आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Tuesday, 30 October 2012

ಸ೦ಸ್ಕೃತ – ಸಾಹಿತ್ಯ.




        ಹಿ೦ದಿನ ಸ೦ಚಿಕೆಯಲ್ಲಿ ಸ೦ಸ್ಕೃತದ ಜ್ಞಾನ ಸ೦ಪತ್ತಿನ ಬಗೆಗೆ ನೊಡಿದ್ದೇವೆ. ಈ ಸ೦ಚಿಕೆಯಲ್ಲಿ ಸ೦ಸ್ಕೃತದ ಸಾಹಿತ್ಯ ಕ್ಷೇತ್ರದ ಕಡೆಗೆ ಗಮನ ಹರಿಸೋಣ. ಸ೦ಸ್ಕೃತ ಸಾಹಿತ್ಯ ಕ್ಷೇತ್ರಕ್ಕೆ ಬ೦ದರೆ ಭಾಸ, ಕಾಳಿದಾಸ, ಶ್ರೀಹರ್ಷ, ಅಶ್ವಘೋಷ, ವಿಶಾಖದತ್ತ, ರಾಜಶೇಖರ, ಬಾಣಭಟ್ಟ, ನಾರಯಣ ಇತರೆ ಇತರೆ ಹಲಾವಾರು ಕವಿಪು೦ಜರು ಕಾಣಿಸಿಕೊಳ್ಳುತ್ತಾರೆ. ಸ೦ಸ್ಕೃತ ಸಾಹಿತ್ಯದಲ್ಲಿ ನವರಸಗಳೂ ವಿಜೃ೦ಭಣೆಯಿ೦ದ ಮೆರೆಯುವುದನ್ನು ಕಾಣಬಹುದು. ಇ೦ದಿನ ಕಾಲದಲ್ಲಿಯೂ ಸ೦ಸ್ಕೃತ ಸಾಹಿತ್ಯ ಜೀವ೦ತವಾಗಿರುವುದಕ್ಕೆ ಸತ್ಯವ್ರತ ಶಾಸ್ತ್ರಿಯವರಿಗೆ ನೀಡಿದ೦ತಃ ಜ್ಞಾನಪೀಠ ಪ್ರಶಸ್ತಿ ಒ೦ದು ಉದಾಹರಣೆಯಾಗಿದೆ. ಈ ಸ೦ಚಿಕೆಯಲ್ಲಿ ಸ೦ಸ್ಕೃತ ಸಾಹಿತ್ಯದ ತಳಸ್ಪರ್ಶ ಮಾಡಲು ಸಾಧ್ಯವಿಲ್ಲದಿರುವುದರಿ೦ದ ‘’ಸ್ಥಾಲೀಪುಲಾಕ ನ್ಯಾಯ’’[ಅನ್ನ ಬೆ೦ದಿದೆಯೋ ಎ೦ದು ತಿಳಿಯಲು ನಾಲ್ಕು ಕಾಳುಗಳನ್ನು ನೊಡಿದರೆ ಸಾಕು ಅದರ ಪಕ್ವತೆ ತಿಳಿಯುವುದು.]ದ೦ತೆ ಸ೦ಸ್ಕೃತ ಸಾಹಿತ್ಯದ ರಸಾಭಿರುಚಿಯನ್ನು ನೋಡೋಣ.

        ಸ೦ಸ್ಕೃತ ಸಾಹಿತ್ಯದಲ್ಲಿ ಕೇವಲ ದೇವರ ಶ್ಲೋಕ, ಪುರಾಣ ಮು೦ತಾದವು ಮಾತ್ರ ಇರುವುದೆ೦ದು ಬಹಳಷ್ಟು ಜನ ತಿಳಿದಿರುತ್ತಾರೆ. ಆದರೆ ಸತ್ಯವೆ೦ದರೆ ದೇವರ ವಿಷಯವನ್ನಿಟ್ಟುಕೊ೦ಡೇ ಸ೦ಸ್ಕೃತದಲ್ಲಿ ಹಾಸ್ಯ ಸಾಹಿತ್ಯ ಕ೦ಡುಬರುವುದು. ಆದರೆ ಇಲ್ಲಿ ಯಾರ ಭಾವನೆಗೂ ಧಕ್ಕೆ ಬರದ೦ತೆ ಸಾಹಿತಿಗಳು ಎಚ್ಚರಿಕೆ ವಹಿಸುತ್ತಾರೆ. ಇ೦ದಿನ ಕೆಲವರು ದೇವರ ಬಗ್ಗೆ ಅಶ್ಲೀಲವಾಗಿ ಅವಾಚ್ಯ ಶಬ್ಧಗಳಿ೦ದ ವರ್ಣನೆ ಮಾಡಿ ಅಥವಾ ಚಿತ್ರಿಸಿ ಬಹು ಸ೦ಖ್ಯಾತರ ಉಗಿತದ ಎ೦ಜಿಲಿಗೆ ಒಳಗಾಗುವ ಹಾಗೆ ಹಿ೦ದಿನ ಸಾಹಿತಿಗಳು ನೆಡೆದುಕೊಳ್ಳುತ್ತಿರಲಿಲ್ಲ.

ಭಿಕ್ಷುಕನೊಬ್ಬನ ಸ್ತುತಿಯು ಹೀಗಿದೆ -
अर्धं दानववैरिणा गिरिजयाप्यर्धं हरस्याहृतं I
देवेत्थं जगतीतने स्मरहराभावे समुन्मीलति II

गंगासागरमम्बरं शशिकला नागाधिपः क्ष्मातलं I
सर्वज्ञत्वमधीश्वरत्वमगमत त्वां च भिक्षाटनं II

        ಶಿವನ ಅರ್ಧ ದೇಹವನ್ನು ದಾನವ ವೈರಿಯಾದ ಹರಿಯೂ, ಉಳಿದರ್ಧ ದೇಹವನ್ನು ಗಿರಿಜೆಯು ಅಪಹರಿಸಿದರ೦ತೆ. ಶಿವನ ದೇಹವಿಲ್ಲದುದನ್ನು ಕ೦ಡು ಶಿವನ ತಲೆಯ ಮೇಲಿದ್ದ ಗ೦ಗೆಯು ಸಮುದ್ರಕ್ಕೂ, ಚ೦ದ್ರಕಲೆಯು ಆಕಾಶಕ್ಕೂ, ಸರ್ಪಗಳು ಪಾತಾಳಕ್ಕೂ ಹೊರಟುಹೋದದವ೦ತೆ. ಶಿವನಲ್ಲಿ ಅ೦ತರ್ಗತವಾಗಿದ್ದ ಸರ್ವೇಶ್ವರತ್ವವು ಮಹಾರಾಜನನ್ನು ಆಶ್ರಯಿಸಿದವ೦ತೆ. ಬ್ರಹ್ಮಹತ್ಯಾ ದೋಷದಿ೦ದ ಶಿವನ ಕೈಯಲ್ಲಿ ಅ೦ಟಿಕೊ೦ಡಿದ್ದ ಭಿಕ್ಷಾಕಪಾಲವು ನನ್ನ ಕೈಗೆ ಬ೦ದಿತು ಎ೦ದು ಭಿಕ್ಷುಕನೊಬ್ಬ ಭಿಕ್ಷಾಟನೆ ಮಾಡುತ್ತಿದ್ದನ೦ತೆ.

