आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Saturday 10 October 2015

ಕೃಷ್ಣನ copyrights ಉಳ್ಳವರು...

          ಅರಸೀಕೆರೆ Railway Station ಹೊರಭಾಗಕ್ಕೆ ಬಂದಾಗ ಕಾವಿಧಾರಿಗಳಾಗಿದ್ದ ಇಬ್ಬರು young & handsome ಯುವಕರು ಕೈಯಲ್ಲಿ ದಪ್ಪ ದಪ್ಪ ಪುಸ್ತಕಗಳನ್ನು ಹಿಡಿದು ನನ್ನ ಅಡ್ಡಗಟ್ಟಿದರು. ನಾವು ಕೃಷ್ಣ ತತ್ವ ಸಾರುವ ಅಂತರರಾಷ್ಟ್ರೀಯ ಸಂಸ್ಥೆಯವರೆಂದೂ, ಕೇವಲ 500 ರೂಪಾಯಿಯ, ಭಗವತ್ಗೀತೆಯ ಸಾರಾಂಶವಿರುವ ಈ ಪುಸ್ತಕವನ್ನು ತೆಗೆದುಕೊಳ್ಳಬೇಕೆಂದೂ ಒತ್ತಾಯಿಸಿದರು. ಮೊದಲನೆಯದಾಗಿ ಅದು ಆಂಗ್ಲಭಾಷೆಯಲ್ಲಿರುವ ಪುಸ್ತಕ ಆದ್ದರಿಂದ ನನಗೆ ಆಸಕ್ತಿ ಇಲ್ಲ, ಎರಡನೆಯದಾಗಿ ನನ್ನ ಬಳಿ ಕೇವಲ 40 & 60 ರೂಪಾಯಿಯ ರಾಮಕೃಷ್ಣಾಶ್ರಮದ ಹಾಗು ಗೀತಾ ಪ್ರೆಸ್ ಗೋರಖ್ ಪುರ್ರವರ ಭಗವತ್ಗೀತಾ ಅನುವಾದದ ಪುಸ್ತಕಗಳಿವೆ ಎಂದೆ. ಆ ಪುಸ್ತಕಗಳಲ್ಲಿ ಪೂರ್ಣ ವಿವರಣೆ ಇರುವುದಿಲ್ಲ ಹಾಗು ಎಲ್ಲರಿಗೂ ತಿಳಿಯುವ ಹಾಗೆ ದೀರ್ಘವಾದ ವಿಶ್ಲೇಷಣೆ ಇರುವುದಿಲ್ಲ ಆದ್ದರಿಂದಲೇ ನಮ್ಮ ಪುಸ್ತಕದ ಗಾತ್ರ ಹೆಚ್ಚು ಎಂದರು. ಇವರ ಬಗ್ಗೆ ಮೊದಲೇ ಪರಿಚಯವಿದ್ದುದರಿಂದ ಹೀಗೆ ಮಾತು ಮುಂದುವರಿದರೆ ವಾಗ್ವಾದವಾಗುವುದೆಂದು ಅಲ್ಲಿಂದ ಹೊರಟೆ. 

          ಇವರ ಆಡಂಬರ, ಇವರ ಸಂಸ್ಥೆಯ ಪ್ರಚಾರವೆಲ್ಲವೂ ನನಗೆ ಹೊಸತೇನಲ್ಲ. ಇವರ ದೇವಸ್ಥಾನ ಬೆಂಗಳೂರಿನಲ್ಲೇ ಬಹಳ ಹೆಸರುವಾಸಿಯಾದದ್ದು. ಎಲ್ಲರ ಬಾಯಲ್ಲಿ ಕೇಳಿದ್ದರಿಂದ ನೋಡೋಣವೆಂದು ಒಮ್ಮೆ ಹೋಗಿದ್ದೆ. ಆದರೂ ಕೊನೆಗೂ ನನ್ನ ಕಂಗಳಿಗೆ ಗರ್ಭಗುಡಿಯಲ್ಲಿರುವ ಕೃಷ್ಣನ ದೇವತಾಮೂರ್ತಿ ಕಾಣಲೇ ಇಲ್ಲ. ಬದಲಾಗಿ  ಅಲ್ಲಿ ನನಗೆ ಕಂಡಿದ್ದು ದೇವಸ್ಥಾನವೆಂಬ ಒಂದು ವಿಭಿನ್ನವಾದ ಹೆಸರಿರುವ ಕೃಷ್ಣನ Museum ಅದರೊಳಗಿರುವ ಅದ್ಧೂರಿಯಾದ ಕೃಷ್ಣನ Statue. ನನ್ನ ಕಂಗಳಲ್ಲೇ ದೋಷವಿರುವುದರಿಂದ ನನಗೆ ಹೀಗೆ ಕಂಡಿರಬಹುದು.


