್ರವಾಸಿಗರ ಕಾಲಡಿಯಲ್ಲಿ ಸಿಲುಕಿ ಅದೆಷ್ಟು ಕಪ್ಪೆಗಳು ಇದುವರೆಗೆ ನಾಶವಾಗಿದ್ದಾವೋ ಲೆಕ್ಕ ಇಟ್ಟವರ್ಯಾರು.!!? ಕೊನೆಯ ಪಕ್ಷ ಸಂಬಂಧಪಟ್ಟ ಇಲಾಖೆಯವರಾದರೂ ಪ್ರವೇಶದ ದಾರಿಯಲ್ಲಿ ಈ ವಿಸ್ಮಯ ಜೀವಿಗಳ ಬಗೆಗೆ ಸೂಚನಾ ಫಲಕವನ್ನಾದರೂ ಹಾಕಬಹುದಿತ್ತು.

      ಏನೇ ಆಗಲಿ ಗಡಾಯಿಕಲ್ಲು ತನ್ನ ಸೌಂದರ್ಯವನ್ನಷ್ಟೇ ತನ್ನಲ್ಲಿ ಹುದುಗಿಸಿಟ್ಟುಕೊಳ್ಳದೆ, ಜೀವ ಜಗತ್ತಿನ ಅಪರೂಪದ, ವಿನಾಶದ ಅಂಚಿನಲ್ಲಿರುವ ಜೀವಿಗಳಿಗೂ ತನ್ನಲ್ಲಿ ಆಶ್ರಯ ನೀಡಿದೆ. ಇಂತಹ ಅಪರೂಪದ ನಿರುಪದ್ರವಿ ಜೀವಿಗಳು ಈ ಮಾಯಾಲೋಕದ ಕಾಲಪ್ರವಾಹದಲ್ಲಿ ಕೊಚ್ಚಿಹೋಗದಿದ್ದರೆ ಸಾಕು ಎನ್ನುವುದೇ ಕೊನೆಯ ಆಶಯ.

Friday 15 January 2016

ಸಂಕ್ರಾಂತಿ ಕೇವಲ ಆಚರಣೆಯಲ್ಲ! ಅದು ಬದಲಾವಣೆಯ ಸಂಧಿಕಾಲ...

      ಸಂಕ್ರಾಂತಿ ಶಬ್ದವನ್ನು ನಾವು ಸರಿಯಾಗಿ ಗಮನಿಸಿರುವುದೇ ಇಲ್ಲ. ಕ್ರಾಂತಿ ಎನ್ನುವ ಪದ ಅದರಲ್ಲಿ ಹುದುಗಿದೆ. ಕ್ರಾಂತಿ ಎಂದರೆ ಬದಲಾವಣೆ ಎಂದರ್ಥ. ಸಂಕ್ರಾಂತಿ ಹಬ್ಬವನ್ನು ಸೂರ್ಯ ಮಕರ ರಾಶಿಯನ್ನು ಪ್ರವೇಶಿಸಿದಾಗ ಆಚರಿಸುವ ಹಬ್ಬವೆಂದಷ್ಟೇ ಕೆಲವರಿಗೆ ತಿಳಿದಿದೆ. ಆದರೆ ಅದರಿಂದ ಯಾವ ಕ್ರಾಂತಿಯಾಯಿತು ಎಂದು ಯಾರೂ ಪ್ರಶ್ನಿಸುವ ಗೋಜಿಗೇ ಹೋಗುವುದಿಲ್ಲ. ಸೂರ್ಯ ಸುಮಾರು 30 ದಿನಗಳಿಗೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುತ್ತಾನೆ, ಆದರೆ ಈ ರಾಶಿಗಳ ಬದಲಾವಣೆಯನ್ನು ಹಬ್ಬವೆಂದು ಆಚರಿಸುವುದಿಲ್ಲ.

      ಸೂರ್ಯನ ಕರ್ಕ ರಾಶಿ ಪ್ರವೇಶ ಮತ್ತು ಮಕರ ರಾಶಿ ಪ್ರವೇಶಕ್ಕೆ ವಿಶೇಷ ಮಹತ್ವ ಕೊಟ್ಟರೂ ವಿಜೃಂಭಣೆಯಿಂದ ಹಬ್ಬವನ್ನಾಚರಿಸುವುದು ಮಕರ ಸಂಕ್ರಮಣಕ್ಕೇ. ಕಾರಣ ಹಲವಾರಿವೆ. ಇಂದಿನಿಂದ ಸೂರ್ಯ ಜಾಸ್ತಿ ಬೆಳಗುತ್ತಾನೆ. ಸಂಕ್ರಾಂತಿಯ ನಂತರದ ಬದಲಾವಣೆ ಕೇವಲ ಖಗೋಳದಲ್ಲಿ ಮಾತ್ರವಲ್ಲ ಅದು ಭೂಮಿಯಲ್ಲೇ ಹೆಚ್ಚು. ನಾಲ್ಕು ಗೋಡೆಗಳ ಮಧ್ಯೆ ಕೆಲಸಮಾಡುವ ಹಾಗು ನಾಲ್ಕು ಗೋಡೆಗಳಿಂದ ಹೊರಗೇ ಬಾರದೆ ಬದುಕುವವರಿಗೆ ಈ ಬದಲಾವಣೆ ಅರಿವಿಗೆ ಬಾರದು.

