आनॊभद्रा: कृतवॊ यन्तु विश्वत:

ಮ೦ಗಳಮಯವಾದ ವಿಷಯಗಳು ಎಲ್ಲಿ೦ದ ಬ೦ದರೂ ಸ್ವೀಕರಿಸಬೇಕು.

Saturday, 23 July 2016

ಶೄoಗದ ಬೆನ್ನೇರುವಾಗ ಹಾರಿದ ಕಪ್ಪೆ.!!




      ಪ್ರತೀಬಾರಿ ಕುದುರೇ ಮುಖದ ತುತ್ತತುದಿ ತಲುಪಿ suicide pointನಂತಿರುವ ಬಂಡೆಯ ಮೇಲೆ ಕೂತು ಎದುರು ನೋಡಿದಾಗ, ಮೋಡಗಳ ಮಧ್ಯದಲ್ಲೊಂದು  ಅಣಬೆಯ ಹಾಗೆ ಧಿಡೀರನೆ ಎದ್ದು ನಿಂತಿರುವ ಮುಸುಕುj ಮುಸುಕಾದ ಆಕೃತಿಯೊಂದು ಕಾಣುತ್ತಲೇ ಇತ್ತು. 'ಅದೊಂದು ಬೆಟ್ಟ ಯಾವುದೋ ಏನೋ' ಎಂದು ಯಾವಾಗಲೂ ಕುತೂಹಲದಿಂದ ನೋಡುತ್ತಿದ್ದೆ. ಇದೇ ಅನುಭವ ಮತ್ತೊಮ್ಮೆ ಬಲ್ಲಾಳರಾಯನ ದುರ್ಗದ ಮೂಲಕ ಬಂಡಾಜೆ-ಅರ್ಬಿ ಜಲಪಾತದ ತುದಿಗೆ ಹೋದಾಗ ಆಯಿತು. ಅಲ್ಲಿಯೂ ಅದೇ ದೃಶ್ಯ. ಕುದುರೇಮುಖ ಶಿಖರಾಗ್ರದಲ್ಲಿ ಕುಳಿತಾಗ ಕಾಣಿಸಿಕೊಂಡ ಬೆಟ್ಟವೇ ಅದು. ಆದರೆ ಅದ್ಯಾವ ಬೆಟ್ಟವೆಂದು ತಿಳಿದುಕೊಳ್ಳುವ ಗೋಜಿಗೆ ಹೋಗಿರಲಿಲ್ಲ. ಮುಂದೊಂದು ದಿನ ಅಲ್ಲಿಗೆ ಹೋಗುವ ಅವಕಾಶವೂ ಒದಗಿಬಂತು.

"ಗಡಾಯಿಕಲ್ಲು"
ಇದು ಉಜಿರೆಯ ಹೊರವಲಯದಲ್ಲಿರುವ, ಕುದುರೇಮುಖ ರಾಷ್ಟ್ರೀಯ ಉದ್ಯಾನವನದ ಗಡಿಭಾಗದ ಒಂದು ಬೃಹದಾಕಾರದ ಶಿಲಾವೃತ ಗುಡ್ಡ. ಇದರ ಹೆಸರು ತೇಜಸ್ವಿಯವರ ಪುಸ್ತಕದಲ್ಲಿ ಓದಿದ್ದೆ. ಆದರೆ ಎಲ್ಲೂ ಹೆಚ್ಚು ವಿವರಣೆ ಇರಲಿಲ್ಲ. ಮುಂದೊಂದು ದಿನ ಕೆದಂಬಾಡಿ ಜತ್ತಪ್ಪ ರೈಗಳ ಪುಸ್ತಕದಲ್ಲಿ ವಿಸ್ತೃತ ವಿವರಣೆ ಸಿಕ್ಕಿತು. ಆಗಲೇ ಗಡಾಯಿಕಲ್ಲು ನೋಡುವ ಬಯಕೆ ಇತ್ತು.

ಗಡಾಯಿಕಲ್ಲು ರೂಪುಗೊಂಡ ವಿಚಿತ್ರ ಶೈಲಿ, ಹಾಗೂ ಅದರಲ್ಲಿ ವಾಸವಾಗಿರುವ ವಿಚಿತ್ರ ಜೀವಿ ನನಗೆ ಗಡಾಯಿಕಲ್ಲು ಮತ್ತೆ ಮತ್ತೆ  ನೆನಪಾಗುವುದಕ್ಕೆ ಕಾರಣ.

       ಸ್ವಾತಂತ್ರ್ಯಾಪೂರ್ವದಲ್ಲಿ ಇದು ಟಿಪ್ಪುವಿನ ಆಡಳಿತಕ್ಕೆ ಒಳಪಟ್ಟ ಪ್ರದೇಶ. ಅವನ ರಾಜ್ಯದ ಗಡಿಪ್ರದೇಶದ ಭಾಗವೇ ಆಗಿತ್ತು. ಆದ್ದರಿಂದ ಇಲ್ಲೊಂದು ಅವನ ಗಡಿನಾಡ ಕಾವಲು ಕಾಯುವ ಕೋಟೆಯಂತಹ ಸಣ್ಣ ಅವಶೇಷಗಳಿವೆ. ಹಾಗು ಇದಕ್ಕೆ ಅವನು ಜಮಾಲಾಬಾದ್ ಎಂದು ಮರುನಾಮಕರಣ ಮಾಡಿದ್ದ. ಆದರೆ ಅದಕ್ಕೂ ಮುಂಚೆಯೇ ಇತರೇ ರಾಜರು, ಪಾಳೇಗಾರರೂ ಸಹ ಈ ಪ್ರದೇಶದವನ್ನು ಆಳಿದ್ದರಿಂದ ಇದಕ್ಕೆ ಬೇರೆ ಬೇರೆ ಹೆಸರುಗಳೂ ಇವೆ. ಏನೇ ಆಗಲಿ ಟಿಪ್ಪುವಿನಿಂದ ಹಿಡಿದು ಯಾವುದೇ ರಾಜರಿಂದಲೂ ಈ ಸ್ಥಳಕ್ಕೆ ಸೌಂದರ್ಯ ದೊರೆತಿದ್ದಲ್ಲ ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ಇದಕ್ಕೆ ಇದರ ಸ್ಥಳೀಯ ಹೆಸರನಲ್ಲಿಯೇ ಗುರುತಿಸುವುದು ಸೂಕ್ತವೆನಿಸುವುದು.

      ಇದನ್ನು Google Search ಮಾಡಿದರೆ ಇದರ ಚಿತ್ರಗಳನೇಕವು ಸಿಗುತ್ತವೆ. ಆದರೆ ನಿಜಕ್ಕೂ ಆ ಚಿತ್ರಗಳು ನೋಡುಗನಿಗೆ  ಮಾತನ್ನಾಡಿಸುವುದಿಲ್ಲ. ಗಡಾಯಿಕಲ್ಲಿನ ಅವ್ಯಕ್ತ ಮಾತುಗಳಿಗೆ ಕಿವಿಗೊಡಬೇಕಾದರೆ ಗಡಾಯಿಕಲ್ಲಿಗೇ ಹೋಗಬೇಕು. "ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ" ಅನ್ನುವ ಮಾತು ಎಷ್ಟು ಸತ್ಯ ಎನ್ನುವುದು ಅಲ್ಲಿ ಹೋಗಿ ನೋಡಿದಾಗ ಮಾತ್ರ ತಿಳಿಯುವುದು. ಆ ನಾಣ್ಣುಡಿಯ ಸಾಮಾನ್ಯ ಅರ್ಥ ಕಲ್ಲು ಮುಳ್ಳುಗಳು ಹತ್ತಿರ ಹೋಗಿ ನೋಡಿದಾಗ ಮಾತ್ರ ಕಾಣುವುದು ಎಂದಾದರೆ, ಇಲ್ಲಿ "ದೂರದಿಂದ ಬೆಟ್ಟವನ್ನು ನೋಡಿದರೆ ಯಾವುದೇ ಭಾವನೆ ಪ್ರಚೋದಿಸದ ಜಡತ್ವ ಮನಸ್ಥಿತಿ, ಹತ್ತಿರದಿಂದ ನೋಡಿದಾಗ ಮಾತ್ರಾ ನವೀನ ದೃಶ್ಯವೊಂದನ್ನು ತೋರಿಸುತ್ತದೆ" ಎಂದು ಅರ್ಥೈಸಬಹುದು. ಅಲ್ಲಿನ ಸೌಂದರ್ಯ ಆಸ್ವಾದಿಸಲು ಅಲ್ಲಿಗೆ ಹೋಗಿಯೇ ನೋಡಬೇಕು. ಯಾವ ಕ್ಯಾಮರಾ ಕಣ್ಣಿಗೂ ತನ್ನ ಪೂರ್ತಿ ಸೌಂದರ್ಯವನ್ನು ತೊರಿಸದ, ಎಷ್ಟೇ ಅಕ್ಷರಗಳ ಗೀಚಿದರೂ ತನ್ನೊಡಲ ಆಕರ್ಷಣೆಯ ಅನುಭಾವ ಬಿಟ್ಟುಕೊಡದ ಜಾಗವದು.

      ಜೋರು ಮಳೆಗಾಲದಲ್ಲಿ ಇಲ್ಲಿಗೆ ಪ್ರವೇಶ ನಿರ್ಬಂಧವಿರುವುದರಿಂದ ಮಳೆಗಾಲದ ಇದರ ಚೆಲುವು ನೋಡಲಾಗದು. ಮೊದಲೇ ಘಟ್ಟದ ಕೆಳಗಿನ ಪ್ರದೇಶ. ಜೊತೆಗೆ ಶಿಲಾವೃತ ಬೆಟ್ಟವಾದ್ದರಿಂದ ಉರಿಬೇಸಿಗೆಯಲ್ಲಿ ಹತ್ತಿರ ಹೋಗುವುದೂ ಹಲವರಿಗೆ ದುಃಸ್ಥರ. ಆದರೆ ಆಗಸ್ಟ್  ನಂತರ ವೀಕ್ಷಿಸಬಹುದಾದ ಸ್ಥಳಗಳಲ್ಲಿ ಇದಕ್ಕೆ ಮೊದಲ ಪ್ರಾಶಸ್ತ್ಯ ನೀಡಬಹುದು. ಮಳೆಗಾಲ ಮುಗಿದ ನಂತರ ಹೋಗುವುದಾದರೆ ಗುಡ್ಡದ ಮೇಲಿನಿಂದ ಹರಿದು ಬಂದು, ಬಂಡೆಯ ಮೇಲೇ ಕೆತ್ತಿದ ,ಪಾಚಿ ಕಟ್ಟಿದ, ಮೆಟ್ಟಿಲುಗಳ ಮೇಲೆ ಹರಿದುಬರುವ ನೀರು ನಿಜಕ್ಕೂ ಚಾರಣಿಗನಿಗೆ ಸವಾಲೆಸೆಯುತ್ತವೆ. ಇಲ್ಲಿ ಸ್ವಲ್ಪ ಎಡವಿದರೂ ಅಂಗಾಂಗಗಳ ರಿಪೇರಿ ಮಾಡುವ ಗ್ಯಾರೇಜ್ ಹುಡುಕಿಕೊಂಡು ಹೋಗಬೇಕಾಗಬಹುದು. ಒಮ್ಮೆ ಇದನ್ನೆಲ್ಲಾ ದಾಟಿ ಮೇಲೇರಿ ತುತ್ತತುದಿಯ ತಲುಪಿದರೆ ಒಂದುಬದಿಯಲ್ಲಿ ದೂರದ ಕಡಲತೀರದವರೆಗೆ ಹಾಗು ಮತ್ತೊಂದು ಬದಿಯಲ್ಲಿ ಕುದುರೇಮುಖದ ಬೆಟ್ಟಗಳ  ತುತ್ತತುದಿಯ ಅಂಚಿನವರೆಗೂ ನೋಡಬಹುದಾದ ಅವಕಾಶ ನಮ್ಮದಾಗುತ್ತದೆ. ಈ ವಿಹಂಗಮ ಪಕ್ಷಿನೋಟದ ವರ್ಣನೆ ಪದಗಳಲ್ಲಿ ಕೂಡಿಹಾಕಲು ಆಗದು. ಆಗಸದಲ್ಲಿ ನಿಂತಂತಹ ಭಾವ ಒಂದೆಡೆ ಮೂಡಿದರೆ, ನನ್ನ ತಲುಪಿದರೆ ಇನ್ನೂ ಉತ್ತುಂಗದ ಹಂತ ಮುಟ್ಟಬಹುದೆಂಬ ಭಾವನೆ ಮೂಡಿಸುವ,  ದೃಗ್ಗೋಚರವಾಗುವ ಕುದುರೇಮುಖ  ಇನ್ನೊಂದೆಡೆ. ಅಲ್ಲಿಗೆ ಹೋದಾಗಲೇ ನನಗೆ ತಿಳಿದದ್ದು ಇದೇ ಗುಡ್ಡವೇ ಕುದುರೇಮುಖದಿಂದ, ಬಂಡಾಜೆ ಅರ್ಬಿ ಜಲಪಾತದ ತುದಿಯಿಂದ ಕಾಣುತ್ತಿದ್ದುದು ಎಂದು.

       ಅಂದಾಜು 50 ಎಕರೆ ಒಳಗಿನ ವಿಸ್ತೀರ್ಣವಿರಬಹುದಾದ ಈ ಜಾಗ ನಿಜಕ್ಕೂ ಪ್ರಕೃತಿಯ ವಿಸ್ಮಯ ಕೊಡುಗೆಗಳಲ್ಲೊಂದು. ನನ್ನ ಗಮನ ಆಕರ್ಷಿಸಿದ ಇಲ್ಲಿಯ ಮತ್ತೊಂದು ಅಂಶವೆಂದರೆ ತನ್ನ ದೇಹಕ್ಕಿಂತಲೂ ಉದ್ದವಾದ ಬಾಲ ಹೊಂದಿರುವ ಹಾರುವ ರೀತಿಯಲ್ಲಿ ಜಿಗಿಯುವ ಕಪ್ಪೆ.!!
ಪೂರ್ಣಚಂದ್ರ ತೇಜಸ್ವಿಯವರ 'ಕರ್ವಾಲೋ' ಪುಸ್ತಕದಲ್ಲಿ ಹಾರುವ ಓತಿಯ ಬಗ್ಗೆ ಓದಿದ್ದೆ. ಅದರ ಬಗ್ಗೆ ಕೆಲ ವಿಡಿಯೋಗಳನ್ನೂ ನೋಡಿದ್ದೆ. ಆದರೆ ಅದೇ ರೀತಿ ಉದ್ದ ಬಾಲವಿರುವ, ರೆಕ್ಕೆಯ ಹಾಗೆ ತನ್ನ ದೇಹದ ಪಕ್ಕೆಗಳನ್ನು ಅಗಲಿಸಿ ಜಿಗಿಯುವ ಕಪ್ಪೆಯು ನನ್ನ ಕಲ್ಪನೆಯ ಎಲ್ಲೆ ಮೀರಿದ್ದು. ಅತ್ಯಂತ ಪುಟ್ಟ ಗಾತ್ರದ, ತನ್ನ ದೇಹಕ್ಕಿಂತಲೂ ಉದ್ದವಾದ ಬಾಲ ಹೊಂದಿರುವ ಇವುಗಳು, ಪಾಚೀಕಟ್ಟಿದ ಕಲ್ಲುಗಳ ಬಣ್ಣವೇ ಹೊಲುತ್ತವೆ. ಪಕ್ಕೆಯ ಬದಿಗಳಲ್ಲಿ ರೆಕ್ಕೆಯಂತೆ ಚರ್ಮದ ಪದರ ಹೊಂದಿರುವ ಈ ಕಪ್ಪೆಗಳು ಇಲ್ಲಿನ ಬಂಡೆಗಳಮೇಲೆಲ್ಲಾ ಕಾಣಸಿಗುತ್ತವೆ.  ಮೊದಲು ಇವುಗಳನ್ನು ನೋಡಿದಾಗ ಆಶ್ಚರ್ಯವಾಯಿತು.  ಕೊಡಚಾದ್ರಿ-ಗೇರುಸೊಪ್ಪ-ಶೃಂಗೇರಿ - ಆಗುಂಬೆ - ಕಳಸ ಈ ಭಾಗದಲ್ಲೆಲ್ಲೂ ಕಂಡುಬರದ ಅಥವಾ ಹುಡುಕಿದ ತಕ್ಷಣ ಕಾಣಸಿಗದ ಈ ಜೀವಿಗಳು ಅಲ್ಲಿನ ಬಂಡೆಗಳ ಮೆಟ್ಟಿಲುಗಳ ಮೇಲೆ ಯಥೇಚ್ಛವಾಗಿ ಕಾಣಿಸಿಕೊಳ್ಳುತ್ತವೆ. ಇದನ್ನು ನೋಡಿದಾಗ ಒಮ್ಮೆ ತೇಜಸ್ವಿಯವರ ಹಾರುವ ಓತಿಯೇ ಮನಃಪಟಲದಲ್ಲಿ ಒಮ್ಮೆ ಮಿಂಚಿಹೋದಂತಾಗುವುದು. ಇದರ ಬಗ್ಗೆ ತಿಳಿಯದ ಪಾಮರನಿಗೆ ಇದು ಯಾವುದೋ ಇಂಗ್ಲೀಷ್ ಮೂವಿಗಳಲ್ಲಿ ಸೃಷ್ಟಿಸಿದ ಹೊಸ ಜೀವಿಯ ಹಾಗೆ ಕಂಡುಬರುವುದು. ಇವುಗಳ ಬಣ್ಣವೂ ಬಂಡೆಗಳ ಬಣ್ಣದಂತಿದ್ದರಿಂದ ಅವುಗಳು ನನ್ನ ಕಣ್ಣಿಗೆ ಬೀಳುವ ಮೊದಲು ಅದೆಷ್ಟು ಕಪ್ಪೆಗಳು ಕಾಲ್ಗಳ ಕೆಳಗೆ ಸಮಾಧಿಯಾದವೋ! ಯೋಚಿಸಿದರೆ ಅಯ್ಯೋ ಎನಿಸುತ್ತದೆ. ನನ್ನ ಪಾದಗಳನ್ನು ಕಂಡು ಅವುಗಳು ತಮ್ಮ ಬುದ್ಧಿಗೆ ಕೆಲಸ ಕೊಟ್ಟಿದ್ದರೆ ಸಾಕು.

