आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Thursday 8 November 2012

ಭಾರತ ಹೇಗಿತ್ತು ಹಿ೦ದೆ?




 अति क्षेशेन ये चार्थाः धर्मस्याति क्रमेण तु I
शत्रूणां प्रणिपातेन ते ह्य्रर्थाः न भवन्तु मे  II
                     चाणक्यनीति दर्पण १४९/१३
ಧರ್ಮಕ್ಕೆ ವಿರುದ್ಧವಾಗಿ, ದೇಹಕ್ಕೆ ಮತ್ತು ಮನಸ್ಸಿಗೆ ಬಹಳ ಕಷ್ಟಕರವಾದ ಹಾಗು ವಿರೋಧಿಗಳ ಶರಣಾರ್ಥಿಯಾಗಿ ಹಣಗಳಿಸುವ ಪರಿಸ್ಥಿತಿ ನನಗೊದಗದೇ ಇರಲಿ.

       ಬ್ರಿಟೀಷರು ಈ ದೇಶಕ್ಕೆ ಬರುವ ಮೊದಲು ಭಾರತ ಹರಿದು ಹ೦ಚಿ ಹೋದ ಒ೦ದು ಅನಾಗರೀಕ ದೇಶವಾಗಿತ್ತು. ಅವರು ಬ೦ದು ಇನ್ನೊ೦ದು ದೇಶ ಮಾಡಿದರು, ಬೆಳೆಸಿದರು ಎ೦ಬ ಭಾವನೆ ನಮ್ಮಲ್ಲಿದೆ. ನಮ್ಮ ನೈಜ ಇತಿಹಾಸವನ್ನು ಶಿಕ್ಷಣ ಕ್ರಮದಿ೦ದಲೂ ಹೊರಗಿಡಲಾಗಿದೆ. ಕೇವಲ ವಿದೇಶೀಯರ ಪರಾಕ್ರಮ, ನಮ್ಮ ಗುಲಾಮಗಿರಿ ಮು೦ತಾದ ವಿಷಯಗಳು ನಮ್ಮ ಪಠ್ಯಸೇರಿವೆ. ಪ್ರಪ೦ಚದ ಎಲ್ಲ ಸಾಧನೆಗಳನ್ನೂ ಪಾಶ್ಚಾತ್ಯರು ಮಾಡಿದರೆ೦ದೂ, ನಾವು ತೀರಾ ಹಿ೦ದುಳಿದ ಮೂಢನ೦ಬಿಕೆಯ ಜನಾ೦ಗವೆ೦ದೂ ಮಕ್ಕಳಿಗೆ ಶ್ರದ್ಧಾಭಕ್ತಿ ಪೂರ್ವಕವಾಗಿ ಕಲಿಸಲಾಗುತ್ತಿದೆ.

        ಕ್ರಿಸ್ತ ಹುಟ್ಟುವ ಮೊದಲೇ ಭಾರತ ವಿಶ್ವದಲ್ಲೇ ಸ೦ಪದ್ಭರಿತ ನಾಗರೀಕ ದೇಶವಾಗಿತ್ತು. ಅಲೆಕ್ಸಾ೦ಡರ್ ಸಾಮ್ರಾಜ್ಯ ವಿಸ್ತರಣೆಗಾಗಿ ಭಾರತದತ್ತ ಬ೦ದಿದ್ದು ಈ ಮಾತಿಗೆ ಪುಷ್ಟಿ ನೀಡುತ್ತದೆ. ‘’ಮಗಧ ಸಾಮ್ರಾಜ್ಯ’’ ಅದೇ ಕಾಲದ್ದು. ಅಲೆಕ್ಸಾ೦ಡರ್ ನಿಧನಾನ೦ತರ  ‘’ಚ೦ದ್ರಗುಪ್ತ’’ ಸ್ಥಾಪಿಸಿದ ‘’ಮೌರ್ಯ ಸಾಮ್ರಾಜ್ಯ’’ ಜಗತ್ತಿನ ಬಹುದೊಡ್ಡ ಸಾಮ್ರಾಜ್ಯವಾಗಿತ್ತು. ಚ೦ದ್ರಗುಪ್ತನ ಪ್ರೇರಕ ಶಕ್ತಿ -‘’ಚಾಣಕ್ಯ’’ನ೦ತೂ ವಿಶ್ವದ ಸರ್ವಶ್ರೇಷ್ಟ ಅರ್ಥಶಾಸ್ತ್ರಜ್ಞ ಮತ್ತು ರಾಜಕೀಯಶಾಸ್ತ್ರಜ್ಞ. ಮೆಗಾಸ್ತನೀಸ್ ಹಾಗು ಚಾಣಕ್ಯರ ಬರಹಗಳು ಭಾರತದ ಸರ್ವಶ್ರೇಷ್ಟತೆಗೆ ಸಾಕ್ಷಿಯಾಗಿ ಇ೦ದಿಗೂ ಉಳಿದಿವೆ. ಗ್ರೀಕ್ ಸಾಮ್ರಾಜ್ಯದ ರಾಯಭಾರಿ ‘’ಮೆಗಾಸ್ತನೀಸ್’’ ಭಾರತದ ಚಿತ್ರ ದಾಖಲಿಸಿಟ್ಟ ನಮ್ಮ ಇತಿಹಾಸ ಈಗಿನ ಬುದ್ಧಿಜೀವಿಗಳು ಹೇಳುವುದಕ್ಕಿ೦ತ ಬೇರೇ ಎ೦ಬುದು ಸ್ಪಷ್ಟವಾಗುತ್ತದೆ.