      ಸನಾತನ ಧರ್ಮದ ಹಬ್ಬಗಳು ಸುಮ್ಮನೆ ಯಾವುದೋ ಒಂದು ಕ್ಯಾಲೆಂಡರ್ ದಿನಾಂಕದಂದು ಆಚರಿಸುವ ಆಚರಣೆಯಾಗದೆ ವೈಜ್ಞಾನಿಕ ಹಾಗು ಪ್ರಾಕೃತಿಕ ನಂಟನ್ನು ಹೊಂದಿರುತ್ತವೆ ಎಂಬುದಕ್ಕೆ ಸಾಕ್ಷಿ ರೂಪವಾಗಿ ಸಂಕ್ರಾಂತಿ ನಿಲ್ಲುತ್ತದೆ.

      ಭೂಮಿಯನ್ನು ಜಡವಾಗಿ ಕಾಣುತ್ತಿದ್ದ ಪ್ರಪಂಚಕ್ಕೆ ತಾಯಿಯಂತೆ ಭಾವನಾತ್ಮಕವಾಗಿ ನೋಡಲು ಕಲಿಸಿದ್ದು ಭಾರತೀಯರು. ಭೂಮಿಯನ್ನು ತಾಯಿಯೆಂಬ ಪೂಜನೀಯ ಭಾವದಿಂದ ಕಾಣುವ ದೃಷ್ಟಿ ಇಲ್ಲಿಯ ಸಂಸ್ಕೃತಿಯಲ್ಲಿದೆ. ಅದರಲ್ಲಿಯೂ ಸಂಕ್ರಾಂತಿಯ ವಿಷಯಕ್ಕೆ ಬಂದಾಗ ನನಗೊಬ್ಬ ಚಿಂತಕರು ಹೇಳಿದ ಮಾತುಗಳು ಈಗಲೂ ಕಿವಿಯಲ್ಲಿ ಗುನುಗುತ್ತಿವೆ.

      "ಭೂಮಿ ನಮ್ಮ ತಾಯಿ ಅಂದಮೇಲೆ ಅವಳಿಗೂ ನಮ್ಮ ಹಾಗೆಯೇ ಜೀವವಿರಬೇಕಲ್ಲಾ. ನಮ್ಮ ಹಾಗೆಯೇ ಅವಳೂ ಕೂಡ ಉಸಿರಾಡುತ್ತಾಳೆ. ನಮಗೆ ಹೇಗೆ ಉಚ್ಛ್ವಾಸ ನಿಃಶ್ವಾಸಗಳಿವೆಯೋ ಅವಳಿಗೂ ಕೂಡ ಉಚ್ಛ್ವಾಸ ನಿಃಶ್ವಾಸಗಳಿವೆ. ಅದೇ ಉತ್ತರಾಯಣ & ದಕ್ಷಿಣಾಯಣ. ಅರ್ಥಾತ್ ಮಕರ ಸಂಕ್ರಾಂತಿ & ಕರ್ಕ ಸಂಕ್ರಾಂತಿ. ಉತ್ತರಾಯಣ ಅರ್ಥಾತ್ ಏರುವುದು ಉಚ್ಛ್ವಾಸ ಹಾಗು ದಕ್ಷಿಣಾಯಣ ಅರ್ಥಾತ್ ಇಳಿಯುವುದು  ನಿಃಶ್ವಾಸ."