          ಒಂದೆರಡು ವರ್ಷಗಳ ಹಿಂದೆ ಯುರೋಪಿನ ದೇಶವೊಂದರಲ್ಲಿ ಭಗವತ್ಗೀತೆಯ ಮೇಲೆ ಅಲ್ಲಿಯ ನ್ಯಾಯಾಲಯವು ನಿರ್ಬಂಧ ಹೇರಿತ್ತು. ಕಾರಣ ಅದನ್ನು ಓದಿದವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು. ಭಗವತ್ಗೀತೆಯ ಮೇಲೆ ಶ್ರದ್ಧೆ ಇರುವ ನಮ್ಮಂತಹವರಿಗೆ ಈ ತೀರ್ಪು ಸರಿ ಕಾಣದಿರುವುದು ಸಹಜ. T.V.ಮಾಧ್ಯಮಗಳ ಮೂಲಕವೇ ಈ ವಿಷಯ ತಿಳಿದದ್ದು. ಆದರೆ ಭಗವತ್ಗೀತೆಯ ಬಗ್ಗೆ ಅಲ್ಲಿ ಸಾರಿದವರ್ಯಾರು? ಅವರು ಅಪಾರ್ಥದಲ್ಲಿ ಪ್ರಚಾರಮಾಡಿರಬಹುದಲ್ಲಾ ಎಂಬ ಆಲೋಚನೆ ಬಹಳ ದಿನಗಳವರೆಗೆ ಇತ್ತು. ಎಷ್ಟೋ ತಿಂಗಳ ನಂತರ ತಿಳಿಯಿತು ಈ ಘನತೆವೆತ್ತ ಅಂತರ್‌ರಾಷ್ಟ್ರೀಯ ಸಂಸ್ಥೆಯ ಅನುವಾದಿತ ಭಗವತ್ಗೀತೆಯೇ ಬಹಿಷ್ಕಾರವಾದದ್ದು ಎಂದು. ಆದರೆ ಈ ವಿಷಯ ಮಾತ್ರ ಮಾಧ್ಯಮಗಳಲ್ಲಿ ಬಂದದ್ದು ನಾ ನೀಡಿಲ್ಲ. ಅವರ ಹಿಡಿತ ಮಾಧ್ಯಮಗಳ ಮೇಲೂ ಇದೆ ಎಂಬುದಕ್ಕೆ ನನ್ನ ಬಳಿ ಪುರಾವೆಗಳಿಲ್ಲ.


