आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Friday 29 May 2015

ಯಲೋಪಶಾಗಮ ವಿನಾಯಕ.



|| ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |
 ನಿರ್ವಿಘ್ನಮ್ ಕುರು ಮೇ ದೇವಾ ಸರ್ವ ಕಾರ್ಯೇಶು ಸರ್ವದಾ ||

        ಗಣಪತಿ, ಗಣೇಶ, ಗಜಾನನ, ವಿಘ್ನೇಶ್ವರ, ವಿನಾಯಕ ಹೀಗೆ ಹತ್ತು ಹಲವಾರು ಹೆಸರಿನಿಂದ ಕರೆಸಿಕೊಳ್ಳುವ ಪಾರ್ವತೀ ಸುತ   ಆದಿವಂದ್ಯನು. ಯಾವುದೇ ಕಾರ್ಯವಿರಲಿ ಪ್ರಥಮ ಪೂಜೆ ಅವನಿಗೇ ಸಲ್ಲುವುದು. ಇವನು ಓದಿದ, ಬರೆದ ಕತೆ ಹೆಚ್ಚಾಗಿ ಪ್ರಚಲಿತದಲ್ಲಿಲ್ಲದಿದ್ದರೂ ಅಕ್ಷರಾಭ್ಯಾಸದಿಂದ ಹಿಡಿದು ಎಲ್ಲ. ಕಾಮನೆಗಳಿಗೂ ಇವನ ಬಳಿಯೇ ವರ ಕೇಳುವುದುಂಟು. ಅಷ್ಟೇ ಏಕೆ  ಸ್ವತಃ ಇವನೇ ಮದುವೆಯಾಗದಿದ್ದರೂ ಭಕ್ತರಿಗೆ ಮದುವೆಯ ಜೊತೆಗೆ ಮಕ್ಕಳಾಗುವ ಹಾಗೆ ವರ ನೀಡುವ ಜವಾಬ್ದಾರಿ ಇವನಮೇಲೆಯೇ ಹೊರಿಸುತ್ತಾರೆ. "ವಿನಾಯಕ ನಮಸ್ತುಭ್ಯಂ ಸರ್ವಕಾಮಫಲಪ್ರದ" ಎನ್ನುವ ಹಾಗೆ ಬೇಡಿದ್ದನ್ನೆಲ್ಲಾ ನೀಡುವಾತ ಎಂದೇ ಖ್ಯಾತನಾಗಿದ್ದಾನೆ.

       ಗಣಪತಿಯ ಉಗಮದ ಬಗ್ಗೆ ವಿದ್ವಜ್ಜನರಲ್ಲಿ ಹಲವಾರು ಭಿನ್ನಾಭಿಪ್ರಾಯಗಳಿವೆ. ಇವನು ವೇದಕಾಲೀನ ದೇವತೆ ಅಲ್ಲವೆಂದು ಕೆಲವರ, ವೈದಿಕ ದೇವತೆಯೇ ಅಲ್ಲವೆಂದು ಕೆಲವರ ಅಭಿಪ್ರಾಯ. ಏನೇ ಆದರೂ ಪಾರ್ವತಿಯೇ ಇವನನ್ನು ಸೃಷ್ಟಿಸಿದಳು ಎಂಬುದು ನಾವೆಲ್ಲರೂ ತಿಳಿದಿರುವ ವಿಷಯ.