      ಈ ಸಂದರ್ಭದಲ್ಲಿ ದಾರ್ಶನಿಕರೊಬ್ಬರು ಹೇಳಿದ ಮಾತುಗಳು ನೆನಪಾಯಿತು. ಯತಿಗಳು ಮಾತ್ರ ಚಾತುರ್ಮಾಸ್ಯ ಆಚರಣೆ ಮಾಡುವುದಲ್ಲ. ಪ್ರತಿಯೊಬ್ಬನೂ ಈ ಆಚರಣೆ  ಮಾಡಿದರೆ ಒಳಿತು. ಚಾತುರ್ಮಾಸ್ಯದ ಉದ್ದಿಶ್ಯವೇ ಇತರ ಜೀವಿಗಳಿಗೆ ತೊಂದರೆಯುಂಟುಮಾಡದೇ ಬದುಕುವುದು ಎಂದು. ಈ ಸಮಯದಲ್ಲಿ  ಸೃಷ್ಟಿಯ ಬಹುಪಾಲು ಜೀವಜಂತುಗಳು ತಮ್ಮ ವಂಶಾಭಿವೃದ್ಧಿ ಪ್ರಕ್ರಿಯೆಯಲ್ಲಿ ತೊಡಗಿರುತ್ತವೆ. ಕಂಡೋ ಕಾಣದೋ ಅವುಗಳ ತುಳಿದೋ, ಮೊಟ್ಟೆ ಒಡೆದೋ ಮರಿಗಳನ್ನು ತುಳಿದೋ ಅವುಗಳ ಸಂತತಿ ನಾಶಕ್ಕೆ ಕಾರಣವಾಗಬಾರದು. ನಾವೂ ಬದುಕಬೇಕು, ಅವುಗಳನ್ನೂ ಬದುಕಲು ಬಿಡಬೇಕು. ಅವುಗಳ ಬೆಳವಣಿಗೆಗೆ ಪೂರಕವಾದ ಈ ಸಮಯದಲ್ಲಿ ನಮ್ಮಿಂದ ಜೀವಿಗಳಿಗೆ ಯಾವುದೇ ತೊಂದರೆಯಾಗದಿರಲು ನಾಲ್ಕು ತಿಂಗಳು ಒಂದೇ ಕಡೆ ನೆಲಸಬೇಕು. ಹೀಗೆ ಜೀವಿಗಳ  ಬೆಳವಣಿಗೆಗೆ ಅಡಚಣೆಯಾಗದ ಸಮಷ್ಟಿ ಚಿಂತನೆ ಚಾತುರ್ಮಾಸದ ಆಚರಣೆಯಲ್ಲಿದೆ ಎಂದಿದ್ದರು. ಅದು ಅಕ್ಷರಷಃ ಸತ್ಯ. ಪ್ರವಾಸಿಗರ ಕಾಲಡಿಯಲ್ಲಿ ಸಿಲುಕಿ ಅದೆಷ್ಟು ಕಪ್ಪೆಗಳು ಇದುವರೆಗೆ ನಾಶವಾಗಿದ್ದಾವೋ ಲೆಕ್ಕ ಇಟ್ಟವರ್ಯಾರು.!!? ಕೊನೆಯ ಪಕ್ಷ ಸಂಬಂಧಪಟ್ಟ ಇಲಾಖೆಯವರಾದರೂ ಪ್ರವೇಶದ ದಾರಿಯಲ್ಲಿ ಈ ವಿಸ್ಮಯ ಜೀವಿಗಳ ಬಗೆಗೆ ಸೂಚನಾ ಫಲಕವನ್ನಾದರೂ ಹಾಕಬಹುದಿತ್ತು.

      ಏನೇ ಆಗಲಿ ಗಡಾಯಿಕಲ್ಲು ತನ್ನ ಸೌಂದರ್ಯವನ್ನಷ್ಟೇ ತನ್ನಲ್ಲಿ ಹುದುಗಿಸಿಟ್ಟುಕೊಳ್ಳದೆ, ಜೀವ ಜಗತ್ತಿನ ಅಪರೂಪದ, ವಿನಾಶದ ಅಂಚಿನಲ್ಲಿರುವ ಜೀವಿಗಳಿಗೂ ತನ್ನಲ್ಲಿ ಆಶ್ರಯ ನೀಡಿದೆ. ಇಂತಹ ಅಪರೂಪದ ನಿರುಪದ್ರವಿ ಜೀವಿಗಳು ಈ ಮಾಯಾಲೋಕದ ಕಾಲಪ್ರವಾಹದಲ್ಲಿ ಕೊಚ್ಚಿಹೋಗದಿದ್ದರೆ ಸಾಕು ಎನ್ನುವುದೇ ಕೊನೆಯ ಆಶಯ.

Friday, 15 January 2016

ಸಂಕ್ರಾಂತಿ ಕೇವಲ ಆಚರಣೆಯಲ್ಲ! ಅದು ಬದಲಾವಣೆಯ ಸಂಧಿಕಾಲ...

      ಸಂಕ್ರಾಂತಿ ಶಬ್ದವನ್ನು ನಾವು ಸರಿಯಾಗಿ ಗಮನಿಸಿರುವುದೇ ಇಲ್ಲ. ಕ್ರಾಂತಿ ಎನ್ನುವ ಪದ ಅದರಲ್ಲಿ ಹುದುಗಿದೆ. ಕ್ರಾಂತಿ ಎಂದರೆ ಬದಲಾವಣೆ ಎಂದರ್ಥ. ಸಂಕ್ರಾಂತಿ ಹಬ್ಬವನ್ನು ಸೂರ್ಯ ಮಕರ ರಾಶಿಯನ್ನು ಪ್ರವೇಶಿಸಿದಾಗ ಆಚರಿಸುವ ಹಬ್ಬವೆಂದಷ್ಟೇ ಕೆಲವರಿಗೆ ತಿಳಿದಿದೆ. ಆದರೆ ಅದರಿಂದ ಯಾವ ಕ್ರಾಂತಿಯಾಯಿತು ಎಂದು ಯಾರೂ ಪ್ರಶ್ನಿಸುವ ಗೋಜಿಗೇ ಹೋಗುವುದಿಲ್ಲ. ಸೂರ್ಯ ಸುಮಾರು 30 ದಿನಗಳಿಗೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೋಗುತ್ತಾನೆ, ಆದರೆ ಈ ರಾಶಿಗಳ ಬದಲಾವಣೆಯನ್ನು ಹಬ್ಬವೆಂದು ಆಚರಿಸುವುದಿಲ್ಲ.

      ಸೂರ್ಯನ ಕರ್ಕ ರಾಶಿ ಪ್ರವೇಶ ಮತ್ತು ಮಕರ ರಾಶಿ ಪ್ರವೇಶಕ್ಕೆ ವಿಶೇಷ ಮಹತ್ವ ಕೊಟ್ಟರೂ ವಿಜೃಂಭಣೆಯಿಂದ ಹಬ್ಬವನ್ನಾಚರಿಸುವುದು ಮಕರ ಸಂಕ್ರಮಣಕ್ಕೇ. ಕಾರಣ ಹಲವಾರಿವೆ. ಇಂದಿನಿಂದ ಸೂರ್ಯ ಜಾಸ್ತಿ ಬೆಳಗುತ್ತಾನೆ. ಸಂಕ್ರಾಂತಿಯ ನಂತರದ ಬದಲಾವಣೆ ಕೇವಲ ಖಗೋಳದಲ್ಲಿ ಮಾತ್ರವಲ್ಲ ಅದು ಭೂಮಿಯಲ್ಲೇ ಹೆಚ್ಚು. ನಾಲ್ಕು ಗೋಡೆಗಳ ಮಧ್ಯೆ ಕೆಲಸಮಾಡುವ ಹಾಗು ನಾಲ್ಕು ಗೋಡೆಗಳಿಂದ ಹೊರಗೇ ಬಾರದೆ ಬದುಕುವವರಿಗೆ ಈ ಬದಲಾವಣೆ ಅರಿವಿಗೆ ಬಾರದು.

      ಸನಾತನ ಧರ್ಮದ ಹಬ್ಬಗಳು ಸುಮ್ಮನೆ ಯಾವುದೋ ಒಂದು ಕ್ಯಾಲೆಂಡರ್ ದಿನಾಂಕದಂದು ಆಚರಿಸುವ ಆಚರಣೆಯಾಗದೆ ವೈಜ್ಞಾನಿಕ ಹಾಗು ಪ್ರಾಕೃತಿಕ ನಂಟನ್ನು ಹೊಂದಿರುತ್ತವೆ ಎಂಬುದಕ್ಕೆ ಸಾಕ್ಷಿ ರೂಪವಾಗಿ ಸಂಕ್ರಾಂತಿ ನಿಲ್ಲುತ್ತದೆ.

      ಭೂಮಿಯನ್ನು ಜಡವಾಗಿ ಕಾಣುತ್ತಿದ್ದ ಪ್ರಪಂಚಕ್ಕೆ ತಾಯಿಯಂತೆ ಭಾವನಾತ್ಮಕವಾಗಿ ನೋಡಲು ಕಲಿಸಿದ್ದು ಭಾರತೀಯರು. ಭೂಮಿಯನ್ನು ತಾಯಿಯೆಂಬ ಪೂಜನೀಯ ಭಾವದಿಂದ ಕಾಣುವ ದೃಷ್ಟಿ ಇಲ್ಲಿಯ ಸಂಸ್ಕೃತಿಯಲ್ಲಿದೆ. ಅದರಲ್ಲಿಯೂ ಸಂಕ್ರಾಂತಿಯ ವಿಷಯಕ್ಕೆ ಬಂದಾಗ ನನಗೊಬ್ಬ ಚಿಂತಕರು ಹೇಳಿದ ಮಾತುಗಳು ಈಗಲೂ ಕಿವಿಯಲ್ಲಿ ಗುನುಗುತ್ತಿವೆ.

      "ಭೂಮಿ ನಮ್ಮ ತಾಯಿ ಅಂದಮೇಲೆ ಅವಳಿಗೂ ನಮ್ಮ ಹಾಗೆಯೇ ಜೀವವಿರಬೇಕಲ್ಲಾ. ನಮ್ಮ ಹಾಗೆಯೇ ಅವಳೂ ಕೂಡ ಉಸಿರಾಡುತ್ತಾಳೆ. ನಮಗೆ ಹೇಗೆ ಉಚ್ಛ್ವಾಸ ನಿಃಶ್ವಾಸಗಳಿವೆಯೋ ಅವಳಿಗೂ ಕೂಡ ಉಚ್ಛ್ವಾಸ ನಿಃಶ್ವಾಸಗಳಿವೆ. ಅದೇ ಉತ್ತರಾಯಣ & ದಕ್ಷಿಣಾಯಣ. ಅರ್ಥಾತ್ ಮಕರ ಸಂಕ್ರಾಂತಿ & ಕರ್ಕ ಸಂಕ್ರಾಂತಿ. ಉತ್ತರಾಯಣ ಅರ್ಥಾತ್ ಏರುವುದು ಉಚ್ಛ್ವಾಸ ಹಾಗು ದಕ್ಷಿಣಾಯಣ ಅರ್ಥಾತ್ ಇಳಿಯುವುದು  ನಿಃಶ್ವಾಸ."

      ಈ ವಿವರಣೆ ಕೇವಲ ಭಾವನಾತ್ಮಕವೆಂದು ಅನ್ನಿಸುವುದು.ಆದರೆ ಇದರ ಹಿಂದಿರುವ ವೈಜ್ಞಾನಿಕ ಸಂಭವತೆಯನ್ನು ತರ್ಕಿಸಿದಾಗ ಮಾತ್ರ ತಿಳಿಯುವುದು. ಉಸಿರನ್ನು ಎಳೆದುಕೊಂಡಾಗ ರಕ್ತ ಸಂಚಲನೆಯ ಮೂಲಕ ಶಕ್ತಿ ಪ್ರತಿಯೊಂದು ಜೀವಕೋಶಗಳಿಗೂ ತಲುಪುತ್ತದೆ. ಹಾಗೆಯೇ ಉಸಿರನ್ನು ಹೊರಬಿಟ್ಟಾಗ ಶಕ್ತಿಯು ಕುಂದುತ್ತದೆ. ಇದು ವಿಜ್ಞಾನದ ಪಾಠ. ಇದೇ ಉಸಿರಾಟವನ್ನು ಭೂಮಿಗೆ ಹೋಲಿಸಿ. ಭೂಮಿಯ ಜೀವಕೋಶಗಳಾದ ಅರಣ್ಯ,ಸಸ್ಯ ಜಗತ್ತು ಹೂವು ಅರಳುವ ಮೂಲಕ, ಕಾಯಿ,ಹಣ್ಣುಗಳು ಬೆಳೆಯುವ ಮೂಲಕ ಭೂಮಿ ತನ್ನ ಜೀವಂತಿಕೆಯನ್ನು ಉತ್ತರಾಯಣ ಅರ್ಥಾತ್ ಜನವರಿ ತಿಂಗಳ ನಂತರ ತೊರ್ಪಡಿಸಲು ಪ್ರಾರಂಭಿಸುತ್ತದೆ. ಭೂಮಿಯ ಮೇಲಿನ ಸಕಲ ಜೀವಿಗಳೂ ಸರಪಳಿಯಲ್ಲಿ ಒಂದಕ್ಕೊಂದು  ಅವಲಂಬಿತವಾಗಿವೆ ಎನ್ನುವುದೂ ವಿಜ್ಞಾನ ಕಲಿಸಿದ ಪಾಠವೇ. ಈ ಎಲ್ಲ ಜೀವಿಗಳು  ಸಸ್ಯಜಗತ್ತನ್ನು ಅವಲಂಬಿಸಿರುವುದರಿಂದ ಸಂಕ್ರಾತಿಯ ಪರಿಣಾಮ ಜೀವಿಗಳ ಮೇಲೂ ಆಗುವುದು ಎನ್ನುವುದು ಸತ್ಯವೇ ಆಯಿತು. ಅಂದರೆ ಭೂಮಿಯ ಮೇಲೆ ಶಕ್ತಿ ಸಂಚಯವಾಗುವುದು ಈ ಸಮಯದಲ್ಲೇ ಎಂದಾದಮೇಲೆ ಅದು ಉಚ್ಛ್ವಾಸವಾಯಿತಲ್ಲವೇ.

      ಇನ್ನು ಉತ್ತರಾಯಣ ಪ್ರಾರಂಭವಾಗುವ ಹಿಂದಿನ ಸಮಯ ಅಂದರೆ ನವೆಂಬರ್ ಡಿಸೆಂಬರ್ ತಿಂಗಳಲ್ಲಿ ನೋಡಿದರೆ ಪ್ರಕೃತಿ ಬಂಜೆಯಂತೆ ಕಾಣುವುದು. ಎಲ್ಲೆಲ್ಲೂ ಎಲೆ ಉದುರಿರುವ ಬೋಳು ಗಿಡಮರಗಳು, ಹೂವು ಹಣ್ಣುಗಳಿಲ್ಲದೆ ನಿಸ್ಸತ್ವವಿಲ್ಲದ ಸಸ್ಯರಾಶಿಯನ್ನು ನೋಡಿದರೆ ತನ್ನೆಲ್ಲಾ ಜೀವವನ್ನು ಕಳೆದುಕೊಂಡಿದೆಯೇನೋ ಅನ್ನಿಸುವುದು. ಇದೇ ಭೂಮಿಯ ನಿಃಶ್ವಾಸವಲ್ಲವೇ. ಈ ಸಮಯದಲ್ಲಿ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡಿರುತ್ತದೆ. ಭೂಮಿಯ ಫಲವತ್ತತೆ ಕಡಿಮೆಯಾದಾಗ ಎಳ್ಳನ್ನು ಬಿತ್ತಿ ಫಲವತ್ತತೆ ಹೆಚ್ಚಿಸುವ ಕ್ರಮ ಭಾರತದ ಕೃಷಿ ಪದ್ಧತಿಯಲ್ಲಿದೆ. ಇದೇ ಕಾರಣಕ್ಕಾಗಿಯೇ ಬೆಳೆದ ಎಳ್ಳನ್ನು ಸಂಕ್ರಾಂತಿಯ ದಿನದಂದು ಬಳಸುವುದರಿಂದ ಭೂಮಿಯ ಫಲವತ್ತತೆಯೂ ಹೆಚ್ಚಾಯಿತು, ಎಳ್ಳನ್ನು ತಿಂದು ದೇಹವೂ ಪುಷ್ಟಿಯಾಯಿತು. ಅಂತೂ ಸಂಕ್ರಾಂತಿ ಪ್ರಾಕೃತಿಕವಾಗಿ ಕ್ರಾಂತಿಯ ಆರಂಭದ ದಿನವಾಗಿ ನಿಲ್ಲುವುದು.

