आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Sunday 1 November 2015

ಹೋರಾಟದ ಇನ್ನೊಂದು ಮುಖ..

       ಕಾಲವೊಂದಿತ್ತು....... ದಿನ ಬೆಳಗಾಗುವುದರೊಳಗೆ ಪ್ಲೇಗ್ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡುತ್ತಿತ್ತು. ಸಾಂಕ್ರಾಮಿಕ ರೋಗಗಳೇ ಹಾಗೆ, ಬಹಳ ವೇಗವಾಗಿ ಹರಡುತ್ತವೆ. ಪ್ಲೇಗಿಗೇನೋ ಔಷಧಿ ಕಂಡುಹಿಡಿದರು. ಆದರೆ ಈಗ ಮತ್ತೊಂದು ರೋಗ ಅತ್ಯಂತ ವೇಗವಾಗಿ ಹರಡುತ್ತಿದೆ. ಅದಕ್ಕೆ ಯಾವಾಗ ಮದ್ದು ದೊರೆಯುವುದೋ ಕಾದುನೋಡಬೇಕು. ನಾ ಹೇಳಹೊರಟಿರುವುದು ಪ್ರಶಸ್ತಿ ವಾಪಸು ನೀಡುವ ರೋಗ ಹರಡುತ್ತಿದೆಯಲ್ಲಾ ಅದರ ಬಗೆಗೆ. ವ್ಯತ್ಯಾಸ ಇಷ್ಟೇ, ಪ್ಲೇಗ್ ದೈಹಿಕರೋಗವಾದರೆ ಇದು ಮಾನಸಿಕರೋಗ. ಒಬ್ಬರಾದಮೇಲೊಬ್ಬರು ತಮ್ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವುದು ಪ್ರತಿನಿತ್ಯದ ಸುದ್ದಿ.

       ಮೊದಮೊದಲು ಇವರ ಈ ಹೋರಾಟದ ಛಾಪನ್ನು ನೋಡಿ ಏನೋ ಬಲವಾದ ಕಾರಣಗಳಿರಬಹುದೆಂದೇ ತಿಳಿದಿದ್ದೆ. ಆದರೆ ನಂತರ ಇವರ ಹೊರಟದ ಹೊಂದಿರುವ ಸತ್ಯ ಮತ್ತು ಇವರ ನೈತಿಕತೆ ತಿಳಿಯಿತು. ಒಂದು ವರ್ಷದಿಂದ ಈಚೆಗೆ ಈ ದೇಶದಲ್ಲಿ ಮಾನವತೆಯೇ ಮಾಯವಾಗುತ್ತಿದೆ ಎಂದು ಬಿಂಬಿಸಲು ಹೆಣಗಾಡುತ್ತಿರುವ ಇವರು ಧರ್ಮ ಅಸಹಿಷ್ಣುತೆ, ಕೋಮುದ್ವೇಷ, ಅಭಿಪ್ರಾಯ ಸ್ವಾತಂತ್ರ್ಯದ ಕಗ್ಗೊಲೆ ಇನ್ನಿತರೇ ಏನೇನೋ ಪದಗುಚ್ಛಗಳನ್ನು ಪುಂಖಾನುಪುಂಖವಾಗಿ ಹೇಳಲಾರಂಭಿಸಿದ್ದಾರೆ. ಆದರೆ ಇವೆಲ್ಲವೂ ಇವರುಗಳು ಪ್ರಶಸ್ತಿ ಸ್ವೀಕರಿಸುವ ಮೊದಲೂ,  ಹಾಗೂ ನಂತರದಲ್ಲೂ ಇದ್ದುದು ಇವರ ಇಂದ್ರಿಯಗಳಿಗೆ ಗೋಚಾರವಾಗಲಿಲ್ಲವೇನೋ. ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದಹಾಗೆ ಒಮ್ಮೆಲೇ ಇವರಿಗೆ ಈಗ ಜ್ಞಾನೋದಯವಾಗಿರಬೇಕು. ಹಿಂದುವಾಗಲೀ ಮುಸಲ್ಮಾನನಾಗಲೀ ಅಥವಾ ಇನ್ಯಾವ ಧರ್ಮದವನೇ ಆಗಲಿ ಕೋಮುದ್ವೇಶದಿಂದ ಕೊಲ್ಲಲ್ಪಟ್ಟರೆ ಅದು ಚಿಕ್ಕ ವಿಷಯವಲ್ಲ ಸರಿ, ಆದರೆ ಈ ಹಿಂದೆ ನಡೆದ ಸಿಖ್ಖರ ನರಮೇಧದಿಂದ ಹಿಡಿದು ಕಶ್ಮೀರಿ ಪಂಡಿತರ ಹತ್ಯಾಕಾಂಡ, ಉಲ್ಫಾ, ಮಾವೋ, ನಕ್ಸಲೈಟ್, ಜಿಹಾದೀ ಉಗ್ರಗಾಮಿಗಳ ಅಮಾನವೀಯ ಅಟ್ಟಹಾಸಗಳೆಲ್ಲಾ ಇವರಿಗೇಕೆ ಕಾಣಲಿಲ್ಲ ಎಂಬುದೇ ನನ್ನಲ್ಲಿ ಕಾಡುವ ಪ್ರಶ್ನೆ.  


       ಅಷ್ಟೇ ಅಲ್ಲ, ಲೈಂಗಿಕ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹೋಗುವಾಗಲೂ ಇವರು ಚಕಾರವೆತ್ತಲಿಲ್ಲ. ಕಾರಣವಾದರೂ ಏನು? ಇವರಿಗೆ ಪ್ರಶಸ್ತಿ ನೀಡಿದವರ ಬಗೆಗಿರುವ ಮೃದುತನ ಹಾಗು ಅವರ ಬಗೆಗಿನ ಹಿತಾಸಕ್ತಿಯೇ? ಕನ್ನಡದ ಒಬ್ಬ ವಿವಾದಿತ ಲೇಖಕನೊಬ್ಬ ಹೇಳಿದ ಸಾಹಿತಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ, ಸಾಹಿತಿಗಳು ಭಯದಿಂದ ಬದುಕುವಹಾಗೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು. ಕೆಲ ತಿಂಗಳ ಹಿಂದೆ ಶ್ರೀಮಾನ್ ನಾರಾಯಣಾಚಾರ್ಯರವರ ವಾಲ್ಮೀಕಿ ಬಗೆಗಿನ ಕೃತಿಯನ್ನು ಅದು ಬಿಡುಗಡೆಗೊಳ್ಳುವ ಮೊದಲೇ ಅದರ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿತಲ್ಲಾ ಅದು ಸಾಹಿತಿಯ ಅಭಿಪ್ರಾಯ ಸ್ವಾತಂತ್ರ್ಯದ ಕೊಲೆಯಲ್ಲವೇ? ಆ ಸಮಯದಲ್ಲಿ ಸಾಹಿತಿಗಳೆಲ್ಲಾ ಎಲ್ಲಿ ಹೋಗಿದ್ದರು? ಬಿಡಿ ಆ ನಿಷೇಧವನ್ನು ನ್ಯಾಯಾಲಯವು ತಳ್ಳಿಹಾಕಿ ಆಚಾರ್ಯರ ಪರ ತೀರ್ಪನ್ನಿತ್ತು, ಸರ್ಕಾರವು ಮುಖಭಂಗ ಅನುಭವಿಸಿದ್ದು ಹಾಸ್ಯಾಸ್ಪದದ  ವಿಷಯ.

