आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Sunday 18 August 2013

ಹಾರ್ವರ್ಡ್ ಅಧ್ಯಯನಕ್ಕೆ ಕಾರಣವಾದ ಮಹಾಕುಂಭಮೇಳ









ಅತಿ ಹೆಚ್ಚು ಸಂಖ್ಯೆಯ ಜನರು ಸೇರುವ ಜಗತ್ತಿನ ಅತಿ ದೊಡ್ಡ ಸಮಾವೇಶ ಯಾವುದು?
ಕರ್ಬಾಲಾದಲ್ಲಿ ಇಮಾಂ ಹುಸೇನರ ದರ್ಶನಕ್ಕೆ ಸೇರುವ 25 ದಶಲಕ್ಷ ಸಂಖ್ಯೆಯ ಸಮಾವೇಶವೇ?
ಕೇರಳದ ಶಬರಿಮಲೈ ಕ್ಷೇತ್ರದಲ್ಲಿ ಮಕರವಿಳಕ್ಕು ದರ್ಶನಕ್ಕೆ ಸೇರುವ 5 ದಶಲಕ್ಷ ಸಂಖ್ಯೆಯ ಕಾರ್ಯಕ್ರಮವೆ?
ಜಾಗತಿಕ ಮಟ್ಟದ ಕ್ರೀಡಾಕೂಟವಾಗಿರುವ ಒಲಿಂಪಿಕ್ ಗೇಮ್ಸ್‌ಗೆ ಸೇರಲಿರುವ ಕೆಲವು ದಶಲಕ್ಷ ಸಂಖ್ಯೆಯ ಕಾರ್ಯಕ್ರಮವೆ?


       ಉಹುಂ, ಖಂಡಿತ ಇದ್ಯಾವುದೂ ಅಲ್ಲ. ಇವೆಲ್ಲ ಜಗತ್ತಿನಲ್ಲಿ ಜನರು ಸೇರುವ ಅತಿ ದೊಡ್ಡ ಇವೆಂಟ್‌ಗಳೇ ಆಗಿರಬಹುದು. ಅದರಲ್ಲಿ ಎರಡು ಮಾತಿಲ್ಲ. ಆದರೆ ಇವೆಲ್ಲಕ್ಕಿಂತಲೂ ಅತೀ ಹೆಚ್ಚು ಜನರು ಸೇರುವ ಒಂದು ಅತೀ ದೊಡ್ಡ ಸಂಖ್ಯೆಯ ಇವೆಂಟ್ ಅಂದರೆ, ಪ್ರತೀ 12 ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ನಡೆಯುವ ಮಹಾಕುಂಭಮೇಳ. ಭೂಮಿಯ ಮೇಲೆ ಇದಕ್ಕಿಂತ ಹೆಚ್ಚು ಜನರು ಸೇರುವ ಸಮಾವೇಶ ಇನ್ನೊಂದಿಲ್ಲ. ಏಕೆಂದರೆ ಈ ವರ್ಷ ಜನವರಿ 14 ರಿಂದ ಮಾರ್ಚ್ 10 ರವರೆಗೆ ನಡೆದ ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದವರ ಒಟ್ಟು ಸಂಖ್ಯೆ ಸುಮಾರು 10 ಕೋಟಿ!

  
   ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕೆಂದಾದರೆ ಪೂರ್ವಭಾವಿಯಾಗಿ ಸಾಕಷ್ಟು ದಿನಗಳ ಮುಂಚಿತವಾಗಿ ಅದಕ್ಕೆ ಸಂಬಂಧಿಸಿದ ಪ್ರಚಾರ, ಸಿದ್ಧತೆ, ಇನ್ನಿತರ ಅಗತ್ಯ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಪ್ರಚಾರವಿಲ್ಲದೆ ಇಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಿ ನಡೆಯದು ಎಂಬ ಸನ್ನಿವೇಶ ಸೃಷ್ಟಿಯಾಗಿರುವಾಗ, ಪ್ರಚಾರವೇ ಇಲ್ಲದೆ ಮಹಾಕುಂಭಮೇಳಕ್ಕೆ ಹತ್ತು ಕೋಟಿಯಷ್ಟು ಜನರು ದೇಶದ ಮೂಲೆಮೂಲೆಗಳಿಂದ ಬಂದು ಧನ್ಯರಾಗುತ್ತಾರೆಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೆ? ನಿಮಗೆ ಅಚ್ಚರಿಯಾಗಬಹುದಾದರೂ ಇದು ಮಾತ್ರ ವಾಸ್ತವ. ಕುಂಭಮೇಳಕ್ಕೆ ಯಾವುದೇ ಪ್ರಚಾರ ಸರ್ಕಾರದಿಂದಾಗಲಿ, ಇತರೆ ಖಾಸಗಿ ಸಂಸ್ಥೆಗಳಿಂದಾಗಲಿ ನಡೆಯುವುದಿಲ್ಲ. ಪತ್ರಿಕೆಗಳಲ್ಲಿ, ಟಿವಿ ವಾಹಿನಿಗಳಲ್ಲಿ ಈ ಬಗ್ಗೆ ಜಾಹೀರಾತು ಕೂಡ ಪ್ರಕಟವಾಗುವುದಿಲ್ಲ. ಪಂಚಾಂಗದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಕುಂಭಮೇಳ ಆರಂಭವಾಗುವ ದಿನವನ್ನು ಚಿಕ್ಕದಾಗಿ ಪ್ರಕಟಿಸಲಾಗಿರುತ್ತದೆ, ಅಷ್ಟೆ. ಅಲ್ಲಿಗೆ ಬರುವ ಕೋಟ್ಯಂತರ ಮಂದಿಗೆ ಅದೊಂದೇ ಸೂಚನೆ. ಇನ್ನಾವುದೇ ಆಮಂತ್ರಣ, ಕರೆ ಅವರಿಗಿರುವುದಿಲ್ಲ. ಆದರೂ ಕುಂಭಮೇಳದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದೊಂದು ಜಗತ್ತಿನ ವಿಸ್ಮಯ! ಅದಕ್ಕೇ, ಅತೀ ಹೆಚ್ಚು ಜನರು ಸೇರುವ ಜಗತ್ತಿನ ಅತಿ ದೊಡ್ಡ ಸಮಾವೇಶ ಇದೆಂದು ವಿಕ್ಕಿಪೀಡಿಯಾದಲ್ಲೂ ದಾಖಲೆಯಾಗಿರುವುದು.