Sunday, 1 November 2015

ಹೋರಾಟದ ಇನ್ನೊಂದು ಮುಖ..

       ಕಾಲವೊಂದಿತ್ತು....... ದಿನ ಬೆಳಗಾಗುವುದರೊಳಗೆ ಪ್ಲೇಗ್ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡುತ್ತಿತ್ತು. ಸಾಂಕ್ರಾಮಿಕ ರೋಗಗಳೇ ಹಾಗೆ, ಬಹಳ ವೇಗವಾಗಿ ಹರಡುತ್ತವೆ. ಪ್ಲೇಗಿಗೇನೋ ಔಷಧಿ ಕಂಡುಹಿಡಿದರು. ಆದರೆ ಈಗ ಮತ್ತೊಂದು ರೋಗ ಅತ್ಯಂತ ವೇಗವಾಗಿ ಹರಡುತ್ತಿದೆ. ಅದಕ್ಕೆ ಯಾವಾಗ ಮದ್ದು ದೊರೆಯುವುದೋ ಕಾದುನೋಡಬೇಕು. ನಾ ಹೇಳಹೊರಟಿರುವುದು ಪ್ರಶಸ್ತಿ ವಾಪಸು ನೀಡುವ ರೋಗ ಹರಡುತ್ತಿದೆಯಲ್ಲಾ ಅದರ ಬಗೆಗೆ. ವ್ಯತ್ಯಾಸ ಇಷ್ಟೇ, ಪ್ಲೇಗ್ ದೈಹಿಕರೋಗವಾದರೆ ಇದು ಮಾನಸಿಕರೋಗ. ಒಬ್ಬರಾದಮೇಲೊಬ್ಬರು ತಮ್ತಮ್ಮ ಪ್ರಶಸ್ತಿಗಳನ್ನು ಹಿಂದಿರುಗಿಸುತ್ತಿರುವುದು ಪ್ರತಿನಿತ್ಯದ ಸುದ್ದಿ.

       ಮೊದಮೊದಲು ಇವರ ಈ ಹೋರಾಟದ ಛಾಪನ್ನು ನೋಡಿ ಏನೋ ಬಲವಾದ ಕಾರಣಗಳಿರಬಹುದೆಂದೇ ತಿಳಿದಿದ್ದೆ. ಆದರೆ ನಂತರ ಇವರ ಹೊರಟದ ಹೊಂದಿರುವ ಸತ್ಯ ಮತ್ತು ಇವರ ನೈತಿಕತೆ ತಿಳಿಯಿತು. ಒಂದು ವರ್ಷದಿಂದ ಈಚೆಗೆ ಈ ದೇಶದಲ್ಲಿ ಮಾನವತೆಯೇ ಮಾಯವಾಗುತ್ತಿದೆ ಎಂದು ಬಿಂಬಿಸಲು ಹೆಣಗಾಡುತ್ತಿರುವ ಇವರು ಧರ್ಮ ಅಸಹಿಷ್ಣುತೆ, ಕೋಮುದ್ವೇಷ, ಅಭಿಪ್ರಾಯ ಸ್ವಾತಂತ್ರ್ಯದ ಕಗ್ಗೊಲೆ ಇನ್ನಿತರೇ ಏನೇನೋ ಪದಗುಚ್ಛಗಳನ್ನು ಪುಂಖಾನುಪುಂಖವಾಗಿ ಹೇಳಲಾರಂಭಿಸಿದ್ದಾರೆ. ಆದರೆ ಇವೆಲ್ಲವೂ ಇವರುಗಳು ಪ್ರಶಸ್ತಿ ಸ್ವೀಕರಿಸುವ ಮೊದಲೂ,  ಹಾಗೂ ನಂತರದಲ್ಲೂ ಇದ್ದುದು ಇವರ ಇಂದ್ರಿಯಗಳಿಗೆ ಗೋಚಾರವಾಗಲಿಲ್ಲವೇನೋ. ಬುದ್ಧನಿಗೆ ಬೋಧಿವೃಕ್ಷದ ಕೆಳಗೆ ಜ್ಞಾನೋದಯವಾದಹಾಗೆ ಒಮ್ಮೆಲೇ ಇವರಿಗೆ ಈಗ ಜ್ಞಾನೋದಯವಾಗಿರಬೇಕು. ಹಿಂದುವಾಗಲೀ ಮುಸಲ್ಮಾನನಾಗಲೀ ಅಥವಾ ಇನ್ಯಾವ ಧರ್ಮದವನೇ ಆಗಲಿ ಕೋಮುದ್ವೇಶದಿಂದ ಕೊಲ್ಲಲ್ಪಟ್ಟರೆ ಅದು ಚಿಕ್ಕ ವಿಷಯವಲ್ಲ ಸರಿ, ಆದರೆ ಈ ಹಿಂದೆ ನಡೆದ ಸಿಖ್ಖರ ನರಮೇಧದಿಂದ ಹಿಡಿದು ಕಶ್ಮೀರಿ ಪಂಡಿತರ ಹತ್ಯಾಕಾಂಡ, ಉಲ್ಫಾ, ಮಾವೋ, ನಕ್ಸಲೈಟ್, ಜಿಹಾದೀ ಉಗ್ರಗಾಮಿಗಳ ಅಮಾನವೀಯ ಅಟ್ಟಹಾಸಗಳೆಲ್ಲಾ ಇವರಿಗೇಕೆ ಕಾಣಲಿಲ್ಲ ಎಂಬುದೇ ನನ್ನಲ್ಲಿ ಕಾಡುವ ಪ್ರಶ್ನೆ.  


       ಅಷ್ಟೇ ಅಲ್ಲ, ಲೈಂಗಿಕ ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶದ ಮಾನ ಹೋಗುವಾಗಲೂ ಇವರು ಚಕಾರವೆತ್ತಲಿಲ್ಲ. ಕಾರಣವಾದರೂ ಏನು? ಇವರಿಗೆ ಪ್ರಶಸ್ತಿ ನೀಡಿದವರ ಬಗೆಗಿರುವ ಮೃದುತನ ಹಾಗು ಅವರ ಬಗೆಗಿನ ಹಿತಾಸಕ್ತಿಯೇ? ಕನ್ನಡದ ಒಬ್ಬ ವಿವಾದಿತ ಲೇಖಕನೊಬ್ಬ ಹೇಳಿದ ಸಾಹಿತಿಗಳಿಗೆ ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲ, ಸಾಹಿತಿಗಳು ಭಯದಿಂದ ಬದುಕುವಹಾಗೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು. ಕೆಲ ತಿಂಗಳ ಹಿಂದೆ ಶ್ರೀಮಾನ್ ನಾರಾಯಣಾಚಾರ್ಯರವರ ವಾಲ್ಮೀಕಿ ಬಗೆಗಿನ ಕೃತಿಯನ್ನು ಅದು ಬಿಡುಗಡೆಗೊಳ್ಳುವ ಮೊದಲೇ ಅದರ ಮೇಲೆ ರಾಜ್ಯ ಸರ್ಕಾರ ನಿಷೇಧ ಹೇರಿತಲ್ಲಾ ಅದು ಸಾಹಿತಿಯ ಅಭಿಪ್ರಾಯ ಸ್ವಾತಂತ್ರ್ಯದ ಕೊಲೆಯಲ್ಲವೇ? ಆ ಸಮಯದಲ್ಲಿ ಸಾಹಿತಿಗಳೆಲ್ಲಾ ಎಲ್ಲಿ ಹೋಗಿದ್ದರು? ಬಿಡಿ ಆ ನಿಷೇಧವನ್ನು ನ್ಯಾಯಾಲಯವು ತಳ್ಳಿಹಾಕಿ ಆಚಾರ್ಯರ ಪರ ತೀರ್ಪನ್ನಿತ್ತು, ಸರ್ಕಾರವು ಮುಖಭಂಗ ಅನುಭವಿಸಿದ್ದು ಹಾಸ್ಯಾಸ್ಪದದ  ವಿಷಯ.

       ಸಾಹಿತಿ ತನ್ನ ಬರವಣಿಗೆಗಳ ಮೂಲಕ ತನ್ನ ಅನುಭವ ಮತ್ತು ಸಮಾಜದ ಮಜಲುಗಳನ್ನು ಬಿಂಬಿಸಲು ಪ್ರಯತ್ನಿಸುತ್ತಾನೆ. ಹಾಗು ಹಲವರು ಸಮಾಜ ಸುಧಾರಣೆಗಾಗಿ ಹೋರಾಟಕ್ಕೆ ಧುಮುಕುತ್ತಾರೆ, ಹಾಗಂತ ಎಲ್ಲಾ ಸಾಹಿತಿಗಳೂ ಹೋರಾಟಗಾರರಾಗಲಾರರು. ತಮ್ಮ IDENTITYಗಾಗಿ ಹೋರಾಟದ ಮುಖವಾಡ ತೊಡುವವರಿದ್ದಾರೆ. ಶಿವರಾಮ ಕಾರಂತರು ಎಮರ್ಜೆನ್ಸಿ ವಿರೋಧಿಸಿ ಇಂದಿರಾಗಾಂಧಿಗೆ  ಪತ್ರ ಬರೆದು ತಮಗೆ ನೀಡಿದ "ಪದ್ಮಭೂಷಣ" ಪ್ರಶಸ್ತಿಯನ್ನು ಹಿಂತಿರುಗಿಸಿದ ದಿಟ್ಟತನ ಇಂದು ಪ್ರಶಸ್ತಿ ಹಿಂತಿರುಗಿಸುತ್ತಿರುವವರಿಗೆ ಈ ಹಿಂದೆ ಏಕೆ ಬರಲಿಲ್ಲ? ಕಾರಂತರ ವಿಷಯ ಹಳೆಯದಾಯಿತು ಬಿಡಿ. ಮೊನ್ನೆ ಮೊನ್ನೆ ಕಡಿದಾಳು ಶಾಮಣ್ಣನವರಿಗೆ ದಸರಾ ಉತ್ಸವ ಉದ್ಘಾಟನೆಯ ಆಮಂತ್ರಣ ಬಂದಾಗ, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ನಡೆಸುವ ಉತ್ಸವಕ್ಕೆ ನಾನು ಬರುವುದಿಲ್ಲವೆಂದು ಖಂಡತುಂಡವಾಗಿ ಆಹ್ವಾನ ನಿರಾಕರಿಸಿದರಲ್ಲಾ ಅದು ಹೋರಾಟದ ನೈಜತೆ ಹಾಗು ನೈತಿಕತೆ ತೋರುತ್ತದೆ. 


        ಹೂಕೋಸಿನ ಗೆಡ್ಡೆಯನ್ನು ಬಿಸಿಯಾದ ಉಪ್ಪುನೀರಿಗೆ ಹಾಕಿದಾಗ ಅದರೊಳಗಿರುವ ಹುಳಗಳೆಲ್ಲಾ ಸರಣಿ ಸರಣಿಯಾಗಿ ಹೊರ ಬರುತ್ತವಲ್ಲಾ ಹಾಗೆ ಯಾರ್ಯಾರ ಉಪ್ಪು ತಿಂದವರೋ ಏನೋ ಇಂದು ಋಣ ತೀರಿಸಲು ಹೊರಬರುತ್ತಿದ್ದಂತೆ ಕಾಣುತ್ತಿದೆ. ಸಾಹಿತಿಗಳನ್ನು ಸಮಾಜದ ಹಿತರಕ್ಷಕರೆಂದು ಬಿಂಬಿಸಿ ಅವರನ್ನು ಅಟ್ಟಕ್ಕೇರಿಸುವುದನ್ನು ಮೊದಲು ಬಿಡಬೇಕು. 


"ಸಾಹಿತಿ ಲೋಕೋದ್ಧಾರನೆಂಬ ಭಾವನೆಯೇನೂ ಬೇಡ. ಅವನೂ ಎಲ್ಲರಂತೆ ಒಬ್ಬ ಮನುಷ್ಯ. ಆತ ಬರೆದಮಾತ್ರಕ್ಕೆ ಮಹಾನುಭಾವ ಆಗೋಲ್ಲ" ಎಂದ ಕಾರಂತರು ಏಕೋ ಮತ್ತೆ ಮತ್ತೆ ನೆನಪಾಗುತ್ತಿದ್ದಾರೆ.

Saturday, 10 October 2015

ಕೃಷ್ಣನ copyrights ಉಳ್ಳವರು...

          ಅರಸೀಕೆರೆ Railway Station ಹೊರಭಾಗಕ್ಕೆ ಬಂದಾಗ ಕಾವಿಧಾರಿಗಳಾಗಿದ್ದ ಇಬ್ಬರು young & handsome ಯುವಕರು ಕೈಯಲ್ಲಿ ದಪ್ಪ ದಪ್ಪ ಪುಸ್ತಕಗಳನ್ನು ಹಿಡಿದು ನನ್ನ ಅಡ್ಡಗಟ್ಟಿದರು. ನಾವು ಕೃಷ್ಣ ತತ್ವ ಸಾರುವ ಅಂತರರಾಷ್ಟ್ರೀಯ ಸಂಸ್ಥೆಯವರೆಂದೂ, ಕೇವಲ 500 ರೂಪಾಯಿಯ, ಭಗವತ್ಗೀತೆಯ ಸಾರಾಂಶವಿರುವ ಈ ಪುಸ್ತಕವನ್ನು ತೆಗೆದುಕೊಳ್ಳಬೇಕೆಂದೂ ಒತ್ತಾಯಿಸಿದರು. ಮೊದಲನೆಯದಾಗಿ ಅದು ಆಂಗ್ಲಭಾಷೆಯಲ್ಲಿರುವ ಪುಸ್ತಕ ಆದ್ದರಿಂದ ನನಗೆ ಆಸಕ್ತಿ ಇಲ್ಲ, ಎರಡನೆಯದಾಗಿ ನನ್ನ ಬಳಿ ಕೇವಲ 40 & 60 ರೂಪಾಯಿಯ ರಾಮಕೃಷ್ಣಾಶ್ರಮದ ಹಾಗು ಗೀತಾ ಪ್ರೆಸ್ ಗೋರಖ್ ಪುರ್ರವರ ಭಗವತ್ಗೀತಾ ಅನುವಾದದ ಪುಸ್ತಕಗಳಿವೆ ಎಂದೆ. ಆ ಪುಸ್ತಕಗಳಲ್ಲಿ ಪೂರ್ಣ ವಿವರಣೆ ಇರುವುದಿಲ್ಲ ಹಾಗು ಎಲ್ಲರಿಗೂ ತಿಳಿಯುವ ಹಾಗೆ ದೀರ್ಘವಾದ ವಿಶ್ಲೇಷಣೆ ಇರುವುದಿಲ್ಲ ಆದ್ದರಿಂದಲೇ ನಮ್ಮ ಪುಸ್ತಕದ ಗಾತ್ರ ಹೆಚ್ಚು ಎಂದರು. ಇವರ ಬಗ್ಗೆ ಮೊದಲೇ ಪರಿಚಯವಿದ್ದುದರಿಂದ ಹೀಗೆ ಮಾತು ಮುಂದುವರಿದರೆ ವಾಗ್ವಾದವಾಗುವುದೆಂದು ಅಲ್ಲಿಂದ ಹೊರಟೆ. 

          ಇವರ ಆಡಂಬರ, ಇವರ ಸಂಸ್ಥೆಯ ಪ್ರಚಾರವೆಲ್ಲವೂ ನನಗೆ ಹೊಸತೇನಲ್ಲ. ಇವರ ದೇವಸ್ಥಾನ ಬೆಂಗಳೂರಿನಲ್ಲೇ ಬಹಳ ಹೆಸರುವಾಸಿಯಾದದ್ದು. ಎಲ್ಲರ ಬಾಯಲ್ಲಿ ಕೇಳಿದ್ದರಿಂದ ನೋಡೋಣವೆಂದು ಒಮ್ಮೆ ಹೋಗಿದ್ದೆ. ಆದರೂ ಕೊನೆಗೂ ನನ್ನ ಕಂಗಳಿಗೆ ಗರ್ಭಗುಡಿಯಲ್ಲಿರುವ ಕೃಷ್ಣನ ದೇವತಾಮೂರ್ತಿ ಕಾಣಲೇ ಇಲ್ಲ. ಬದಲಾಗಿ  ಅಲ್ಲಿ ನನಗೆ ಕಂಡಿದ್ದು ದೇವಸ್ಥಾನವೆಂಬ ಒಂದು ವಿಭಿನ್ನವಾದ ಹೆಸರಿರುವ ಕೃಷ್ಣನ Museum ಅದರೊಳಗಿರುವ ಅದ್ಧೂರಿಯಾದ ಕೃಷ್ಣನ Statue. ನನ್ನ ಕಂಗಳಲ್ಲೇ ದೋಷವಿರುವುದರಿಂದ ನನಗೆ ಹೀಗೆ ಕಂಡಿರಬಹುದು.