       ಭಾರತೀಯ ಜ್ಞಾನಗಳು, ವೈದೀಕ ಕರ್ಮಗಳು ಪ್ರಕೃತಿಯೊಂದಿಗೆ ಬೆಸೆದುಕೊಂಡಿರುತ್ತವೆ. ಪ್ರಕೃತಿಯೊಡನೆ ಬೆರೆತು ಪ್ರಕೃತಿಯನ್ನು  ಪೋಷಿಸಿ ಅದರಿಂದಲೇ ಬದುಕುವ ಸಂಸೃತಿ ಭಾರತೀಯ ಜೀವನ ಪದ್ಧತಿಯದ್ದಾಗಿತ್ತು. ಅದರಲ್ಲಿಯೂ ಗಣಪನು ಹೆಚ್ಚಾಗಿಯೇ ಪ್ರಾಕೃತಿಕ ಆರಾಧನೆಯನ್ನು ಹೊಂದಿದವನು. ಗಣೇಶನನ್ನು ಕ್ರಿಯಾತ್ಮಕವಾಗಿ ಸೃಷ್ಟಿಸಿದವನು, ಪ್ರಚುರಪಡಿಸಿದವನು ಮಹಾನ್ ಜ್ಞಾನಿಯೇ ಸರಿ. ವಿನಾಯಕನ ಆರಾಧನೆಯ ರೂಪದಲ್ಲಿ ಪ್ರಕೃತಿಯನ್ನು ಉಳಿಸುವ ಮೂಲಕ ಸಮಾಜಮುಖಿಯಾದವನು ದೂರದೃಷ್ಟಿಯ ಚಿಂತಕನೇ ಆಗಿರಬೇಕು. ಮೂಲತಃ ಗಣಪತಿ ಹಳ್ಳಿಗರ ಕೃಷಿಕರ ಆರಾಧ್ಯ ದೈವವಾಗಿರಬಹುದು. ಕಾರಣ ಇತ್ತೀಚಿನವರೆಗೂ ಹಳ್ಳಿಗಳಲ್ಲಿ ಅವೈದಿಕರು ಭತ್ತದ ರಾಶಿಯನ್ನು ಮಾಡಿ ಅದರಮೇಲೆ ಕುಂಬಳಕಾಯಿ ಇಟ್ಟು ತೆಂಗಿನಕಾಯಿ ಇಟ್ಟು ಸುತ್ತ ವೀಳ್ಯದೆಲೆ ಅಡಿಕೆ ಇಟ್ಟು ಅನಾಡಂಭರದ ಗಣಪನನ್ನು ಪ್ರತಿಷ್ಠಾಪಿಸಿ  ಅರ್ಥಪೂರ್ಣವಾಗಿ ಆಚರಿಸುತ್ತಿದ್ದ ಪದ್ಧತಿ ಇತ್ತು. ಆದ್ದರಿಂದಲೇ ಹೇಳಿದ್ದು ಗಣಪತಿ ಹೆಚ್ಚು ಪ್ರಾಕೃತಿಕ ನಂಟನ್ನು ಹೊಂದಿದವನೆಂದು. ಅಷ್ಟೇ ಅಲ್ಲ ಗಣಪನ ಮೂರ್ತಿಯ ಆರಾಧನೆ ನಿಜಕ್ಕೂ ಬುದ್ಧಿ ಪೂರ್ವಕ ಆಚರಣೆ. ಮಣ್ಣಿನಿಂದ ಮಾಡಿದ ಮೂರ್ತಿಯೇ ಗಣಪತಿಗೆ ಶ್ರೇಷ್ಠ ಎಂಬ ಮಾತಿದೆ. ಭಾದ್ರಪದ ಮಾಸದ ಚತುರ್ಥಿಯಂದು ಇವನ ವ್ರತ ಮಾಡುವ ಮೂಲಕ ಹಬ್ಬವನ್ನಾಚರಿಸುತ್ತೇವೆ. ಇದರಲ್ಲಿ ಕೆರೆಯನ್ನು ಉಳಿಸುವ ಪಾಠವಿತ್ತು. ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಬರುವ ಈ ಹಬ್ಬಕ್ಕೆ ಮೂರು ತಿಂಗಳು ಮುಂಚಿತವಾಗಿ ಅಂದರೆ ಬೇಸಿಗೆಯಲ್ಲೇ ಜೇಡಿಮಣ್ಣನ್ನು ಸಂಗ್ರಹಿಸಲಾಗುತ್ತದೆ. ಆ ಸಮಯಕ್ಕೆ ಕೆರೆಯ ನೀರು ಭಾಗಶಃ ಕಾಲಿಯಾಗಿರುತ್ತದೆ. ಗಣಪತಿ ಮೂರ್ತಿಯ ನೆಪವೊಡ್ಡಿ ಕೆರೆಯಲ್ಲಿ ಶೇಖರಣೆಯಾದ ಹೂಳನ್ನು ತೆಗೆಯುವುದು ಬುದ್ಧಿವಂತಿಕೆ ಅಲ್ಲವೇ? ಕೆರೆಯನ್ನೂ ಕಾಪಾಡಿದಂತಾಯಿತು ಹಬ್ಬವನ್ನೂ ಮಾಡಿದಂತಾಯಿತು. 