   ಕುಂಭಮೇಳ ಎಂಬ ಹೆಸರೇ ವಿಚಿತ್ರವಾದುದು. ಪೌರಾಣಿಕ ಇತಿಹಾಸ ಗೊತ್ತಿಲ್ಲದವರಿಗೆ ಇದೆಂತಹ ವಿಚಿತ್ರ ಮೇಳ ಎಂದೆನಿಸದೆ ಇರದು. ಸಂಸ್ಕೃತದಲ್ಲಿ ಕುಂಭವೆಂದರೆ ಮಡಿಕೆ. ಅಷ್ಟನ್ನೇ ಅರ್ಥೈಸಿಕೊಂಡರೆ ಮಡಿಕೆಗಳನ್ನು ಮಾರಾಟ ಮಾಡುವ ಮೇಳ ಇದಾಗಿರಬಹುದೇ ಎಂದು ಕೆಲವರು ವ್ಯಾಖ್ಯಾನಿಸಿದರೆ ಆಶ್ಚರ್ಯವಿಲ್ಲ. ಕುಂಭಮೇಳಕ್ಕೊಂದು ಐತಿಹ್ಯವೇ ಇದೆ. ಪುರಾಣಕಾಲದಲ್ಲಿ ದೇವತೆಗಳು ದೂರ್ವಾಸಮುನಿಯ ಶಾಪದಿಂದ ತಮ್ಮ ಶಕ್ತಿಯನ್ನು ಕಳೆದುಕೊಂಡರಂತೆ. ಅದನ್ನು ಮರಳಿ ಪಡೆಯಲು ಅವರು ಬ್ರಹ್ಮ ಹಾಗೂ ಶಿವನ ಮೊರೆ ಹೋದರು. ಆದರೆ ಬ್ರಹ್ಮ ಹಾಗೂ ಶಿವ ವಿಷ್ಣುವಿನ ಬಳಿ ಹೋಗಿ ಎಂದರಂತೆ. ಬಳಿಕ ದೇವತೆಗಳು ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿದ ಬಳಿಕ ಕ್ಷೀರಸಾಗರದ ಮಥನ ನಡೆಸಿ ಅಮೃತವನ್ನು ಪಡೆಯಿರಿ. ಆ ಅಮೃತವನ್ನು ಕುಡಿದರೆ ನೀವು ಮತ್ತೆ ಶಕ್ತಿವಂತರಾಗುವಿರಿ ಎಂದನು. ಸಮುದ್ರಮಥನ ನಡೆದಾಗ ಅದರಲ್ಲಿ ತೇಲಿ ಬಂದ ಪದಾರ್ಥಗಳಲ್ಲಿ ಅಮೃತವಿದ್ದ ಕುಂಭವೂ ಒಂದು. ಆದರೆ ಸಮುದ್ರ ಮಥನದಲ್ಲಿ ಪಾಲ್ಗೊಂಡಿದ್ದ ರಾಕ್ಷಸರು ತಮಗೆ ಅಮೃತ ಬೇಕೆಂದರು. ದೇವತೆಗಳು ಬಿಡಲಿಲ್ಲ. ಪರಸ್ಪರ ಕಾದಾಟವಾಗಿ 12 ಹಗಲು ಹಾಗೂ 12 ರಾತ್ರಿಗಳ ಕಾಲ ಇದು ಮುಂದುವರಿಯಿತು. ಈ ನಡುವೆ ವಿಷ್ಣು ಅಮೃತವಿದ್ದ ಕುಂಭವನ್ನು ತನ್ನೊಂದಿಗೆ ಒಯ್ದನೆಂದು ಪುರಾಣ ಕಥೆ ಹೇಳುತ್ತದೆ. ಹಾಗೆ ಅವಸರದಲ್ಲಿ ಅಮೃತ ಕುಂಭವನ್ನು ಒಯ್ಯುವಾಗ ಅದರ ಕೆಲವು ಹನಿಗಳು ಪ್ರಯಾಗ, ಹರಿದ್ವಾರ, ಉಜ್ಜೈನಿ ಹಾಗೂ ನಾಸಿಕಗಳಲ್ಲಿ ಚೆಲ್ಲಿದವೆಂದು ಪ್ರತೀತಿ. ಅಮೃತದ ಹನಿಗಳು ಬಿದ್ದ ಈ ಕ್ಷೇತ್ರಗಳು ಪವಿತ್ರ ಕ್ಷೇತ್ರಗಳಾಗಿ ಅಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಲಕ್ಷಾಂತರ, ಈಗ ಕೋಟ್ಯಾಂತರ ಭಕ್ತರು ಆಗಮಿಸಿ ಧನ್ಯರಾಗುತ್ತಿದ್ದಾರೆ. ಕುಂಭಮೇಳವು ಈ ನಾಲ್ಕು ಸ್ಥಳಗಳಲ್ಲಿ ಜರಗುತ್ತದೆ. ಪ್ರತಿ 6 ವರ್ಷಕ್ಕೊಮ್ಮೆ ಹರಿದ್ವಾರ ಹಾಗೂ ಪ್ರಯಾಗಗಳಲ್ಲಿ ಅರ್ಧ ಕುಂಭಮೇಳ ನಡೆದರೆ ಪ್ರತಿ 12 ವರ್ಷಕ್ಕೊಮ್ಮೆ ಪೂರ್ಣ ಕುಂಭಮೇಳವೂ ಪ್ರಯಾಗದಲ್ಲಿ ನಡೆಯುತ್ತಿದೆ. ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತೀ ನದಿ ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಭಕ್ತರು, ಸಂತರು, ಸಾಧುಗಳು, ಸಂನ್ಯಾಸಿಗಳು ಲಕ್ಷಾಂತರ, ಕೋಟ್ಯಾಂತರ ಸಂಖ್ಯೆಯಲ್ಲಿ ಸ್ನಾನ ಮಾಡಿ ತಮ್ಮ ಜೀವನ ಪಾವನವಾಯಿತೆಂದು ಭಾವಿಸುತ್ತಾರೆ. ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವುದೇ ಪ್ರತಿಯೊಬ್ಬರ ಪ್ರಮುಖ ಕರ್ತವ್ಯ. ಆ ಒಂದು ಸ್ನಾನಕ್ಕಾಗಿ ಅದೆಷ್ಟೋ ಸಾವಿರ ಮೈಲಿ ದೂರದಿಂದಲೂ ಭಕ್ತರು ಆಗಮಿಸುತ್ತಾರೆ. ನೂಕು ನುಗ್ಗಲಿದ್ದರೂ ಕಷ್ಟಸಾಧ್ಯವಾದರೂ ಹೇಗೋ ಆ ಪವಿತ್ರ ಸಂಗಮದಲ್ಲಿ ಒಂದು ಮುಳುಗು ಹಾಕಲೇಬೇಕೆಂಬ ದೃಢಸಂಕಲ್ಪ ವಯೋವೃದ್ಧರಿಗೂ ಇರುತ್ತದೆ. ಸಂಕಲ್ಪ ಈಡೇರದೆ ಅಲ್ಲಿಂದ ವಾಪಸ್ ಯಾರೂ ತೆರಳುವುದಿಲ್ಲ. ಅದೇ ಕುಂಭಮೇಳದ ವಿಶೇಷತೆ.


    ಪ್ರಾಚೀನ ಭಾರತದ ಯಾತ್ರೆ ಕೈಗೊಂಡು ಭಾರತದ ಮಹಾನತೆಯ ಬಗ್ಗೆ ಇತಿಹಾಸದಲ್ಲಿ ದಾಖಲಿಸಿದ ಚೈನಾದ ಯಾತ್ರಿಕ ಹ್ಯುಯನ್‌ತ್ಸಾಂಗ್ ಕೂಡ ಕುಂಭಮೇಳದ ಕುರಿತು ಬರೆದಿದ್ದಾನೆ. ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಆಗಮಿಸಿದ್ದ ಹ್ಯುಯನ್‌ತ್ಸಾಂಗ್ ದಾಖಲೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ೧೮೯೫ರಲ್ಲಿ ಖ್ಯಾತ ಲೇಖಕ ಮಾರ್ಕ್ ಟ್ವೈನ್ ಕುಂಭಮೇಳವನ್ನು ವೀಕ್ಷಿಸಿ ಅನಂತರ ಆತ ತನ್ನ ಅನುಭವವನ್ನು ದಾಖಲಿಸಿರುವುದು ಹೀಗೆ: “It is wonderful, the power of a faith like that, that can make multitudes upon multitudes of the old and weak and the young and frail enter without hesitation or complaint upon such incredible journeys and endure the resultant miseries without repining. It is done in love, or it is done in fear; I do not know which it is. No matter what the impulse is, the act born of it is beyond imagination, marvelous to our kind of people, the cold whites.”  ಕುಂಭಮೇಳ ಆತನಿಗೆ ಒಂದು ವಿಸ್ಮಯವೆನಿಸಿದ್ದು ಹೀಗೆ. ಕಲ್ಪನೆಗೂ ಮೀರಿದ ಸಂಗತಿ ಇದೆಂದು ಆತ ಬಣ್ಣಿಸಿರುವುದು ಉತ್ಪ್ರೇಕ್ಷೆಯೇನಲ್ಲ.