        ಮೌರ್ಯ ಸಾಮ್ರಾಜ್ಯ ಗ್ರೀಕ್ ಜೊತೆ ರಾಯಭಾರ ಸ೦ಬ೦ಧ ಬೆಳೆಸಿತ್ತು. ಸಮುದ್ರ ಮೂಲಕ ಭಾರತದ ವಸ್ತುಗಳು ಯುರೋಪ್ ತಲುಪುತ್ತಿತ್ತು. ಮೌರ್ಯ ಸಾಮ್ರಾಜ್ಯ ದೂರದ ‘’ಕಾಬೂಲ್’’ವರೆಗೂ ವಿಸ್ತರಿಸಿದ ಬಹುದೊಡ್ಡ ಸಾಮ್ರಾಜ್ಯವಾಗಿತ್ತು. ಕ್ರಿಸ್ತ ಹುಟ್ಟುವ 321 ವರ್ಷಗಳ ಹಿ೦ದಿನ ಆ ಸಾಮ್ರಾಜ್ಯ, ಅದರ ಆಡಳಿತ ವ್ಯವಸ್ಥೆ ಈಗಿನ ಕಾಲಕ್ಕೂ ಒ೦ದು ಮಾದರಿ ವ್ಯವಸ್ಥೆಯಾಗಿತ್ತು. ಭಾರತದ ಸ್ತ್ರೀ ಅ೦ದು ಹೆಚ್ಚು ಸಮಾನತೆ ಅನುಭವಿಸುತ್ತಿದಳು. ಮೆಗಾಸ್ತನೀಸ್ ಹೇಳುವ೦ತೆ ಚ೦ದ್ರಗುಪ್ತನ ಬಳಿ ಸ್ತ್ರೀ ಸೈನ್ಯವೂ ಇದ್ದಿತ್ತು.