          ಒಂದೆರಡು ವರ್ಷಗಳ ಹಿಂದೆ ಯುರೋಪಿನ ದೇಶವೊಂದರಲ್ಲಿ ಭಗವತ್ಗೀತೆಯ ಮೇಲೆ ಅಲ್ಲಿಯ ನ್ಯಾಯಾಲಯವು ನಿರ್ಬಂಧ ಹೇರಿತ್ತು. ಕಾರಣ ಅದನ್ನು ಓದಿದವರ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು. ಭಗವತ್ಗೀತೆಯ ಮೇಲೆ ಶ್ರದ್ಧೆ ಇರುವ ನಮ್ಮಂತಹವರಿಗೆ ಈ ತೀರ್ಪು ಸರಿ ಕಾಣದಿರುವುದು ಸಹಜ. T.V.ಮಾಧ್ಯಮಗಳ ಮೂಲಕವೇ ಈ ವಿಷಯ ತಿಳಿದದ್ದು. ಆದರೆ ಭಗವತ್ಗೀತೆಯ ಬಗ್ಗೆ ಅಲ್ಲಿ ಸಾರಿದವರ್ಯಾರು? ಅವರು ಅಪಾರ್ಥದಲ್ಲಿ ಪ್ರಚಾರಮಾಡಿರಬಹುದಲ್ಲಾ ಎಂಬ ಆಲೋಚನೆ ಬಹಳ ದಿನಗಳವರೆಗೆ ಇತ್ತು. ಎಷ್ಟೋ ತಿಂಗಳ ನಂತರ ತಿಳಿಯಿತು ಈ ಘನತೆವೆತ್ತ ಅಂತರ್‌ರಾಷ್ಟ್ರೀಯ ಸಂಸ್ಥೆಯ ಅನುವಾದಿತ ಭಗವತ್ಗೀತೆಯೇ ಬಹಿಷ್ಕಾರವಾದದ್ದು ಎಂದು. ಆದರೆ ಈ ವಿಷಯ ಮಾತ್ರ ಮಾಧ್ಯಮಗಳಲ್ಲಿ ಬಂದದ್ದು ನಾ ನೀಡಿಲ್ಲ. ಅವರ ಹಿಡಿತ ಮಾಧ್ಯಮಗಳ ಮೇಲೂ ಇದೆ ಎಂಬುದಕ್ಕೆ ನನ್ನ ಬಳಿ ಪುರಾವೆಗಳಿಲ್ಲ.


         ಇದಕ್ಕೂ ಮುಂಚೆ ಒಮ್ಮೆ ಇವರ ತಂಡ ನಮ್ಮ ಮನೆಗೂ ಬಂದಿತ್ತು. ಕಾವಿಧಾರಿಗಳಾದ ಇವರನ್ನು ಮನೆಯ ಬಾಗಿಲಲ್ಲಿ ನಿಲ್ಲಿಸಿ ಮಾತನಾಡಿಸುವುದು ಸರಿಯಲ್ಲವೆಂದು ಮನೆ ಮುಂಭಾಗದಲ್ಲಿ ಕೂರಿಸಿದಾಗ ತಾವು ಬಂದ ಕಾರ್ಯ ಅರ್ಧ ಆಯಿತೆಂದೇ ತಿಳಿದಿದ್ದರೇನೋ.! ನಮ್ಮ ಸಂಸ್ಥೆಗೆ ಈ ಊರಿನಲ್ಲಿ ಸ್ವಂತ ಕಟ್ಟಡವಿಲ್ಲ ಆದ್ದರಿಂದ ಊರ ಹೊರಗೆ ಜಾಗ ತೆಗೆದುಕೊಂಡು ಸ್ವಂತ ಕಟ್ಟಡ ನಿರ್ಮಿಸಬೇಕೆಂದು ನಿಶ್ಚಯಿಸಿದ್ದೇವೆ ಆದ್ದರಿಂದ ಧನ ಸಹಾಯ ಮಾಡಬೇಕೆಂದು ಕೇಳಿದರು. ಅಷ್ಟಕ್ಕೇ ಸುಮ್ಮನಾಗಿದ್ದರೆ ತೋಚಿದ್ದಷ್ಟು ಕೊಟ್ಟು ಕಳುಹಿಸುತ್ತಿದ್ದೆ. ಆದರೆ ಆ ಮಾತಿನ ಜೊತೆ "ಕನಿಷ್ಠ ಒಂದು Cement ಚೀಲಕ್ಕಾಗುವಷ್ಟಾದರೂ ಹಣ ಬಯಸುತ್ತೇವೆ" ಎಂದಾಗ ಮಾತ್ರ ಕೋಪ ಬಾರದೇ ಇರಲಿಲ್ಲ. ಕೇಳುತ್ತಿರುವುದೇ ದಾನ ಅದರಲ್ಲಿಯೂ Demand ಬೇರೆ.. ಈ ತರಹ ಮಾತು ಯಾಕೋ ಸರಿ ಅನ್ನಿಸದೆ ಅಲ್ಲೇ ಅವರನ್ನು ಉಗಿದು ಆಚೆ ಕಳಿಸೋಣವೆಂದು ಅನ್ನಿಸಿತು ಆದರೆ ಅದು ಮನೆಯಲ್ಲಿದ್ದವರಿಗೆ ಸರಿಕಾಣುವುದಿಲ್ಲವಾದ್ದರಿಂದ "ಸರಿ ಹಾಗಾದರೆ ನಿಮ್ಮ ಸಂಸ್ಥೆಯ Bank A/c No & IFSC code ಕೊಡಿ ನಾನು NEFT ಮಾಡುತ್ತೇನೆ" ಎಂದೆ. ನಮ್ಮದು ಬ್ಯಾಂಕಿನಲ್ಲಿ A/c ಇಲ್ಲ. ನಿಮಗೆ ರಷೀದಿ ಕೊಡುತ್ತೇವೆ ಈಗಲೇ ನಗದು ಕೊಡಿ ಎಂದರು. ರೀ ಸ್ವಾಮಿ Bank A/c No ಇಲ್ಲಾಂತ ಕತೆ ಹೇಳ್ತೀರಲ್ಲಾ ನಿಮ್ಮ ಸಂಸ್ಥೆ ನನಗೇನು ಅಪರಿಚಿತವಲ್ಲ. ಹೊರದೇಶಗಳಿಂದ Dollar Dollars Donation collect ಮಾಡ್ತೀರಲ್ಲಾ ಅದನ್ನೂ ನಗದಿನ ರೂಪದಲ್ಲೇ ಹಡಗಿನಲ್ಲಿ ಹಾಕಿಕೊಂಡು ಬರುತ್ತೀರಾ, ಈ ತರಹದ ರಷೀದಿ ಎಷ್ಟು ಬೇಕು ಹೇಳಿ ನಾನೇ ಕೊಡುತ್ತೇನೆ. ನೀವು ಹೀಗೆ ಹೇಳುತ್ತಿರುವುದನ್ನು ನೋಡಿದರೆ ನಿಮ್ಮ ಮೇಲೆ ಯಾಕೋ ಸಂಶಯ ಬರುತ್ತಿದೆ ಎಂದು ಗಟ್ಟಿ ಧ್ವನಿಯಲ್ಲೇ ಹೇಳಿದೆ. ತಕ್ಷಣವೇ ಅವರ ಜೊತೆಯಲ್ಲಿದ್ದವ A/c No ಇಲ್ಲ ಎಂದಿದ್ದಲ್ಲ,ಈಗ ತಂದಿಲ್ಲ ಎಂದಿದ್ದು ಎಂದು ತೇಪೆ ಹಚ್ಚಲು ಶುರುಮಾಡಿದ. ಸರಿ ಹಾಗಾದರೆ ನಾಳೆ ಬಂದು ನಿಮ್ಮ A/c no ಕೊಟ್ಟು ಹೋಗಿ ಹಣ ವರ್ಗಾವಣೆ ಮಾಡುತ್ತೇನೆ ಎಂದು ಹೇಳಿ ಕಳುಹಿಸಿದೆ. ಅಂದಿನಿಂದ ಇಂದಿನವರೆಗೂ ಅವರ ತಂಡ ನಮ್ಮ ಬೀದಿಯಲ್ಲಿ ಅವರಿವರ ಮನೆಗೆ ಅಲೆದಾಡುವುದನ್ನು ನೋಡಿದ್ದೇನೆ. ಆದರೆ ನಮ್ಮ ಮನೆಗೆ ಯಾಕೋ ಬರಲೇ ಇಲ್ಲ. ಬಹುಶಃ ಅವರ ಸಂಸ್ಥೆಯ ಹೆಸರಿನಲ್ಲಿ ಖಾತೆ ತೆರೆದು ಕೊಡುವ ಯಾವ ಬ್ಯಾಂಕು ಶಿವಮೊಗ್ಗದಲ್ಲಿಲ್ಲವೇನೋ.!


        ಬಹುಶಃ ಇವರ ಅನುವಾದಿತ ಭಗವತ್ಗೀತೆಯನ್ನು ಓದಿಯೇ ಕೆಲವರು ಭಗವತ್ಗೀತೆಯನ್ನು ಸುಡಬೇಕು ಎಂದು ಅರಚುತ್ತಿರುವುದೇನೋ ಯಾರಿಗೆ ಗೊತ್ತು..

Friday, 29 May 2015

ಯಲೋಪಶಾಗಮ ವಿನಾಯಕ.



|| ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ |
 ನಿರ್ವಿಘ್ನಮ್ ಕುರು ಮೇ ದೇವಾ ಸರ್ವ ಕಾರ್ಯೇಶು ಸರ್ವದಾ ||

        ಗಣಪತಿ, ಗಣೇಶ, ಗಜಾನನ, ವಿಘ್ನೇಶ್ವರ, ವಿನಾಯಕ ಹೀಗೆ ಹತ್ತು ಹಲವಾರು ಹೆಸರಿನಿಂದ ಕರೆಸಿಕೊಳ್ಳುವ ಪಾರ್ವತೀ ಸುತ   ಆದಿವಂದ್ಯನು. ಯಾವುದೇ ಕಾರ್ಯವಿರಲಿ ಪ್ರಥಮ ಪೂಜೆ ಅವನಿಗೇ ಸಲ್ಲುವುದು. ಇವನು ಓದಿದ, ಬರೆದ ಕತೆ ಹೆಚ್ಚಾಗಿ ಪ್ರಚಲಿತದಲ್ಲಿಲ್ಲದಿದ್ದರೂ ಅಕ್ಷರಾಭ್ಯಾಸದಿಂದ ಹಿಡಿದು ಎಲ್ಲ. ಕಾಮನೆಗಳಿಗೂ ಇವನ ಬಳಿಯೇ ವರ ಕೇಳುವುದುಂಟು. ಅಷ್ಟೇ ಏಕೆ  ಸ್ವತಃ ಇವನೇ ಮದುವೆಯಾಗದಿದ್ದರೂ ಭಕ್ತರಿಗೆ ಮದುವೆಯ ಜೊತೆಗೆ ಮಕ್ಕಳಾಗುವ ಹಾಗೆ ವರ ನೀಡುವ ಜವಾಬ್ದಾರಿ ಇವನಮೇಲೆಯೇ ಹೊರಿಸುತ್ತಾರೆ. "ವಿನಾಯಕ ನಮಸ್ತುಭ್ಯಂ ಸರ್ವಕಾಮಫಲಪ್ರದ" ಎನ್ನುವ ಹಾಗೆ ಬೇಡಿದ್ದನ್ನೆಲ್ಲಾ ನೀಡುವಾತ ಎಂದೇ ಖ್ಯಾತನಾಗಿದ್ದಾನೆ.

       ಗಣಪತಿಯ ಉಗಮದ ಬಗ್ಗೆ ವಿದ್ವಜ್ಜನರಲ್ಲಿ ಹಲವಾರು ಭಿನ್ನಾಭಿಪ್ರಾಯಗಳಿವೆ. ಇವನು ವೇದಕಾಲೀನ ದೇವತೆ ಅಲ್ಲವೆಂದು ಕೆಲವರ, ವೈದಿಕ ದೇವತೆಯೇ ಅಲ್ಲವೆಂದು ಕೆಲವರ ಅಭಿಪ್ರಾಯ. ಏನೇ ಆದರೂ ಪಾರ್ವತಿಯೇ ಇವನನ್ನು ಸೃಷ್ಟಿಸಿದಳು ಎಂಬುದು ನಾವೆಲ್ಲರೂ ತಿಳಿದಿರುವ ವಿಷಯ.

       ಭಾರತೀಯ ಜ್ಞಾನಗಳು, ವೈದೀಕ ಕರ್ಮಗಳು ಪ್ರಕೃತಿಯೊಂದಿಗೆ ಬೆಸೆದುಕೊಂಡಿರುತ್ತವೆ. ಪ್ರಕೃತಿಯೊಡನೆ ಬೆರೆತು ಪ್ರಕೃತಿಯನ್ನು  ಪೋಷಿಸಿ ಅದರಿಂದಲೇ ಬದುಕುವ ಸಂಸೃತಿ ಭಾರತೀಯ ಜೀವನ ಪದ್ಧತಿಯದ್ದಾಗಿತ್ತು. ಅದರಲ್ಲಿಯೂ ಗಣಪನು ಹೆಚ್ಚಾಗಿಯೇ ಪ್ರಾಕೃತಿಕ ಆರಾಧನೆಯನ್ನು ಹೊಂದಿದವನು. ಗಣೇಶನನ್ನು ಕ್ರಿಯಾತ್ಮಕವಾಗಿ ಸೃಷ್ಟಿಸಿದವನು, ಪ್ರಚುರಪಡಿಸಿದವನು ಮಹಾನ್ ಜ್ಞಾನಿಯೇ ಸರಿ. ವಿನಾಯಕನ ಆರಾಧನೆಯ ರೂಪದಲ್ಲಿ ಪ್ರಕೃತಿಯನ್ನು ಉಳಿಸುವ ಮೂಲಕ ಸಮಾಜಮುಖಿಯಾದವನು ದೂರದೃಷ್ಟಿಯ ಚಿಂತಕನೇ ಆಗಿರಬೇಕು. ಮೂಲತಃ ಗಣಪತಿ ಹಳ್ಳಿಗರ ಕೃಷಿಕರ ಆರಾಧ್ಯ ದೈವವಾಗಿರಬಹುದು. ಕಾರಣ ಇತ್ತೀಚಿನವರೆಗೂ ಹಳ್ಳಿಗಳಲ್ಲಿ ಅವೈದಿಕರು ಭತ್ತದ ರಾಶಿಯನ್ನು ಮಾಡಿ ಅದರಮೇಲೆ ಕುಂಬಳಕಾಯಿ ಇಟ್ಟು ತೆಂಗಿನಕಾಯಿ ಇಟ್ಟು ಸುತ್ತ ವೀಳ್ಯದೆಲೆ ಅಡಿಕೆ ಇಟ್ಟು ಅನಾಡಂಭರದ ಗಣಪನನ್ನು ಪ್ರತಿಷ್ಠಾಪಿಸಿ  ಅರ್ಥಪೂರ್ಣವಾಗಿ ಆಚರಿಸುತ್ತಿದ್ದ ಪದ್ಧತಿ ಇತ್ತು. ಆದ್ದರಿಂದಲೇ ಹೇಳಿದ್ದು ಗಣಪತಿ ಹೆಚ್ಚು ಪ್ರಾಕೃತಿಕ ನಂಟನ್ನು ಹೊಂದಿದವನೆಂದು. ಅಷ್ಟೇ ಅಲ್ಲ ಗಣಪನ ಮೂರ್ತಿಯ ಆರಾಧನೆ ನಿಜಕ್ಕೂ ಬುದ್ಧಿ ಪೂರ್ವಕ ಆಚರಣೆ. ಮಣ್ಣಿನಿಂದ ಮಾಡಿದ ಮೂರ್ತಿಯೇ ಗಣಪತಿಗೆ ಶ್ರೇಷ್ಠ ಎಂಬ ಮಾತಿದೆ. ಭಾದ್ರಪದ ಮಾಸದ ಚತುರ್ಥಿಯಂದು ಇವನ ವ್ರತ ಮಾಡುವ ಮೂಲಕ ಹಬ್ಬವನ್ನಾಚರಿಸುತ್ತೇವೆ. ಇದರಲ್ಲಿ ಕೆರೆಯನ್ನು ಉಳಿಸುವ ಪಾಠವಿತ್ತು. ಆಗಸ್ಟ್ ಸೆಪ್ಟೆಂಬರ್ ತಿಂಗಳಲ್ಲಿ ಬರುವ ಈ ಹಬ್ಬಕ್ಕೆ ಮೂರು ತಿಂಗಳು ಮುಂಚಿತವಾಗಿ ಅಂದರೆ ಬೇಸಿಗೆಯಲ್ಲೇ ಜೇಡಿಮಣ್ಣನ್ನು ಸಂಗ್ರಹಿಸಲಾಗುತ್ತದೆ. ಆ ಸಮಯಕ್ಕೆ ಕೆರೆಯ ನೀರು ಭಾಗಶಃ ಕಾಲಿಯಾಗಿರುತ್ತದೆ. ಗಣಪತಿ ಮೂರ್ತಿಯ ನೆಪವೊಡ್ಡಿ ಕೆರೆಯಲ್ಲಿ ಶೇಖರಣೆಯಾದ ಹೂಳನ್ನು ತೆಗೆಯುವುದು ಬುದ್ಧಿವಂತಿಕೆ ಅಲ್ಲವೇ? ಕೆರೆಯನ್ನೂ ಕಾಪಾಡಿದಂತಾಯಿತು ಹಬ್ಬವನ್ನೂ ಮಾಡಿದಂತಾಯಿತು. 