    ಕುಂಭಮೇಳದಲ್ಲಿ ನಡೆಯುವುದು ಪವಿತ್ರ ಸ್ನಾನ, ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು, ಉದ್ಬೋಧನೆ, ಭಜನೆ, ಕೀರ್ತನೆ, ಬಡವರಿಗೆ ಸಾಮೂಹಿಕ ಅನ್ನದಾನ, ಧಾರ್ಮಿಕ ಉಪನ್ಯಾಸ ಇತ್ಯಾದಿ ಇತ್ಯಾದಿ. ಇದೊಂದು ಸಂಪೂರ್ಣ ಧಾರ್ಮಿಕ ಸಮಾವೇಶ. ಇಲ್ಲಿ ಭಕ್ತಿ, ಧಾರ್ಮಿಕತೆಗೇ ಆದ್ಯತೆ. ಹಾಗಾಗಿಯೇ ಇಲ್ಲಿ ಯಾವುದೇ ಗಲಾಟೆ ಗೌಜು ಇರುವುದಿಲ್ಲ. ಯಾರಿಗೂ ಊಟ ಸಿಗಲಿಲ್ಲವೆಂದು ಇಲ್ಲಿ ಪ್ರತಿಭಟನೆ ಕೇಳಿಬರುವುದಿಲ್ಲ. ತಮಗೆ ಸೂಕ್ತ ವಸತಿ ಸಿಗಲಿಲ್ಲವೆಂದು ಯಾರೂ ಅಪಸ್ವರವೆತ್ತುವುದಿಲ್ಲ. ಘನತೆಗೆ ತಕ್ಕಂತೆ ತಮ್ಮನ್ನು ಗೌರವಿಸಲಿಲ್ಲ ಎಂದು ಪ್ರತಿಷ್ಠಿತರಾರೂ ಇಲ್ಲಿ ಕೊರಗುವುದಿಲ್ಲ. ಏಕೆಂದರೆ ಇದು ಜನರೇ ಆಚರಿಸುವ ಮೇಳ. ಇಲ್ಲಿ ಯಾರಿಗೆ ಯಾರೂ ಗೌರವ ನೀಡಬೇಕಾದ ಅಗತ್ಯವಿರುವುದಿಲ್ಲ. ಎಲ್ಲ ಗೌರವವೂ ಆ ಪರಮಾತ್ಮನಿಗೇ ಮೀಸಲು. ಪವಿತ್ರ ಸ್ನಾನದಿಂದ ಪುನೀತರಾಗಿ ಪರಮಾತ್ಮನ ಕೃಪಾಕಟಾಕ್ಷಕ್ಕೆ ಪಾತ್ರರಾಗುವುದೊಂದೇ ಎಲ್ಲರ ಹೆಬ್ಬಯಕೆ. ಕುಂಭಮೇಳ ನಡೆಯುವ ಸಂದರ್ಭದಲ್ಲಿ ಚರ್ಮ ಸೀಳುವ ತೀವ್ರ ಚಳಿ ಬಾಧಿಸುತ್ತಿದ್ದರೂ ಅಲ್ಲಿಗೆ ಬಂದ ಭಕ್ತರಿಗೆ ಅದೊಂದು ಅಡ್ಡಿ ಎನಿಸುವುದೇ ಇಲ್ಲ. ಅಂತಹ ಚಳಿಯಲ್ಲೂ ತ್ರಿವೇಣಿ ಸಂಗಮದ ಶೀತಲ ನೀರು ಅವರನ್ನು ಕೈಬೀಸಿ ಕರೆಯುತ್ತದೆ. ಸ್ನಾನ ಮಾಡಲು ಪ್ರಚೋದಿಸುತ್ತದೆ. ತುಣುಕು ಬಟ್ಟೆಯನ್ನೂ ಧರಿಸದ ನಗ್ನ ನಾಗಾ ಸಂನ್ಯಾಸಿಗಳಂತೂ ಖಡ್ಗ ಹಿಡಿದು ಹರಹರ ಗಂಗೇ, ಜೈ ಭೋಲೇನಾಥ್ ಎಂದು ಘೋಷಣೆ ಕೂಗುತ್ತಾ ತ್ರಿವೇಣಿ ಸಂಗಮದಲ್ಲಿ ಧುಮುಕಿ ಸ್ನಾನದ ಸಂತೋಷ ಅನುಭವಿಸುವ ಆ ದೃಶ್ಯವನ್ನು ಪ್ರತ್ಯಕ್ಷ ನೋಡಿಯೇ ಸವಿಯಬೇಕು. ಸಾವಿರಾರು ಸಂಖ್ಯೆಯಲ್ಲಿ ಹಿಂಡುಹಿಂಡಾಗಿ ಬರುವ ನಾಗಾ ಸಂನ್ಯಾಸಿಗಳನ್ನು ಕಂಡರೆ ಯಾರೂ ತಮಾಷೆ ಮಾಡಲಾರರು. ಅವರ ಕಾಲಿಗೆರಗಿ ಆಶೀರ್ವಾದ ಬೇಡುತ್ತಾರೆ. ಅವರು ಆಶೀರ್ವದಿಸಿದರೆ ತಮ್ಮ ಜನ್ಮ ಪಾವನವಾದೀತೆಂದು ಆಶಿಸುತ್ತಾರೆ. ಮೈತುಂಬ ಬೂದಿ ಬಳಿದುಕೊಂಡು, ಸಂಜೆಯ ವೇಳೆಗೆ ಗಾಂಜಾ ಸೇವಿಸುತ್ತಲೋ ಇಲ್ಲವೆ ಧ್ಯಾನಸ್ಥ ಸ್ಥಿತಿಯಲ್ಲೋ ಕಣ್ಣುಮುಚ್ಚಿ ಕುಳಿತ ನಾಗಾ ಸಂನ್ಯಾಸಿಗಳು ವಿಚಾರವಾದಿಗಳ ಪಾಲಿಗೆ ಗೇಲಿಯ ವಸ್ತುವಾದರೂ ಅವರನ್ನು ಕುಹಕ ದೃಷ್ಟಿಯಿಂದ ಯಾರೂ ನೋಡುವ ಧೈರ್ಯ ತೋರುವುದಿಲ್ಲ.