       ಸಾಹಿತಿ ತನ್ನ ಬರವಣಿಗೆಗಳ ಮೂಲಕ ತನ್ನ ಅನುಭವ ಮತ್ತು ಸಮಾಜದ ಮಜಲುಗಳನ್ನು ಬಿಂಬಿಸಲು ಪ್ರಯತ್ನಿಸುತ್ತಾನೆ. ಹಾಗು ಹಲವರು ಸಮಾಜ ಸುಧಾರಣೆಗಾಗಿ ಹೋರಾಟಕ್ಕೆ ಧುಮುಕುತ್ತಾರೆ, ಹಾಗಂತ ಎಲ್ಲಾ ಸಾಹಿತಿಗಳೂ ಹೋರಾಟಗಾರರಾಗಲಾರರು. ತಮ್ಮ IDENTITYಗಾಗಿ ಹೋರಾಟದ ಮುಖವಾಡ ತೊಡುವವರಿದ್ದಾರೆ. ಶಿವರಾಮ ಕಾರಂತರು ಎಮರ್ಜೆನ್ಸಿ ವಿರೋಧಿಸಿ ಇಂದಿರಾಗಾಂಧಿಗೆ  ಪತ್ರ ಬರೆದು ತಮಗೆ ನೀಡಿದ "ಪದ್ಮಭೂಷಣ" ಪ್ರಶಸ್ತಿಯನ್ನು ಹಿಂತಿರುಗಿಸಿದ ದಿಟ್ಟತನ ಇಂದು ಪ್ರಶಸ್ತಿ ಹಿಂತಿರುಗಿಸುತ್ತಿರುವವರಿಗೆ ಈ ಹಿಂದೆ ಏಕೆ ಬರಲಿಲ್ಲ? ಕಾರಂತರ ವಿಷಯ ಹಳೆಯದಾಯಿತು ಬಿಡಿ. ಮೊನ್ನೆ ಮೊನ್ನೆ ಕಡಿದಾಳು ಶಾಮಣ್ಣನವರಿಗೆ ದಸರಾ ಉತ್ಸವ ಉದ್ಘಾಟನೆಯ ಆಮಂತ್ರಣ ಬಂದಾಗ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ನಡೆಸುವ ಉತ್ಸವಕ್ಕೆ ನಾನು ಬರುವುದಿಲ್ಲವೆಂದು ಖಂಡತುಂಡವಾಗಿ ಆಹ್ವಾನ ನಿರಾಕರಿಸಿದರಲ್ಲಾ ಅದು ಹೋರಾಟದ ನೈಜತೆ ಹಾಗು ನೈತಿಕತೆ ತೋರುತ್ತದೆ. 


        ಹೂಕೋಸಿನ ಗೆಡ್ಡೆಯನ್ನು ಬಿಸಿಯಾದ ಉಪ್ಪುನೀರಿಗೆ ಹಾಕಿದಾಗ ಅದರೊಳಗಿರುವ ಹುಳಗಳೆಲ್ಲಾ ಸರಣಿ ಸರಣಿಯಾಗಿ ಹೊರ ಬರುತ್ತವಲ್ಲಾ ಹಾಗೆ ಯಾರ್ಯಾರ ಉಪ್ಪು ತಿಂದವರೋ ಏನೋ ಇಂದು ಋಣ ತೀರಿಸಲು ಹೊರಬರುತ್ತಿದ್ದಂತೆ ಕಾಣುತ್ತಿದೆ. ಸಾಹಿತಿಗಳನ್ನು ಸಮಾಜದ ಹಿತರಕ್ಷಕರೆಂದು ಬಿಂಬಿಸಿ ಅವರನ್ನು ಅಟ್ಟಕ್ಕೇರಿಸುವುದನ್ನು ಮೊದಲು ಬಿಡಬೇಕು. 


"ಸಾಹಿತಿ ಲೋಕೋದ್ಧಾರನೆಂಬ ಭಾವನೆಯೇನೂ ಬೇಡ. ಅವನೂ ಎಲ್ಲರಂತೆ ಒಬ್ಬ ಮನುಷ್ಯ. ಆತ ಬರೆದಮಾತ್ರಕ್ಕೆ ಮಹಾನುಭಾವ ಆಗೋಲ್ಲ" ಎಂದ ಕಾರಂತರು ಏಕೋ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ.

Saturday 10 October 2015

ಕೃಷ್ಣನ copyrights ಉಳ್ಳವರು...