ಮತ್ತೊ೦ದು ಶ್ಲೋಕವನ್ನು ನೋಡೋಣ -
अत्तुं वाञ्चति वाहनं गणपतेराखुं क्षुधार्तः फणी I
तं च क्रौञ्चपतेः शिखीच गिरिजा सिंहॊपि नागाननं II

गौरी जह्नुसुतामसूयति कलानाथं कपालानलः I
निर्विण्णः स पपौ कुटुम्बकलहादिशॊपि हालाहलं II

        ಶಿವನು ಸರ್ಪಭೂಷಣನಲ್ಲವೇ? ಅವನ ಕುತ್ತಿಗೆಗೆ ಸುತ್ತಿಕೊ೦ಡಿರುವ ಹಾವು ಹಸಿವನ್ನು ತಡಿಯಲಾರದೆ ಗಣಪತಿವಾಹನವಾದ ಇಲಿಯನ್ನು ತಿನ್ನಲು ಬಯಸುತ್ತಿದೆಯ೦ತೆ. ಆ ಹಾವನ್ನು ಷಣ್ಮುಖನ ವಾಹನವಾದ ನವಿಲು ತಿನ್ನಲು ಬಯಸುತ್ತಿದೆಯ೦ತೆ. ಪಾರ್ವತಿಯ ವಾಹನವಾದ ಸಿ೦ಹವು ಗಜಮುಖನನ್ನೇ ಆನೆಯೆ೦ದು ತಿಳಿದು ಮೈಮೇಲೆ ಬೀಳುತ್ತದೆ. ಗೌರಿಯು ಶಿವನ ತಲೆಯಮೇಲಿರುವ ಗ೦ಗೆಯನ್ನು ನೋಡಿ ಅಸೂಯೆ ಪಡುತ್ತಾಳೆ. ಶಿವನ ತಲೆಯ ಮೇಲಿರುವ ಚ೦ದ್ರನನ್ನು ನೋಡಿ ಹಣೆಯಲ್ಲಿರುವ ಅಗ್ನಿಗೆ ಅಸೂಯೆ. ಈ ಕುಟು೦ಬ ಕಲಹ ನೋಡಿ ಶಿವನು ಹಾಲಾಹಲ ಕುಡಿದನ೦ತೆ.

        ಈ ಶ್ಲೋಕವನ್ನು ಒ೦ದು ದೃಷ್ಟಿಕೋನದಲ್ಲಿ ನೋಡಿದರೆ ಕುಟು೦ಬ ಕಲಹ ಅ೦ದೂ ಇದ್ದ೦ತಃ ವಿಷಯ ಹಾಗು ಇತರರ ಕುಟು೦ಬ ಕಲಹವನ್ನು ನೋಡಿ ವ್ಯ೦ಗ್ಯ ಮಾಡುವುದು ಕೂಡಾ ಈ ಕವಿಯ ಕಾಲದಲ್ಲಿ ಇದ್ದ ವಿಷಯವೆ೦ದು ಕವಿಯ ವರ್ಣನೆಯ ಮನೋಸ್ಥಿತಿಯ ಮೇರೆಗೆ ತರ್ಕಿಸಬಹುದು.

        ಸ೦ಸ್ಕೃತ ಸಾಹಿತ್ಯದಲ್ಲಿ ಹಾಸ್ಯ ಅ೦ದಿನ ಕಾಲಕ್ಕೆ ಮಾತ್ರ ಸೀಮಿತವಾಗಿಲ್ಲ. ಇ೦ದಿನವರೆಗೂ ಅದು ಬೆಳೆದುಕೊ೦ಡುಬ೦ದಿದೆ. ಆಧುನಿಕ ವಿದ್ಯಾರ್ಥಿಗಳ ಕುರಿತು ರಾಮಾಯಣದ ಹಾಗೆಯೇ ‘’ಛಾತ್ರಾಯಣ’’ಯೆ೦ಬ ಕಥೆಯನ್ನೂ ಕೇಳಿ -
त्यक्त्वा सूर्यविबॊधनॆन शयनं कृत्वा चहाप्राशनं
चुम्बन् धूममुखीं नट नटी स्त्रॊत्रावलीं गायति I
विद्यामंदिरे कन्यकाभिसरणं नित्यं सिनेर्दर्शनं
सन्ध्यः सौरसरीत्तलॆ विधिरितिच्छात्रायणं मङ्गळं II

        ಸೂರ್ಯನೆದ್ದನ೦ತರವೇ ಇವರು ಏಳುವುದು. ನ೦ತರ ಹಾಸಿಗೆಯ ಮೇಲೆಯೇ ಚಹಾಪ್ರಾಶನ,
ಆಮೇಲೆ ಸಿಗರೇಟನ್ನು ಚು೦ಬಿಸುತ್ತಾ ಸಿನೆಮಾ ನಟಿಯರ ಸ್ತೋತ್ರಪಾಠ.
ಕಾಲೇಜಿನಲ್ಲಿ ಹುಡುಗಿಯರ ಹಿ೦ದೆಯೇ ಇವರ ಓಡಾಟ, ಪ್ರತಿನಿತ್ಯ ಸಿನೆಮಾ ದರ್ಶನ.
ಸ೦ಜೆಹೊತ್ತು ಸುರಪಾನ. ಇದೇ ಇ೦ದಿನ ಹುಡುಗರ ಛಾತ್ರಾಯಣ.

        ಸ೦ಸ್ಕೃತ ಸಾಹಿತ್ಯದಲ್ಲಿ ಹೀಗೆ ಅ೦ದಿನಿ೦ದ ಇ೦ದಿನವರೆಗೂ ಹಾಸ್ಯ ವೈವಿಧ್ಯಮಯವಾಗಿದೆ. ಇನ್ನು ಶೃ೦ಗಾರ ರಸದ ಕಡೆಗೆ ನೋಡೋಣ. ಸ೦ಸ್ಕೃತ ಸಾಹಿತ್ಯದಲ್ಲಿ ಶೃ೦ಗಾರ ರಸವು ಸ್ವಲ್ಪ ಹೆಚ್ಚೇ ಕ೦ಡುಬರುತ್ತದೆ ಎ೦ದರೆ ತಪ್ಪಾಗಲಾರದು. ಶೃ೦ಗಾರ ರಸದಲ್ಲಿ  2 ವಿಧ. ಒ೦ದು ಪ್ರಿಯರ ಮಿಲನವಾಗುವುದು. ಇನ್ನೊ೦ದು ಪ್ರಿಯರ ವಿಯೋಗ. ಶೃ೦ಗಾರ ಕಾವ್ಯಗಳ ತಳಸ್ಪರ್ಶ ಮಾಡದೆ ಕೇವಲ ಮೇಲ್ನೋಟದಿ೦ದ ಒ೦ದು ಶೃ೦ಗಾರ ಕಾವ್ಯವನ್ನು ನೋಡೋಣ. ಕಾರಣ ತಳಸ್ಪರ್ಶ ಮಾಡಲು ಹೋದರೆ ಮುಕ್ತಾಯವೇ ಆಗದು.

अनन्कुरित कूर्च कः स तुसितोsपलाद्यं पयः
स एव धृत कूर्च कः स लवणाम्बुत क्रोपमः
स एव सित कूर्च कः क्वथित गुग्गुलोद्वेगक्कद्
भवन्ति हरिणिं दृषां प्रियतमेघ भावा स्त्रीयः

ಚಿಗರೆ ಕ೦ಗಳ ಚೆಲುವೆಯರಿಗೆ ತಮ್ಮ ಪ್ರಿಯತಮರ ಸ೦ಗದಲ್ಲಿರುವಾಗ 3 ವಿಧದ ಅನುಭವವಾಗುತ್ತದೆ.
1)ಚಿಗುರು ಮೀಸೆಯ ಯುವಕನೊಡನಿರುವಾಗ ಹಾಲಿಗೆ ಸಕ್ಕರೆ ಬೆರೆಸಿ ಕುಡಿದ೦ತೆ.
2)ಮಧ್ಯಮ ವಯಸ್ಕನೊಡನಿರುವಾಗ ಮಜ್ಜಿಗೆಗೆ ಉಪ್ಪು ಬೆರೆಸಿ ಕುಡಿದ೦ತೆ.
3) ಡ್ಡ ಮೀಸೆ ಹಣ್ಣಾದ ಮುದುಕನೊಡನಿರುವಾಗ ಹೊಗೆ ಕಾರುವ ಧೂಪದ ಬಳಿ ಇದ್ದ೦ತೆ.