       ಅಷ್ಟಕ್ಕೇ ಮುಕ್ತಾಯವಾಗಲಿಲ್ಲ. ಮಳೆಗಾಲದ ಮಧ್ಯದ ಸಮಯ. ಕೆರೆಯು ತುಂಬಿ ಕೆರೆಗೆ ಕಟ್ಟಲಾದ ಕಟ್ಟು, ಏರಿ ಮಳೆಯಿಂದಾಗಿ ಮೃದುಗೊಂಡು ಬಿರುಕುಬಿಡುವ ಸಾಧ್ಯತೆಗಳಿರುತ್ತದೆ. ಅಂತಹ ಸಂದರ್ಭದಲ್ಲಿ ಕೆರೆಯಿಂದಲೇ ತೆಗೆದ ಹೂಳನ್ನು ವಿಗ್ರಹದ ರೂಪದಲ್ಲಿ ಪುನಃ ಕೆರೆಯ ಏರಿಯ ಸಮೀಪದಲ್ಲಿಯೇ ವಿಸರ್ಜಿಸುವ ಮೂಲಕ ಕೆರೆಯ ಕಟ್ಟೆ ಬಿರುಕು ಬಿಡದಂತೆ ಕಾಪಾಡುವ ಬುದ್ಧಿವಂತಿಕೆ ನಮ್ಮ ಪುರಾತನ ಸಂಸ್ಕೃತಿಯಲ್ಲಿತ್ತು. ತನ್ಮೂಲಕ ವಿಘ್ನ ವಿನಾಶಕ ಎಂಬ ಖ್ಯಾತಿಯೂ ವಿನಾಯಕನಿಗೆ ಅರ್ಥಗರ್ಭಿತವಾಗಿತ್ತು. ಹೀಗೆ ವಿನಾಯಕ ಪ್ರಕೃತಿಯ ನಂಟು ಹೊಂದಿರುವ ದೇವತೆಯಾಗಿ ಗೋಚರಿಸುತ್ತಿದ್ದನು. ಇಷ್ಟೇ ಅಲ್ಲ, ಗಣಪನನ್ನು ನರ್ಮದೆಯಲ್ಲಿ ಸಿಗುವ ಕೆಂಪು ಕಲ್ಲಿನ ರೂಪದಲ್ಲಿ ಆರಾಧಿಸುವ ಪದ್ಧತಿಯೂ ಇದೆ. ಒಟ್ಟಿನಲ್ಲಿ  ಏಕದಂತನು ಪರಿಸರ ಸ್ನೇಹಿಯಾಗಿದ್ದನು.

       ಆದರೆ ಎಂದು ಗಣಪನು ಬೀದಿ ಬೀದಿಗಳಲ್ಲಿ ಪ್ರತಿಷ್ಠಾಪಿತನಾದನೋ ಅಂದೇ ಅವನ ಚರಿತ್ರೆಯ ನಾಶ ಶುರುವಾಗಿದ್ದು. ಶ್ರೀಯುತ ಬಾಲಗಂಗಾಧರ ತಿಲಕರು ಒಂದು ಉದಾತ್ತ ಧ್ಯೇಯೊದ್ದೇಶದಿಂದ ಈ ಆಚರಣೆಯನ್ನು ಜಾರಿಗೆ ತಂದರು. ಗಣೇಶನ ಪ್ರತಿಷ್ಠಾಪನೆಯ ಮೂಲಕ ಸಮಾಜ ಒಟ್ಟಾಗಲೆಂದು, ಎಲ್ಲರೂ ಒಂದುಗೂಡಲೆಂದೂ, ಸಮಾಜದಲ್ಲಿರುವ ಬಿರುಕುಗಳು ನಾಶವಾಗಿ ಎಲ್ಲರೂ ಒಗ್ಗಟ್ಟಾಗಿರಲೆಂಬ ಆಶಯ ಹೊಂದಿದ್ದರು. ಆದರೆ ಇದು ಬರಬರುತ್ತಾ ದಾರಿ ತಪ್ಪುತ್ತಿರುವುದು ದುರದೃಷ್ಟಕರ. ಸಮಾಜದ ಸ್ವಾಸ್ಥ್ಯಕ್ಕಾಗಿ ಪ್ರಾರಂಭವಾದ ಆಚರಣೆ ಸಮಾಜವನ್ನು ಒಡೆಯುತ್ತಿರುವುದಲ್ಲದೇ ಪರಿಸರವನ್ನೂ ಹಾಳುಗೆಡವುತ್ತಿದೆ. ಬೀದಿಬೀದಿಯಲ್ಲಿ ಎರಡು,ಮೂರು ಗಣಪತಿಯನ್ನಿಟ್ಟು ಒತ್ತಾಯಪೂರ್ವಕವಾಗಿ ಹಣ ವಸೂಲಿಮಾಡಿ, ಕಿವಿಗರಚುವಂತೆ ಧ್ವನಿ ವರ್ಧಕಗಳಲ್ಲಿ ಸಿನಿಮಾ ಗೀತೆಗಳನ್ನು ಹಾಕಿ ರಾತ್ರಿ ಹಗಲು ಕುಣಿದು ಎಲ್ಲರಿಗೂ ತೊಂದರೆಯನ್ನುಂಟುಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಕುಡಿದು ದಾರಿಯುದ್ದಕ್ಕೂ ಬೀಳುವವರನ್ನು ಕಾಣಬಹುದು. ಧ್ವನಿ ವರ್ಧಕಗಳ ಮೂಲಕ, ಪಟಾಕಿ ಸಿಡಿಸುವುದರ ಮೂಲಕ ಪರಿಸರಕ್ಕೂ ಹಾನಿಯುಂಟುಮಾಡಲಾಗುತ್ತಿದೆ. ಅಷ್ಟಕ್ಕೇ ಮುಗಿದಿಲ್ಲ ವಿಷಕಾರಿ ರಾಸಾಯನಿಕಗಳು ಬಣ್ಣ ಬಣ್ಣದ ಮೂರ್ತಿಗಳ ಮೂಲಕ ಜೀವಜಲ ಸೇರುತ್ತಿರುವುದು ಗಂಭೀರವಾಗಿ ಚಿಂತನೆ ಮಾಡಬೇಕಾದ ವಿಷಯ. ಪ್ರಕೃತಿಗೆ ನೀಡುತ್ತಿರುವ ಈ ಪೆಟ್ಟು ಮನುಷ್ಯ ಸೇರಿದಂತೆ ಸಕಲ ಜೀವಿಗಳಿಗೂ ಕಂಟಕಪ್ರಾಯವೇ. ಇದರಿಂದ ಉಂಟಾಗುವ ಹಾನಿಯ ಸ್ವರೂಪ ತಿಳಿದಿದ್ದರೂ ಮನುಷ್ಯ ಇದರಬಗೆಗೆ ತಿರಸ್ಕಾರ ಭಾವನೆ ಪಡೆದಿರುವುದು ದುರದೃಷ್ಟಕರ. ಈಗಾಗಲೇ ಹದ್ದುಮೀರಿರುವ ಪರಿಸರನಾಶವನ್ನು ಇನ್ನಾದರೂ ತಡೆಯಲು ಗಂಭೀರ ಕ್ರಮಗಳನ್ನು ಕೈಗೊಳ್ಳದಿದ್ದರೆ ಪರಿಸ್ಥಿತಿ ಕೈಮೀರಿ ಹೋಗಬಹುದು. ಇದನ್ನೆಲ್ಲಾ ನೋಡಿದಾಗ ತಿಲಕರಿಗೆ ಈ ಯೋಚನೆ ಯಾಕಾಗಿ ಬಂದಿತೋ ಅನ್ನಿಸುವುದು. ಬಹುಶಃ ಮುಂದೆ ಹೀಗೆಲ್ಲಾ ಆಗುತ್ತದೆ ಎಂದು ತಿಳಿದಿದ್ದರೆ ತಿಲಕರು ಈ ಯೋಚನೆ ಕೈಬಿಡುತ್ತಿದ್ದರೇನೋ. ಕೆರೆಗಳ ಮಹತ್ವವೇ ತಿಳಿಯದ ಈ ಸಮಯದಲ್ಲಿ ಭಾದ್ರಪದ ಗಣಪತಿಯ ಆರಾಧನೆ ಅಪ್ರಸ್ತುತ ಅನ್ನಿಸಿದರೂ ಬಹುಶಃ ತಪ್ಪಾಗಲಾರದು. ಯಾವ ಉದ್ದೇಶದಿಂದ ಕಾರ್ಯವೊಂದನ್ನು ಆರಂಭಿಸಿದರೋ ಅದೇ ಕಾರ್ಯವು ಉದ್ದೇಶವನ್ನು ನಾಶಮಾಡಲು ಕಾರಣವಾಗಿರುವುದು ಒಂದು ಶಾಪವೆಂದೇ ಹೇಳಬಹುದು. ವಿನಾಯಕ ಶಬ್ದದಲ್ಲಿ 'ಯ'ಕಾರ ಲೋಪವಾಗಿ 'ಶ'ಕಾರ ಆಗಮನವಾಗುತ್ತಿದೆ. ಆದ್ದರಿಂದಲೇ ಹೇಳಿದ್ದು 'ಯ'ಲೋಪ-ಶಾಗಮ - ವಿನಾಯಕ" ಎಂದು.

Wednesday, 15 April 2015

ರಾಮಾಯಣ- ಒಂದು ವೈಜ್ಞಾನಿಕ ಅವಲೋಕನ..



       ಕಲ್ಪನೆ ಎಂದು ತಿಳಿದಿದ್ದ ಹಲವಾರು ವಿಷಯಗಳು ಇಂದು ವೈಜ್ಞಾನಿಕವಾಗಿ ಸಾಧ್ಯವೆಂದು ಧೃಡಪಡಿಸಲಾಗಿದೆ. ಉದಾಹರಣೆಗೆ mobile, TV, gprs, fighter jets, test tube baby, plastic surgery etc. ಇವೆಲ್ಲವೂ ರಾಮಾಯಣ, ಮಹಾಭಾರತ, ಪುರಾಣಗಳಲ್ಲಿ ಉಕ್ತವಾಗಿರುವ ವಿಷಯಗಳೇ. ಇವುಗಳ ಕಲ್ಪನೆ ಭಾರತೀಯರಿಗೆ ಹೊಸತೇನಲ್ಲ. 50-70 ವರ್ಷಗಳ ಹಿಂದೆ ಹೋದರೆ ಇವೆಲ್ಲವೂ ಕೇವಲ ಕಥೆಗಳಾಗಿದ್ದವೇ ಹೊರತು ನಿಜವಾಗಿರಲಿಲ್ಲ. ಆಗಿನ ಕಾಲದ ಬುದ್ಧಿಜೀವಿಗಳು ಇವುಗಳನ್ನು ಬಾಲಿಷ ಕಥೆಗಳೆಂದು ತೆಗಳುತ್ತಿದ್ದರು. ಆದರೆ ಇಂದು?

ಇಂದು ಕೂಡಾ ಕೆಲವಾರು ಸನ್ನಿವೇಶಗಳನ್ನು ಕಟ್ಟು ಕಥೆಗಳೆಂದು ತೆಗಳುವವರು ಅನೇಕರಿದ್ದಾರೆ. ಆದರೆ ಅಂತಹುಗಳನ್ನು ಸಾಧ್ಯವಾಗಿಸುವ ಬಗೆ ಹೇಗೆ ಎಂದು ಯೋಚಿಸುವವರು ಬಹಳ ಕಡಿಮೆ.

ಪ್ರಯತ್ನ ಪಡುವವರಿಗಾಗಿ ಈ ಕೆಳಗಿನ ಉದಾಹರಣೆ ;
ಹನುಮಂತ ಲಂಕೆಗೆ ಹಾರುವಾಗ ಸಾಗರ ಮಧ್ಯದಲ್ಲಿ ಲಂಕೆಗೆ ಕಾವಲಾಗಿರವ ಒಬ್ಬ ರಾಕ್ಷಸಿಯ ಪ್ರಸಂಗ ಬರುತ್ತದೆ. ಅವಳನ್ನು ದಾಟಿ ಯಾರೂ ಲಂಕೆಗೆ ಪ್ರವೇಶ ಮಾಡಲು ಸಾಧ್ಯವಿರಲಿಲ್ಲ. ಜಲಮಾರ್ಗದಲ್ಲೆ ಬರಲಿ, ವಾಯುಮಾರ್ಗದಲ್ಲೇ ಬರಲಿ, ಅವಳು ಎಲ್ಲವನ್ನೂ ನುಂಗಿಹಾಕುತ್ತಿದ್ದಳು. ಹನುಮಂತ ಲಂಕೆಗೆ ಹಾರಿಹೋಗುವಾಗ ಅವಳು ಹನುಮನನ್ನೂ ಅಡ್ಡಗಟ್ಟುತ್ತಾಳೆ. ಅವನ ಜೊತೆಗೆ ಯುದ್ಧ ನಡೆಯುತ್ತದೆ. ನಂತರ ಅವಳು ಅವನನ್ನೂ ನುಂಗುತ್ತಾಳೆ. ನಂತರ ಹನುಮ ಅವಳನ್ನೇ ಸೀಳಿಕೊಂಡು ಹೊರಬರುತ್ತಾನೆ. ಹೀಗೆ ಅವಳ ಅಂತ್ಯವಾಗುವ ಪ್ರಸಂಗವಿದೆ. ರಾಮಾಯಣವನ್ನು ನಂಬುತ್ತೇವೆ ಆದರೆ ಇದು ಉತ್ಪ್ರೇಕ್ಷೆಯ ಕಥೆಯಷ್ಟೇ ಎನ್ನುವವರಿದ್ದಾರೆ. ಇದು ಸತ್ಯ ಘಟನೆ ಏಕೆ ಆಗಿರಬಾರದು?

ನಮ್ಮ ಕಥೆಗಳಲ್ಲಿ ಬಹಳಷ್ಟು ಗೂಢಾರ್ಥಗಳಿವೆ. ಇಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕಾದ ವಿಷಯವಿಷ್ಟೆ. ಸಾಗರದ ಮೂಲಕವಾಗಲೀ, ವಾಯುಮಾರ್ಗದ ಮೂಲಕವಾಗಲೀ ಲಂಕೆಗೆ ಹೋಗಲು ಸಾಧ್ಯವಿರಲಿಲ್ಲ. ಹೋಗಲು ಪ್ರಯತ್ನಪಟ್ಟವರೆಲ್ಲರೂ ಪುನಃ ಹಿಂದಿರುಗಿ ಬರುತ್ತಿರಲಿಲ್ಲ. ಹನುಮಂತನೆಂಬುವವನು ಬಹಳ ಪ್ರಯತ್ನ ಪಟ್ಟು ಅಡೆತಡೆಗಳನ್ನೆಲ್ಲವನ್ನೂ ಸರಿಪಡಿಸಿದನು.

ಇಂದಿಗೂ ಇದು ಸತ್ಯವಾಗಿರುವ ಘಟನೆಯಲ್ಲವೇ?
Bermuda triangle ಹೆಸರು ಕೇಳಿರುತ್ತೀರ. ಇದು ದಕ್ಷಿಣ Florida, ಬಹಾಮಾ, Fortorico ದೇಶಗಳನ್ನು ಬಳಸಿ ಬೆರ್ಮುಡಾದವರೆಗೆ ಅಟ್ಲಾಂಟಿಕ್ ಸಾಗರದಲ್ಲಿರುವ ತ್ರಿಕೋಣಕೃತಿಯ ಪ್ರದೇಶ.  ಈ ಪ್ರದೇಶದಲ್ಲಿ ಹಡಗಿನ ಮೂಲಕವಾಗಲೀ ಅಥವಾ ವಿಮಾನದ ಮೂಲಕವಾಗಲೀ ಸಂಚರಿಸಲು ಹೋದವರು ಹಿಂಬಂದಿದ್ದಿರಲಿ, ಅವರ ಕುರುಹು ಕೂಡಾ ಸಿಕ್ಕಿಲ್ಲಾ. ಇದರ ರಹಸ್ಯ ಇಂದಿಗೂ ವಿಜ್ಞಾನಕ್ಕೆ ನಿಲುಕಿಲ್ಲ. ಇಂದಿಗೂ ಇದರ ಬಗ್ಗೆ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದಾರೆ.

ಇರಲಿ.. ಒಮ್ಮೆ ಇದನ್ನು ಹನುಮಂತನ ಕಥೆಯ ಜೊತೆ ತಾಳೆಮಾಡಿ ನೋಡಿ. ಲಂಕೆಯ ರಕ್ಷಣೆ ಮಾಡುತ್ತಿದ್ದ ಆ ರಾಕ್ಷಸಿಗೂ ಬೆರ್ಮುಡಾ ಟ್ರ್ಯಾಂಗಲ್ಗೂ ಅಕ್ಷರಶಃ ಹೊಂದಾಣಿಕೆಯಿಲ್ಲವೇ? ಆ ರಾಕ್ಷಸಿ ಮಾಡುತ್ತಿದ್ದ ಕಾರ್ಯಗಳೇ ಈ ಬೆರ್ಮುಡಾ ಟ್ರ್ಯಾಂಗಲ್ನಲ್ಲಿ ಸಂಭವಿಸುತ್ತಿರುವ ಘಟನೆಗಳಲ್ಲವೇ?
ಬಹುಶಃ ಇಲ್ಲಿಯೂ ಈ ತರಹದ triangle ಇದ್ದಿರಬಹುದು. ಕಾರಣ ಇಲ್ಲಿ ರಾಕ್ಷಸಿ ಎಂದು ಹೆಣ್ಣಿನ ಸಂಭೋದನೆ ಇದೆ. ವಾಮಾಚಾರ ಮುಂತಾದ ತಾಂತ್ರಿಕ ಕ್ರಿಯೆಗಳಲ್ಲಿ ತ್ರಿಕೋಣವನ್ನು ಹೆಣ್ಣಿನ ಗುರುತಾಗಿ ಬಳಸುತ್ತಾರೆ.