 
    ಒಮ್ಮೆ ಕುಂಭಮೇಳದ ಸಂದರ್ಭದಲ್ಲಿ ನಗ್ನ ನಾಗಾ ಸಂನ್ಯಾಸಿಗಳು ಹರಹರ ಮಹಾದೇವ್ ಘೋಷಣೆ ಕೂಗುತ್ತಾ ಗಂಗೆಯ ಸ್ನಾನಕ್ಕೆ ಧುಮುಕಿದರು. ಸ್ನಾನವಾದ ಬಳಿಕ ಅವರೆಲ್ಲ ದಡಕ್ಕೆ ಬರುತ್ತಿರುವಾಗ ಶ್ರೀಮಂತ ಸೇಟ್‌ಜೀ ಒಬ್ಬ 1 ಲಕ್ಷ ರೂ.ಗಳ ನೋಟಿನ ಕಂತೆಯೊಂದನ್ನು ಒಬ್ಬ ನಾಗಾ ಸಂನ್ಯಾಸಿಯ ಕೈಗೆ ನೀಡಿ, ತನ್ನನ್ನು ಆಶೀರ್ವದಿಸಬೇಕೆಂದು ಕೋರಿದ. ನೋಟಿನ ಕಂತೆಯನ್ನು ಕೈಗೆ ತೆಗೆದುಕೊಂಡ ಆ ನಾಗಾ ಸಂನ್ಯಾಸಿ ಒಮ್ಮೆ ಗಹಗಹಿಸಿ ನಗುತ್ತಾ, “ಇನ್ ರುಪಯೋಂಸೇ ಮುಝೆ ಕ್ಯಾ ಫಾಯಿದಾ?” ಎನ್ನುತ್ತಾ ಆ ನೋಟುಗಳನ್ನು ಎಲ್ಲರೂ ನೋಡುತ್ತಿದ್ದಂತೆ ಗಂಗಾನದಿಗೆ ಎಸೆದ. ಪಾಪ, ಭಕ್ತಿಯಿಂದ ಅದನ್ನರ್ಪಿಸಿದ ಸೇಟ್‌ಜೀ ಪಾಡು ಹೇಗಾಗಿರಬಹುದು! ನಾಗಾ ಸಂನ್ಯಾಸಿಗಳೇ ಹಾಗೆ. ಯಾವುದೇ ಐಹಿಕ ಭೋಗಗಳು ಅವರನ್ನು ಕಾಡದು. ಅವರಿರುವುದೇ ಹಿಮಾಲಯದ ಯಾವುದೋ ರಹಸ್ಯ ಸ್ಥಳಗಳಲ್ಲಿ. ತಿನ್ನುವುದು ಕೈಗೆ ಸಿಕ್ಕಿದ ಗೆಡ್ಡೆಗೆಣಸಿನಂತಹ ಕಚ್ಚಾ ಆಹಾರ. ಮೈಮುಚ್ಚಲು ಉಡುಪಿನ ಗೊಡವೆ ಅವರಿಗೆ ಬೇಕಿಲ್ಲ. ಅವರದು ಮುಕ್ತ ಬದುಕು. ಅಂಥವರೂ ಕೂಡ 12 ವರ್ಷಕ್ಕೊಮ್ಮೆ ಕುಂಭಮೇಳದ ಸಂದರ್ಭದಲ್ಲಿ ತಪ್ಪದೇ ಪ್ರಯಾಗಕ್ಕೆ ಬಂದು ಸ್ನಾನ ಮಾಡುತ್ತಾರೆ.