      ಈ ವಿವರಣೆ ಕೇವಲ ಭಾವನಾತ್ಮಕವೆಂದು ಅನ್ನಿಸುವುದು.ಆದರೆ ಇದರ ಹಿಂದಿರುವ ವೈಜ್ಞಾನಿಕ ಸಂಭವತೆಯನ್ನು ತರ್ಕಿಸಿದಾಗ ಮಾತ್ರ ತಿಳಿಯುವುದು. ಉಸಿರನ್ನು ಎಳೆದುಕೊಂಡಾಗ ರಕ್ತ ಸಂಚಲನೆಯ ಮೂಲಕ ಶಕ್ತಿ ಪ್ರತಿಯೊಂದು ಜೀವಕೋಶಗಳಿಗೂ ತಲುಪುತ್ತದೆ. ಹಾಗೆಯೇ ಉಸಿರನ್ನು ಹೊರಬಿಟ್ಟಾಗ ಶಕ್ತಿಯು ಕುಂದುತ್ತದೆ. ಇದು ವಿಜ್ಞಾನದ ಪಾಠ. ಇದೇ ಉಸಿರಾಟವನ್ನು ಭೂಮಿಗೆ ಹೋಲಿಸಿ. ಭೂಮಿಯ ಜೀವಕೋಶಗಳಾದ ಅರಣ್ಯ,ಸಸ್ಯ ಜಗತ್ತು ಹೂವು ಅರಳುವ ಮೂಲಕ, ಕಾಯಿ,ಹಣ್ಣುಗಳು ಬೆಳೆಯುವ ಮೂಲಕ ಭೂಮಿ ತನ್ನ ಜೀವಂತಿಕೆಯನ್ನು ಉತ್ತರಾಯಣ ಅರ್ಥಾತ್ ಜನವರಿ ತಿಂಗಳ ನಂತರ ತೊರ್ಪಡಿಸಲು ಪ್ರಾರಂಭಿಸುತ್ತದೆ. ಭೂಮಿಯ ಮೇಲಿನ ಸಕಲ ಜೀವಿಗಳೂ ಸರಪಳಿಯಲ್ಲಿ ಒಂದಕ್ಕೊಂದು  ಅವಲಂಬಿತವಾಗಿವೆ ಎನ್ನುವುದೂ ವಿಜ್ಞಾನ ಕಲಿಸಿದ ಪಾಠವೇ. ಈ ಎಲ್ಲ ಜೀವಿಗಳು  ಸಸ್ಯಜಗತ್ತನ್ನು ಅವಲಂಬಿಸಿರುವುದರಿಂದ ಸಂಕ್ರಾತಿಯ ಪರಿಣಾಮ ಜೀವಿಗಳ ಮೇಲೂ ಆಗುವುದು ಎನ್ನುವುದು ಸತ್ಯವೇ ಆಯಿತು. ಅಂದರೆ ಭೂಮಿಯ ಮೇಲೆ ಶಕ್ತಿ ಸಂಚಯವಾಗುವುದು ಈ ಸಮಯದಲ್ಲೇ ಎಂದಾದಮೇಲೆ ಅದು ಉಚ್ಛ್ವಾಸವಾಯಿತಲ್ಲವೇ.

      ಇನ್ನು ಉತ್ತರಾಯಣ ಪ್ರಾರಂಭವಾಗುವ ಹಿಂದಿನ ಸಮಯ ಅಂದರೆ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ನೋಡಿದರೆ ಪ್ರಕೃತಿ ಬಂಜೆಯಂತೆ ಕಾಣುವುದು. ಎಲ್ಲೆಲ್ಲೂ ಎಲೆ ಉದುರಿರುವ ಬೋಳು ಗಿಡಮರಗಳು, ಹೂವು ಹಣ್ಣುಗಳಿಲ್ಲದೆ ನಿಸ್ಸತ್ವವಿಲ್ಲದ ಸಸ್ಯರಾಶಿಯನ್ನು ನೋಡಿದರೆ ತನ್ನೆಲ್ಲಾ ಜೀವವನ್ನು ಕಳೆದುಕೊಂಡಿದೆಯೇನೋ ಅನ್ನಿಸುವುದು. ಇದೇ ಭೂಮಿಯ ನಿಃಶ್ವಾಸವಲ್ಲವೇ. ಈ ಸಮಯದಲ್ಲಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡಿರುತ್ತದೆ. ಭೂಮಿಯ ಫಲವತ್ತತೆ ಕಡಿಮೆಯಾದಾಗ ಎಳ್ಳನ್ನು ಬಿತ್ತಿ ಫಲವತ್ತತೆ ಹೆಚ್ಚಿಸುವ ಕ್ರಮ ಭಾರತದ ಕೃಷಿ ಪದ್ಧತಿಯಲ್ಲಿದೆ. ಇದೇ ಕಾರಣಕ್ಕಾಗಿಯೇ ಬೆಳೆದ ಎಳ್ಳನ್ನು ಸಂಕ್ರಾಂತಿಯ ದಿನದಂದು ಬಳಸುವುದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಾಯಿತು, ಎಳ್ಳನ್ನು ತಿಂದು ದೇಹವೂ ಪುಷ್ಟಿಯಾಯಿತು. ಅಂತೂ ಸಂಕ್ರಾಂತಿ ಪ್ರಾಕೃತಿಕವಾಗಿ ಕ್ರಾಂತಿಯ ಆರಂಭದ ದಿನವಾಗಿ ನಿಲ್ಲುವುದು.