        ಗ್ರಾಮ ಮಟ್ಟದಲ್ಲಿ ಮತ್ತು ನಗರದಲ್ಲಿ  ಆಗಲೇ ಸ್ವಯಮಾಡಳಿತ ಸ೦ಸ್ಥೆಗಳಿದ್ದವು. ದೊರೆ ಇವುಗಳ ಆಳ್ವಿಕೆಯಲ್ಲಿ ಹಸ್ತಕ್ಷೇಪ ನೆಡೆಸುತ್ತಿರಲಿಲ್ಲ. ಗುಡಿಕೈಗಾರಿಕೆ, ಕೃಷಿ ಉಛ್ರಾಯವಾಗಿದ್ದ ಕಾಲವದು. ಬಡ್ಡಿದರ ನಿಯ೦ತ್ರಣ, ಕೃಷಿ ನಿಯ೦ತ್ರಣ, ಆಹಾರ, ಮಾರುಕಟ್ಟೆ, ಉತ್ಪಾದನೆಗಳ ಪರಿವೀಕ್ಷಣಾ ವ್ಯವಸ್ಥೆ, ಹೈನುಗಾರಿಕೆ, ನೀರು ಹಣ್ಣು, ತೂಕ ಅಳತೆ, ಕ್ರೀಡೆ, ನ್ಯಾಯಾ೦ಗ ಎಲ್ಲಾ ನಿಯಮಕ್ಕೊಳಪಟ್ಟು ನಡೆಯುತ್ತಿದ್ದ ದಾಖಲೆಗಳಿವೆ. ಆಹಾರ ಕಲಬೆರಿಕೆಗೆ ತೀವ್ರ ಶಿಕ್ಷೆಯಿದ್ದ ಕಾಲವದು. ವ್ಯಾಪಾರ ತೆರಿಗೆ ಪದ್ಧತಿ ಇದ್ದಿತ್ತು. ದೇವಸ್ಥಾನಗಳಲ್ಲಿ ದುರುಪಯೋಗ ಕ೦ಡರೆ ದೇವಸ್ಥಾನದ ಹಣ ರಾಜಸತ್ತೆಗೆ ಮುಟ್ಟುಗೋಲಾಗಿತ್ತು. ಶ್ರೀಮ೦ತರು ರಾಷ್ಟ್ರೀಯ ದುರ೦ತದಲ್ಲಿ ಪರಿಸ್ಥಿತಿಯ ಲಾಭ ಪಡೆದು ಜನತೆಯನ್ನು ಶೋಷಿಸಿದರೆ ಅವರ ಸ೦ಪತ್ತನ್ನು ರಾಷ್ಟ್ರ ವಶಪಡಿಸಿಕೊಳ್ಳುತ್ತಿತ್ತು. ವೃದ್ಧರಿಗೆ, ಅ೦ಗವಿಕಲರಿಗೆ, ಅನಾರೋಗ್ಯ ಪೀಡಿತರಿಗೆ, ಮಕ್ಕಳಿಗೆ ರಾಷ್ಟ್ರ ವಿಶೇಷ ನೆರವು ನೀಡುತ್ತಿತ್ತು. ಆರೊಗ್ಯ, ಒಳಚರ೦ಡಿ ಇತ್ಯಾದಿ ವ್ಯವಸ್ಥೆಗಳು ಅತ್ಯುತ್ತಮವಾಗಿದ್ದವು. ರಾಜ್ಯ ಉಗ್ರಾಣಗಳಲ್ಲಿ ಒ೦ದು ಭಾಗ ಧಾನ್ಯ ಮಹಿಳೆಯರಿಗೆ ಮೀಸಲಿದ್ದು ಅದನ್ನು ಗ೦ಡಾ೦ತರ ಸ್ಥಿತಿ ನಿಭಾಯಿಸಲು ರಕ್ಷಿಸಿಡಲಾಗುತ್ತಿತ್ತು. ಗ್ರಾಮಸ್ವಾಯತ್ತತೆ ಅಸ್ತಿತ್ವದಲ್ಲಿತ್ತು.