          ಅರಸೀಕೆರೆ Railway Station ಹೊರಭಾಗಕ್ಕೆ ಬಂದಾಗ ಕಾವಿಧಾರಿಗಳಾಗಿದ್ದ ಇಬ್ಬರು young & handsome ಯುವಕರು ಕೈಯಲ್ಲಿ ದಪ್ಪ ದಪ್ಪ ಪುಸ್ತಕಗಳನ್ನು ಹಿಡಿದು ನನ್ನ ಅಡ್ಡಗಟ್ಟಿದರು. ನಾವು ಕೃಷ್ಣ ತತ್ವ ಸಾರುವ ಅಂತರರಾಷ್ಟ್ರೀಯ ಸಂಸ್ಥೆಯವರೆಂದೂ, ಕೇವಲ 500 ರೂಪಾಯಿಯ, ಭಗವತ್ಗೀತೆಯ ಸಾರಾಂಶವಿರುವ ಈ ಪುಸ್ತಕವನ್ನು ತೆಗೆದುಕೊಳ್ಳಬೇಕೆಂದೂ ಒತ್ತಾಯಿಸಿದರು. ಮೊದಲನೆಯದಾಗಿ ಅದು ಆಂಗ್ಲಭಾಷೆಯಲ್ಲಿರುವ ಪುಸ್ತಕ ಆದ್ದರಿಂದ ನನಗೆ ಆಸಕ್ತಿ ಇಲ್ಲ, ಎರಡನೆಯದಾಗಿ ನನ್ನ ಬಳಿ ಕೇವಲ 40 & 60 ರೂಪಾಯಿಯ ರಾಮಕೃಷ್ಣಾಶ್ರಮದ ಹಾಗು ಗೀತಾ ಪ್ರೆಸ್ ಗೋರಖ್ ಪುರ್ರವರ ಭಗವತ್ಗೀತಾ ಅನುವಾದದ ಪುಸ್ತಕಗಳಿವೆ ಎಂದೆ. ಆ ಪುಸ್ತಕಗಳಲ್ಲಿ ಪೂರ್ಣ ವಿವರಣೆ ಇರುವುದಿಲ್ಲ ಹಾಗು ಎಲ್ಲರಿಗೂ ತಿಳಿಯುವ ಹಾಗೆ ದೀರ್ಘವಾದ ವಿಶ್ಲೇಷಣೆ ಇರುವುದಿಲ್ಲ ಆದ್ದರಿಂದಲೇ ನಮ್ಮ ಪುಸ್ತಕದ ಗಾತ್ರ ಹೆಚ್ಚು ಎಂದರು. ಇವರ ಬಗ್ಗೆ ಮೊದಲೇ ಪರಿಚಯವಿದ್ದುದರಿಂದ ಹೀಗೆ ಮಾತು ಮುಂದುವರಿದರೆ ವಾಗ್ವಾದವಾಗುವುದೆಂದು ಅಲ್ಲಿಂದ ಹೊರಟೆ. 

          ಇವರ ಆಡಂಬರ, ಇವರ ಸಂಸ್ಥೆಯ ಪ್ರಚಾರವೆಲ್ಲವೂ ನನಗೆ ಹೊಸತೇನಲ್ಲ. ಇವರ ದೇವಸ್ಥಾನ ಬೆಂಗಳೂರಿನಲ್ಲೇ ಬಹಳ ಹೆಸರುವಾಸಿಯಾದದ್ದು. ಎಲ್ಲರ ಬಾಯಲ್ಲಿ ಕೇಳಿದ್ದರಿಂದ ನೋಡೋಣವೆಂದು ಒಮ್ಮೆ ಹೋಗಿದ್ದೆ. ಆದರೂ ಕೊನೆಗೂ ನನ್ನ ಕಂಗಳಿಗೆ ಗರ್ಭಗುಡಿಯಲ್ಲಿರುವ ಕೃಷ್ಣನ ದೇವತಾಮೂರ್ತಿ ಕಾಣಲೇ ಇಲ್ಲ. ಬದಲಾಗಿ  ಅಲ್ಲಿ ನನಗೆ ಕಂಡಿದ್ದು ದೇವಸ್ಥಾನವೆಂಬ ಒಂದು ವಿಭಿನ್ನವಾದ ಹೆಸರಿರುವ ಕೃಷ್ಣನ Museum ಅದರೊಳಗಿರುವ ಅದ್ಧೂರಿಯಾದ ಕೃಷ್ಣನ Statue. ನನ್ನ ಕಂಗಳಲ್ಲೇ ದೋಷವಿರುವುದರಿಂದ ನನಗೆ ಹೀಗೆ ಕಂಡಿರಬಹುದು.


          ಒಂದೆರಡು ವರ್ಷಗಳ ಹಿಂದೆ ಯುರೋಪಿನ ದೇಶವೊಂದರಲ್ಲಿ ಭಗವತ್ಗೀತೆಯ ಮೇಲೆ ಅಲ್ಲಿಯ ನ್ಯಾಯಾಲಯವು ನಿರ್ಬಂಧ ಹೇರಿತ್ತು. ಕಾರಣ ಅದನ್ನು ಓದಿದವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು. ಭಗವತ್ಗೀತೆಯ ಮೇಲೆ ಶ್ರದ್ಧೆ ಇರುವ ನಮ್ಮಂತಹವರಿಗೆ ಈ ತೀರ್ಪು ಸರಿ ಕಾಣದಿರುವುದು ಸಹಜ. T.V.ಮಾಧ್ಯಮಗಳ ಮೂಲಕವೇ ಈ ವಿಷಯ ತಿಳಿದದ್ದು. ಆದರೆ ಭಗವತ್ಗೀತೆಯ ಬಗ್ಗೆ ಅಲ್ಲಿ ಸಾರಿದವರ್ಯಾರು? ಅವರು ಅಪಾರ್ಥದಲ್ಲಿ ಪ್ರಚಾರಮಾಡಿರಬಹುದಲ್ಲಾ ಎಂಬ ಆಲೋಚನೆ ಬಹಳ ದಿನಗಳವರೆಗೆ ಇತ್ತು. ಎಷ್ಟೋ ತಿಂಗಳ ನಂತರ ತಿಳಿಯಿತು ಈ ಘನತೆವೆತ್ತ ಅಂತರ್‌ರಾಷ್ಟ್ರೀಯ ಸಂಸ್ಥೆಯ ಅನುವಾದಿತ ಭಗವತ್ಗೀತೆಯೇ ಬಹಿಷ್ಕಾರವಾದದ್ದು ಎಂದು. ಆದರೆ ಈ ವಿಷಯ ಮಾತ್ರ ಮಾಧ್ಯಮಗಳಲ್ಲಿ ಬಂದದ್ದು ನಾ ನೀಡಿಲ್ಲ. ಅವರ ಹಿಡಿತ ಮಾಧ್ಯಮಗಳ ಮೇಲೂ ಇದೆ ಎಂಬುದಕ್ಕೆ ನನ್ನ ಬಳಿ ಪುರಾವೆಗಳಿಲ್ಲ.