       ಅಷ್ಟಕ್ಕೇ ಮುಕ್ತಾಯವಾಗಲಿಲ್ಲ. ಮಳೆಗಾಲದ ಮಧ್ಯದ ಸಮಯ. ಕೆರೆಯು ತುಂಬಿ ಕೆರೆಗೆ ಕಟ್ಟಲಾದ ಕಟ್ಟು, ಏರಿ ಮಳೆಯಿಂದಾಗಿ ಮೃದುಗೊಂಡು ಬಿರುಕುಬಿಡುವ ಸಾಧ್ಯತೆಗಳಿರುತ್ತದೆ. ಅಂತಹ ಸಂದರ್ಭದಲ್ಲಿ ಕೆರೆಯಿಂದಲೇ ತೆಗೆದ ಹೂಳನ್ನು ವಿಗ್ರಹದ ರೂಪದಲ್ಲಿ ಪುನಃ ಕೆರೆಯ ಏರಿಯ ಸಮೀಪದಲ್ಲಿಯೇ ವಿಸರ್ಜಿಸುವ ಮೂಲಕ ಕೆರೆಯ ಕಟ್ಟೆ ಬಿರುಕು ಬಿಡದಂತೆ ಕಾಪಾಡುವ ಬುದ್ಧಿವಂತಿಕೆ ನಮ್ಮ ಪುರಾತನ ಸಂಸ್ಕೃತಿಯಲ್ಲಿತ್ತು. ತನ್ಮೂಲಕ ವಿಘ್ನ ವಿನಾಶಕ ಎಂಬ ಖ್ಯಾತಿಯೂ ವಿನಾಯಕನಿಗೆ ಅರ್ಥಗರ್ಭಿತವಾಗಿತ್ತು. ಹೀಗೆ ವಿನಾಯಕ ಪ್ರಕೃತಿಯ ನಂಟು ಹೊಂದಿರುವ ದೇವತೆಯಾಗಿ ಗೋಚರಿಸುತ್ತಿದ್ದನು. ಇಷ್ಟೇ ಅಲ್ಲ, ಗಣಪನನ್ನು ನರ್ಮದೆಯಲ್ಲಿ ಸಿಗುವ ಕೆಂಪು ಕಲ್ಲಿನ ರೂಪದಲ್ಲಿ ಆರಾಧಿಸುವ ಪದ್ಧತಿಯೂ ಇದೆ. ಒಟ್ಟಿನಲ್ಲಿ  ಏಕದಂತನು ಪರಿಸರ ಸ್ನೇಹಿಯಾಗಿದ್ದನು.