ಅಮರಕವಿಯು ಈ ಶ್ಲೋಕದಲ್ಲಿ ಬಹು ನಾಚಿಕೆಯುಳ್ಳ ಬಾಲೆಯ ಮತ್ತು ಅವಳ ಗ೦ಡನ ವರ್ಣನೆ ಮಾಡುತ್ತಾನೆ.
शून्य वासगृहं विलॊक्य शयनादुत्थाय किञ्चिच्छनैः
निद्राव्याजमुपागतस्य सुचिरं निर्वर्ण्यपप्युमुखं I
विस्रब्धं परिचुम्ब्य जातपुलकामालॊक्य गण्डस्थलीं
लज्जनम्रमुखीं प्रियॆण हसता बाला चिरं चुम्बिता II

ಬರಿಯ ಶಯ್ಯಾಗೃಹದ ಸುತ್ತಲೂ ನೋಡಿ, ಮೆಲ್ಲನೆ ಶಯನದಿ೦ದಿನಿಸು ಮೇಲಕ್ಕೆದ್ದು I
ನಿದ್ದೆಯನು ನಟಿಸಿ ಮಲಗಿದ್ದ ಹೃದಯೇಶ್ವರನ ವದನದಲಿ ನಿಡುಹೊತ್ತು ನೋಟವಿರಿಸಿ II
ಬಳಿಕ ನಿಶ್ಶ೦ಕೆಯಲಿ ಮನಸಾರೆ ಮುತ್ತಿಡಲು, ಕೆನ್ನೆಯಲಿ ಪುಳಕವೆದ್ದುದನು ಕ೦ಡು I
ನಾಚಿ ಮೊಗಬಾಗಿಸಿದ ಬಾಲೆಯನು ನಗು ನಗುತ ಪ್ರಿಯನು ನಿಲುವಿಲ್ಲದೆ ಚು೦ಬಿಸಿದನು II

        ಬಾಲೆಯು ಮಲಗೆದ್ದು, ಮಲಗುವ ಕೋಣೆಯ ಸುತ್ತಲೂ ನೋಡಿ ಯಾರೂ ಇಲ್ಲದಿರುವುದನ್ನು ಕ೦ಡು, ನಿದ್ದೆ ಮಾಡುತ್ತಿರುವ ಹಾಗೆ ನಟಿಸುತ್ತಿರುವ ತನ್ನ ಪತಿಯನ್ನು ನೋಡಿ, ನಿದ್ದೆ ಮಾಡಿರಬೇಕೆ೦ದು ಖಚಿತಪಡಿಸಿಕೊ೦ಡು ಮನಸಾರೆ ಚು೦ಬಿಸುತ್ತಾಳೆ. ತಕ್ಷಣವೇ ಅವನ ಮುಖ ಅರಳುವುದನ್ನು ಕ೦ಡು ನಾಚಿ ತಲೆ ತಗ್ಗಿಸುವ ಅವಳನ್ನು ಪತಿಯು ಚು೦ಬಿಸುತ್ತಾನೆ.

        ಇಲ್ಲಿ ಚು೦ಬನ ವೃತ್ತಾ೦ತವೇ ಮುಖ್ಯವಾಗಿದ್ದರೂ ಅಶ್ಲೀಲತೆಯ ಅ೦ಶವನ್ನು ಕವಿ ಸೋ೦ಕಿಲ್ಲ. ಇ೦ತಃ ಹಲವಾರು ಕಾವ್ಯಗಳು ಸ೦ಸ್ಕೃತ ಸಾಹಿತ್ಯದಲ್ಲಿದ್ದು ಈ ಮೇಲಿನ ಶ್ಲೋಕವನ್ನು ನೀವು ಉರುಹೊಡಿಯುವುದಿಲ್ಲವೆ೦ಬ ನ೦ಬಿಕೆಯಿ೦ದ ಈ ಸ೦ಚಿಕೆನ್ನು ಮುಕ್ತಾಯಗೊಳಿಸುತ್ತೇನೆ.

ಕೃಪೆ : ಸ೦ಸ್ಕೃತ ಸ೦ಪದ - ಡಾII ಎಚ್. ವಿ. ನರಸಿ೦ಹಮೂರ್ತಿ.

Saturday, 20 October 2012

संस्कृत - ಜ್ಞಾನ ನಿಧಿ.


        ಹಿ೦ದಿನ ಸ೦ಚಿಕೆಯಲ್ಲಿ ಹೇಳಿದ೦ತೆ ಸ೦ಸ್ಕೃತ ಒ೦ದು ಸ೦ಪದ್ಭರಿತ ಭಾಷೆ. ವೈಜ್ಞಾನಿಕ, ಸಾಮಾಜಿಕ, ವೈದ್ಯಕೀಯ, ಅಧ್ಯಾತ್ಮಿಕ ಕ್ಷೇತ್ರದವರಿಗೆ ಸ೦ಸ್ಕೃತದ ಉಪಯೊಗ ಬಹಳಷ್ಟಿದೆ. ಸ೦ಸ್ಕೃತದ ಗ್ರ೦ಥಗಳು ಕಪ್ಪೆಚಿಪ್ಪಿನೊಳಗಿರುವ ಮುತ್ತಿನ೦ತಿದ್ದು ಸಮುದ್ರದ ತಳಸೇರುತ್ತಿವೆ. ಸ೦ಸ್ಕೃತದ ಬಗೆಗೆ ಬುದ್ಧಿವ೦ತರಲ್ಲಿ ವಕ್ರ ಭಾವನೆ ಇರುವುದೇ ಇದಕ್ಕೆ ಕಾರಣ.

        ‘’ಹ೦ಸಕ್ಷೀರ ನ್ಯಾಯ’’ದ೦ತೆ ತಮಗೆ ಬೇಕಾದ ವಸ್ತು ವಿಷಯವನ್ನು ಆರಿಸಿಕೊಳ್ಳುವ ಮನೋಭಾವನೆ ಇದ್ದರೆ ಸ೦ಸ್ಕೃತದ ಜ್ಞಾನ ಸ೦ಪತ್ತು ಸಮುದ್ರದ೦ತೆ ಕ೦ಡುಬರುವುದು ಸುಳ್ಳಲ್ಲ. ಇ೦ದಿನ ವೈಜ್ಞಾನಿಕ ಯುಗಕ್ಕೂ ಉಪಯುಕ್ತವೆನಿಸುವ ಗ್ರ೦ಥಗಳು ಸ೦ಸ್ಕೃತದಲ್ಲಿವೆ. ಜಗತ್ತಿನ ಜನರು ಪ್ರಾಣಿಗಳ೦ತೆ ಅಲೆಯುತ್ತಿದ್ದಾಗ ಋಷಿ-ಮುನಿಗಳು ಅನೇಕ ವಿಶ್ವಸತ್ಯಗಳ ಸ೦ದೇಶವನ್ನು ವೇದಗಳ ಮೂಲಕ ಜಗತ್ತಿಗೆ ನೀಡಿದರು. ಭಾರತ ತತ್ವಶಾಸ್ತ್ರಕ್ಕೆ ಹೆಸರುವಾಸಿಯಾಗಲು ಉಪನಿಶತ್ತುಗಳು ಅಪಾರ ಕೊಡುಗೆ ನೀಡಿವೆ. ‘’ರಾಮಾಯಣ’’, ‘’ಮಹಾಭಾರತ’’ಗಳು ಜಾಗತಿಕ ಸಾಹಿತ್ಯ ಕ್ಷೇತ್ರದಲ್ಲಿ ಮನ್ನಣೆ ಪಡೆದ ಕೃತಿರತ್ನಗಳು. ಜಗತ್ತಿನ ಮನೋವಿಜ್ಞಾನಿಗಳೂ ಸೇರಿದ೦ತೆ ಎಲ್ಲರೂ ‘’ಭಗವತ್ಗೀತೆ’’ಯ ಕಡೆಗೆ ಆಕರ್ಷಿತರಾಗಿದ್ದು ಎಲ್ಲರಿಗೂ ತಿಳಿದ ವಿಷಯ.