         ಇದಕ್ಕೂ ಮುಂಚೆ ಒಮ್ಮೆ ಇವರ ತಂಡ ನಮ್ಮ ಮನೆಗೂ ಬಂದಿತ್ತು. ಕಾವಿಧಾರಿಗಳಾದ ಇವರನ್ನು ಮನೆಯ ಬಾಗಿಲಲ್ಲಿ ನಿಲ್ಲಿಸಿ ಮಾತನಾಡಿಸುವುದು ಸರಿಯಲ್ಲವೆಂದು ಮನೆ ಮುಂಭಾಗದಲ್ಲಿ ಕೂರಿಸಿದಾಗ ತಾವು ಬಂದ ಕಾರ್ಯ ಅರ್ಧ ಆಯಿತೆಂದೇ ತಿಳಿದಿದ್ದರೇನೋ.! ನಮ್ಮ ಸಂಸ್ಥೆಗೆ ಈ ಊರಿನಲ್ಲಿ ಸ್ವಂತ ಕಟ್ಟಡವಿಲ್ಲ ಆದ್ದರಿಂದ ಊರ ಹೊರಗೆ ಜಾಗ ತೆಗೆದುಕೊಂಡು ಸ್ವಂತ ಕಟ್ಟಡ ನಿರ್ಮಿಸಬೇಕೆಂದು ನಿಶ್ಚಯಿಸಿದ್ದೇವೆ ಆದ್ದರಿಂದ ಧನ ಸಹಾಯ ಮಾಡಬೇಕೆಂದು ಕೇಳಿದರು. ಅಷ್ಟಕ್ಕೇ ಸುಮ್ಮನಾಗಿದ್ದರೆ ತೋಚಿದ್ದಷ್ಟು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ಆ ಮಾತಿನ ಜೊತೆ "ಕನಿಷ್ಠ ಒಂದು Cement ಚೀಲಕ್ಕಾಗುವಷ್ಟಾದರೂ ಹಣ ಬಯಸುತ್ತೇವೆ" ಎಂದಾಗ ಮಾತ್ರ ಕೋಪ ಬಾರದೇ ಇರಲಿಲ್ಲ. ಕೇಳುತ್ತಿರುವುದೇ ದಾನ ಅದರಲ್ಲಿಯೂ Demand ಬೇರೆ.. ಈ ತರಹ ಮಾತು ಯಾಕೋ ಸರಿ ಅನ್ನಿಸದೆ ಅಲ್ಲೇ ಅವರನ್ನು ಉಗಿದು ಆಚೆ ಕಳಿಸೋಣವೆಂದು ಅನ್ನಿಸಿತು ಆದರೆ ಅದು ಮನೆಯಲ್ಲಿದ್ದವರಿಗೆ ಸರಿಕಾಣುವುದಿಲ್ಲವಾದ್ದರಿಂದ "ಸರಿ ಹಾಗಾದರೆ ನಿಮ್ಮ ಸಂಸ್ಥೆಯ Bank A/c No & IFSC code ಕೊಡಿ ನಾನು NEFT ಮಾಡುತ್ತೇನೆ" ಎಂದೆ. ನಮ್ಮದು ಬ್ಯಾಂಕಿನಲ್ಲಿ A/c ಇಲ್ಲ. ನಿಮಗೆ ರಷೀದಿ ಕೊಡುತ್ತೇವೆ ಈಗಲೇ ನಗದು ಕೊಡಿ ಎಂದರು. ರೀ ಸ್ವಾಮಿ Bank A/c No ಇಲ್ಲಾಂತ ಕತೆ ಹೇಳ್ತೀರಲ್ಲಾ ನಿಮ್ಮ ಸಂಸ್ಥೆ ನನಗೇನು ಅಪರಿಚಿತವಲ್ಲ. ಹೊರದೇಶಗಳಿಂದ Dollar Dollars Donation collect ಮಾಡ್ತೀರಲ್ಲಾ ಅದನ್ನೂ ನಗದಿನ ರೂಪದಲ್ಲೇ ಹಡಗಿನಲ್ಲಿ ಹಾಕಿಕೊಂಡು ಬರುತ್ತೀರಾ, ಈ ತರಹದ ರಷೀದಿ ಎಷ್ಟು ಬೇಕು ಹೇಳಿ ನಾನೇ ಕೊಡುತ್ತೇನೆ. ನೀವು ಹೀಗೆ ಹೇಳುತ್ತಿರುವುದನ್ನು ನೋಡಿದರೆ ನಿಮ್ಮ ಮೇಲೆ ಯಾಕೋ ಸಂಶಯ ಬರುತ್ತಿದೆ ಎಂದು ಗಟ್ಟಿ ಧ್ವನಿಯಲ್ಲೇ ಹೇಳಿದೆ. ತಕ್ಷಣವೇ ಅವರ ಜೊತೆಯಲ್ಲಿದ್ದವ A/c No ಇಲ್ಲ ಎಂದಿದ್ದಲ್ಲ,ಈಗ ತಂದಿಲ್ಲ ಎಂದಿದ್ದು ಎಂದು ತೇಪೆ ಹಚ್ಚಲು ಶುರುಮಾಡಿದ. ಸರಿ ಹಾಗಾದರೆ ನಾಳೆ ಬಂದು ನಿಮ್ಮ A/c no ಕೊಟ್ಟು ಹೋಗಿ ಹಣ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿ ಕಳುಹಿಸಿದೆ. ಅಂದಿನಿಂದ ಇಂದಿನವರೆಗೂ ಅವರ ತಂಡ ನಮ್ಮ ಬೀದಿಯಲ್ಲಿ ಅವರಿವರ ಮನೆಗೆ ಅಲೆದಾಡುವುದನ್ನು ನೋಡಿದ್ದೇನೆ. ಆದರೆ ನಮ್ಮ ಮನೆಗೆ ಯಾಕೋ ಬರಲೇ ಇಲ್ಲ. ಬಹುಶಃ ಅವರ ಸಂಸ್ಥೆಯ ಹೆಸರಿನಲ್ಲಿ ಖಾತೆ ತೆರೆದು ಕೊಡುವ ಯಾವ ಬ್ಯಾಂಕು ಶಿವಮೊಗ್ಗದಲ್ಲಿಲ್ಲವೇನೋ.!


        ಬಹುಶಃ ಇವರ ಅನುವಾದಿತ ಭಗವತ್ಗೀತೆಯನ್ನು ಓದಿಯೇ ಕೆಲವರು ಭಗವತ್ಗೀತೆಯನ್ನು ಸುಡಬೇಕು ಎಂದು ಅರಚುತ್ತಿರುವುದೇನೋ ಯಾರಿಗೆ ಗೊತ್ತು..

