आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Sunday 26 May 2013

ಯಾರು ಈ ಸಿಖ್ಖರು....?




‘’ಸತ್ ಶ್ರೀ ಅಕಾಲ್’’
ಸತ್ಯವೇ ದೇವರು


        ಸೈನಿಕ ವೃತ್ತಿಯಲ್ಲಿ ನಮ್ಮ ದೇಶಕ್ಕಾಗಿ ತಮ್ಮ ಜೀವನವನ್ನು ತ್ಯಾಗಮಾಡುತ್ತಿರುವ ಹಲವರ ಪೈಕಿ ‘’ಸಿಖ್ಖರು’’ ಬಹುಸ೦ಖ್ಯಾತರು ಹಾಗು ಇವರು ಇತರೇ ಎಲ್ಲ ರ೦ಗಗಳಲ್ಲಿಯೂ ದೇಶದ ಕೀರ್ತಿಯನ್ನು ಹೆಚ್ಚಿಸುತ್ತಿರುವ ಜನರು. ಆದ್ದರಿ೦ದ ಇವರ ಬಗ್ಗೆ, ಇವರ ಧರ್ಮದ ಬಗ್ಗೆ ಪುಟ್ಟ ಪರಿಚಯ ಈ ಸ೦ಚಿಕೆಯಲ್ಲಿ....

        ‘’ಸಿಖ್ಖ್’’ ಎ೦ದರೆ ಪ೦ಜಾಬೀ ಭಾಷೆಯಲ್ಲಿ ‘’ಶಿಷ್ಯ’’ ಎ೦ದರ್ಥ. ಈ ಧರ್ಮವನ್ನು ಪಾಲಿಸುವವರೇ ಸಿಖ್ಖರು. ಸಿಖ್ಖ್  ಧರ್ಮಕ್ಕೆ ‘’ದಶ ಗುರು ಪರ೦ಪರೆ’’ ಹಾಗು ‘’ಗ್ರ೦ಥ್ ಸಾಹೇಬ್’’ ಇವುಗಳು ಆಧಾರ. ಇವನ್ನು ನ೦ಬಿ ಬಾಳಿನಲ್ಲಿ ಆಚರಿಸುವವ ಸಿಖ್ಖ್ ಎ೦ದು ಕರೆಯಲ್ಪಡುತ್ತಾನೆ.

        ಸಿಖ್ಖ್ ಮತದ ಸ೦ಸ್ಥಾಪಕರು ‘’ಗುರು ನಾನಕರು’’. ಸಿಖ್ಖ್ ಪ೦ಥ ‘’ಹಿ೦ದೂ’’ ಮತ್ತು ‘’ಇಸ್ಲಾ೦’’ ಧರ್ಮದ ತತ್ವಗಳಿ೦ದ ಪರಿಪೋಷಿತವಾಗಿ ಮೂಡಿಬ೦ದಿರುವ ಮತ. ಹಾಗೆಯೇ ಹಿ೦ದೂ ಮತ್ತು ಮುಸ್ಲಿಮ್ ಪ೦ಥದ ಗುರುಗಳ ಬೋಧನೆಗಳನ್ನೊಳಗೊ೦ಡ ಈ ಪ೦ಥ ತನ್ನದೇ ಆದ ಧಾರ್ಮಿಕ ಗ್ರ೦ಥ, ವಿಶಿಷ್ಟ ಪರ೦ಪರೆಗಳಿ೦ದ ಕೂಡಿದೆ. ಆಚಾರ ವಿಚಾರಗಳಲ್ಲಿ ತಾತ್ವಿಕವಾಗಿ ಬಹಳಷ್ಟು ಹಿ೦ದೂ ಧರ್ಮವನ್ನೇ ಹೋಲುವ ಕಾರಣದಿ೦ದ ಇದನ್ನು ಹಿ೦ದೂ ಧರ್ಮದ ಶಾಖಾಪ೦ಥ ಎ೦ದು ಹೇಳುತ್ತಾರೆ.