       ಆದರೆ ಎಂದು ಗಣಪನು ಬೀದಿ ಬೀದಿಗಳಲ್ಲಿ ಪ್ರತಿಷ್ಠಾಪಿತನಾದನೋ ಅಂದೇ ಅವನ ಚರಿತ್ರೆಯ ನಾಶ ಶುರುವಾಗಿದ್ದು. ಶ್ರೀಯುತ ಬಾಲಗಂಗಾಧರ ತಿಲಕರು ಒಂದು ಉದಾತ್ತ ಧ್ಯೇಯೊದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತಂದರು. ಗಣೇಶನ ಪ್ರತಿಷ್ಠಾಪನೆಯ ಮೂಲಕ ಸಮಾಜ ಒಟ್ಟಾಗಲೆಂದು, ಎಲ್ಲರೂ ಒಂದುಗೂಡಲೆಂದೂ, ಸಮಾಜದಲ್ಲಿರುವ ಬಿರುಕುಗಳು ನಾಶವಾಗಿ ಎಲ್ಲರೂ ಒಗ್ಗಟ್ಟಾಗಿರಲೆಂಬ ಆಶಯ ಹೊಂದಿದ್ದರು. ಆದರೆ ಇದು ಬರಬರುತ್ತಾ ದಾರಿ ತಪ್ಪುತ್ತಿರುವುದು ದುರದೃಷ್ಟಕರ. ಸಮಾಜದ ಸ್ವಾಸ್ಥ್ಯಕ್ಕಾಗಿ ಪ್ರಾರಂಭವಾದ ಆಚರಣೆ ಸಮಾಜವನ್ನು ಒಡೆಯುತ್ತಿರುವುದಲ್ಲದೇ ಪರಿಸರವನ್ನೂ ಹಾಳುಗೆಡವುತ್ತಿದೆ. ಬೀದಿಬೀದಿಯಲ್ಲಿ ಎರಡು,ಮೂರು ಗಣಪತಿಯನ್ನಿಟ್ಟು ಒತ್ತಾಯಪೂರ್ವಕವಾಗಿ ಹಣ ವಸೂಲಿಮಾಡಿ, ಕಿವಿಗರಚುವಂತೆ ಧ್ವನಿ ವರ್ಧಕಗಳಲ್ಲಿ ಸಿನಿಮಾ ಗೀತೆಗಳನ್ನು ಹಾಕಿ ರಾತ್ರಿ ಹಗಲು ಕುಣಿದು ಎಲ್ಲರಿಗೂ ತೊಂದರೆಯನ್ನುಂಟುಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಕುಡಿದು ದಾರಿಯುದ್ದಕ್ಕೂ ಬೀಳುವವರನ್ನು ಕಾಣಬಹುದು. ಧ್ವನಿ ವರ್ಧಕಗಳ ಮೂಲಕ, ಪಟಾಕಿ ಸಿಡಿಸುವುದರ ಮೂಲಕ ಪರಿಸರಕ್ಕೂ ಹಾನಿಯುಂಟುಮಾಡಲಾಗುತ್ತಿದೆ. ಅಷ್ಟಕ್ಕೇ ಮುಗಿದಿಲ್ಲ ವಿಷಕಾರಿ ರಾಸಾಯನಿಕಗಳು ಬಣ್ಣ ಬಣ್ಣದ ಮೂರ್ತಿಗಳ ಮೂಲಕ ಜೀವಜಲ ಸೇರುತ್ತಿರುವುದು ಗಂಭೀರವಾಗಿ ಚಿಂತನೆ ಮಾಡಬೇಕಾದ ವಿಷಯ. ಪ್ರಕೃತಿಗೆ ನೀಡುತ್ತಿರುವ ಈ ಪೆಟ್ಟು ಮನುಷ್ಯ ಸೇರಿದಂತೆ ಸಕಲ ಜೀವಿಗಳಿಗೂ ಕಂಟಕಪ್ರಾಯವೇ. ಇದರಿಂದ ಉಂಟಾಗುವ ಹಾನಿಯ ಸ್ವರೂಪ ತಿಳಿದಿದ್ದರೂ ಮನುಷ್ಯ ಇದರಬಗೆಗೆ ತಿರಸ್ಕಾರ ಭಾವನೆ ಪಡೆದಿರುವುದು ದುರದೃಷ್ಟಕರ. ಈಗಾಗಲೇ ಹದ್ದುಮೀರಿರುವ ಪರಿಸರನಾಶವನ್ನು ಇನ್ನಾದರೂ ತಡೆಯಲು ಗಂಭೀರ ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈಮೀರಿ ಹೋಗಬಹುದು. ಇದನ್ನೆಲ್ಲಾ ನೋಡಿದಾಗ ತಿಲಕರಿಗೆ ಈ ಯೋಚನೆ ಯಾಕಾಗಿ ಬಂದಿತೋ ಅನ್ನಿಸುವುದು. ಬಹುಶಃ ಮುಂದೆ ಹೀಗೆಲ್ಲಾ ಆಗುತ್ತದೆ ಎಂದು ತಿಳಿದಿದ್ದರೆ ತಿಲಕರು ಈ ಯೋಚನೆ ಕೈಬಿಡುತ್ತಿದ್ದರೇನೋ. ಕೆರೆಗಳ ಮಹತ್ವವೇ ತಿಳಿಯದ ಈ ಸಮಯದಲ್ಲಿ ಭಾದ್ರಪದ ಗಣಪತಿಯ ಆರಾಧನೆ ಅಪ್ರಸ್ತುತ ಅನ್ನಿಸಿದರೂ ಬಹುಶಃ ತಪ್ಪಾಗಲಾರದು. ಯಾವ ಉದ್ದೇಶದಿಂದ ಕಾರ್ಯವೊಂದನ್ನು ಆರಂಭಿಸಿದರೋ ಅದೇ ಕಾರ್ಯವು ಉದ್ದೇಶವನ್ನು ನಾಶಮಾಡಲು ಕಾರಣವಾಗಿರುವುದು ಒಂದು ಶಾಪವೆಂದೇ ಹೇಳಬಹುದು. ವಿನಾಯಕ ಶಬ್ದದಲ್ಲಿ 'ಯ'ಕಾರ ಲೋಪವಾಗಿ 'ಶ'ಕಾರ ಆಗಮನವಾಗುತ್ತಿದೆ. ಆದ್ದರಿಂದಲೇ ಹೇಳಿದ್ದು 'ಯ'ಲೋಪ-ಶಾಗಮ - ವಿನಾಯಕ" ಎಂದು.