    ಕೋಟ್ಯಾಂತರ ಮಂದಿ ಪಾಲ್ಗೊಳ್ಳುವ ಕುಂಭಮೇಳದಲ್ಲಿ ಯಾವುದೇ ದೊಡ್ಡ ಅವಘಡಗಳು ಸಂಭವಿಸುವುದಿಲ್ಲ ಎನ್ನುವುದು ಇನ್ನೊಂದು ವಿಶೇಷತೆ. ಅಲ್ಲಿ ಲಕ್ಷಾಂತರ ಮಂದಿ ಮಹಿಳೆಯರು ಬರುತ್ತಾರೆ. ಆದರೆ ಯಾವುದೇ ಮಾನಭಂಗದ ಘಟನೆ ನಡೆಯುವುದಿಲ್ಲ. ಕೋಟ್ಯಂತರ ಮಂದಿ ಅಲ್ಲಿ ಬೀಡು ಬಿಟ್ಟಿರುತ್ತಾರೆ. ಆದರೆ ಯಾವುದೇ ಕಳ್ಳತನದ ಪ್ರಸಂಗ ವರದಿಯಾಗುವುದಿಲ್ಲ. ಆದರೆ ಕೆಲವೊಮ್ಮೆ ಜನರ ಅವಸರ ಪ್ರವೃತ್ತಿಯಿಂದ ಚಿಕ್ಕಪುಟ್ಟ ಅವಘಡಗಳು ಸಂಭವಿಸಿವೆ ಎನ್ನುವುದು ನಿಜ. 2003 ರಲ್ಲಿ ನಾಸಿಕದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ 39 ಯಾತ್ರಿಕರು ಕಾಲ್ತುಳಿತಕ್ಕೀಡಾಗಿ ಸಾವಿಗೀಡಾಗಿದ್ದರು. ಸಾಧುವೊಬ್ಬ ಜನರತ್ತ ಎಸೆದ ಕೆಲವು ಬೆಳ್ಳಿ ನಾಣ್ಯಗಳನ್ನು ಆರಿಸಿಕೊಳ್ಳುವ ಧಾವಂತದಲ್ಲಿ ಈ ಅವಘಡ ಸಂಭವಿಸಿತ್ತು. 1954ರ ಕುಂಭಮೇಳದ ಸಂದರ್ಭದಲ್ಲಿ 500 ಮಂದಿ ಕಾಲ್ತುಳಿತಕ್ಕೀಡಾಗಿ ಸಾವಿಗೀಡಾಗಿದ್ದರು. ಈ ಬಾರಿಯ ಕುಂಭಮೇಳದಲ್ಲೂ ಅಲಹಾಬಾದ್ ರೈಲ್ವೇ ನಿಲ್ದಾಣದ ಬಳಿ 36 ಮಂದಿ ಕಾಲ್ತುಳಿತಕ್ಕೀಡಾಗಿ ಅಸುನೀಗಿದ್ದರು. 1892 ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಕಾಲರಾ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿತ್ತು. ಆದರೆ ಕೋಟ್ಯಂತರ ಮಂದಿ ಸೇರುವ ಅತಿ ದೊಡ್ಡ ಸಮಾವೇಶದಲ್ಲಿ ಇಂತಹ ಚಿಕ್ಕಪುಟ್ಟ ಅವಘಡಗಳು ಸ್ವಾಭಾವಿಕ.

ಜಗತ್ತಿನ ಅತಿ ದೊಡ್ಡ , ಅತಿ ಹೆಚ್ಚು ಸಂಖ್ಯೆಯ ಜನರು ಸೇರುವ ಸಮಾವೇಶವಾಗಿರುವ ಕುಂಭಮೇಳದ ಬಗ್ಗೆ ಈಗಾಗಲೇ ಸಾಕಷ್ಟು ಸಾಕ್ಷ್ಯಚಿತ್ರಗಳು ಬಿಡುಗಡೆಯಾಗಿವೆ. 1982 ರಲ್ಲಿ ಬಂಗಾಳೀ ಚಿತ್ರ ನಿರ್ದೇಶಕ ದಿಲೀಪ್‌ರಾಯ್ ಅಮೃತ ಕುಂಭೇರ್ ಸಂಧಾನೆ ಎಂಬ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸಿದ್ದರು. ಗ್ರಹಂ ಡೇ 2001 ರಲ್ಲಿ ಕುಂಭಮೇಳ : ದ ಗ್ರೇಟೆಸ್ಟ್ ಶೋ ಆನ್ ಅರ್ಥ್ ಎಂಬ ಚಿತ್ರ ನಿರ್ಮಿಸಿದ್ದ. 2004 ರಲ್ಲಿ ನದೀಂವುದ್ದೀನ್ ಕುಂಭಮೇಳದ ಕುರಿತು ನಿರ್ಮಿಸಿದ ಸಾಕ್ಷ್ಯಚಿತ್ರ – ಕುಂಭಮೇಳ : ಸಾಂಗ್ಸ್ ಆಫ್ ದಿ ರಿವರ್. 2010 ರಲ್ಲಿ ಅಮೆರಿಕದ “ಸಿಬಿಎಸ್ ಸಂಡೇ ಮಾರ್ನಿಂಗ್” ಎಂಬ ಜನಪ್ರಿಯ ಟಿವಿ ಕಾರ್ಯಕ್ರಮದಲ್ಲಿ ಹರಿದ್ವಾರದ ಕುಂಭಮೇಳದ ಕುರಿತು ವಿಸ್ತೃತ ಕವರೇಜ್ ನೀಡಲಾಗಿತ್ತು. 2004 ರಲ್ಲಿ ನಿಕ್ ಡೇ ಎಂಬ ಇನ್ನೊಬ್ಬ ನಿರ್ದೇಶಕ ಶಾರ್ಟ್ ಕಟ್ ಟು ನಿರ್ವಾಣ : ಕುಂಭಮೇಳ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದ. ಇಂತಹ ಅದೆಷ್ಟೋ ಸಾಕ್ಷ್ಯಚಿತ್ರಗಳು ನಿರ್ಮಾಣವಾಗಿವೆ.