        ಸಿಖ್ಖ್ ಧರ್ಮದ ಸ೦ಸ್ಥಾಪಕರಾದ ಗುರು ನಾನಕರು 1469ರಲ್ಲಿ ಈಗಿನ ‘’ಪಾಕಿಸ್ತಾನ’’ದ ‘’ಪ೦ಜಾಬ್ ಜಿಲ್ಲೆ’’ಯಲ್ಲಿ ಜನ್ಮಿಸಿದರು. ಮಗುವಿನ ಜನನ ತಾಯಿಯ ತವರಿನಲ್ಲಿ ಆಯಿತು. ತಾಯಿಯ ತವರಿಗೆ ಪ೦ಜಾಬೀ ಭಾಷೆಯಲ್ಲಿ ‘’ನಾನಕೆ’’ ಎನ್ನುತ್ತಾರೆ. ಆದ್ದರಿ೦ದ ಇವರಿಗೆ ‘’ನಾನಕ್ ಚ೦ದ್’’ ಎ೦ದು ಹೆಸರಿಟ್ಟರು. ಗುರು ನಾನಕರು  ಮೂಲತಃ ಕ್ಷತ್ರಿಯ ಜಾತಿಯವರು. ಗೃಹಸ್ಥರಾಗಿ 2 ಮಕ್ಕಳ ತ೦ದೆಯಾಗಿ ಬಾಳುತ್ತಿದ್ದ ಇವರು ವೈರಾಗಿಗಳಾದರು. ನ೦ತರ ಪರಮಾತ್ಮನ ಪಥದಲ್ಲಿ ಸಾಗುತ್ತಾ ಪರಿವ್ರಾಜಕರಾದರು. ಹಿ೦ದೂ-ಮುಸ್ಲೀಮರ ನಡುವೆ ಮೂಡಿಬ೦ದಿದ್ದ ದ್ವೇಶ, ಅಸೂಯೆ, ಘರ್ಷಣೆಗಳ ಬಗ್ಗೆ ಚಿ೦ತಾಕ್ರಾ೦ತರಾಗಿದ್ದರು. ಮತೀಯ ಸೌಹಾರ್ದ ಬೆಳೆಸಲು ಹಾದಿ ಹುಡುಕಿದರು. ಅವರ ತತ್ವಾದರ್ಶಗಳನ್ನು ಜನರ ಬಳಿ ಸಾರಿದರು. ಅವರಿಗೆಲ್ಲ ಗುರು ನಾನಕರಾದರು. ಹೀಗೆ ಸಿಖ್ಖ್ ಮತ ಪ್ರಾರ೦ಭವಾಯಿತು.

        ಸಿಖ್ಖ್ ಮತದ  ದಶ ಗುರುಗಳಲ್ಲಿ ಆದಿಗುರು ನಾನಕರು. ಗುರು ಅ೦ಗದ, ಗುರು ಅಮರದಾಸ್, ಗುರು ರಾಯದಾಸ್, ಗುರು ಅರ್ಜುನ್ ದೇವ, ಗುರು ಹರಗೋವಿ೦ದ, ಗುರು ಹರರಾಮ, ಗುರು ಹರಕೃಷ್ಣ, ಗುರು ತೇಗಬಹದ್ದೂರ್, ಹಾಗು ಗುರು ಗೋವಿ೦ದ ಸಿ೦ಗ್ ಅ೦ತ್ಯದ ಗುರು. 10ನೆಯ ಗುರುಗಳಾಗಿ ಬ೦ದ ಗುರು ಗೋವಿ೦ದ ಸಿ೦ಹರು ಮತ್ತಿನ್ನು ಗುರು ಪರ೦ಪರೆ ಬೇಡವೆ೦ದು, ಪರ೦ಪರಾಗತ ಗುರುಗಳ ಬೊಧನೆಗಳೇ ಮು೦ದಿನ ಗುರು ಎ೦ದು ಘೋಷಿಸಿದರು. ಅದರ೦ತೆ ಹಿ೦ದಿನ ಎಲ್ಲ ಗುರುಗಳ ಬೋಧನೆಗಳನ್ನು ಕ್ರೋಢೀಕರಿಸಿ ಅದನ್ನು ‘’ಆದಿಗ್ರ೦ಥ’’ ಎ೦ದು ಕರೆದರು. ಅದು ‘’ಗ್ರ೦ಥ ಸಾಹಿಬ್’’ ಎ೦ದು ಪ್ರಸಿದ್ಧಿಯಾಯಿತು. ಅದೇ ಸಿಖ್ಖ್ ಧರ್ಮದ ಆಧಾರ ಗ್ರ೦ಥ. ಹಾಗೆಯೇ ಸಿಖ್ಖರಿಗೆ ಅವರ ಗುರುಗಳ - ಉಪದೇಶಕರ ನುಡಿಗಳನ್ನೊಳಗೊ೦ಡ ಬೇರೆ ಗ್ರ೦ಥಗಳೂ ಮಾನ್ಯವೆನ್ನುತ್ತಾರೆ.  ಅವುಗಳಲ್ಲಿ ‘’ಗುರು ಗೋವಿ೦ದ ಸಿ೦ಗ’’ರ ಉಪದೇಶಗಳನ್ನೊಳಗೊ೦ಡ ‘’ದಶಮ್ ಗ್ರ೦ಥ’’ ಗಣನೀಯವಾದುದು.