Friday 29 May 2015

ಯಲೋಪಶಾಗಮ ವಿನಾಯಕ.



|| ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |
 ನಿರ್ವಿಘ್ನಮ್ ಕುರು ಮೇ ದೇವಾ ಸರ್ವ ಕಾರ್ಯೇಶು ಸರ್ವದಾ ||

        ಗಣಪತಿ, ಗಣೇಶ, ಗಜಾನನ, ವಿಘ್ನೇಶ್ವರ, ವಿನಾಯಕ ಹೀಗೆ ಹತ್ತು ಹಲವಾರು ಹೆಸರಿನಿಂದ ಕರೆಸಿಕೊಳ್ಳುವ ಪಾರ್ವತೀ ಸುತ   ಆದಿವಂದ್ಯನು. ಯಾವುದೇ ಕಾರ್ಯವಿರಲಿ ಪ್ರಥಮ ಪೂಜೆ ಅವನಿಗೇ ಸಲ್ಲುವುದು. ಇವನು ಓದಿದ, ಬರೆದ ಕತೆ ಹೆಚ್ಚಾಗಿ ಪ್ರಚಲಿತದಲ್ಲಿಲ್ಲದಿದ್ದರೂ ಅಕ್ಷರಾಭ್ಯಾಸದಿಂದ ಹಿಡಿದು ಎಲ್ಲ. ಕಾಮನೆಗಳಿಗೂ ಇವನ ಬಳಿಯೇ ವರ ಕೇಳುವುದುಂಟು. ಅಷ್ಟೇ ಏಕೆ  ಸ್ವತಃ ಇವನೇ ಮದುವೆಯಾಗದಿದ್ದರೂ ಭಕ್ತರಿಗೆ ಮದುವೆಯ ಜೊತೆಗೆ ಮಕ್ಕಳಾಗುವ ಹಾಗೆ ವರ ನೀಡುವ ಜವಾಬ್ದಾರಿ ಇವನಮೇಲೆಯೇ ಹೊರಿಸುತ್ತಾರೆ. "ವಿನಾಯಕ ನಮಸ್ತುಭ್ಯಂ ಸರ್ವಕಾಮಫಲಪ್ರದ" ಎನ್ನುವ ಹಾಗೆ ಬೇಡಿದ್ದನ್ನೆಲ್ಲಾ ನೀಡುವಾತ ಎಂದೇ ಖ್ಯಾತನಾಗಿದ್ದಾನೆ.

       ಗಣಪತಿಯ ಉಗಮದ ಬಗ್ಗೆ ವಿದ್ವಜ್ಜನರಲ್ಲಿ ಹಲವಾರು ಭಿನ್ನಾಭಿಪ್ರಾಯಗಳಿವೆ. ಇವನು ವೇದಕಾಲೀನ ದೇವತೆ ಅಲ್ಲವೆಂದು ಕೆಲವರ, ವೈದಿಕ ದೇವತೆಯೇ ಅಲ್ಲವೆಂದು ಕೆಲವರ ಅಭಿಪ್ರಾಯ. ಏನೇ ಆದರೂ ಪಾರ್ವತಿಯೇ ಇವನನ್ನು ಸೃಷ್ಟಿಸಿದಳು ಎಂಬುದು ನಾವೆಲ್ಲರೂ ತಿಳಿದಿರುವ ವಿಷಯ.

       ಭಾರತೀಯ ಜ್ಞಾನಗಳು, ವೈದೀಕ ಕರ್ಮಗಳು ಪ್ರಕೃತಿಯೊಂದಿಗೆ ಬೆಸೆದುಕೊಂಡಿರುತ್ತವೆ. ಪ್ರಕೃತಿಯೊಡನೆ ಬೆರೆತು ಪ್ರಕೃತಿಯನ್ನು  ಪೋಷಿಸಿ ಅದರಿಂದಲೇ ಬದುಕುವ ಸಂಸೃತಿ ಭಾರತೀಯ ಜೀವನ ಪದ್ಧತಿಯದ್ದಾಗಿತ್ತು. ಅದರಲ್ಲಿಯೂ ಗಣಪನು ಹೆಚ್ಚಾಗಿಯೇ ಪ್ರಾಕೃತಿಕ ಆರಾಧನೆಯನ್ನು ಹೊಂದಿದವನು. ಗಣೇಶನನ್ನು ಕ್ರಿಯಾತ್ಮಕವಾಗಿ ಸೃಷ್ಟಿಸಿದವನು, ಪ್ರಚುರಪಡಿಸಿದವನು ಮಹಾನ್ ಜ್ಞಾನಿಯೇ ಸರಿ. ವಿನಾಯಕನ ಆರಾಧನೆಯ ರೂಪದಲ್ಲಿ ಪ್ರಕೃತಿಯನ್ನು ಉಳಿಸುವ ಮೂಲಕ ಸಮಾಜಮುಖಿಯಾದವನು ದೂರದೃಷ್ಟಿಯ ಚಿಂತಕನೇ ಆಗಿರಬೇಕು. ಮೂಲತಃ ಗಣಪತಿ ಹಳ್ಳಿಗರ ಕೃಷಿಕರ ಆರಾಧ್ಯ ದೈವವಾಗಿರಬಹುದು. ಕಾರಣ ಇತ್ತೀಚಿನವರೆಗೂ ಹಳ್ಳಿಗಳಲ್ಲಿ ಅವೈದಿಕರು ಭತ್ತದ ರಾಶಿಯನ್ನು ಮಾಡಿ ಅದರಮೇಲೆ ಕುಂಬಳಕಾಯಿ ಇಟ್ಟು ತೆಂಗಿನಕಾಯಿ ಇಟ್ಟು ಸುತ್ತ ವೀಳ್ಯದೆಲೆ ಅಡಿಕೆ ಇಟ್ಟು ಅನಾಡಂಭರದ ಗಣಪನನ್ನು ಪ್ರತಿಷ್ಠಾಪಿಸಿ  ಅರ್ಥಪೂರ್ಣವಾಗಿ ಆಚರಿಸುತ್ತಿದ್ದ ಪದ್ಧತಿ ಇತ್ತು. ಆದ್ದರಿಂದಲೇ ಹೇಳಿದ್ದು ಗಣಪತಿ ಹೆಚ್ಚು ಪ್ರಾಕೃತಿಕ ನಂಟನ್ನು ಹೊಂದಿದವನೆಂದು. ಅಷ್ಟೇ ಅಲ್ಲ ಗಣಪನ ಮೂರ್ತಿಯ ಆರಾಧನೆ ನಿಜಕ್ಕೂ ಬುದ್ಧಿ ಪೂರ್ವಕ ಆಚರಣೆ. ಮಣ್ಣಿನಿಂದ ಮಾಡಿದ ಮೂರ್ತಿಯೇ ಗಣಪತಿಗೆ ಶ್ರೇಷ್ಠ ಎಂಬ ಮಾತಿದೆ. ಭಾದ್ರಪದ ಮಾಸದ ಚತುರ್ಥಿಯಂದು ಇವನ ವ್ರತ ಮಾಡುವ ಮೂಲಕ ಹಬ್ಬವನ್ನಾಚರಿಸುತ್ತೇವೆ. ಇದರಲ್ಲಿ ಕೆರೆಯನ್ನು ಉಳಿಸುವ ಪಾಠವಿತ್ತು. ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಬರುವ ಈ ಹಬ್ಬಕ್ಕೆ ಮೂರು ತಿಂಗಳು ಮುಂಚಿತವಾಗಿ ಅಂದರೆ ಬೇಸಿಗೆಯಲ್ಲೇ ಜೇಡಿಮಣ್ಣನ್ನು ಸಂಗ್ರಹಿಸಲಾಗುತ್ತದೆ. ಆ ಸಮಯಕ್ಕೆ ಕೆರೆಯ ನೀರು ಭಾಗಶಃ ಕಾಲಿಯಾಗಿರುತ್ತದೆ. ಗಣಪತಿ ಮೂರ್ತಿಯ ನೆಪವೊಡ್ಡಿ ಕೆರೆಯಲ್ಲಿ ಶೇಖರಣೆಯಾದ ಹೂಳನ್ನು ತೆಗೆಯುವುದು ಬುದ್ಧಿವಂತಿಕೆ ಅಲ್ಲವೇ? ಕೆರೆಯನ್ನೂ ಕಾಪಾಡಿದಂತಾಯಿತು ಹಬ್ಬವನ್ನೂ ಮಾಡಿದಂತಾಯಿತು. 