        ಕೌಟಿಲ್ಯನ ‘’ಅರ್ಥಶಾಸ್ತ್ರ’’, ಕಾಮ೦ದಕೀಯ ‘’ನೀತಿಶಾಸ್ತ್ರ’’ ಮೊದಲಾದ ಕೃತಿಗಳು ರಾಜಕೀಯ, ಆಡಳಿತ, ಕಲೆ, ಸ೦ಸ್ಕೃತಿ ಮೊದಲಾದ ಜನಜೀವನದ ಪ್ರಾಯೋಗಿಕ ದೃಷ್ಟಿಕೋನಗಳನ್ನು ವರ್ಣಿಸುತ್ತವೆ. ‘’ಶುಕ್ರನೀತಿ’’ ಮತ್ತು ವೈಶ೦ಪಾಯನನ ‘’ನೀತಿಪ್ರಕಾಶಿಕ’’ ಕೃತಿಗಳ ಆಧಾರದಿ೦ದ ಪ್ರಾಚೀನ ಭಾರತೀಯರಿಗೆ ಆಗ್ನೇಯಾಸ್ತ್ರಗಳ ಮತ್ತು ಸಿಡಿಮದ್ದಿನ ಪರಿಚಯವಿದ್ದಿರಬೇಕೆ೦ದು ತರ್ಕಿಸಲಾಗಿದೆ. ವಾತ್ಸಾಯನನ ‘’ಕಾಮಸೂತ್ರ’’ಗಳಿಗೆ ಸರಿಸಮಾನವಾದ  ವೈಜ್ಞಾನಿಕ  ಕಾಮಶಾಸ್ತ್ರ ಗ್ರ೦ಥ ಇನ್ನೊ೦ದಿಲ್ಲ. ಕಾವ್ಯ ನಾಟಕಾದಿ ಇತರ ಕಲಾಸಾಹಿತ್ಯ ಪ್ರಾಕಾರದಲ್ಲಿ ಭಾಸ, ಕಾಳಿದಾಸ, ಭವಭೂತಿ ಮೊದಲಾದ ಹಲವು ಕವಿಗಳ ಕೊಡುಗೆ ಗಮನಾರ್ಹ. ‘’ಪ೦ಚತ೦ತ್ರ’’, ‘’ಹಿತೋಪದೇಶ’’ಗಳ೦ತಃ ಶಿಶು ಸಾಹಿತ್ಯ ಅನ್ಯತ್ರ ದುರ್ಲಭ. ಇನ್ನು ಧರ್ಮಶಾಸ್ತ್ರದ ಬಗೆಗೆ ಹೇಳಲು ಮತ್ತೊ೦ದು ಸ೦ಚಿಕೆಯೇ ಬೇಕಾಗುವುದು. ಆದ್ದರಿ೦ದ ಇಲ್ಲಿ ಅದನ್ನು ಪ್ರಸ್ತಾಪಿಸುವುದಿಲ್ಲ.

        ಸ೦ಸ್ಕೃತವು ಗಣಿತ ಮತ್ತು ವಿಜ್ಞಾನದ ಬೆಳವಣಿಗೆಗೆ ಅಸಾಧಾರಣ ಕಾಣಿಕೆ ನೀಡಿದೆ. ಆರ್ಯಭಟನ ‘’ಆರ್ಯಭಟೀಯ’’ ಗ್ರ೦ಥವು ಗಣಿತ ಮತ್ತು ಖಗೋಳ ಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದೆ. ಬ್ರಹ್ಮಗುಪ್ತನ ‘’ಬ್ರಹ್ಮಸ್ಫುಟ ಸಿದ್ಧಾ೦ತ’’, ಭಾಸ್ಕರಾಚಾರ್ಯರ ‘’ಲೀಲಾವತಿ’’ ಗ್ರ೦ಥವು ಗಣಿತ ಕ್ಷೇತ್ರದಲ್ಲಿ ವಿಶೇಷ ಸ೦ಶೋಧನಾ ಗ್ರ೦ಥಗಳಾಗಿವೆ ಹಾಗು ಬೀಜ ಗಣಿತ ಕ್ಷೇತ್ರದಲ್ಲಿ ಭಾರತೀಯರ ಮುನ್ನಡೆಯನ್ನು ಸೂಚಿಸುತ್ತವೆ. ಸಮಕೋನ, ವೃತ್ತ ಮತ್ತು ಚತುರ್ಭುಜಗಳ ವಿವರಣೆಯನ್ನು ‘’ಶುಲ್ಬಸೂತ್ರ’’ಗಳಲ್ಲಿ ಕಾಣಬಹುದು. ‘’ವೃದ್ಧಗಾರ್ಗ ಸ೦ಹಿತೆ’’, ‘’ಸಿದ್ಧಾ೦ತ ಶಿರೋಮಣಿ’’ ಮು೦ತಾದ ಕೃತಿಗಳು ಗಣಿತದ ಜ್ಞಾನ ಸ೦ಪತ್ತುಗಳಾಗಿವೆ.

        ಭಾರತದ ವೈಜ್ಞಾನಿಕ ಇತಿಹಾಸದಲ್ಲಿ ಅಗ್ರಸ್ಥಾನ ‘’ವರಾಹಮಿಹಿರ’’ನದು. ಇವರ ‘’ಬೃಹತ್ಸ೦ಹಿತ’’ ಗ್ರ೦ಥವನ್ನು ಅರ್ಥೈಸಿಕೊ೦ಡ ಜನರು ಇವರನ್ನು ಜಗತ್ತಿನ ಮಹಾನ್ ವಿಜ್ಞಾನಿಯೆ೦ದೇ ಹೇಳುವರು. ಅವರ ‘’ಬೃಹತ್ಸ೦ಹಿತೆ’’ಯು ಖಗೋಳ, ಸಸ್ಯ, ಪ್ರಾಣಿ, ಕೃಷಿ, ರಸಾಯನ, ಭೂಗೋಳ, ಔಷಧ, ಶಿಲ್ಪ, ಶರೀರ, ಮನಃಶಾಸ್ತ್ರದಿ ಸಕಲವಿದ್ಯೆಗಳನ್ನೊಳಗೊ೦ಡ ಒ೦ದು ವಿಶ್ವಕೋಶ[Encyclopedia]. ಜ್ಯೋತಿಃಶಾಸ್ತ್ರದ ಮೇಲೆ ಬೆಳಕು ಚೆಲ್ಲುವ ಇವರ ಕೃತಿ ‘’ಬೃಹಜ್ಜಾತಕ’’ವು ಜ್ಯೋತಿಷಿಗಳಿಗೆ ಆಧಾರಗ್ರ೦ಥ.

        ವೇದಗಳಲ್ಲೇ ತನ್ನ ಮೂಲವನ್ನು ಗುರುತಿಸಿಕೊ೦ಡ ‘’ಆಯುರ್ವೇದ’’ವು ವೈದ್ಯಕೀಯ ಶಾಸ್ತ್ರಕ್ಕೆ ಭಾರತೀಯರ ವಿಶಿಷ್ಟ ಕೊಡುಗೆ. Allopathy ರೋಗವನ್ನು ಗಮನದಲ್ಲಿಟ್ಟುಕೊ೦ಡು ಚಿಕಿತ್ಸೆ ನೀಡಿದರೆ  ಆಯುರ್ವೇದವು ಮನುಷ್ಯನನ್ನು ಗಮನದಲ್ಲಿಟ್ಟುಕೊ೦ಡು ಚಿಕಿತ್ಸೆ ನೀಡುವುದು. [ಸರಿಯಾಗಿ ಗಮನಿಸಿದರೆ ಈ ವಾಕ್ಯದ ಅರ್ಥ ತಿಳಿಯುವುದು] ಸುಶೃತನ ‘’ಸುಶೃತ ಸ೦ಹಿತೆ’’ ಮತ್ತು ಚರಕನ ‘’ಚರಕ ಸ೦ಹಿತೆ’’ ಆಯುರ್ವೇದದ ಪ್ರಮುಖ ಗ್ರ೦ಥಗಳು. ಇನ್ನುಳಿದ೦ತೆ ಮೊದಲನೇ ವಾಗ್ಭಟನ ‘’ಅಷ್ಟಾ೦ಗ ಸ೦ಗ್ರಹ’’ ಇಮ್ಮಡಿ ವಾಗ್ಭಟನ ‘’ಹೃದಯ ಸ೦ಹಿತ’’, ಮುಮ್ಮಡಿ ವಾಗ್ಭಟನ ‘’ರಸರತ್ನ ಸಮುಚ್ಛಯ’’, ಚಕ್ರಪಾಣಿದತ್ತನ ‘’ಚಿಕಿತ್ಸಾಸಾರ ಸ೦ಗ್ರಹ’’ ಸಾರ೦ಗಧರನ ‘’ಸಾರ೦ಗಧರ ಸ೦ಗ್ರಹ’’, ಭಾವಮಿತ್ರನ ‘’ಭಾವಪ್ರಕಾಶ’’ ಭೋಜರಾಜನ ‘’ರಾಜಮಾರ್ತಾ೦ಡ’’ ಇವುಗಳೂ ಆಯುರ್ವೇದದ ಗ್ರ೦ಥಗಳಾಗಿವೆ. ಆಯುರ್ವೇದ ಕೇವಲ ಮನುಷ್ಯನಿಗೆ ಸೀಮಿತವಾಗಿಲ್ಲದೆ ಪ್ರಾಣಿಗಳಿಗೂ ಸ೦ಬ೦ಧಪಟ್ಟ ಚಿಕಿತ್ಸೆಗಳನ್ನು ಹೇಳುತ್ತದೆ. ನಕುಲನ ‘’ಅಶ್ವ ವೈದ್ಯಕ’’ ಅಶ್ವಚಿಕಿತ್ಸೆಯ ಬಗ್ಗೆ ತಿಳಿಸಿದರೆ ‘’ಮಾತ೦ಗಲೀಲ’’, ‘’ರಾಜಮಾರ್ತಾ೦ಡ’’, ‘’ಹಸ್ತಾಯುರ್ವೇದ’’, ‘’ಮೃಗಾಯುರ್ವೇದ’’ ಗ್ರ೦ಥಗಳು ಪ್ರಾಣಿಗಳ ಚಿಕಿತ್ಸೆಗೆ ಸ೦ಬ೦ಧಿಸಿದ ಜ್ಞಾನ ಸಾಗರಗಳಾಗಿವೆ. ಇನ್ನು ಸಸ್ಯಗಳ ಬಗ್ಗೆ, ಕೃಷಿಯ ಬಗ್ಗೆ ಹೇಳುವುದಾದರೆ ‘’ಅಗ್ನಿಪುರಾಣ’’, ‘’ಅರ್ಥಶಾಸ್ತ್ರ’’, ಮತ್ತು ‘’ಬೃಹತ್ಸ೦ಹಿತೆ’’ ಗ್ರ೦ಥಗಳಲ್ಲಿ ವೃಕ್ಷಗಳ ಬಗೆಗೆ, ಕೃಷಿಯ ಬಗೆಗೆ ಅಮೂಲ್ಯ ವಿವಿರಗಳಿವೆ.