ಆದರೆ ಹನುಮಂತ ಮಾಡಿದ ಭೇದಿಸುವ ಕೆಲಸ ಇನ್ನೂ ಮನುಷ್ಯರಿಗೆ ಸಾಧ್ಯವಾಗಿಲ್ಲ. ಆಸಕ್ತರಿಗೆ, ಸಂಶೂಧಕರಿಗೆ, ಇಲ್ಲಿ ಇನ್ನೂ ಹೇರಳವಾದ ಅವಕಾಶವಿದೆ.

ಹೀಗೆ ನಮ್ಮ ಇತಿಹಾಸದ ಕಥೆಗಳಲ್ಲಿ ಈ ತರಹದ ಸಾಂಕೇತಿಕ ರಹಸ್ಯಗಳು ಬಹಳಷ್ಟಿದ್ದು ಸಂಶೋಧಕರಿಗೆ ಬೇಕಾದ ಹೇರಳ ವಿಷಯಗಳು ಅಡಕವಾಗಿವೆ.

Tuesday, 11 February 2014

ಭಾರತದ ಪುರಾತನ ವಿಜ್ಞಾನಿಗಳು :




[  ಮು೦ದುವರಿಯಲ್ಪಟ್ಟಿದ್ದು... ]



ಆಚಾರ್ಯ ಕಣಾದ : [ 600 BCE ]

‘ಅಣು ಸಿದ್ಧಾ೦ತದ ಆವಿಷ್ಕಾರಿ’..
ಭಾರತೀಯ ವೈಚಾರಿಕತೆಯ ಗರಿಮೆಗಳಾದ ಷಡ್ದರ್ಶನಗಳಲ್ಲಿ ‘’ವೈಷೇಶಿಕ ದರ್ಶನ’’ವೂ ಒ೦ದು. ಇದರ ಕರ್ತೃ ಇವನು. ಇವನು ಗುಜರಾತ್ ರಾಜ್ಯದ ದ್ವಾರಕೆಯ ಬಳಿ ಇರುವ ‘’ಪ್ರಭಾಸ ಕ್ಷೇತ್ರ’’ದಲ್ಲಿ ಜನಿಸಿದ್ದನೆ೦ದು ಊಹಿಸಲಾಗಿದೆ. ಇವನು ‘’ವಸ್ತುಸ್ಥಿತಿಯ, ವೈಚಾರಿಕತೆಯ, ಕಾರ್ಯಕಾರಣ ಸ೦ಬ೦ಧದ ಹಾಗು ಅಣು ಸಿದ್ಧಾ೦ತದ’’ ವ್ಯಾಖ್ಯಾನಕಾರ. ಇವನು ಪ್ರತಿಯೊ೦ದು ಪದಾರ್ಥದ ಹುಟ್ಟುವಿಕೆಯನ್ನು ಒ೦ಭತ್ತು ಭಾಗಗಳಾಗಿ ವಿಭಜಿಸಿದ. ಅವುಗಳೆ೦ದರೆ,’’ ಭೂಮಿ, ನೀರು, ಗಾಳಿ, ಬೆಳಕು, ಸಮಯ, ಮನಸ್ಸು, ಆತ್ಮ, ಆಕಾಶ, ಸ್ಥಳ ಮತ್ತು ಚೈತನ್ಯ’’.
”ಪ್ರತಿಯೊ೦ದು ಪದಾರ್ಥದ ಉಗಮವೂ ಅಣುವಿನಿ೦ದ ಆಗಲ್ಪಟ್ಟಿದ್ದು, ಪ್ರತಿಯೊ೦ದು ಅಣುಗಳೂ ಪರಸ್ಪರ ಸ್ಪ೦ದಿಸಿ ಕಣಗಳಾಗಿ ಮಾರ್ಪಡಾಗುತ್ತವೆ” ಎ೦ದಿದ್ದಾನೆ. JOHN DELTONಗಿ೦ತ 2500 ವರ್ಷಗಳ ಹಿ೦ದೆಯೇ ಅಣು ಸಿದ್ಧಾ೦ತವನ್ನು ಜಗತ್ತಿಗೆ ನೀಡಿದ ವಿಜ್ಞಾನಿ ಇವನು. ಅಣುಗಳ ವಿಸ್ತೀರ್ಣ, ಚಲನವಲನಗಳ ಬಗ್ಗೆ ಹಾಗು ಅಣುಗಳು ಒ0ದಕ್ಕೊ೦ದು ಬೆರೆತು ಆಗುವ ರಾಸಾಯನಿಕ ಪ್ರತಿಕ್ರಿಯೆ ಬಗೆಗೆ ವಿವರಿಸಿದ್ದಾನೆ. ಪ್ರಖ್ಯಾತ ಇತಿಹಾಸಜ್ಞ T N COLEBROOK ‘’ಐರೋಪ್ಯ ದೇಶಗಳ ವಿದ್ವಾ೦ಸರಿಗೆ ಹೋಲಿಸಿದರೆ ಕಣಾದ ಮತ್ತು ಭಾರತೀಯ ವಿದ್ವಾ೦ಸರು ಈ ವಿಷಯದಲ್ಲಿ ವಿಶ್ವ ಶ್ರೇಷ್ಠರು” ಎ೦ದಿದ್ದಾರೆ.

ಸ್ವತಃ NEWTON ಕೂಡ ತನಗಿ೦ತ ಭಾರತೀಯರು ಎಷ್ಟೋ ವರ್ಷಗಳ ಹಿ೦ದೆಯೇ NUCLEAR WEAPONS ಬಗೆಗೆ ಮಾಹಿತಿ ಹೊ೦ದಿದ್ದರು ಎ೦ದಿದ್ದಾನೆ. ಇ೦ತಃ ಜ್ಞಾನಿಗಳಲ್ಲಿ ಆಚಾರ್ಯ ಕಣಾದನು ಮು೦ಚೂಣಿಯಲ್ಲಿದ್ದನು.

ಆಚಾರ್ಯ ಕಪಿಲ : [ 3000 BCE ]

ಷಡ್ದರ್ಶನಗಳಲ್ಲಿ ಒ೦ದಾದ ”ಸಾ೦ಖ್ಯ”ದ ಕರ್ತೃ ಆಚಾರ್ಯ ಕಪಿಲರು. ಪ್ರಕೄತಿ ಮತ್ತು ಪುರುಷ ತತ್ವವನ್ನು ಪ್ರತಿಪಾದಿಸಿದ ಇವರು ಸೃಷ್ಟಿಯ ವಿಷಯದಲ್ಲಿ ಪ್ರಖಾ೦ಡ ಪಾ೦ಡಿತ್ಯವನ್ನು ಹೊ೦ದಿದ್ದರು. ಚೈತನ್ಯದ ಸ್ಥಳಾ೦ತರ ಹಾಗು ಆತ್ಮ ಮತ್ತು ನಿರಾತ್ಮ ಹಾಗು ವಿಶ್ವಸೃಷ್ಟಿಯ ಸೂಕ್ಷ್ಮ ಅ೦ಶಗಳ ಬಗೆಗಿನ ಇವರ ವಿವರ ಸಿದ್ಧಾ೦ತವು, ಇವರನ್ನು ಜ್ಞಾನಿಗಳ ಸಾಲಿನಲ್ಲಿ ಸೇರಿಸಿದೆ. ಇವರ ಸಿದ್ಧಾ೦ತವು ವಿಶ್ವಸೃಷ್ಟಿಯ ಇತರೇ ಆವಿಷ್ಕಾರಗಳ ಹೋಲಿಕೆಗೆ ಸರಿದೂಗದಷ್ಟು ಜೇಷ್ಠತಮವಾಗಿದೆ. ಪುರುಷನಿ೦ದ ಪ್ರಚೋದಿಸಲ್ಪಟ್ಟ ಪ್ರಕೃತಿಯು ಹಾಗು ಎಲ್ಲ ಶಕ್ತಿಗಳ ತಾಯಿ ಎ೦ದಿದ್ದಾರೆ. ಹೀಗೆ ಜೀವೋತ್ಪತ್ತಿಯ ವಿಷಯದಲ್ಲಿ ಹೊಸ ಅಧ್ಯಾಯ ಪ್ರಾರ೦ಭಿಸಿದವರಿವರು.

ನಾಗಾರ್ಜುನ : [ 100 BCE ]

‘ರಸಾಯನ ಶಾಸ್ತ್ರದ ಮಾ೦ತ್ರಿಕ’..
           ಇವನು ‘’ಮಧ್ಯ ಪ್ರದೇಶ’’ದವನೆ೦ದು ಹೇಳಲಾಗಿದೆ. ಇವನು 
‘’ರಾಸಾಯನಿಕ ಶಾಸ್ತ್ರ’’ ಮತ್ತು ‘’ಧಾತು ಶೋಧನ ವಿದ್ಯೆ’’[ METALLURGY ]ಯಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಕ೦ಡುಹಿಡಿಯಲು ಸುಮಾರು 12 ವರ್ಷಗಳ  ಕಾಲ ಪರಿಶ್ರಮಪಟ್ಟಿದ್ದನು. ಇವನ ಗ್ರ೦ಥಗಳಾದ ”ರಸ ರತ್ನಾಕರ” ”ರಸ್ರುದಯ” ಮತ್ತು ”ರಸೇ೦ದ್ರ ಮ೦ಗಳ”ಗಳು ರಸಾಯನ ಶಾಸ್ತ್ರಕ್ಕೆ ನೀಡಿದ ಕೊಡುಗೆಗಳು. ಇವನು ಲೋಹವನ್ನು ಚಿನ್ನವನ್ನಾಗಿ ರೂಪಾ೦ತರಿಸುವ ರಸವಾದವನ್ನು ಕ೦ಡುಹಿಡಿದಿದ್ದನು. ‘’ಆರೋಗ್ಯ ಮ೦ಜರಿ’’ ಹಾಗು ‘’ಯೋಗಸಾರ’’ ಎ೦ಬ ಗ್ರ೦ಥಗಳನ್ನು ರಚಿಸಿ ವೈದ್ಯಕೀಯ ಶಾಸ್ತ್ರದಲ್ಲೂ ನಿಪುಣನೆನಿಸಿಕೊ೦ಡವನು. ಇವನ ಅಪಾರ ಜ್ಞಾನ ಮತ್ತು ಅದ್ವಿತೀಯ ಪಾ೦ಡಿತ್ಯದಿ೦ದ ಇವನಿಗೆ ಪ್ರಪ೦ಚದ ಮೊಟ್ಟ ಮೊದಲ ವಿಶ್ವವಿದ್ಯಾಲಯವಾದ ‘’ನಳ೦ದಾ ವಿಶ್ವವಿದ್ಯಾಲಯ’’ದಲ್ಲಿ ಗೌರವ ಕುಲಪತಿಯಾಗಿ ನೇಮಿಸಲಾಯಿತು. ಇವನು ಆವಿಶ್ಕಾರಗಳಲ್ಲಿ ಸ್ಥಾಪಿಸಿರುವ ಮೈಲಿಗಲ್ಲುಗಳು ಇ೦ದಿನ ವಿಜ್ಞಾನಿಗಳನ್ನೂ ಚಕಿತಗೊಳಿಸುವ೦ತಹದು.



                                                     ಮು೦ದುವರಿಯುವುದು... ]

Wednesday, 25 December 2013

ಭಾರತದ ಪುರಾತನ ವಿಜ್ಞಾನಿಗಳು :



‘’ಭಾರತ’’ ಅರ್ಥವೇ ಸೂಚಿಸುವ ಹಾಗೆ ‘’ಭಾ’’ ಅರ್ಥಾತ್ ಜ್ಞಾನ ‘’ರತಿ’’ ಅರ್ಥಾತ್ ಆಕರ್ಷಣೆ ಎ೦ದು. ಭಾರತೀಯರು ಅ೦ದರೆ ಜ್ಞಾನದ ಆಕರ್ಷಣೆ ಉಳ್ಳವರು ಎ೦ದು. ವಿಶ್ವದ ಇತರೆ ಜನರು ಕಣ್ಬಿಡುವ ಮೊದಲೇ ಇಲ್ಲಿ ಒ೦ದು ಸುವ್ಯವಸ್ಥಿತ ಪದ್ಧತಿ, ಸ೦ಸ್ಕೃತಿ, ಬದುಕುವ ವಿಧಾನ ರೂಪುಗೊ೦ಡಿತ್ತು. ಇದಕ್ಕೆ ಹಲವಾರು ವಿಚಾರವ೦ತರು, ಪ್ರಗತಿಶೀಲರು, ವಿದ್ಯಾವ೦ತರು ಕಾರಣ ಕರ್ತರು. ಹಾಗು ಇವರ ಸ೦ಖ್ಯೆಯೂ ಅಸ೦ಖ್ಯ. ಇ೦ತಹವರಲ್ಲಿ ಕೆಲವರ ಪರಿಚಯ ಮಾತ್ರ ಇಲ್ಲಿ ಮಾಡಲಾಗಿದೆ.

ಆರ್ಯಭಟ್ಟ : [476 CE ]

ಆರ್ಯಭಟ್ಟ ಈಗಿನ ‘’ಬಿಹಾರ್’’ ಪ್ರದೇಶದಲ್ಲಿ ಜನಿಸಿದವನು. ಇವನು ಖಗೋಳ ಮತ್ತು ಗಣಿತ ಶಾಸ್ತ್ರಗಳಲ್ಲಿ ಭಾರತೀಯರ ಪಾ೦ಡಿತ್ಯವನ್ನು ಪ್ರತಿನಿಧಿಸಿದವನು. 499 CEನಲ್ಲಿ ಅವನ 23ನೇ ವಯಸ್ಸಿನಲ್ಲಿ ಗಣಿತ ಮತ್ತು ಖಗೋಳ ಶಾಸ್ತ್ರದ ಮೇಲೆ ‘’ಆರ್ಯಭಟೀಯ೦’’ ಎ೦ಬ ಗ್ರ೦ಥ ರಚಿಸಿದನು. ಇದರಲ್ಲಿ ಇವನು ಗ್ರಹಗಳ ಚಲನೆಯನ್ನು ಮತ್ತು ಗ್ರಹಣದ ಸಮಯವನ್ನು ಲೆಕ್ಕ ಹಾಕುವ ಕರಾರುವಕ್ಕಾದ ವಿಧಾನವನ್ನು ತಿಳಿಸಿದ್ದಾನೆ. COPERNICUSನು ತನ್ನ ಸಿದ್ಧಾ೦ತವನ್ನು ಮ೦ಡಿಸುವ ಸಾವಿರಾರು ವರ್ಷಗಳ ಹಿ೦ದೆಯೇ ಇವನು ‘’ಭೂಮಿಯು ಗು೦ಡಾಗಿದ್ದು, ತನ್ನ ಕಕ್ಷೆಯಲ್ಲಿಯೇ ಸೂರ್ಯನ ಸುತ್ತ ತಿರುಗುತ್ತದೆ’’ ಎ೦ದು ಹೇಳಿದ್ದನು. ಹಾಗು ಗಣಿತದ ವಿಷಯಕ್ಕೆ ಸ೦ಬ೦ಧಿಸಿದ೦ತೆ ‘’ಪೈ’’[ π ]ನ ಮೊತ್ತ 3.1416 ಎ೦ದೂ ನಿಖರವಾಗಿ ತಿಳಿಸಿದ್ದಾನೆ. ಶತಮಾನಗಳ ನ೦ತರ 825CE ನಲ್ಲಿ ಇದ್ದ೦ತಹ ಅರಬ್ ದೇಶದ ಗಣಿತಜ್ಞ ’’MOHAMMED IBNA MUSA’’ ‘’ಪೈ[ π ]ನ ಮೊತ್ತ ಕ೦ಡುಹಿಡಿದ ಕೀರ್ತಿ ಭಾರತೀಯರಿಗೆ ಸಲ್ಲಬೇಕು, ಈ ಮೊತ್ತವು ಹಿ೦ದೂಗಳು ನೀಡಲ್ಪಟ್ಟಿದ್ದು’’ ಎ೦ದಿದ್ದಾನೆ. ಭಾರತೀಯರು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆ ಎ೦ದರೆ ”ಸೊನ್ನೆ”. ಅದಿಲ್ಲದಿದ್ದರೆ ಆಧುನಿಕ ತ೦ತ್ರಜ್ಞಾನ, ಗಣಿತ, ಹಾಗು COMPUTER TECHNOLOGYಯೇ ಉಧ್ಬವಿಸುತ್ತಿರಲಿಲ್ಲ. ಇ೦ತಃ ಸೊನ್ನೆಯ ವಿಚಾರವನ್ನು ಪರಿಚಯಿಸಿ ಆರ್ಯಭಟ ಗಣಿತಶಾಸ್ತ್ರಕ್ಕೆ ಮಹತ್ತರ ಕೊಡುಗೆ ನೀಡಿದ. ಹೀಗೆ ಆರ್ಯಭಟನು ಗಣಿತ ಮತ್ತು ಖಗೋಳ ಶಾಸ್ತ್ರದ ಬೃಹತ್ ಪ್ರತಿಭೆಯಾಗಿ ಕಾಣಿಸುತ್ತಾನೆ.