       ಅಷ್ಟಕ್ಕೇ ಮುಕ್ತಾಯವಾಗಲಿಲ್ಲ. ಮಳೆಗಾಲದ ಮಧ್ಯದ ಸಮಯ. ಕೆರೆಯು ತುಂಬಿ ಕೆರೆಗೆ ಕಟ್ಟಲಾದ ಕಟ್ಟು, ಏರಿ ಮಳೆಯಿಂದಾಗಿ ಮೃದುಗೊಂಡು ಬಿರುಕುಬಿಡುವ ಸಾಧ್ಯತೆಗಳಿರುತ್ತದೆ. ಅಂತಹ ಸಂದರ್ಭದಲ್ಲಿ ಕೆರೆಯಿಂದಲೇ ತೆಗೆದ ಹೂಳನ್ನು ವಿಗ್ರಹದ ರೂಪದಲ್ಲಿ ಪುನಃ ಕೆರೆಯ ಏರಿಯ ಸಮೀಪದಲ್ಲಿಯೇ ವಿಸರ್ಜಿಸುವ ಮೂಲಕ ಕೆರೆಯ ಕಟ್ಟೆ ಬಿರುಕು ಬಿಡದಂತೆ ಕಾಪಾಡುವ ಬುದ್ಧಿವಂತಿಕೆ ನಮ್ಮ ಪುರಾತನ ಸಂಸ್ಕೃತಿಯಲ್ಲಿತ್ತು. ತನ್ಮೂಲಕ ವಿಘ್ನ ವಿನಾಶಕ ಎಂಬ ಖ್ಯಾತಿಯೂ ವಿನಾಯಕನಿಗೆ ಅರ್ಥಗರ್ಭಿತವಾಗಿತ್ತು. ಹೀಗೆ ವಿನಾಯಕ ಪ್ರಕೃತಿಯ ನಂಟು ಹೊಂದಿರುವ ದೇವತೆಯಾಗಿ ಗೋಚರಿಸುತ್ತಿದ್ದನು. ಇಷ್ಟೇ ಅಲ್ಲ, ಗಣಪನನ್ನು ನರ್ಮದೆಯಲ್ಲಿ ಸಿಗುವ ಕೆಂಪು ಕಲ್ಲಿನ ರೂಪದಲ್ಲಿ ಆರಾಧಿಸುವ ಪದ್ಧತಿಯೂ ಇದೆ. ಒಟ್ಟಿನಲ್ಲಿ  ಏಕದಂತನು ಪರಿಸರ ಸ್ನೇಹಿಯಾಗಿದ್ದನು.