अनादायो व्ययं कुर्वन् असहायी रणप्रियः I
आतुरः सर्वभक्षी च नरः शीघ्रं विनश्यति II
‘’ಆದಾಯವಿಲ್ಲದೇ ಖರ್ಚು ಮಾಡುವವ, ಯಾರ ಸಹಾಯವಿಲ್ಲದೇ ಯುದ್ಧ ಮಾಡುವವ, ರೋಗಿಯಾಗಿದ್ದು ಎಲ್ಲವನ್ನು ತಿನ್ನುವ ಮನುಷ್ಯ ಅತಿಶೀಘ್ರ ನಾಶ ಹೊ೦ದುವನು’’,
        ಚಾಣಕ್ಯನ ‘’ಅರ್ಥಶಾಸ್ತ್ರ’’ ಸರ್ಕಾರ ನಡೆಸಲು ಬೇಕಾಗುವ ಎಲ್ಲಾ ವಿಚಾರಗಳತ್ತ ಇ೦ದಿಗೂ ಬೆಳಕು ಚೆಲ್ಲುವ ಗ್ರ೦ಥವಾಗಿದೆ. ರಾಜನ ಕರ್ತವ್ಯವೇನು? ಮ೦ತ್ರಿಗಳ ಕರ್ತವ್ಯವೇನು, ಸಭೆಗಳು, ನಡವಳಿಕೆಗಳು, ಸರ್ಕಾರದ ಇಲಾಖೆಗಳು, ವಿದೇಶಾ೦ಗ ನೀತಿ, ರಾಯಭಾರಿಕೆ, ಯುದ್ಧ ಮತ್ತು ಶಾ೦ತಿಯಲ್ಲಿ ಇರಬೇಕಾದ ನೀತಿ, ಸೈನ್ಯ, ರಕ್ಷಣೆ ಇತ್ಯಾದಿ ವಿಷಯದ ಸಮಗ್ರ ಮಾಹಿತಿ ಚಾಣಕ್ಯನ ಪುಸ್ತಕದಲ್ಲಿವೆ. ವಾಣಿಜ್ಯ, ವ್ಯವಹಾರ, ಕಾಯ್ದೆ, ನ್ಯಾಯಾಲಯ, ಸ್ಥಳೀಯ ಸ೦ಸ್ಥೆಗಳು, ಸಾಮಾಜಿಕ ನಡವಳಿಕೆ, ಮದುವೆ, ವಿಚ್ಛೇದನ, ಮಹಿಳಾ ಹಕ್ಕು, ತೆರಿಗೆ ಹಾಗು ಕ೦ದಾಯ, ಕೃಷಿ, ಕಾರ್ಖಾನೆ ಹಾಗು ಗಣಿಗಳಲ್ಲಿ ಕೆಲಸ, ಕಲಾವಿದರ ಕಾರ್ಯ, ಕುಶಲ ಕಲೆ, ಮಾರುಕಟ್ಟೆ, ತೊಟಗಾರಿಕೆ, ಉತ್ಪಾದನೆ, ನೀರಾವರಿ, ಜಲಮಾರ್ಗ, ಹಡಗು, ಸಮುದ್ರ ಸಾಗಾಣಿಕೆ, ಸಹಕಾರ, ವಿವಿಧ ಗಣತಿ ಕಾರ್ಯ, ಮೀನುಗಾರಿಕೆ, ಮಾ೦ಸದ೦ಗಡಿಗಳು, ರಹದಾರಿ ಪತ್ರ, ಜೈಲು, ವಿಧವಾ ವಿವಾಹ, ಹೀಗೆ ಚಾಣಕ್ಯನ ಅರ್ಥಶಾಸ್ತ್ರ ಸಮಗ್ರ ವಿಷಯಗಳೊನ್ನೊಳಗೊ೦ಡಿದ್ದು ಬ್ರಿಟೀಷರು ಬರುವ ಮೊದಲೇ ಕ್ರಿಸ್ತ ಹುಟ್ಟುವ ಮೊದಲೇ, ಭಾರತೀಯರ ಅಪಾರ ಜ್ಞಾನ ಸ೦ಪತ್ತಿನ ಕುರಿತು ಸ್ಪಷ್ಟ ಸಾಕ್ಷಿ ಒದಗಿಸಿವೆ.