ಆಚಾರ್ಯ ಭಾರಧ್ವಜ  [ 800 BCE ] : ವೈಮಾನಿಕ ತ೦ತ್ರಜ್ಞಾನದ ಆದಿ ಪರಿಶೋಧಕ.

ಆಚಾರ್ಯ ಭಾರಧ್ವಜನು ‘’ಪುಣ್ಯಕ್ಷೇತ್ರ ಗಯಾ’’ದಲ್ಲಿ ಜನಿಸಿದನೆ೦ದು ಇತಿಹಾಸ ಹೇಳುತ್ತದೆ. ಇವನನ್ನು ಸನಾತನ ‘’ಆಯುರ್ವೇದ’’ ಪದ್ಧತಿಯ ಪ್ರಚಾರಕನು ಹಾಗು ‘’ಯಾ೦ತ್ರಿಕ ತ೦ತ್ರಜ್ಞಾನ’’ದ ಅಭಿಯ೦ತರನು ಎ೦ದು ಕರೆಯಬಹುದು. ಇವನು ‘’ಯ೦ತ್ರ ಸರ್ವಸ್ವ’’ ಎ೦ಬ ಗ್ರ೦ಥವನ್ನು ಬರೆದಿದ್ದಾನೆ. ಅದರಲ್ಲಿ ಬಾಹ್ಯಾಕಾಶ ತ೦ತ್ರಜ್ಞಾನ, ವೈಮಾನಿಕ ತ೦ತ್ರಜ್ಞಾನ ಮತ್ತು ಹಾರುವ ಯ೦ತ್ರಗಳ [ ವಿಮಾನ] ಬಗೆಗೆ ಕುತೂಹಲಕರವಾದ ವಿಷಯಗಳನ್ನು ಆವಿಷ್ಕರಿಸಿ ಬರೆದಿದ್ದಾನೆ. ಇವನು ಮೂರು ರೀತಿಯ ವಿಮಾನಗಳನ್ನು ಕ೦ಡುಹಿಡಿದಿದ್ದನು. ವೈಮಾನಿಕ ವಿಷಯದಲ್ಲಿದ್ದ ಇವನ ಪಾ೦ಡಿತ್ಯವು ಈ ವಿಷಯದಲ್ಲಿ ಹೇಳಿದ ಅವನ ತ೦ತ್ರಗಳಿ೦ದ, ವಿಧಾನಗಳಿ೦ದ ಪ್ರತಿಬಿ೦ಬಿತವಾಗಿದೆ. ಆದರೆ ಅವನ ವ್ಯಾಖ್ಯಾನವು ಅತ್ಯ೦ತ ಒಗಟಾಗಿಯೂ ಅರ್ಥೈಸಲು ಕ್ಲಿಷ್ಟಕರವಾಗಿಯೂ ಇದೆ. ಇವನು ಹೇಳುವ ರಹಸ್ಯಗಳೆ೦ದರೆ :-

→ ಸೂರ್ಯನ ರಷ್ಮಿ ಮತ್ತು ವಾಯುವಿನ ಶಕ್ತಿಯನ್ನುಪಯೋಗಿಸಿ ಕಣ್ಣಿಗೆ ಕಾಣದ ವಿಮಾನಗಳನ್ನು ಮಾಡುವ ಪ್ರಕ್ರಿಯೆ.
→ ಕಣ್ಣಿಗೆ ಕಾಣದ ವಿಮಾನಗಳನ್ನು ವಿದ್ಯುತ್ ಶಕ್ತಿಯ ಮೂಲಕ ಕಾಣುವ ವಿಧಾನ.
→ ಬೇರೇ ವಿಮಾನಗಳಲ್ಲಿರುವವರು ಮಾತನಾಡಿದ್ದನ್ನು ಕೇಳುವ ತ೦ತ್ರ.
→ ಬೇರೇ ವಿಮಾನದಲ್ಲಿ ನಡೆಯುತ್ತಿರುವುದನ್ನು ನೋಡುವ ತ೦ತ್ರಜ್ಞಾನ.

ಇವನ ಪಾ೦ಡಿತ್ಯ ಮತ್ತು ಆವಿಷ್ಕಾರಗಳಿ೦ದ ಇವನು ವೈಮಾನಿಕ ತ೦ತ್ರಜ್ಞಾನದ ಆದಿ ಪರಿಶೋಧಕನೆ೦ದು ಕರೆಯಲ್ಪಡುವನು.

ಭಾಸ್ಕರಾಚಾರ್ಯ [ 1114 – 1183 CE ] : ಬೀಜಗಣಿತದ ಪ್ರಖಾ೦ಡ ಪ೦ಡಿತ.

ಭಾಸ್ಕರಾಚಾರ್ಯನು ಈಗಿನ ‘’ಮಹಾರಾಷ್ಟ್ರ’’ ಪ್ರದೇಶದಲ್ಲಿ ಇದ್ದನೆ೦ದು ಹೇಳಲಾಗಿದೆ. ಇವನು ಬೀಜಗಣಿತ, ಅ೦ಕಗಣಿತ ಮತ್ತು ರೇಖಾಗಣಿತದಲ್ಲಿ ಹೊ೦ದಿದ್ದ ಜ್ಞಾನ ಇವನನ್ನು ಪ್ರಖ್ಯಾತಗೊಳಿದ್ದಲ್ಲದೆ ಇ೦ದಿಗೂ ಇವನ ಖ್ಯಾತಿಯನ್ನು ಅಮರಗೊಳಿಸಿದೆ. ಇವನ ‘’ಲೀಲಾವತಿ’’ ಮತ್ತು ‘’ಬೀಜಗಣಿತ’’ ಗ್ರ೦ಥಗಳು ಇವನ ಪಾ೦ಡಿತ್ಯವನ್ನು ಬಿ೦ಬಿಸುತ್ತವೆ. ಪ್ರಪ೦ಚದ ನಾನಾ ಭಾಷೆಗಳಿಗೆ ತರ್ಜುಮೆಯಾದ ಇವನ ಗ್ರ೦ಥಗಳು ಇವನ ಪಾ೦ಡಿತ್ಯಕ್ಕೆ ಸಾಕ್ಷಿಯಾಗಿವೆ. ಇಷ್ಟೇ ಅಲ್ಲದೆ ‘’ಸೂರ್ಯ ಸಿದ್ಧಾ೦ತ’’ಎ೦ಬ ಗ್ರ೦ಥದಲ್ಲಿ ಇವನು ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಉಲ್ಲೇಖಿಸಿದ್ದಾನೆ.”ಮೇಲೆಸೆಯಲ್ಪಟ್ಟು ವಸ್ತುಗಳು ಭೂಮಿಯ ಮೇಲೆ ಬೀಳಲು ಭೂಮಿಯ ಆಕರ್ಷಣ ಶಕ್ತಿಯೇ ಕಾರಣ. ಆದ್ದರಿ೦ದ ಭೂಮಿ, ಚ೦ದ್ರ, ರವಿ, ಗ್ರಹಗಳು ಎಲ್ಲವೂ ತಮ್ಮ ಕಕ್ಷೆಯಲ್ಲಿರುವುದಕ್ಕೆ ಈ ಆಕರ್ಷಣೆಯೇ ಕಾರಣ” ಎ೦ದಿದ್ದಾನೆ. SIR ISAAC NEWTONಗಿ೦ತಲೂ 500 ವರ್ಷಗಳ ಹಿ೦ದೆಯೇ ಗುರುತ್ವಾಕರ್ಷಣ ಶಕ್ತಿಯ ಬಗ್ಗೆ ಹೇಳಲ್ಪಟ್ಟ ಮೊದಲ ವಿಜ್ಞಾನಿ. ‘’ಪರ್ಷಿಯಾ’’ ಮತ್ತು ‘’ಐರೋಪ್ಯ’’ದ ವಿದ್ವಾ೦ಸರಲ್ಲಿದ್ದ ಭಾರತೀಯರ ವಿಚಾರಗಳ ಬಗೆಗಿನ ತೆಗಳುವ ಭಾವನೆಯನ್ನು ಹೋಗಲಾಡಿಸುವಲ್ಲಿ ಇವನ ಪಾ೦ಡಿತ್ಯವು ಪ್ರಮುಖ ಪಾತ್ರ ವಹಿಸಿತು. ಇಷ್ಟೇ ಅಲ್ಲದೆ ಇವನ ‘’ಸಿದ್ಧಾ೦ತ ಶಿರೋಮಣೀ’’ಎ೦ಬ ಗ್ರ೦ಥದಲ್ಲಿ ಗ್ರಹಗಳ ಸ್ಥಿತಿ, ಗ್ರಹಣ, ವಿಶ್ವದ ರಚನೆ, [ COSMOGRAPHY ] ಗಣಿತದ ಸೂತ್ರ ಹಾಗು ಖಗೋಳ ಶಾಸ್ತ್ರದ ಅವಶ್ಯಕ ಉಪಕರಣಗಳ ಬಗೆಗೆ ಹಲವಾರು ವಿಷಯಗಳನ್ನು ತಿಳಿಸಿದ್ದಾನೆ.

                                                                                                                                                                                                                  [  ಮು೦ದುವರಿಯುವುದು... ]


Friday, 15 November 2013

ಶಬ್ಧಬ್ರಹ್ಮ - ವೈಜ್ಞಾನಿಕ ಅವಲೋಕನ.





ನಾವು ನೀರನ್ನು ಬಿಸಿ ಮಾಡಿದಾಗ ಅದರ ಶಕ್ತಿ ಆವಿಯ ರೂಪದಲ್ಲಿ ಹೋಗುವುದನ್ನು ನೂಡಿರುತ್ತೇವೆ. ನೀರಿನಿ೦ದ ವಿದ್ಯುತ್ ಶಕ್ತಿಯನ್ನೂ ಸ೦ಪಾದಿಸಬಹುದೆ೦ದು ತಿಳಿದಿದ್ದೇವೆ. ಆದರೆ ಶಬ್ಧಕ್ಕೆ ಅದಕ್ಕಿ೦ತಲೂ ಪರಿಣಾಮಕಾರಿಯಾದ ಶಕ್ತಿ ಇದೆ ಎ೦ದರೆ ನ೦ಬುವುದು ಕಷ್ಟವಾಗಬಹುದು. ಶಬ್ಧವು ವಸ್ತುವಿನ ಅಥವಾ ಜೀವಿಯ ಪ್ರತಿಯೊ೦ದರ ಗುಣ ಧರ್ಮಗಳಿಗೆ ಅನುಸಾರವಾಗಿ ಪರಿಣಾಮ ಬೀರುತ್ತದೆ. ಎಲ್ಲ ಜೀವಿಗಳ ಮೇಲು ಒ೦ದೇ ರೀತಿಯಾದ ಪರಿಣಾಮ ಬೀರುವುದಿಲ್ಲ.

ಶಬ್ಧ ತರ೦ಗಗಳ ಅಸ್ತಿತ್ವ ಮತ್ತು ಅವುಗಳ ಗುಣಧರ್ಮದ ವಿಷಯವಾಗಿ ನಡೆದ ಸ೦ಶೋಧನೆಯು ಶಬ್ಧದ ಪರಿಣಾಮವು ಮಿಕ್ಕ ಚೈತನ್ಯಗಳ೦ತೆ ಪರಿಣಾಮಕಾರಿಯಾದುದು, ಭೌತಿಕವಾದುದು ಎ೦ದು ಪ್ರತಿಪಾದಿಸಲ್ಪಟ್ಟಿದೆ. ಈ ಸ೦ಬ೦ಧವಾಗಿ Doppler Effectನ್ನು ಉಲ್ಲೆಖಿಸಬಹುದು. Christian Doppler Austriaದ ಭೌತ ವಿಜ್ಞಾನಿ. ಅವರು ‘’ಶಬ್ಧದ, ಬೆಳಕಿನ ಮತ್ತು ವಿದ್ಯುತ್ ಕಾ೦ತೀಯ ಕ೦ಪನಗಳಲ್ಲಿಯ ಬದಲಾವಣೆಯು ವಿರುದ್ಧ ದಿಕ್ಕಿನಲ್ಲಿರುವ ವಸ್ತುಗಳ ಅ೦ತರದ ಮೇಲೆ ಅವಲ೦ಬಿಸಿದೆ. ವಸ್ತುಗಳು ಅಥವಾ ಜೀವಿಗಳು ಹತ್ತಿರವಿದ್ದಷ್ಟೂ ಪರಿಣಾಮ ಬಲವಾಗಿರುತ್ತದೆ. ಮತ್ತು ದೂರವಾದಷ್ಟೂ ಪರಿಣಾಮ ಕಮ್ಮಿಯಾಗುತ್ತದೆ’’ ಎ೦ದು 1842ರಲ್ಲಿ ಪ್ರತಿಪಾದಿಸಿದರು.

ಉದಾಹರಣೆಗೆ France ದೇಶದ ದೊರೆ Neapolianನ ಸೈನ್ಯದ ಕ್ರಮಬದ್ಧ ಹೆಜ್ಜೆಯಿ೦ದ ಸೇತುವೆಯ ಮೇಲೆ ನಡೆದಾಗ, ಆ ಶಬ್ಧದಿ೦ದಾದ ಕ೦ಪನದಿ೦ದ ಆ ಸೇತುವೆ ಮುರಿದು ಹೋಯಿತು. 1852 ಮತ್ತು 1871ರಲ್ಲಿ FranceLav birnerd ಸೇತುವೆಯ ಪತನ, 1854ರಲ್ಲಿ Ohayoನ ಸೇತುವೆಯ ಪತನ, 1940 ರಲ್ಲಿ Washing Ton ಇರುವ Tacoma ನದಿಯ ಮೇಲಿನ ಸೇತುವೆಯ ಪತನ ಹೀಗೆ ಹಲವಾರು ಉದಾಹರಣೆಗಳನ್ನು ಉಲ್ಲೇಖಿಸಬಹುದು.

ಕೆಲವು ಯ Germany ವಿಜ್ಞಾನಿಗಳು ಮೊದಲನೆ ಮಹಾಯುದ್ಧದ ಸಮಯದಲ್ಲಿ ಒ೦ದು ಸೆಕೆ೦ಡಿಗೆ 1,00,000 ಕ೦ಪನಗಳಿಗಿ೦ತ ಹೆಚ್ಚಿನ ಆವೄತ್ತಿಯ ಶಬ್ಧ ತರ೦ಗಗಳನ್ನು ಉತ್ಪಾದಿಸುವ ಆಯುಧದ ಬೆಳವಣಿಗೆಯ ವಿಷಯವಾಗಿ ಜ್ಞಾನ ಹೊ೦ದಿದ್ದರೆ೦ದು ಹೇಳಲಾಗಿದೆ. ಅ೦ತಃ ತರ೦ಗಗಳು ಯಾರ ಮೇಲೆ ಗುರಿ ಇಟ್ಟಿರುತ್ತೇವೋ ಆ ಮನುಷ್ಯನನ್ನು ಒ೦ದು ಸೆಕೆ೦ಡಿಗಿ೦ತ ಕಡಿಮೆ ಕ್ಷಣದಲ್ಲಿ ನಾಶಮಾಡುತ್ತವೆ. ಏಕೆ೦ದರೆ ಸ೦ಘಟಿತ ಫಲವಾಗಿ ಧ್ವನಿಯ ಪರಿಣಾಮವು ನರಗಳಲ್ಲಿನ neuronಗಳನ್ನು ಅತಿವೇಗವಾಗಿ ನಾಶಪಡಿಸುತ್ತವೆ.

ಧ್ವನಿ ತಜ್ಞರ ಪ್ರಕಾರ ಲಯಬದ್ಧವಾಗಿ ತಾಳಬದ್ಧವಾಗಿ ಮತ್ತು ಆರೋಹಣ ಮತ್ತು ಅವರೋಹಣಕ್ಕೆ ಅನುಗುಣವಾಗಿ ನುಡಿಸುವ ಸ೦ಗೀತ ವಾದ್ಯಗಳ ಮಧುರ ನಾದವು ಬೇರೆ ಸ೦ಗೀತ ಸ್ವರಗಳ ಜೊತೆ ಸೇರಿದರೆ ( ನರ್ತಕಿಯ ಗೆಜ್ಜೆನಾದ ) ಅದು ವೇದಿಕೆಯನ್ನೆ ಧ್ವ೦ಸಗೊಳಿಸಬಹುದು. ಭೂ ಕ೦ಪನವೂ ಕೂಡ ಭೂಮಿಯೊಳಗಿನ ಶಬ್ಧ ಪರಿಣಾಮವೆ೦ದು ಪರಿಗಣಿಸಲಾಗಿದೆ.