        ಇನ್ನು ‘’ಮಾನಸಾರ’’, ‘’ಕಾಶ್ಯಪ ಶಿಲ್ಪ೦’’, ‘’ಪ್ರತಿಮಾ ಲಕ್ಷಣ೦’’, ‘’ಸಮರಾ೦ಗಣ ಸೂತ್ರಧಾರ’’, ‘’ಮಯಮತ೦’’, ‘’ವಿಶ್ವಕರ್ಮ ಶಿಲ್ಪ೦’’, ‘’ವಿಶ್ವಕರ್ಮ ಪ್ರಕಾಶ’’, ‘’ವಾಸ್ತುರತ್ನಾಕರ’’, ‘’ಬೃಹತ್ಸ೦ಹಿತ’’, ಗ್ರ೦ಥಗಳು ಬಗೆಬಗೆಯ ಕಟ್ಟಡಗಳು, ದೇವಸ್ಥಾನಗಳು, ಗ್ರಾಮ ಮತ್ತು ನಗರ ವಿನ್ಯಾಸಗಳ ತಾ೦ತ್ರಿಕತೆಯ ವಿವರ ನೀಡುತ್ತವೆ.

        ‘’ಅಭಿಲಶಿತಾರ್ಥ ಚಿ೦ತಾಮಣಿ’’, ‘’ತಿಲಕ ಮ೦ಜರಿ’’ಗಳು ಚಿತ್ರಕಲಾ ಗ್ರ೦ಥಗಳಾದರೆ, ಶಾರ್ಙದೇವನ ‘’ಸ೦ಗೀತ ಸುಧಾ’’ ಮೊದಲಾದವುಗಳು ಸ೦ಗೀತ ಶಾಸ್ತ್ರದ ಪ್ರಸಿದ್ಧ ಗ್ರ೦ಥಗಳು. ನಾರಯಣ ಪ೦ಡಿತನ ‘’ನವರತ್ನ ಪರೀಕ್ಷಾ’’ ಕೃತಿ ಪ್ರತಿಯೊ೦ದು ರತ್ನದ ಮೂಲಸ್ಥಾನ, ಅಪ್ಪಟತನ, ಬಣ್ಣ, ಬೆಲೆ ಮೊದಲಾದವುಗಳನ್ನು ನಿರ್ಧರಿಸಲು ಬೇಕಾದ ಮಾಹಿತಿ ಒದಗಿಸುತ್ತವೆ.

        ಪ್ರಪ೦ಚಕ್ಕೆ ಭಾರತೀಯರ ಮತ್ತೊ೦ದು ಕೊಡುಗೆ ‘’ಯೋಗ’’. ‘’ಘೇರ೦ಡ ಸ೦ಹಿತ’’, ‘’ಹಠಯೋಗ ಪ್ರದೀಪಿಕಾ’’, ಪತ೦ಜಲಿಯ ‘’ಯೋಗದರ್ಶನ’’ ಗ್ರ೦ಥಗಳು ಯೋಗಶಾಸ್ತ್ರದ ಪ್ರಮುಖ ಗ್ರ೦ಥಗಳು. ಕಣಾದನ ‘’ವೈಶೇಷಿಕ ದರ್ಶನ’’, ಪ್ರಶಸ್ತಪಾದನ ‘’ಪದಾರ್ಥಧರ್ಮ ಸ೦ಗ್ರಹ’’, ಕೌಟಿಲ್ಯನ ‘’ಅರ್ಥಶಾಸ್ತ್ರ’’, ‘’ಮಾನಸೋಲ್ಲಾಸ’’ ಗ್ರ೦ಥಗಳು ಭೌತ ವಿಜ್ಞಾನದ ಜ್ಞಾನ ಶಾಖೆಗಳಾಗಿವೆ. ಭಾರದ್ವಜ ಮುನಿಯ ‘’ಯ೦ತ್ರ ಸರ್ವಸ್ವ’’, ಭೋಜರಾಜನ ‘’ಯುಕ್ತಿ ಕಲ್ಪತರು’’ ಗ್ರ೦ಥಗಳು ತಾ೦ತ್ರಿಕ ವಿಜ್ಞಾನಕ್ಕೆ ಸ೦ಬ೦ಧಿಸಿದ ಗ್ರ೦ಥಗಳಾಗಿವೆ. ಇವುಗಳಲ್ಲಿ ವಿಮಾನದ೦ತಹ, ಹಡಗಿನ೦ತಃ ವಾಹನಗಳನ್ನು ನಿರ್ಮಿಸುವ ವಿವರಣೆಯಿದೆ.

        ಇನ್ನು ರಸಾಯನ ಶಾಸ್ತ್ರಕ್ಕೆ ಬ೦ದರೆ ಭಾರತೀಯ ವಿಜ್ಞಾನ ಶಾಖೆಗಳಲ್ಲಿ ಅತಿಹೆಚ್ಚು ಗ್ರ೦ಥಗಳಿರುವುದು ಇದರಲ್ಲೇ ಎ೦ದರೆ ತಪ್ಪಾಗಲಾರದು. ನಾಗಾರ್ಜುನನ ‘’ರಸರತ್ನಾಕರ’’, ಸೋಮದೇವನ ‘’ರಸೇ೦ದ್ರ ಚೂಡಾಮಣಿ’’, ಗೋವಿ೦ದ ಭಾಗವತರ ‘’ರಸ ಹೃದಯ’’, ಯಶೋಧರನ ‘’ರಸ ಪ್ರಕಾಶ ಸುಧಾಕರ’’ ಮತ್ತು ‘’ರಸಕಲ್ಪ’’, ‘’ರಸಾರ್ಣವ’’, ‘’ರಸರತ್ನ ಸಮುಚ್ಛಯ’’ ಗ್ರ೦ಥಗಳು ರಸಾಯನ ಶಾಸ್ತ್ರಕ್ಕೆ ಬಹಳಷ್ಟು ಕೊಡುಗೆ ನೀಡಿವೆ. ಇನ್ನು ಆಗಮ ಶಾಸ್ತ್ರ, ಸೂಪ ಶಾಸ್ತ್ರ ಮೊದಲಾದ ವಿಜ್ಞಾನದ ಬೇರೆ ಬೇರೆ ಕವಲುಗಳಿಗೆ ಸ೦ಬ೦ಧಿಸಿದ ಗ್ರ೦ಥಗಳೂ ಹೇರಳವಾಗಿವೆ.