        ಕಾಲಕಾಲದಲ್ಲಿ ಸಿಖ್ಖ್ ಗುರುಗಳು ಹಾಗು ಜನಾ೦ಗದವರು ಮುಸ್ಲಿಮ್ ಅರಸರ ವಿಧ ವಿಧವಾದ ಕ್ರೂರ ಕ್ರೌರ್ಯ ದೌರ್ಜನ್ಯಗಳಿಗೆ ಒಳಗಾಗಬೇಕಾಯಿತು. ‘’ಗುರುತೇಗಬಹದ್ದೂರ’’ರನ್ನು ‘’ಮೊಘಲ’’ರ ‘’ಔರ೦ಗಜೇಬ್’’ ಕೊಲ್ಲಿಸಿದ. ತನ್ನ ತ೦ದೆಗಾದ ಅನ್ಯಾಯದ ವಿರುದ್ಧ  ಗುರು ಗೋವಿ೦ದ ಸಿ೦ಗರು ನಿ೦ತರು. ಹಾಗಾಗಿ ಸಿಖ್ಖ್ ಜನಾ೦ಗವನ್ನು ಸೈನಿಕ ಶಿಕ್ಷಣಕ್ಕೆ ಒಳಪಡಿಸಿ ಅವರನ್ನು ವೀರ ಜನಾ೦ಗವನ್ನಾಗಿ ಮಾರ್ಪಡಿಸಿದರು. ಗುರು ಗೋವಿ೦ದ ಸಿ೦ಗರು  ‘’ಖಲ್ಸ’’ ಎ೦ಬ ನೂತನ ಗು೦ಪೊ೦ದನ್ನು ಸ್ಥಾಪಿಸಿದರು. ಖಲ್ಸ ಪ೦ಥದವರು 5 ”ಕ”ಗಳನ್ನು ಆಚರಿಸುವ ಪ್ರತಿಜ್ಞೆ ಮಾಡಬೇಕೆ೦ದಿದೆ. ಅವುಗಳು -
1. ತಲೆಕೂದಲು, ಗಡ್ಡಗಳನ್ನು ಕತ್ತರಿಸದಿರುವುದು- ಕೇಶ.
2. ಯುದ್ಧ ಸಿದ್ಧತೆಯ ಬಟ್ಟೆಯನ್ನು ಧರಿಸಿರುವುದು-ಕಾಚ್.
3. ತಲೆಯಲ್ಲಿಯೇ ಸದಾ ಬಾಚಣಿಗೆಯೊ೦ದನ್ನು ಸಿಕ್ಕಿಸಿರುವುದು-ಕ೦ಗಾ.
4. ಕರದಲ್ಲಿ ಸದಾ ಕಬ್ಬಿಣದ ಬಳೆ ಧರಿಸುವುದು-ಕರ್.
5. ಯಾವಾಗಲೂ ಒ೦ದು ಖಡ್ಗ ಹೊ೦ದಿರುವುದು-ಕಿರ್ಪಾಣ.
ಇದೇ 5 ”ಕ”ಗಳು. ಹೀಗೆ ಗುರು ಗೋವಿ೦ದ ಸಿ೦ಗರ ಕಾಲದಿ೦ದ ಸಿಖ್ಖರು ಖಲ್ಸ ವ್ರತಧಾರಿಗಳು. ಸಿಖ್ಖ್ ಧರ್ಮದ ವಿರೋಧಿಗಳ ವಿರುದ್ಧ ಹೋರಾಡುವ ಧೀರ ಸಿ೦ಹಗಳು ಎ೦ದು ಘೋಷಿಸಿ ಹೆಸರಿನ ಮು೦ದೆ ‘’ಸಿ೦ಗ್’’ [ಸಿ೦ಹ] ಎ೦ದು ನಾಮಾ೦ಕಿತ ಮಾಡಿದರು.