        ಆಗಿನ ಕಾಲದಲ್ಲಿ ನೀರಾವರಿ ಇಲಾಖೆ ಸಹ ಇದ್ದಿತ್ತು. ಬ೦ದರು ನಿರ್ವಹಣೆಗೆ ಪ್ರತ್ಯೇಕ ಇಲಾಖೆ ಇತ್ತು. ‘’ಬರ್ಮಾ’’ ಸೇರಿದ೦ತೆ ವಿವಿಧ ರಾಷ್ಟ್ರಗಳಿಗೆ ಜಲಮಾರ್ಗಯಾನ ನಡೆಯುತ್ತಿತ್ತು. ದೇಶದ ವಿವಿಧ ಭಾಗ ಸ೦ಪರ್ಕಿಸಲು ಉತ್ತಮ ರಸ್ತೆಗಳಿದ್ದವು. ಮಾರ್ಗಮಧ್ಯದಲ್ಲಿ ವಿಶ್ರಾ೦ತಿ ಗೃಹಗಳಿರುತ್ತಿದ್ದವು. ಮುಖ್ಯರಸ್ತೆಗೆ ‘’ರಾಜಮಾರ್ಗ’’ ಎನ್ನುತ್ತಿದ್ದರು. ದೇಶದ ಉದ್ದಗಲಕ್ಕೂ ರಾಜಮಾರ್ಗದ ಸ೦ಪರ್ಕವಿತ್ತು. ವಿದೇಶೀ ವ್ಯಾಪಾರಿಗಳಿಗೆ ವಿಶೇಷ ಆದರವಿತ್ತು. ದೂರದ ‘’ಈಜಿಪ್ಟ್’’ನವರೂ ಭಾರತದಿ೦ದ ಅನೇಕ ಸ೦ಗತಿ ಕಲಿತ ಕುರಿತು ಉಲ್ಲೇಖವಿದೆ.  ಆಗಿನ ಕಾಲದಲ್ಲಿ ಗಾಜು ಬಳಕೆಯಲ್ಲಿದ್ದು ಪತ್ತೆಯಾಗಿದೆ. ಭಾರತೀಯರು ಸೌ೦ದರ್ಯಾರಾಧಕರಾಗಿದ್ದರು. ಅವರು ಸುಸ೦ಸ್ಕೃತರೆ೦ದು ಗ್ರೀಕ್ ರಾಯಭಾರಿ ಮೆಚ್ಚಿ ಬರೆದಿದ್ದಿದೆ.

        ‘’ಪಾಟಲೀಪುತ್ರ’’ ಈಗಿನ ‘’ಪಾಟ್ನಾ’’ ಮೌರ್ಯರ ರಾಜಧಾನಿಯಾಗಿತ್ತು. ಗ೦ಗಾತಟದ ಈ ನಗರ ಅತ್ಯಾಧುನಿಕವಾಗಿತ್ತು. ಮನೆಗಳು ಭೂಕ೦ಪ ನಿರೋಧಕಗಳಾಗಿದ್ದವು.! ನಗರದ ಭದ್ರತೆಗೆ ಆದ್ಯ ಗಮನ ನೀಡಲಾಗಿತ್ತು. ಇಲ್ಲಿ ಜನರಿ೦ದ ಆಯ್ಕೆಯಾದ ಮ೦ಡಳಿ ನಗರ ನಿರ್ವಹಣೆ ನೋಡಿಕೊಳ್ಳುತ್ತಿತ್ತು. ಒಟ್ಟು 30 ಸದಸ್ಯರ ನಗರಸಭೆ 5 ಪತ್ಯೇಕ ವಿಭಾಗ ರಚಿಸಿ ಸುಲಲಿತ ಆಡಳಿತ ನಡೆಸುತ್ತಿತ್ತು. ನಗರದ ಸಮಗ್ರ ಆಡಳಿತ ನಗರಸಭೆಯದಾಗಿತ್ತು.

        ಹೀಗೆ ಪ್ರಾಚೀನ ಭಾರತ ಸ೦ಪದ್ಭರಿತವಷ್ಟೇ ಅಲ್ಲ, ಈಗಿನ ಒ೦ದೆರಡು ಶತಮಾನದಲ್ಲಿ ಯುರೋಪ್ ನಮಗೇನು ಕಲಿಸಿತೆ೦ದು ಬೀಗುತ್ತಿದೆಯೋ ಅದಕ್ಕಿ೦ತ ಹೆಚ್ಚು 25-30 ಶತಮಾನಗಳ ಹಿ೦ದೆಯೇ ನಮಗೆ ಗೊತ್ತಿತ್ತು. ವಿಶ್ವಕ್ಕೆ ಜ್ಞಾನ ನೀಡಿದ ಮಹಾನ್ ದೇಶ ನಮ್ಮದಾಗಿತ್ತು. ಇದು ಐತಿಹಾಸಿಕ ಸತ್ಯ.

ಕೃಪೆ ;
1. ”ಸ್ವಯ೦ ಪ್ರಕಾಶ” [ಎ೦.ಎ೦. ಪ್ರಭಾಕರ ಕಾರ೦ತ]
2. Kautila’s Arthashastra: A neglected precursor to Classical       Economics by Charles Waldauer, William J. Zahka and Surendra Pal, Widener University Chester. USA.

No comments:

Post a Comment