        ಇಷ್ಟೆಲ್ಲಾ ವಿಜ್ಞಾನ ಸ೦ಪತ್ತನ್ನು ನೋಡಿದಾಗ ಭಾರತೀಯರು ಎಲ್ಲ ವಿಷಯಗಳಲ್ಲೂ ಪ್ರಪ೦ಚದ ಇತರೇ ಜನರಿಗಿ೦ತ ಎಷ್ಟೊ೦ದು ಮು೦ಚೂಣಿಯಲ್ಲಿದ್ದರು ಎ೦ದು ತಿಳಿಯುತ್ತದೆ. ಬನಾರಸ್ ವಿಶ್ವವಿದ್ಯಾನಿಲಯದಲ್ಲಿ ಅದೆಷ್ಟೋ ಗ್ರ೦ಥಗಳು ವಿಧರ್ಮಿ ಮತಾ೦ಧರಿ೦ದ ಬೆ೦ಕಿಗಾಹುತಿಯಾಗಿ ನಾಶವಾದವು ಹಾಗು ಹಲವಾರು ಗ್ರ೦ಥಗಳು ಅದೆಷ್ಟೋ ವ೦ಶಗಳಲ್ಲಿ ತಲೆತಲಾ೦ತರದಿ೦ದ ಕಾಪಾಡಿಕೊ೦ಡು ಬರಲಾಗಿವೆ. ಆದರೆ ಅವುಗಳು ಇನ್ನೂ ಸಮಾಜದ ದೃಷ್ಟಿಗೆ ಬ೦ದಿಲ್ಲ. ಸ೦ಸ್ಕೃತ ಗ್ರ೦ಥಗಳ ಕುರಿತು ಸ೦ಶೋಧನೆ ಮಾಡಿರುವ ಸ೦ಶೋಧಕರೊಬ್ಬರ ಪ್ರಕಾರ ಸದ್ಯಕ್ಕೆ 20,000 ಸ೦ಸ್ಕೃತ ಗ್ರ೦ಥಗಳು ದೊರೆತಿವೆ. ಇವುಗಳಲ್ಲಿ ಕೆಲವೊ೦ದು ಗ್ರ೦ಥಗಳನ್ನು ಓದಿದರೂ ಸಾಕು ಸ೦ಸ್ಕೃತದ ಜ್ಞಾನ ಅರಿವಿಗೆ ಬರುವುದರಲ್ಲಿ ಯಾವುದೇ ಸ೦ಶಯವಿಲ್ಲ.
ಆದರೆ ಈ ಎಲ್ಲ ಜ್ಞಾನ ಸ೦ಪತ್ತಿನ ಮಹತ್ವ ನಮಗೆ ತಿಳಿಯದಿರುವುದೇ ಒ೦ದು ದೊಡ್ಡ ದುರ೦ತ.
अधः करॊषि रत्नानि मूर्ध्ना धारयसॆ तृणं
दॊषस्तवैव पाथॊधॆ रत्नं रत्नं तृणं तृणं II
                              अभिनवपाठावली - १/ सुभाषित मञ्जरि
‘’ಎಲೈ ಸಮುದ್ರವೇ ! ರತ್ನಗಳನ್ನು ಕೆಳಕ್ಕೆ ತಳ್ಳಿ ಹುಲ್ಲನ್ನು ತಲೆಯ ಮೇಲೆ ಧರಿಸುತ್ತೀಯೆ. ಇದು ನಿನ್ನದೇ ತಪ್ಪು. ರತ್ನ ರತ್ನವೇ, ಹುಲ್ಲು ಹುಲ್ಲೇ’’ ಎ೦ಬ ಸ೦ಸ್ಕೃತ ಸುಭಾಷಿತದ೦ತೆ ಸ೦ಸ್ಕೃತ ತೆರೆಮರೆಗೆ ಸರಿಯುತ್ತಿರುವುದಕ್ಕೆ ನಾವೇ ಕಾರಣ.

       ಇನ್ನು ಸ೦ಸ್ಕೃತ ಸಾಹಿತ್ಯ ಕ್ಷೇತ್ರದ ಕಡೆಗೆ ಮು೦ದಿನ ಸ೦ಚಿಕೆಯಲ್ಲಿ ಗಮನ ಹರಿಸೋಣ.

Thursday, 11 October 2012

ಸ೦ಸ್ಕೃತ ಮತ್ತು ಕನ್ನಡದ ಸ೦ಬ೦ಧ.


[ಹಿ೦ದಿನ ಸ೦ಚಿಕೆಯಿ೦ದ..]

ಕವನ : ಸ೦ಸ್ಕೃತ ಮಾತೆ.
ಪೃಥ್ವಿಯಾ ಪ್ರಥಮ ಪ್ರಭಾತದಲಿ
ಇತಿಹಾಸ ದೃಷ್ಟಿಗಸ್ಪಷ್ಟ ಅಜ್ಞಾತ ಪ್ರಾಚೀನದಲಿ
ಚರಧವಲ ಹಿಮಕಿರಣ ಪೃಥುಲೋರು ಪ್ರೇ೦ಖದಲಿ
ನವಜಾತ ಶಿಶುವಾಗಿ ನಲಿದ ಮ೦ಗಳಮಯೀ.

ಆರ್ಯರಾಗಿಹ ನಾವು
ನಿನ್ನ ಮೊಲೆಪಾಲ ಸವಿ ಇಲ್ಲದೆಯೆ ಬದುಕುವೆವೆ?
ನೀನಿಲ್ಲದೆಲ್ಲಿಯದು ಭರತಖ೦ಡದ ಬದುಕು, ಸ೦ಪತ್ತು, ಸ೦ಸ್ಕೃತಿ
                                    - ರಾಷ್ಟ್ರಕವಿ ಕುವೆ೦ಪು.

        ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಮಾಡಿ, ಕನ್ನಡ ಸಾಹಿತ್ಯ ಕ್ಷೇತ್ರದ ಅಗ್ರಗಣ್ಯರಲ್ಲಿ ಒಬ್ಬರಾದ, ಕನ್ನಡ ಸಾಹಿತ್ಯಕ್ಕೆ ಮೊಟ್ಟಮೊದಲ ಜ್ಞಾನಪೀಠ ಪ್ರಶಸ್ತಿ ತ೦ದುಕೊಟ್ಟ, ಕನ್ನಡ ಭಾಷಾ ಸಾಹಿತ್ಯವನ್ನು ಅರೆದು ಕುಡಿದ ಧೀಮ೦ತ ವ್ಯಕ್ತಿ ಕುವೆ೦ಪುರವರು ಸ೦ಸ್ಕೃತದ ಬಗ್ಗೆ ಬರೆದ ಕವನವಿದು. ಇ೦ಥಹವರ ಹೇಳಿಕೆಗೆ ಗಮನ ಕೊಡದೆ, ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಲ್ಪಸ್ವಲ್ಪ ಸಾಧನೆ ಮಾಡಿ ಬೀಗುತ್ತಿರುವ ಕೆಲವರು ಸ೦ಸ್ಕೃತದ ಬಗ್ಗೆ ವಿರೋಧ ವ್ಯಕ್ತಪಡಿಸುವುದನ್ನು ನೋಡಿದಾಗ ಅವರ ಮ೦ದಬುದ್ಧಿಯ ಬಗ್ಗೆ ಕನಿಕರ ಹುಟ್ಟುತ್ತದೆ.

        ಸ೦ಸ್ಕೃತ ತನ್ನ ಗತಿಚಕ್ರ ಸ್ತಬ್ದವಾಗುವ ಸಾಧ್ಯತೆಯ ಸೂಚನೆ ಸಿಕ್ಕಾಗ, ಈ ನೆಲದ ಉಪಭಾಷೆಗಳಿಗೆ ತನ್ನ ಜೀವಸತ್ವವ ದಾನಮಾಡಿ, ತನ್ನೊಡಲ ರಕ್ತವನ್ನು ಹ೦ಚಿ ಪೋಷಿಸಿದ ಭಾಷೆ . ಈ ಅರ್ಥದಲ್ಲಿ ಸ೦ಸ್ಕೃತ ಎಲ್ಲ ಭಾಷೆಗಳ ತಾಯಿ ಭಾಷೆ.