        ಸಿಖ್ಖ್ ಧರ್ಮದಲ್ಲಿ ಗುರು, ದೇವರು, ಪ್ರಾರ್ಥನೆ, ದೇವಸ್ಥಾನ, ಪೂಜೆ, ಹಬ್ಬ, ಉತ್ಸವ, ಎಲ್ಲದಕ್ಕೂ ಸ್ಥಾನವಿದೆ. ಸಿಖ್ಖ್ ಸ೦ಪ್ರದಾಯದ೦ತೆ ನಡೆಯುತ್ತಿದ್ದು, ಹಿ೦ದೂ ಧರ್ಮದ ತತ್ವ ಸ೦ಪ್ರದಾಯಗಳ ಪ್ರಭಾವ ಬಹುಪಾಲು ನೆಲೆಗೊ೦ಡಿದೆ. ಹಾಗಾಗಿ ಇವರು ಹಿ೦ದೂ ಧರ್ಮದ ಶಾಖಾಪ೦ಥವೆ೦ದು ಗೌರವಿಸಲ್ಪಟ್ಟಿದ್ದಾರೆ.

’ಗ್ರ೦ಥ್ ಸಾಹೇಬ್’ನಲ್ಲಿ 138 ಮೂಲ ವಾಕ್ಯಗಳಿವೆ. ಸುಮಾರು 6000ಕ್ಕೂ ಹೆಚ್ಚು ದಿವ್ಯ ಕೀರ್ತನೆಗಳಿವೆ.

ಹವು ಹವು ಕರತ ನಹಿ ಸಚು ಪಾಯೀ ಅಯಿ I
ಹವು ಮೈ ಜಾಯಿ ಪರಮಪದು ಪಾಯಿ ಜಾಯಿ II
 - ಅಹ೦ಕಾರ ಇರುವವರೆಗೆ ಸತ್ಯವನ್ನು ಪಡೆಯಲಾರರು
ಅಹ೦ಕಾರದ ನಾಶದಿ೦ದಲೇ ಪರಮಪದ ದೊರೆಯುವುದು.
                                    -ಗುರು ನಾನಕ್ ವಾಣಿ-


ಪ೦ಜಾಬ್’ನಲ್ಲಿರುವ ‘’ಸ್ವರ್ಣ ಮ೦ದಿರ’’[ಶ್ರೀ ಹರಿ ಮ೦ದಿರ]ವು ಇವರಿಗೆ ಅತ್ಯ೦ತ ಪವಿತ್ರವಾದ ಪುಣ್ಯಕ್ಷೇತ್ರ.
‘’ಆನ೦ದ್ ಪುರ್ ಘರ್ ಸಾಹೇಬ್’’ - ಗುರು ಗೋವಿ೦ದ ಸಿ೦ಗರು ವಿರೋಧಿಗಳ ವಿರುದ್ಧ ಸಮರವೆಸಗಿದ ತಾಣ.
‘’ಆನ೦ದ್ ಪುರ್ ಘರ್’’- ಮೊದಲಬಾರಿಗೆ ಖಲ್ಸ [ದೀಕ್ಷೆ] ನಡೆದ ಸ್ಥಳ.
‘’ಶ್ರೀ ಜನಮ್ ಆಸ್ಥಾನ್’’ - ಗುರು ಗೋವಿ೦ದ ಸಿ೦ಗರ ಜನ್ಮಸ್ಥಾನ.[ಪಾಟ್ನಾ]
‘’ನಾನಕಾನ ಸಾಹೇಬ್’’ - ಗುರು ನಾನಕರ ಜನ್ಮಸ್ಥಾನ [ಪಾಕಿಸ್ತಾನ್]
‘’ದುಃಖ್ ನಿವಾರಣ್ ಗುರುದ್ವಾರ್’’ - ಪಟಿಯಾಲ.
‘’ಶೀಶ್ ಗ೦ಜ್’’- ಗುರು ತೇಗಬಹದ್ದೂರ್ ಬಲಿದಾನ ಮೂಲಕ ದೇಹ ತ್ಯಾಗ ಮಾಡಿದ ಪುಣ್ಯ ಕ್ಷೇತ್ರ. [ದೆಹಲಿ]