ಕಳೆದ ಜನವರಿ 14 ರಿಂದ 55 ದಿನಗಳ ಕಾಲ ನಡೆದ ಕುಂಭಮೇಳದಲ್ಲಿ ಭಾಗವಹಿಸಿದವರ ಸಂಖ್ಯೆ ಸುಮಾರು 10 ಕೋಟಿ. ಮಕರ ಸಂಕ್ರಾತಿ ದಿನದಂದು 1 ಕೋಟಿಗೂ ಹೆಚ್ಚು ಭಕ್ತರು ಆಗಮಿಸಿದ್ದರು. ಫೆ. 10 ರ ಮೌನಿ ಅಮವಾಸ್ಯೆಯ ಪವಿತ್ರ ದಿನದಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದವರ ಸಂಖ್ಯೆ 3 ಕೋಟಿಗೂ ಹೆಚ್ಚು. ವಿದೇಶೀ ಯಾತ್ರಿಕರ ಸಂಖ್ಯೆ ಈ ಬಾರಿ 10 ಲಕ್ಷಕ್ಕೂ ಅಧಿಕ ಮಂದಿ. ಕುಂಭಮೇಳಕ್ಕೆ ಈ ಬಾರಿಯ ಒಟ್ಟು ಬಜೆಟ್ ಗಾತ್ರ 1,200 ಕೋಟಿ ರೂ. (2001 ರ ಕುಂಭಮೇಳಕ್ಕಿಂತ 200 ಕೋಟಿ ಹೆಚ್ಚಿನ ಮೊತ್ತ) ಕುಂಭಮೇಳದ ಕಾರಣಕ್ಕಾಗಿ ಉದ್ಯೋಗ ದೊರಕಿದವರ ಸಂಖ್ಯೆ 6 ಲಕ್ಷ. ಕುಂಭಮೇಳದಿಂದಾಗಿ ಉ.ಪ್ರ. ಸರ್ಕಾರಕ್ಕೆ ಹರಿದು ಬಂದ ಆದಾಯ 12 ಸಾವಿರ ಕೋಟಿ ರೂ. ಭಕ್ತರ ಅನುಕೂಲಕ್ಕಾಗಿ 571 ಕಿ.ಮೀ.ನಷ್ಟು ನೀರಿನ ಪೈಪ್‌ಲೈನ್, 800 ಕಿ.ಮೀ.ನಷ್ಟು ವಿದ್ಯುತ್ ವಯರ್ ಹಾಗೂ 68 ವಿದ್ಯುತ್ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲಾಗಿತ್ತು. ಯಾತ್ರಿಕರ ಆಹಾರ ವ್ಯವಸ್ಥೆಗಾಗಿ 125 ಪಡಿತರ ಅಂಗಡಿಗಳು, 4 ಗೋದಾಮುಗಳನ್ನು ಮೇಳದ ಪ್ರದೇಶದಲ್ಲಿ ತೆರೆಯಲಾಗಿತ್ತು. ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಜಗತ್ತಿನಾದ್ಯಂತ ಇರುವ 2500 ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳು, ಸಂಘಟನೆಗಳು ಕುಂಭಮೇಳದಲ್ಲಿ ಈ ಬಾರಿ ಪಾಲ್ಗೊಂಡಿದ್ದವು. ಕುಂಭಮೇಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ನಿಯೋಜಿತರಾಗಿದ್ದ ಪೊಲೀಸರ ಸಂಖ್ಯೆ 30 ಸಾವಿರ. 30 ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿತ್ತು. 72 ಅರೆ ಮಿಲಿಟರಿ ಪಡೆ ಕಂಪೆನಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಮೇಳ ನಡೆಯುವ ಜಾಗ ಹಾಗೂ ಅಲಹಾಬಾದ್ ನಗರಗಳಲ್ಲಿ 120 ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. 120 ಆಂಬ್ಯುಲೆನ್ಸ್ ವಾಹನಗಳು ಶ್ರಮಿಸಿವೆ. 100 ಹಾಸಿಗೆಯ ಹೊಸ ಆಸ್ಪತ್ರೆ ಕುಂಭಮೇಳದ ಪ್ರದೇಶದಲ್ಲಿ ನಿರ್ಮಾಣವಾಗಿತ್ತು…  ಹೀಗೆ ಈ ಬಾರಿಯ ಕುಂಭಮೇಳದ ಗಮನಾರ್ಹ ಅಂಶಗಳು ಸಾಕಷ್ಟಿವೆ.