       ಆದರೆ ಎಂದು ಗಣಪನು ಬೀದಿ ಬೀದಿಗಳಲ್ಲಿ ಪ್ರತಿಷ್ಠಾಪಿತನಾದನೋ ಅಂದೇ ಅವನ ಚರಿತ್ರೆಯ ನಾಶ ಶುರುವಾಗಿದ್ದು. ಶ್ರೀಯುತ ಬಾಲಗಂಗಾಧರ ತಿಲಕರು ಒಂದು ಉದಾತ್ತ ಧ್ಯೇಯೊದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತಂದರು. ಗಣೇಶನ ಪ್ರತಿಷ್ಠಾಪನೆಯ ಮೂಲಕ ಸಮಾಜ ಒಟ್ಟಾಗಲೆಂದು, ಎಲ್ಲರೂ ಒಂದುಗೂಡಲೆಂದೂ, ಸಮಾಜದಲ್ಲಿರುವ ಬಿರುಕುಗಳು ನಾಶವಾಗಿ ಎಲ್ಲರೂ ಒಗ್ಗಟ್ಟಾಗಿರಲೆಂಬ ಆಶಯ ಹೊಂದಿದ್ದರು. ಆದರೆ ಇದು ಬರಬರುತ್ತಾ ದಾರಿ ತಪ್ಪುತ್ತಿರುವುದು ದುರದೃಷ್ಟಕರ. ಸಮಾಜದ ಸ್ವಾಸ್ಥ್ಯಕ್ಕಾಗಿ ಪ್ರಾರಂಭವಾದ ಆಚರಣೆ ಸಮಾಜವನ್ನು ಒಡೆಯುತ್ತಿರುವುದಲ್ಲದೇ ಪರಿಸರವನ್ನೂ ಹಾಳುಗೆಡವುತ್ತಿದೆ. ಬೀದಿಬೀದಿಯಲ್ಲಿ ಎರಡು,ಮೂರು ಗಣಪತಿಯನ್ನಿಟ್ಟು ಒತ್ತಾಯಪೂರ್ವಕವಾಗಿ ಹಣ ವಸೂಲಿಮಾಡಿ, ಕಿವಿಗರಚುವಂತೆ ಧ್ವನಿ ವರ್ಧಕಗಳಲ್ಲಿ ಸಿನಿಮಾ ಗೀತೆಗಳನ್ನು ಹಾಕಿ ರಾತ್ರಿ ಹಗಲು ಕುಣಿದು ಎಲ್ಲರಿಗೂ ತೊಂದರೆಯನ್ನುಂಟುಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಕುಡಿದು ದಾರಿಯುದ್ದಕ್ಕೂ ಬೀಳುವವರನ್ನು ಕಾಣಬಹುದು. ಧ್ವನಿ ವರ್ಧಕಗಳ ಮೂಲಕ, ಪಟಾಕಿ ಸಿಡಿಸುವುದರ ಮೂಲಕ ಪರಿಸರಕ್ಕೂ ಹಾನಿಯುಂಟುಮಾಡಲಾಗುತ್ತಿದೆ. ಅಷ್ಟಕ್ಕೇ ಮುಗಿದಿಲ್ಲ ವಿಷಕಾರಿ ರಾಸಾಯನಿಕಗಳು ಬಣ್ಣ ಬಣ್ಣದ ಮೂರ್ತಿಗಳ ಮೂಲಕ ಜೀವಜಲ ಸೇರುತ್ತಿರುವುದು ಗಂಭೀರವಾಗಿ ಚಿಂತನೆ ಮಾಡಬೇಕಾದ ವಿಷಯ. ಪ್ರಕೃತಿಗೆ ನೀಡುತ್ತಿರುವ ಈ ಪೆಟ್ಟು ಮನುಷ್ಯ ಸೇರಿದಂತೆ ಸಕಲ ಜೀವಿಗಳಿಗೂ ಕಂಟಕಪ್ರಾಯವೇ. ಇದರಿಂದ ಉಂಟಾಗುವ ಹಾನಿಯ ಸ್ವರೂಪ ತಿಳಿದಿದ್ದರೂ ಮನುಷ್ಯ ಇದರಬಗೆಗೆ ತಿರಸ್ಕಾರ ಭಾವನೆ ಪಡೆದಿರುವುದು ದುರದೃಷ್ಟಕರ. ಈಗಾಗಲೇ ಹದ್ದುಮೀರಿರುವ ಪರಿಸರನಾಶವನ್ನು ಇನ್ನಾದರೂ ತಡೆಯಲು ಗಂಭೀರ ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈಮೀರಿ ಹೋಗಬಹುದು. ಇದನ್ನೆಲ್ಲಾ ನೋಡಿದಾಗ ತಿಲಕರಿಗೆ ಈ ಯೋಚನೆ ಯಾಕಾಗಿ ಬಂದಿತೋ ಅನ್ನಿಸುವುದು. ಬಹುಶಃ ಮುಂದೆ ಹೀಗೆಲ್ಲಾ ಆಗುತ್ತದೆ ಎಂದು ತಿಳಿದಿದ್ದರೆ ತಿಲಕರು ಈ ಯೋಚನೆ ಕೈಬಿಡುತ್ತಿದ್ದರೇನೋ. ಕೆರೆಗಳ ಮಹತ್ವವೇ ತಿಳಿಯದ ಈ ಸಮಯದಲ್ಲಿ ಭಾದ್ರಪದ ಗಣಪತಿಯ ಆರಾಧನೆ ಅಪ್ರಸ್ತುತ ಅನ್ನಿಸಿದರೂ ಬಹುಶಃ ತಪ್ಪಾಗಲಾರದು. ಯಾವ ಉದ್ದೇಶದಿಂದ ಕಾರ್ಯವೊಂದನ್ನು ಆರಂಭಿಸಿದರೋ ಅದೇ ಕಾರ್ಯವು ಉದ್ದೇಶವನ್ನು ನಾಶಮಾಡಲು ಕಾರಣವಾಗಿರುವುದು ಒಂದು ಶಾಪವೆಂದೇ ಹೇಳಬಹುದು. ವಿನಾಯಕ ಶಬ್ದದಲ್ಲಿ 'ಯ'ಕಾರ ಲೋಪವಾಗಿ 'ಶ'ಕಾರ ಆಗಮನವಾಗುತ್ತಿದೆ. ಆದ್ದರಿಂದಲೇ ಹೇಳಿದ್ದು 'ಯ'ಲೋಪ-ಶಾಗಮ - ವಿನಾಯಕ" ಎಂದು.

Wednesday 15 April 2015

ರಾಮಾಯಣ- ಒಂದು ವೈಜ್ಞಾನಿಕ ಅವಲೋಕನ..



       ಕಲ್ಪನೆ ಎಂದು ತಿಳಿದಿದ್ದ ಹಲವಾರು ವಿಷಯಗಳು ಇಂದು ವೈಜ್ಞಾನಿಕವಾಗಿ ಸಾಧ್ಯವೆಂದು ಧೃಡಪಡಿಸಲಾಗಿದೆ. ಉದಾಹರಣೆಗೆ mobile, TV, gprs, fighter jets, test tube baby, plastic surgery etc. ಇವೆಲ್ಲವೂ ರಾಮಾಯಣ, ಮಹಾಭಾರತ, ಪುರಾಣಗಳಲ್ಲಿ ಉಕ್ತವಾಗಿರುವ ವಿಷಯಗಳೇ. ಇವುಗಳ ಕಲ್ಪನೆ ಭಾರತೀಯರಿಗೆ ಹೊಸತೇನಲ್ಲ. 50-70 ವರ್ಷಗಳ ಹಿಂದೆ ಹೋದರೆ ಇವೆಲ್ಲವೂ ಕೇವಲ ಕಥೆಗಳಾಗಿದ್ದವೇ ಹೊರತು ನಿಜವಾಗಿರಲಿಲ್ಲ. ಆಗಿನ ಕಾಲದ ಬುದ್ಧಿಜೀವಿಗಳು ಇವುಗಳನ್ನು ಬಾಲಿಷ ಕಥೆಗಳೆಂದು ತೆಗಳುತ್ತಿದ್ದರು. ಆದರೆ ಇಂದು?

ಇಂದು ಕೂಡಾ ಕೆಲವಾರು ಸನ್ನಿವೇಶಗಳನ್ನು ಕಟ್ಟು ಕಥೆಗಳೆಂದು ತೆಗಳುವವರು ಅನೇಕರಿದ್ದಾರೆ. ಆದರೆ ಅಂತಹುಗಳನ್ನು ಸಾಧ್ಯವಾಗಿಸುವ ಬಗೆ ಹೇಗೆ ಎಂದು ಯೋಚಿಸುವವರು ಬಹಳ ಕಡಿಮೆ.