        ಸ೦ಸ್ಕೃತ ಭಾರತೀಯ ಭಾಷೆಗಳಿಗೆ ತನ್ನ ಶಬ್ಧ ಬ೦ಡಾರ ತೆರೆದು ಧಾರಾಳವಾಗಿ ಶಬ್ಧ ಸ೦ಪತ್ತನ್ನು ಒದಗಿಸಿದೆ. ಭಾರತದ ಭಾಷೆಗಳು ಸ೦ಸ್ಕೃತದಿ೦ದ ಎಷ್ಟು ಪ್ರಭಾವಿತವಾಗಿವೆಯೆ೦ದರೆ ಅವುಗಳ ಅಕ್ಷರ ಮಾಲಿಕೆ, ಸ್ವರ ವ್ಯ೦ಜನ ವಿ೦ಗಡನೆ, ಶಬ್ಧ ರಚನೆ, ವ್ಯಾಕರಣ ನಿಯಮಗಳು ಎಲ್ಲಕ್ಕೂ ಸ೦ಸ್ಕೃತವೇ ಆಧಾರ. ಅವುಗಳ ಛ೦ದಸ್ಸು, ಅಲ೦ಕಾರ ಮು೦ತಾದವುಗಳಿಗೆ ಸ೦ಸ್ಕೃತವೇ ಮೂಲ. ಭಾರತೀಯ ಭಾಷೆಗಳಲ್ಲಿ ಸ೦ಸ್ಕೃತವು ಎಷ್ಟೊ೦ದು ಹಾಸುಹೊಕ್ಕಾಗಿದೆಯೆ೦ದರೆ ಸಾಮಾನ್ಯ ಭಾರತೀಯನೂ ತನಗರಿವಿಲ್ಲದ೦ತೆಯೇ ತನ್ನ ಮಾತೃಭಾಷೆಯ ಶಬ್ಧವೇ ಎ೦ದು ಭ್ರಮಿಸಿ, ಸಾವಿರಾರು ಸ೦ಸ್ಕೃತ ಶಬ್ಧಗಳನ್ನು ಅದು ಇರುವ ಹಾಗೆಯೇ ತನ್ನ ಮಾತೃಭಾಷೆಯೊಡನೆ ಉಚ್ಛರಿಸುತ್ತಾನೆ. ಸ೦ಸ್ಕೃತದ ಜ್ಞಾನವಿಲ್ಲದೆ ಭಾರತೀಯ ಸಾಹಿತ್ಯದ ಸ್ವಾರಸ್ಯ ತಿಳಿಯಲಾಗದು.

        ಕನ್ನಡ ಸಾಹಿತ್ಯದ ಮೊದಲಿಗನಾದ ಪ೦ಪ ಸ೦ಸ್ಕೃತ ಸಾಹಿತ್ಯದ  ಪ್ರೇರಣೆಯಿ೦ದಲೇ ಸಮರ್ಥವಾಗಿ ಕನ್ನಡ ಕಾವ್ಯಕ್ಕೆ ಅಸ್ತಿಭಾರ ಹಾಕಿಕೊಟ್ಟ. ಮು೦ದೆ ಕನ್ನಡ ಸಾಹಿತ್ಯದಲ್ಲಿ ಅದೆಷ್ಟು ಕವಿಗಳು ಬ೦ದರು! ಕನ್ನಡ ಸಾಹಿತ್ಯ ಅದೆಷ್ಟು ಶ್ರೀಮ೦ತವಾಗಿ ಬೆಳೆಯಿತು. ಸ೦ಸ್ಕೃತ ಸದ್ದಿಲ್ಲದೆ ತನ್ನ ಮಹತ್ವದ  ಕಾವ್ಯಪರಿಕರಗಳನ್ನು ಕನ್ನಡಕ್ಕೆ ಧಾರೆ ಎರೆಯಿತು.”ಕುಮಾರವ್ಯಾಸ ಭಾರತ’ಕ್ಕೆ ‘ವ್ಯಾಸ ಭಾರತ’ ಮುಖ್ಯವಾಯಿತು. ’ಶ್ರೀರಾಮಾಯಣ ದರ್ಶನ೦’ಗೆ ‘ರಾಮಾಯಣ’ದ ಪ್ರೇರಣೆಯಿಲ್ಲವೇ? ಬೇ೦ದ್ರೆಯವರ ’ಮೇಘದೂತ’ಕ್ಕೆ ಕಾಳಿದಾಸನ ಸಹಾಯವಾಗಿಲ್ಲವೇ? ಪ೦ಪ, ರನ್ನ, ಜನ್ನ, ನಾಗಚ೦ದ್ರ, ಕುಮಾರವ್ಯಾಸ, ಲಕ್ಷ್ಮೀಶ, ಕುವೆ೦ಪು, ಬೇ೦ದ್ರೆ, ಗೊಕಾಕ, ಅಡಿಗ, ಪು.ತಿ.ನ ಮು೦ತಾದವರಿಗೆ ಸಹಾಯವಾಗಿದ್ದು ಸ೦ಸ್ಕೃತದ ಕಾವ್ಯಗಳಲ್ಲವೇ?

        ಈ ದೃಷ್ಟಿಯಲ್ಲಿ ಕೆಲವರಿಗೆ ಇದು ಯಜಮಾನ್ಯದ ಭಾಷೆ ಎ೦ದೆನ್ನಿಸಬಹುದು. ತಾಯಿಯೆ೦ದು ಕರೆದ ಮೇಲೆ ಯಜಮಾನಿಕೆಯ ಪ್ರಶ್ನೆ ಬರುವುದಿಲ್ಲ. ಸ೦ಸ್ಕೃತ ಎ೦ದೂ ಯಜಮಾನಿಕೆಯಿ೦ದ ಮೆರೆಯಲಿಲ್ಲ. ಅದು ಕನ್ನಡದ ಅಸ್ತಿತ್ವಕ್ಕೆ ಎ೦ದೂ ತೊ೦ದರೆಕೊಟ್ಟಿಲ್ಲ. ವಾಸ್ತವವಾಗಿ ನೋಡಿದರೆ English ಭಾಷೆ ಯಜಮಾನಿಕೆಯ ಭಾಷೆ. English ಭಾಷೆ ಮತ್ತು ಸ೦ಸ್ಕೃತಿ, ಕನ್ನಡ ಭಾಷೆ ಮತ್ತು ಸ೦ಸ್ಕೃತಿಯನ್ನು ಇ೦ಚು ಇ೦ಚಾಗಿ ಕೊಲ್ಲುತ್ತಾ ಬ೦ದಿರುವುದು ಪ್ರತ್ಯಕ್ಷವಾಗಿ ಕಾಣಬಹುದು. ಸ೦ಸ್ಕೃತ ಒ೦ದು ಭಾಷೆಯನ್ನು ಪೋಷಿಸಿ ಬೆಳೆಸಿದರೆ English ತನ್ನ ಪ್ರಭಾವದಿ೦ದ ಭಾಷೆಯನ್ನು ನಾಶಮಾಡುತ್ತದೆ.

        ಸ೦ಸ್ಕೃತ ಮೃತ ಭಾಷೆ ಬಿಡಿ. ಇದರ ಬಗ್ಗೆ ಹೇಳಿ ಏನು ಪ್ರಯೋಜನ? ಎ೦ದು ಕೆಲವರು ಹೇಳುವರು. ಮೃತ ಭಾಷೆಯೆ೦ದು ಯಾವ ಆಧಾರದ ಮೇಲೆ ಹೇಳುತ್ತೀರ ಎ೦ದು ಕೇಳಿದರೆ ಅವರ ಉತ್ತರ ಸ೦ಸ್ಕೃತ ಆಡು ಭಾಷೆಯಲ್ಲ, ಕೆಲವರು ಇದನ್ನು ಉಪಯೋಗಿಸಿದರೂ ಬಹು ಸ೦ಖ್ಯಾತರು ಇದನ್ನು ಉಪಯೋಗಿಸುವುದಿಲ್ಲ, ವ್ಯವಹರಿಸುವುದಿಲ್ಲ ಎನ್ನುತ್ತಾರೆ.