  
    ಕುಂಭಮೇಳ ಆಕರ್ಷಿಸುತ್ತಿರುವುದು ಕೇವಲ ಭಕ್ತರು, ಯಾತ್ರಿಕರನ್ನಷ್ಟೇ ಅಲ್ಲ. ದೂರದ ಹಾರ್ವರ್ಡ್ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಿಗಳು ಹಾಗೂ ಸಂಶೋಧಕರು ಕೂಡ ಈಗ ಕುಂಭಮೇಳದ ಕುರಿತು ಗಂಭೀರವಾಗಿ ಅಧ್ಯಯನದಲ್ಲಿ ತೊಡಗಿದ್ದಾರೆ. ಕುಂಭಮೇಳದ ಸಂದರ್ಭದಲ್ಲಿ ಸುಮಾರು 50 ಮಂದಿ ಹಾರ್ವರ್ಡ್ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವೈದ್ಯರು ಹಾಗೂ ಸಂಶೋಧಕರು ಪ್ರಯಾಗಕ್ಕೆ ಬಂದಿಳಿದಿದ್ದರು. ಅವರು ಬಂದಿದ್ದು ಪವಿತ್ರ ಸ್ನಾನಕ್ಕಾಗಿ ಅಲ್ಲ ಅಥವಾ ಪುಣ್ಯ ಸಂಪಾದನೆಗೂ ಅಲ್ಲ. ಕುಂಭಮೇಳಕ್ಕೆ ಲಾಗಾಯ್ತಿನಿಂದ ಯಾಕೆ ಇಷ್ಟೊಂದು ಅಪಾರ ಸಂಖ್ಯೆಯ ಜನರು ಹರಿದು ಬರುತ್ತಿದ್ದಾರೆ, ಇಷ್ಟೊಂದು ಜನರು ಸೇರಿದರೂ ಯಾವುದೇ ಘರ್ಷಣೆ, ಅವಘಡ ಏಕೆ ನಡೆಯುವುದಿಲ್ಲ, ಯಾವುದೇ ಪ್ರಾಥಮಿಕ ವ್ಯವಸ್ಥೆ, ಸೌಲಭ್ಯವಿಲ್ಲದಿದ್ದರೂ ಯಾತ್ರಿಕರು ಯಾಕೆ ಬೇಸರ ಮಾಡಿಕೊಳ್ಳುವುದಿಲ್ಲ… ಮುಂತಾದ ಅನೇಕ ಉತ್ತರ ಸಿಗದ ನಿಗೂಢ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರ ಹುಡುಕಲು ಕುಂಭಮೇಳದಲ್ಲಿ ಅವರು ಪ್ರಯತ್ನಿಸಿದರು. ಹಲವು ಬಗೆಯ ಅಧ್ಯಯನಗಳನ್ನು ನಡೆಸಿದರು. ಇದಕ್ಕಾಗಿ ಅವರೆಲ್ಲ ಕುಂಭಮೇಳ ಪರಿಸರದ ಬೀದಿಬೀದಿಗಳಲ್ಲಿ ಸುತ್ತಾಡಿದರು. ಭಕ್ತರ ಭಜನೆಗಳನ್ನು ಆಲಿಸಿದರು. ನಗ್ನ ನಾಗಾ ಸಂನ್ಯಾಸಿಗಳನ್ನು ಹತ್ತಿರದಿಂದ ಕಂಡರು. ಕಷ್ಟಪಟ್ಟು ನದಿಗಿಳಿದು ಸ್ನಾನ ಮಾಡಿದರೂ ಮೇಲೆ ಬರುವಾಗ ಧನ್ಯತೆ ಕಾಣುತ್ತಿದ್ದ ಭಕ್ತರನ್ನು ಕಂಡು ಅಚ್ಚರಿಪಟ್ಟರು. ಇಷ್ಟಾದರೂ ಕುಂಭಮೇಳ ತನ್ನೊಳಗೇ ಅಡಗಿಸಿಕೊಂಡಿದ್ದ ನಿಗೂಢತೆಯನ್ನು ಅವರಿಂದ ಭೇದಿಸಲು ಸಾಧ್ಯವಾಗಿಲ್ಲ. ಅವರೆಲ್ಲ ಮುಂದೆ ಹನ್ನೆರಡು ವರ್ಷಗಳ ಬಳಿಕ ನಡೆಯುವ ಕುಂಭಮೇಳಕ್ಕೆ ಮತ್ತೆ ಬಂದು ಅಧ್ಯಯನ ಮಾಡಬಹುದು. ಒಂದಂತೂ ನಿಜ. ಕುಂಭಮೇಳವೆನ್ನುವುದು ಕೇವಲ ಪಾಪ ಪರಿಹಾರಕ್ಕಾಗಿ, ಪುಣ್ಯ ಸಂಪಾದನೆಗಾಗಿ ಇರುವ ಕಾರ್ಯಕ್ರಮವಲ್ಲ. ಅದೊಂದು ನಂಬಿಕೆಯ ಪ್ರತೀಕ. ಗಂಗೆ ಕೊಳಕಾಗಿದ್ದರೂ ಭಕ್ತರಿಗೆ ಅಸಹ್ಯವೆನಿಸುವುದಿಲ್ಲ. ಚಳಿ ಕೊರೆಯುತ್ತಿದ್ದರೂ ಪುಣ್ಯಸ್ನಾನ ಮುಗಿಸದೆ ಮರಳುವ ಮನಸ್ಸಾಗುವುದಿಲ್ಲ. ಕುಂಭಮೇಳ ಇಂತಹ ಕುತೂಹಲಗಳನ್ನು, ನಿಗೂಢತೆಗಳನ್ನು ಬಚ್ಚಿಟ್ಟುಕೊಂಡು ಜಗತ್ತಿನ ವಿಚಾರವಾದಿಗಳನ್ನು ಕಾಡಿಸುತ್ತಲೇ ಇದೆ.

ಅತೀ ಹೆಚ್ಚು ಜನರು ಸೇರುವ ಜಗತ್ತಿನ ಅತೀ ದೊಡ್ಡ ಸಮಾವೇಶವೆಂದರೆ, ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳ. ಯಾವುದೇ ಪ್ರಚಾರವಿಲ್ಲದೆ ಭಕ್ತರು ತಾವಾಗಿಯೇ ಕೋಟ್ಯಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಕುಂಭಮೇಳ ಈಗ ಹಾರ್ವರ್ಡ್ ವಿ.ವಿ. ವಿಜ್ಞಾನಿಗಳಿಗೂ ಅಧ್ಯಯನದ ವಸ್ತುವಾಗಿದೆ. ಕುಂಭಮೇಳದ ನಿಗೂಢತೆಯನ್ನು ಭೇದಿಸಲು ಅವರು ಮುಂದಾಗಿದ್ದಾರೆ.


Reference : news13 - ನೇರ ನೋಟ