ಪ್ರಯತ್ನ ಪಡುವವರಿಗಾಗಿ ಈ ಕೆಳಗಿನ ಉದಾಹರಣೆ ;
ಹನುಮಂತ ಲಂಕೆಗೆ ಹಾರುವಾಗ ಸಾಗರ ಮಧ್ಯದಲ್ಲಿ ಲಂಕೆಗೆ ಕಾವಲಾಗಿರವ ಒಬ್ಬ ರಾಕ್ಷಸಿಯ ಪ್ರಸಂಗ ಬರುತ್ತದೆ. ಅವಳನ್ನು ದಾಟಿ ಯಾರೂ ಲಂಕೆಗೆ ಪ್ರವೇಶ ಮಾಡಲು ಸಾಧ್ಯವಿರಲಿಲ್ಲ. ಜಲಮಾರ್ಗದಲ್ಲೆ ಬರಲಿ, ವಾಯುಮಾರ್ಗದಲ್ಲೇ ಬರಲಿ, ಅವಳು ಎಲ್ಲವನ್ನೂ ನುಂಗಿಹಾಕುತ್ತಿದ್ದಳು. ಹನುಮಂತ ಲಂಕೆಗೆ ಹಾರಿಹೋಗುವಾಗ ಅವಳು ಹನುಮನನ್ನೂ ಅಡ್ಡಗಟ್ಟುತ್ತಾಳೆ. ಅವನ ಜೊತೆಗೆ ಯುದ್ಧ ನಡೆಯುತ್ತದೆ. ನಂತರ ಅವಳು ಅವನನ್ನೂ ನುಂಗುತ್ತಾಳೆ. ನಂತರ ಹನುಮ ಅವಳನ್ನೇ ಸೀಳಿಕೊಂಡು ಹೊರಬರುತ್ತಾನೆ. ಹೀಗೆ ಅವಳ ಅಂತ್ಯವಾಗುವ ಪ್ರಸಂಗವಿದೆ. ರಾಮಾಯಣವನ್ನು ನಂಬುತ್ತೇವೆ ಆದರೆ ಇದು ಉತ್ಪ್ರೇಕ್ಷೆಯ ಕಥೆಯಷ್ಟೇ ಎನ್ನುವವರಿದ್ದಾರೆ. ಇದು ಸತ್ಯ ಘಟನೆ ಏಕೆ ಆಗಿರಬಾರದು?

ನಮ್ಮ ಕಥೆಗಳಲ್ಲಿ ಬಹಳಷ್ಟು ಗೂಢಾರ್ಥಗಳಿವೆ. ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯವಿಷ್ಟೆ. ಸಾಗರದ ಮೂಲಕವಾಗಲೀ, ವಾಯುಮಾರ್ಗದ ಮೂಲಕವಾಗಲೀ ಲಂಕೆಗೆ ಹೋಗಲು ಸಾಧ್ಯವಿರಲಿಲ್ಲ. ಹೋಗಲು ಪ್ರಯತ್ನಪಟ್ಟವರೆಲ್ಲರೂ ಪುನಃ ಹಿಂದಿರುಗಿ ಬರುತ್ತಿರಲಿಲ್ಲ. ಹನುಮಂತನೆಂಬುವವನು ಬಹಳ ಪ್ರಯತ್ನ ಪಟ್ಟು ಅಡೆತಡೆಗಳನ್ನೆಲ್ಲವನ್ನೂ ಸರಿಪಡಿಸಿದನು.

ಇಂದಿಗೂ ಇದು ಸತ್ಯವಾಗಿರುವ ಘಟನೆಯಲ್ಲವೇ?
Bermuda triangle ಹೆಸರು ಕೇಳಿರುತ್ತೀರ. ಇದು ದಕ್ಷಿಣ Florida, ಬಹಾಮಾ, Fortorico ದೇಶಗಳನ್ನು ಬಳಸಿ ಬೆರ್ಮುಡಾದವರೆಗೆ ಅಟ್ಲಾಂಟಿಕ್ ಸಾಗರದಲ್ಲಿರುವ ತ್ರಿಕೋಣಕೃತಿಯ ಪ್ರದೇಶ.  ಈ ಪ್ರದೇಶದಲ್ಲಿ ಹಡಗಿನ ಮೂಲಕವಾಗಲೀ ಅಥವಾ ವಿಮಾನದ ಮೂಲಕವಾಗಲೀ ಸಂಚರಿಸಲು ಹೋದವರು ಹಿಂಬಂದಿದ್ದಿರಲಿ, ಅವರ ಕುರುಹು ಕೂಡಾ ಸಿಕ್ಕಿಲ್ಲಾ. ಇದರ ರಹಸ್ಯ ಇಂದಿಗೂ ವಿಜ್ಞಾನಕ್ಕೆ ನಿಲುಕಿಲ್ಲ. ಇಂದಿಗೂ ಇದರ ಬಗ್ಗೆ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ.

ಇರಲಿ.. ಒಮ್ಮೆ ಇದನ್ನು ಹನುಮಂತನ ಕಥೆಯ ಜೊತೆ ತಾಳೆಮಾಡಿ ನೋಡಿ. ಲಂಕೆಯ ರಕ್ಷಣೆ ಮಾಡುತ್ತಿದ್ದ ಆ ರಾಕ್ಷಸಿಗೂ ಬೆರ್ಮುಡಾ ಟ್ರ್ಯಾಂಗಲ್ಗೂ ಅಕ್ಷರಶಃ ಹೊಂದಾಣಿಕೆಯಿಲ್ಲವೇ? ಆ ರಾಕ್ಷಸಿ ಮಾಡುತ್ತಿದ್ದ ಕಾರ್ಯಗಳೇ ಈ ಬೆರ್ಮುಡಾ ಟ್ರ್ಯಾಂಗಲ್ನಲ್ಲಿ ಸಂಭವಿಸುತ್ತಿರುವ ಘಟನೆಗಳಲ್ಲವೇ?
ಬಹುಶಃ ಇಲ್ಲಿಯೂ ಈ ತರಹದ triangle ಇದ್ದಿರಬಹುದು. ಕಾರಣ ಇಲ್ಲಿ ರಾಕ್ಷಸಿ ಎಂದು ಹೆಣ್ಣಿನ ಸಂಭೋದನೆ ಇದೆ. ವಾಮಾಚಾರ ಮುಂತಾದ ತಾಂತ್ರಿಕ ಕ್ರಿಯೆಗಳಲ್ಲಿ ತ್ರಿಕೋಣವನ್ನು ಹೆಣ್ಣಿನ ಗುರುತಾಗಿ ಬಳಸುತ್ತಾರೆ.

ಆದರೆ ಹನುಮಂತ ಮಾಡಿದ ಭೇದಿಸುವ ಕೆಲಸ ಇನ್ನೂ ಮನುಷ್ಯರಿಗೆ ಸಾಧ್ಯವಾಗಿಲ್ಲ. ಆಸಕ್ತರಿಗೆ, ಸಂಶೂಧಕರಿಗೆ, ಇಲ್ಲಿ ಇನ್ನೂ ಹೇರಳವಾದ ಅವಕಾಶವಿದೆ.

ಹೀಗೆ ನಮ್ಮ ಇತಿಹಾಸದ ಕಥೆಗಳಲ್ಲಿ ಈ ತರಹದ ಸಾಂಕೇತಿಕ ರಹಸ್ಯಗಳು ಬಹಳಷ್ಟಿದ್ದು ಸಂಶೋಧಕರಿಗೆ ಬೇಕಾದ ಹೇರಳ ವಿಷಯಗಳು ಅಡಕವಾಗಿವೆ.