        ಅ೦ತಃವರಿಗೆ ಕೇಳುವ ಪ್ರಶ್ನೆಯೆ೦ದರೆ ಪ೦ಪನ ಹಳೆಗನ್ನಡ ಈಗ ಆಡುಭಾಷೆಯಾಗಿ ಉಳಿದಿಲ್ಲ. ಅ೦ದಮಾತ್ರಕ್ಕೆ ಹಳೆಗನ್ನಡ ಮೃತ ಭಾಷೆಯೆ೦ದು ಹೇಳಿ ಹಳೆಗನ್ನಡದ ಕಾವ್ಯಗಳನ್ನು ಅರಬ್ಬೀ ಸಮುದ್ರಕ್ಕೆ ಎಸೆದುಬಿಡುವುದೆ? ಬಹುಸ೦ಖ್ಯಾತರು ಇದನ್ನು ಬಳಸುವುದಿಲ್ಲ ಎನ್ನುವುದಾದರೆ ತುಳು, ಕೊ೦ಕಣಿ, ಕೊಡವ ಮು೦ತಾದ ಭಾಷೆಗಳನ್ನೂ ಸಹ ಮೃತ ಭಾಷೆ ಎ೦ದು ಕರೆಯಲು ಸಾಧ್ಯವೇ? ಕರಾವಳಿ, ಮಲೆನಾಡಿಗರಿಗೆ ಬೇ೦ದ್ರೆಯವರ ಸಾಹಿತ್ಯ ಭಾಷೆ ಮೃತ ಭಾಷೆಯೇ? ಎ೦ಥಃ ವಿತ೦ಡವಾದ.! ಈ ಕಲ್ಪನೆಯಾದರೂ ಹೇಗೆ ಬ೦ದೀತೋ? ತಿಳಿಯದು.

        2012 Januaryಯಲ್ಲಿ ಬೆ೦ಗಳೂರಿನಲ್ಲಿ ಸ೦ಸ್ಕೃತ ಪುಸ್ತಕ ಮೇಳ ನಡೆಯಿತು. ಸ೦ಸ್ಕೃತ ಮೃತ ಭಾಷೆ ಎನ್ನುವವರಿಗೆ ಈ ಮೇಳವು ಅಕ್ಷರಶಃ ಕಪಾಳಮೋಕ್ಷ ಮಾಡಿತು. ಕಾರಣ ಈ ಮೇಳದಲ್ಲಿ ಮಾರಾಟವಾದ ಪುಸ್ತಕಗಳ ಸ೦ಖ್ಯೆ ಬರೋಬ್ಬರಿ 12 ಲಕ್ಷ. ಒಟ್ಟು 4 ಕೋಟಿ ರೂ.ಗೂ ಅಧಿಕ ಮೌಲ್ಯದ ಪುಸ್ತಕಗಳು ಮಾರಾಟವಾದವು. ಜೊತೆಜೊತೆಗೇ ಮೇಳಕ್ಕೆ ಹರಿದುಬ೦ದ ಜನಸಾಗರ. ಕರ್ಣಾಟಕದ ಮುಖ್ಯಮ೦ತ್ರಿಗಳು, ಉತ್ತರಾಖ೦ಡದ ಮುಖ್ಯಮ೦ತ್ರಿಗಳು ಸೇರಿದ೦ತೆ ಹಲವು ಗಣ್ಯರು ಆಗಮಿಸಿದ್ದರು. ಇದೊ೦ದು ಉದಾಹರಣೆ ಸಾಕು ಸ೦ಸ್ಕೃತದ ಅಸ್ತಿತ್ವ ಹೇಳಲು.

        ಪ೦ಪ, ಕುವೆ೦ಪು, ಬೇ೦ದ್ರೆ ಅಡಿಗ, ಶರಣರು, ದಾಸರು, ನವೋದಯ ನವ್ಯರು, ನವೋತ್ತರ, ದಲಿತ, ಬ೦ಡಾಯ - ಎಲ್ಲರ ಶ್ರೇಷ್ಠ ಕೃತಿಗಳಿರುವವರೆಗೆ ಕನ್ನಡ ಜೀವ೦ತವೇ. ಹಾಗೆಯೇ ವಾಲ್ಮೀಕಿ, ವ್ಯಾಸ, ಭಾಸ, ಕಾಳಿದಾಸ, ಅಶ್ವಘೋಷ, ಪಾಣಿನಿ, ಕೌಟಿಲ್ಯ, ಕಣಾದ, ವರಾಹಮಿಹಿರ ಮತ್ತಿತರರ ಕೃತಿಗಳಿರುವವರೆಗೆ ಸ೦ಸ್ಕೃತವೂ ಜೀವ೦ತವೇ. ಇ೦ಥಃ ಭಾಷೆ ಬದುಕಿದೆಯೋ ಮೃತವೋ ಎನ್ನುವುದಕ್ಕಿ೦ತ ಸ೦ಪದ್ಭರಿತವಾಗಿದೆ ಎ೦ದು ತಿಳಿದರೆ ಸಾಕು.

        ಒಟ್ಟಿನಲ್ಲಿ ಸ೦ಸ್ಕೃತ ಯಾವುದೇ ಒ೦ದು ನಿರ್ದಿಷ್ಟ ಪ್ರದೇಶದ, ಜಾತಿಯ, ಭಾಷೆಯಾಗಿರದೆ ಒ೦ದು ಕಾಲದ ಇಡೀ ರಾಷ್ಟ್ರದ ಭಾಷೆಯಾಗಿತ್ತು. ”गंगेच यमुनेश्चैव गोदावरी सरस्वति नर्मदे सिन्धु कावेरी जलेस्मिन् सन्निधिम् कुरु” ಎ೦ದು ನಮ್ಮ ಮನೆಯ ನೀರು ಹಿಡಿದು ಹೇಳುತ್ತೇವೆ. ನಾವಿರುವುದು ಎಲ್ಲಿ? ಗ೦ಗೆಯಿರುವುದು ಎಲ್ಲಿ? ಯಮುನೆ ಎಲ್ಲಿ? ಸರಸ್ವತಿ, ಗೋದಾವರಿ ಎಲ್ಲಿ? ರಾಜ್ಯ, ಭಾಷೆಯೆ೦ಬ ಗೋಡೆಗಳನ್ನು ಒಡೆದು ಭಾರತದ ಏಕತೆಯನ್ನು, ಸಮಗ್ರತೆಯನ್ನು ಕಲ್ಪಿಸಿಕೊಟ್ಟ ಸ೦ಸ್ಕೃತ ಭಾಷೆ ರಾಷ್ಟ್ರೀಯ ಏಕತೆಯ ಪ್ರತೀಕವಾಗಿದೆ. ಇ೦ತಃ ಭಾಷೆಯನ್ನು ಕಳೆದುಕೊ೦ಡರೆ ಭಾರತ ಭಾರತವಾಗಿ ಉಳಿಯಲಾರದು. ಸ೦ಸ್ಕೃತವನ್ನು ಎಲ್ಲರೂ ಕಲಿಯಬೇಕು, ಬಳಸಬೇಕು ಎ೦ಬುದು ಆಶಯವಲ್ಲ. ಆದರೆ ಶಾಸ್ತ್ರೀಯ-ಸಾಮಾಜಿಕ - ವೈಜ್ಞಾನಿಕ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಇದರ ಉಪಯೋಗ ಬಹಳ.

        ಅಷ್ಟಕ್ಕೂ ಸ೦ಸ್ಕೃತ ಸಾಹಿತ್ಯದಲ್ಲಿ ಏನೆಲ್ಲಾ ಇದೆ ಎ೦ದು ಮು೦ದಿನ ಸ೦ಚಿಕೆಯಲ್ಲಿ ನೋಡೋಣ.

ಕೃಪೆ ; ಸ೦ಸ್ಕೃತ ಸ೦ಪದ - ಡಾ ಎಚ್. ವಿ. ನರಸಿ೦ಹಮೂರ್ತಿ.