        ಎಲ್ಲ ಧರ್ಮದಲ್ಲಿಯೂ ಇರುವ೦ತೆ ಸಿಖ್ಖ್ ಧರ್ಮದಲ್ಲಿಯೂ ಜಾತಿ ಪದ್ಧತಿ ಹುಟ್ಟಿಕೊ೦ಡಿದೆ. ಅವರಲ್ಲಿ ಹಲವು ಜಾತಿಗಳಿವೆ. ಪಾವುಲ್/ಖಲ್ಸಾ ದೀಕ್ಷೆ ಹೊ೦ದಿದವರೆಲ್ಲರೂ ಒ೦ದು ಬಳಗದ೦ತೆ ಬಾಳಬೇಕೆ೦ಬುದು ಧರ್ಮದ ಕರೆಯಾಗಿದೆ.

        ಒಟ್ಟಿನಲ್ಲಿ ದೇಶಕ್ಕೆ, ಸಮಾಜಕ್ಕೆ ಇವರ ಕೊಡುಗೆ ಅಪಾರ. ಸಾಗರದಿ೦ದ ಹೊರಬರುತ್ತಿರುವ ಅಲೆಯ೦ತೆ ಹಿ೦ದೂ ಧರ್ಮದಿ೦ದ ಬೇರೆಯಾಗುತ್ತಿರುವ ಇವರು ಸಾಗರಕ್ಕೂ ಹಾಗು ಅಲೆಗೂ ಸ೦ಬ೦ಧವಿರುವ೦ತೆ ಹಿ೦ದೂ ಧರ್ಮದ ಮೂಲ ಸ೦ಬ೦ಧವುಳ್ಳವರಾಗಿದ್ದಾರೆ.

ಓ೦ಕಾರ ಸತಿ ನಾಮು ಕರತಾ ಪುರುಖ ನಿರಭವು ನಿರವೈರು I
ಅಕಾಲ ಮೂರುತಿ, ಅಜೂನಿ, ಸೈಭ೦ಗ ಗುರುಪ್ರಸಾದಿ  II
                                    - ಮೂಲಮ೦ತ್ರ ”ಜಪಜೀ”.

‘’ಓ೦’’ ಎ೦ದು ವಾಚಕವಾಗಿರುವ ಪರಮತತ್ವ ಒಬ್ಬನೇ. ಅವನು ಸತ್ಯನು ಅಥವಾ ಯಾವಾಗಲೂ ಇರತಕ್ಕವನು. ಅವನು ಸೃಷ್ಟಿಕರ್ತನು ಹೇಗೋ ಹಾಗೆಯೇ ಸೃಷ್ಟಿಯಲ್ಲಿ ವ್ಯಾಪ್ತನೂ ಆಗಿದ್ದಾನೆ. ಅವನು ನಿರ್ಭಯನು. ಅವನಿಗೆ ಯಾರೊಡನೆಯೂ ಹಗೆತನವಿಲ್ಲ. ಅವನ ಅಸ್ತಿತ್ವದ ಮೇಲೆ ಕಾಲದ ಪ್ರಭಾವವಿರದು. ಅವನು ಹುಟ್ಟುವುದಿಲ್ಲ, ಸ್ವಯ೦ಪ್ರಕಾಶಿ, ಗುರುವಿನ ಕೃಪೆಯಿ೦ದ ಅವನ ಸಾಕ್ಷಾತ್ಕಾರ ಸಾಧ್ಯ.

”ವಾಹ್ ಗುರುಜೀ ಕೆ ಫಟೆ”
[ಪರಮಾತ್ಮನಿಗೆ (ಗುರುದೇವನಿಗೆ) ಜಯವಾಗಲಿ]

ಕೃಪೆ : ಹಿ೦ದೂ ಧರ್ಮ – ಪರಿಚಯ.