         ಇದಕ್ಕೂ ಮುಂಚೆ ಒಮ್ಮೆ ಇವರ ತಂಡ ನಮ್ಮ ಮನೆಗೂ ಬಂದಿತ್ತು. ಕಾವಿಧಾರಿಗಳಾದ ಇವರನ್ನು ಮನೆಯ ಬಾಗಿಲಲ್ಲಿ ನಿಲ್ಲಿಸಿ ಮಾತನಾಡಿಸುವುದು ಸರಿಯಲ್ಲವೆಂದು ಮನೆ ಮುಂಭಾಗದಲ್ಲಿ ಕೂರಿಸಿದಾಗ ತಾವು ಬಂದ ಕಾರ್ಯ ಅರ್ಧ ಆಯಿತೆಂದೇ ತಿಳಿದಿದ್ದರೇನೋ.! ನಮ್ಮ ಸಂಸ್ಥೆಗೆ ಈ ಊರಿನಲ್ಲಿ ಸ್ವಂತ ಕಟ್ಟಡವಿಲ್ಲ ಆದ್ದರಿಂದ ಊರ ಹೊರಗೆ ಜಾಗ ತೆಗೆದುಕೊಂಡು ಸ್ವಂತ ಕಟ್ಟಡ ನಿರ್ಮಿಸಬೇಕೆಂದು ನಿಶ್ಚಯಿಸಿದ್ದೇವೆ ಆದ್ದರಿಂದ ಧನ ಸಹಾಯ ಮಾಡಬೇಕೆಂದು ಕೇಳಿದರು. ಅಷ್ಟಕ್ಕೇ ಸುಮ್ಮನಾಗಿದ್ದರೆ ತೋಚಿದ್ದಷ್ಟು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ಆ ಮಾತಿನ ಜೊತೆ "ಕನಿಷ್ಠ ಒಂದು Cement ಚೀಲಕ್ಕಾಗುವಷ್ಟಾದರೂ ಹಣ ಬಯಸುತ್ತೇವೆ" ಎಂದಾಗ ಮಾತ್ರ ಕೋಪ ಬಾರದೇ ಇರಲಿಲ್ಲ. ಕೇಳುತ್ತಿರುವುದೇ ದಾನ ಅದರಲ್ಲಿಯೂ Demand ಬೇರೆ.. ಈ ತರಹ ಮಾತು ಯಾಕೋ ಸರಿ ಅನ್ನಿಸದೆ ಅಲ್ಲೇ ಅವರನ್ನು ಉಗಿದು ಆಚೆ ಕಳಿಸೋಣವೆಂದು ಅನ್ನಿಸಿತು ಆದರೆ ಅದು ಮನೆಯಲ್ಲಿದ್ದವರಿಗೆ ಸರಿಕಾಣುವುದಿಲ್ಲವಾದ್ದರಿಂದ "ಸರಿ ಹಾಗಾದರೆ ನಿಮ್ಮ ಸಂಸ್ಥೆಯ Bank A/c No & IFSC code ಕೊಡಿ ನಾನು NEFT ಮಾಡುತ್ತೇನೆ" ಎಂದೆ. ನಮ್ಮದು ಬ್ಯಾಂಕಿನಲ್ಲಿ A/c ಇಲ್ಲ. ನಿಮಗೆ ರಷೀದಿ ಕೊಡುತ್ತೇವೆ ಈಗಲೇ ನಗದು ಕೊಡಿ ಎಂದರು. ರೀ ಸ್ವಾಮಿ Bank A/c No ಇಲ್ಲಾಂತ ಕತೆ ಹೇಳ್ತೀರಲ್ಲಾ ನಿಮ್ಮ ಸಂಸ್ಥೆ ನನಗೇನು ಅಪರಿಚಿತವಲ್ಲ. ಹೊರದೇಶಗಳಿಂದ Dollar Dollars Donation collect ಮಾಡ್ತೀರಲ್ಲಾ ಅದನ್ನೂ ನಗದಿನ ರೂಪದಲ್ಲೇ ಹಡಗಿನಲ್ಲಿ ಹಾಕಿಕೊಂಡು ಬರುತ್ತೀರಾ, ಈ ತರಹದ ರಷೀದಿ ಎಷ್ಟು ಬೇಕು ಹೇಳಿ ನಾನೇ ಕೊಡುತ್ತೇನೆ. ನೀವು ಹೀಗೆ ಹೇಳುತ್ತಿರುವುದನ್ನು ನೋಡಿದರೆ ನಿಮ್ಮ ಮೇಲೆ ಯಾಕೋ ಸಂಶಯ ಬರುತ್ತಿದೆ ಎಂದು ಗಟ್ಟಿ ಧ್ವನಿಯಲ್ಲೇ ಹೇಳಿದೆ. ತಕ್ಷಣವೇ ಅವರ ಜೊತೆಯಲ್ಲಿದ್ದವ A/c No ಇಲ್ಲ ಎಂದಿದ್ದಲ್ಲ,ಈಗ ತಂದಿಲ್ಲ ಎಂದಿದ್ದು ಎಂದು ತೇಪೆ ಹಚ್ಚಲು ಶುರುಮಾಡಿದ. ಸರಿ ಹಾಗಾದರೆ ನಾಳೆ ಬಂದು ನಿಮ್ಮ A/c no ಕೊಟ್ಟು ಹೋಗಿ ಹಣ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿ ಕಳುಹಿಸಿದೆ. ಅಂದಿನಿಂದ ಇಂದಿನವರೆಗೂ ಅವರ ತಂಡ ನಮ್ಮ ಬೀದಿಯಲ್ಲಿ ಅವರಿವರ ಮನೆಗೆ ಅಲೆದಾಡುವುದನ್ನು ನೋಡಿದ್ದೇನೆ. ಆದರೆ ನಮ್ಮ ಮನೆಗೆ ಯಾಕೋ ಬರಲೇ ಇಲ್ಲ. ಬಹುಶಃ ಅವರ ಸಂಸ್ಥೆಯ ಹೆಸರಿನಲ್ಲಿ ಖಾತೆ ತೆರೆದು ಕೊಡುವ ಯಾವ ಬ್ಯಾಂಕು ಶಿವಮೊಗ್ಗದಲ್ಲಿಲ್ಲವೇನೋ.!


        ಬಹುಶಃ ಇವರ ಅನುವಾದಿತ ಭಗವತ್ಗೀತೆಯನ್ನು ಓದಿಯೇ ಕೆಲವರು ಭಗವತ್ಗೀತೆಯನ್ನು ಸುಡಬೇಕು ಎಂದು ಅರಚುತ್ತಿರುವುದೇನೋ ಯಾರಿಗೆ ಗೊತ್ತು..