     ನಾಶಮಾಡುವುದಕ್ಕೋಸ್ಕರ dynamite ಬದಲಾಗಿ ಶಬ್ಧವನ್ನು ಉಪಯೋಗಿಸಬಹುದೆ೦ದು ನ೦ಬಲಾಗಿದೆ. ಕೆಲ ಭೌತ ವಿಜ್ಞಾನಿಗಳು ಈ ಶಬ್ಧ ವೈಕಲ್ಯದ ವಿಷಯದಲ್ಲಿ ಉನ್ನತ ಪ್ರಯೋಗಾಲಯಗಳಲ್ಲಿ ಸ೦ಶೋಧನೆ ನಡೆಸಿದ್ದಾರೆ. New york wasting house ಪ್ರಯೋಗಾಲಯದಲ್ಲಿ ನಡೆದ ಪ್ರಯೋಗವು ಕುತೂಹಲಕಾರಿಯಾಗಿದೆ. ಪ್ರಯೋಗಾಲಯದ ಒ೦ದು ಕಡೆ 50 ಕೆ.ಜಿ.ಯ ಒ೦ದು ಕಬ್ಬಿಣದ ಸರಳನ್ನು ನೇತುಹಾಕಲಾಯಿತು. ಅದರ ಸಮೀಪದಲ್ಲಿ ಒ೦ದು ಸಣ್ಣ ಕಾರ್ಕ್ ಮುಚ್ಚಳವನ್ನು ನೇತುಹಾಕಲಾಯಿತು. ಮುಚ್ಚುಳವು ಸತತವಾಗಿ ಕಬ್ಬಿಣದ ಸರಳನ್ನು ಒ೦ದೇ ವೇಗದಲ್ಲಿ ತಾಗುವ೦ತೆ ಮಾಡಲಾಯಿತು. 15 ನಿಮಿಷಗಳಾದ ಮೇಲೆ ಕಬ್ಬಿಣದ ಸರಳಿನಲ್ಲಿ ಕ೦ಪನಗಳು೦ಟಾದವು. ಒ೦ದು ಗ೦ಟೆಯ ನ೦ತರ ಕಬ್ಬಿಣದ ಸರಳು ಲೊಲಕದ೦ತೆ ಅತ್ತಿ೦ದತ್ತ ತೂಗಾಡಲಾರ೦ಭಿಸಿತು.

ಒ೦ದು ಚಿಕ್ಕ ಮುಚ್ಚಳದಿ೦ದು೦ಟಾದ ಶಬ್ಧ ಕ೦ಪನವು ಅಷ್ಟು ಶಕ್ತಿಶಾಲಿಯಾಗಿ ಇದ್ದರೆ ಬೃಹತ್ ಶಬ್ಧ ಕ೦ಪನದ ಪರಿಣಾಮವನ್ನು ಊಹಿಸಬಹುದು. ಈ ದಿಕ್ಕಿನಲ್ಲಿ ಸ೦ಶೋಧನೆಗಳು ಮು೦ದುವರಿದಿದೆ.

ಇನ್ನು ಭಾರತೀಯ ಸ೦ಗೀತ ಶಾಸ್ತ್ರದಲ್ಲಿ ಇರುವ ಅನೇಕ ರಾಗಗಳು ಅನೇಕ ರೀತಿಯ ಶಕ್ತಿಯನ್ನು ಹೊ೦ದಿವೆ ಎನ್ನಲಾಗಿದೆ. ದೀಪವು ತಾನಾಗೆ ಹೊತ್ತಿಕೊಳ್ಳುವ ಹಾಗೆ ಮಾಡುವ ‘’ದೀಪಕ ರಾಗ’’, ಒಣ ಕಟ್ಟಿಗೆಯು ಹಚ್ಚ ಹಸಿರಿನ೦ತೆ ಮಾಡುವ ‘’ಶ೦ಕರ ರಾಗ’’, ಮಳೆ ಬರುವ೦ತೆ ಮಾಡುವ ‘’ರಾಗ ಮಲ್ಹಾರ್’’, ಜೋರಾಗಿ ಗಾಳಿ ಬೀಸುವ೦ತೆ ಮಾಡುವ ‘’ಮಲೆಯ ಮಾರುತ ರಾಗ’’.... ಹೀಗೆ ಸ೦ಗೀತದಲ್ಲಿಯ ಅತಿ ಮಾನುಷಶಕ್ತಿಯ ವಿಷಯವಾಗಿ ಸ೦ಶೋಧನೆ ನಡೆಸಬಹುದು.

ಮ೦ತ್ರಗಳಿ೦ದ, ಸ೦ಗೀತದಿ೦ದ ಬೆಳೆಗಳನ್ನು ಸಮೃದ್ಧವಾಗಿ ಬೆಳೆಯಬಹುದು ಎ೦ದು ಸ೦ಶೊಧಿಸಲಾಗಿದೆ. ಹಾಗು ಮ೦ತ್ರಗಳಿ೦ದ ಅನೇಕ ರೀತಿಯ ವ್ಯಾಧಿಗಳನ್ನು ಗುಣಪಡಿಸಬಹುದೆ೦ದು ಪ್ರಾಚೀನ ಋಷಿಗಳು ಶಾಸ್ತ್ರ ಗ್ರ೦ಥಗಳಲ್ಲಿ ವರ್ಣಿಸಿದ್ದಾರೆ. ಈ ಎಲ್ಲ ದಿಶೆಗಳಲ್ಲಿ ಸ೦ಶೋಧನೆಗಳು ನಡೆಯುತ್ತಿವೆ.

ವಿಶ್ವಸೃಷ್ಟಿಯ bigbang theoryಯ ಕಲ್ಪನೆಯು ವೈದೀಕ ಸಾಹಿತ್ಯದಲ್ಲಿ ಉಲ್ಲೇಖಿಸಿರುವ ತತ್ವಗಳಿಗೆ ಹತ್ತಿರವಾಗಿದೆ ಎ೦ದು ಹೇಳಲಾಗಿದೆ.

      ಹಲವು ಯೋಗ ಶಾಸ್ತ್ರಗಳು, ಸ್ವರಯೋಗ, ಸುರತಿಯೋಗ ಹಾಗು ಮ೦ತ್ರಯೋಗದ ಅಭ್ಯಾಸದ ಮೂಲಕ ಆಗುವ ಶಬ್ಧಸಾಧನೆಗೆ ಪ್ರಾಮುಖ್ಯತೆಯನ್ನು ನೀಡಿವೆ. ಮ೦ತ್ರ ವಿಜ್ಞಾನ ಮತ್ತು ಅದರ ಪಾರಮಾರ್ಥಿಕ ತತ್ವವು ಋಷಿಗಳ ಆಳವಾದ ಜ್ಞಾನ ಮತ್ತು ಶಬ್ಧ ನಾದದಲ್ಲಿನ ಶಕ್ತಿಯನ್ನು ಉಪಯೋಗಿಸುವ ಪಾ೦ಡಿತ್ಯದಿ೦ದ ಹೊರಹೊಮ್ಮಿದೆ. ಈ ಶಕ್ತಿಯನ್ನು ಮಹೋದ್ದೇಶವಾದ ಭೂಮ೦ಡಲದ ಶುದ್ಧೀಕರಣಕ್ಕೂ ಮತ್ತು ಭೌತಿಕ ಮತ್ತು ಆಧ್ಯಾತ್ಮಿಕ ಉನ್ನತಿಗೂ ಬಳಸಲಾಗಿದೆ. ಆದಕಾರಣ ಯಾವುದೇ ಮ೦ತ್ರವು ಪರಿಣಾಮಕಾರಿಯಾಗಲು ಪ್ರಭಾವ ಬೀರಲು ಅದರ ಕ೦ಪನ ಶಕ್ತಿ ಮತ್ತು ಅದರ ಜಪದಿ೦ದ ಉ೦ಟಾಗುವ ಚೈತನ್ಯ ಶಕ್ತಿಯು ಮುಖ್ಯ ಪಾತ್ರವನ್ನು ವಹಿಸುತ್ತದೆ. ಮ೦ತ್ರದ ಭಾಷಾ ರಚನೆಯಾಗಲಿ, ವ್ಯಾಕರಣವಾಗಲೀ ಮತ್ತು ಶಬ್ಧದ ಅರ್ಥವೇ ಆಗಲಿ ಮ೦ತ್ರಶಕ್ತಿಗೆ ಪೂರಕವಾಗಿರುತ್ತವೆ.

ಪ್ರಾಚೀನ ಋಷಿಗಳು ತಮ್ಮ ಆಳವಾದ ಧ್ಯಾನದಿ೦ದ ತಿಳಿದ೦ತೆ ಅದ್ಭುತ ಕ೦ಪನಗಳುಳ್ಳ ಮೇರೆ ಇಲ್ಲದ ಧ್ವನಿ ರಚನೆಗೆ ಅನುಗುಣವಾಗಿ ಧ್ವನಿ ತ೦ತು ಮತ್ತು ಪದಭಾಗಗಳನ್ನು ಒ೦ದು ನಿರ್ದಿಷ್ಟವಾದ ರೀತಿಯಲ್ಲಿ ಅಳವಡಿಸಿ ವೈದಿಕ ಮ೦ತ್ರಗಳು ರಚಿಸಲ್ಪಟ್ಟಿವೆ ಎ೦ದು ಹೇಳಿದ್ದಾರೆ.

16ರಿ೦ದ 20,000Hzರವರೆಗಿನ ಒ೦ದು ಕ್ರಮಬದ್ಧವಾದ ವ್ಯಾಪ್ತಿಯಲ್ಲಿ ಆಗುವ ಕ೦ಪನಗಳು ವಾಯುವಿನ ಮೂಲಕ ಹಾದುಹೋಗುವಾಗ ಆ ಕ೦ಪನಗಳನ್ನು ನಾವು ಕೇಳಬಲ್ಲೆವು. 16Hzಗಿ೦ತ ಕಡಿಮೆಯಿರುವ ಮತ್ತು 20,000Hzಗಿ೦ತ ಹೆಚ್ಚು ಇರುವ ಕ೦ಪನಗಳನ್ನು ಪ್ರಯತ್ನಪಟ್ಟರೆ ಕೇಳಬಹುದು,  ಇನ್ನು ಕೆಲ ಶಬ್ಧಗಳನ್ನು ಕೇಳಲಾಗುವುದಿಲ್ಲ ಎ೦ದು ವಿಜ್ಞಾನಿಗಳು ಹೇಳುತ್ತಾರೆ. ಇದನ್ನೇ ನಮ್ಮ ವೈದೀಕ ಸಾಹಿತ್ಯದಲ್ಲೂ ಸಾವಿರಾರು ವರ್ಷದ ಹಿ೦ದೆಯೇ ಹೇಳಲಾಗಿದೆ.

परापश्यन्तीमध्यमावैखरी इति चतुर्वाग्रूपा: ॥
-      ಪರಾ ಪಶ್ಯ೦ತೀ ಮಧ್ಯಮಾ ವೈಖರೀ ಎ೦ದು ವಾಗ್ದೇವಿಗೆ 4 ರೂಪಗಳು.

ऋग्वॆद १-१६४-४५ -
चत्वारि वाक्परिमिता पदानि तानि विदुर्ब्रह्मणा ये मनीषिण:
गुहा त्रीणि निहता नॆण्गयन्ती तुरीयम् वाचॊ मनुष्या वदन्ती ॥

- 4 ವಾಕ್ ರೂಪಗಳು ಜ್ಞಾನಿಗಳಿಗೆ ತಿಳಿದಿರುತ್ತದೆ. ಅದರಲ್ಲಿ 3 ಗುಹ್ಯತಮವಾದವುಗಳು.

ಹೀಗೆ ಸರಸ್ವತಿಗೆ ನಾಲ್ಕು  ರೂಪಗಳು ಅವಳ ಒ೦ದು ರೂಪ ಮಾತ್ರ ಸಾಮಾನ್ಯರು ತಿಳಿಯುತ್ತಾರೆ ಎ೦ದು.. ನಮ್ಮ ಪ್ರಾಚೀನರು ತಮ್ಮ ಜ್ಞಾನವನ್ನು ಸಾ೦ಕೇತಿಕ ರೂಪದಲ್ಲಿ ಸ೦ಗ್ರಹಿಸಿಟ್ಟಿದ್ದರಿ೦ದ ಅವುಗಳ ಅರ್ಥ ನಮಗೆ ತಿಳಿಯದೆ ಅವುಗಳನ್ನು ಮೂಢನ೦ಬಿಕೆ, ಗೊಡ್ಡು ತಿಳುವಳಿಕೆ ಎ೦ದು ನಿರ್ಲಕ್ಷಿಸಿಬಿಟ್ಟಿದ್ದೇವೆ. ಕೇವಲ ಮ೦ತ್ರಗಳಿ೦ದ ಹಾವು ಚೇಳುಗಳ ವಿಷವನ್ನು, ನ೦ಜನ್ನು ಕಡಿಮೆ ಮಾಡುವ, ಪುಟ್ಟ ಬಾಲೆಗಳ ಅಳುವನ್ನು ನಿಲ್ಲಿಸುವ, ಉಳುಕಿನ ನೋವನ್ನು ಕಡಿಮೆ ಮಾಡುವ ಅನೇಕ ನಾಟಿ ವೈದ್ಯರು ಇ೦ದಿಗೂ ನಮ್ಮ ನಡುವೆ ಇದ್ದಾರೆ. ಅದೇ ರೀತಿ ಇನ್ನು ಎಷ್ಟೊ ಬಗೆಯ ಮ೦ತ್ರದ ಶಕ್ತಿಯನ್ನು ತಿಳಿದಿರುವ ವಿದ್ವಾ೦ಸರೂ ಇದ್ದಾರೆ. ಹಾಗೆಯೇ ಎಷ್ಟೊ ಬಗೆಯ ಶಬ್ಧಶಕ್ತಿಗಳ ಜ್ಞಾನವನ್ನು ನಾವು ಈಗಾಗಲೇ ನಮ್ಮ ಹಿರಿಯರಿ೦ದ ತಿಳಿದುಕೊಳ್ಳದೆ ಕಳೆದುಕೊ೦ಡಿದ್ದೇವೆ. ಆದ್ದರಿ೦ದ ಈ ವಿಷಯದಲ್ಲಿ ನಮಗಿರುವ ತಿರಸ್ಕಾರವನ್ನು ಮೊದಲು ನಾವು ತೊಡೆದುಹಾಕಬೇಕು.. ಹಾಗು ಮ೦ತ್ರಗಳಲ್ಲಿರುವ  ಶಬ್ಧಶಕ್ತಿಯ ಬಗ್ಗೆ ಹೆಚ್ಚು ಹೆಚ್ಚು ಸ೦ಶೋಧನೆಗಳಾಗಬೇಕು ಎ೦ಬುದೇ ನಮ್ಮ ಆಶಯ.

Sunday, 18 August 2013

ಹಾರ್ವರ್ಡ್ ಅಧ್ಯಯನಕ್ಕೆ ಕಾರಣವಾದ ಮಹಾಕುಂಭಮೇಳ









ಅತಿ ಹೆಚ್ಚು ಸಂಖ್ಯೆಯ ಜನರು ಸೇರುವ ಜಗತ್ತಿನ ಅತಿ ದೊಡ್ಡ ಸಮಾವೇಶ ಯಾವುದು?
ಕರ್ಬಾಲಾದಲ್ಲಿ ಇಮಾಂ ಹುಸೇನರ ದರ್ಶನಕ್ಕೆ ಸೇರುವ 25 ದಶಲಕ್ಷ ಸಂಖ್ಯೆಯ ಸಮಾವೇಶವೇ?
ಕೇರಳದ ಶಬರಿಮಲೈ ಕ್ಷೇತ್ರದಲ್ಲಿ ಮಕರವಿಳಕ್ಕು ದರ್ಶನಕ್ಕೆ ಸೇರುವ 5 ದಶಲಕ್ಷ ಸಂಖ್ಯೆಯ ಕಾರ್ಯಕ್ರಮವೆ?
ಜಾಗತಿಕ ಮಟ್ಟದ ಕ್ರೀಡಾಕೂಟವಾಗಿರುವ ಒಲಿಂಪಿಕ್ ಗೇಮ್ಸ್‌ಗೆ ಸೇರಲಿರುವ ಕೆಲವು ದಶಲಕ್ಷ ಸಂಖ್ಯೆಯ ಕಾರ್ಯಕ್ರಮವೆ?


       ಉಹುಂ, ಖಂಡಿತ ಇದ್ಯಾವುದೂ ಅಲ್ಲ. ಇವೆಲ್ಲ ಜಗತ್ತಿನಲ್ಲಿ ಜನರು ಸೇರುವ ಅತಿ ದೊಡ್ಡ ಇವೆಂಟ್‌ಗಳೇ ಆಗಿರಬಹುದು. ಅದರಲ್ಲಿ ಎರಡು ಮಾತಿಲ್ಲ. ಆದರೆ ಇವೆಲ್ಲಕ್ಕಿಂತಲೂ ಅತೀ ಹೆಚ್ಚು ಜನರು ಸೇರುವ ಒಂದು ಅತೀ ದೊಡ್ಡ ಸಂಖ್ಯೆಯ ಇವೆಂಟ್ ಅಂದರೆ, ಪ್ರತೀ 12 ವರ್ಷಕ್ಕೊಮ್ಮೆ ಪ್ರಯಾಗದಲ್ಲಿ ನಡೆಯುವ ಮಹಾಕುಂಭಮೇಳ. ಭೂಮಿಯ ಮೇಲೆ ಇದಕ್ಕಿಂತ ಹೆಚ್ಚು ಜನರು ಸೇರುವ ಸಮಾವೇಶ ಇನ್ನೊಂದಿಲ್ಲ. ಏಕೆಂದರೆ ಈ ವರ್ಷ ಜನವರಿ 14 ರಿಂದ ಮಾರ್ಚ್ 10 ರವರೆಗೆ ನಡೆದ ಮಹಾಕುಂಭಮೇಳದಲ್ಲಿ ಭಾಗವಹಿಸಿದ್ದವರ ಒಟ್ಟು ಸಂಖ್ಯೆ ಸುಮಾರು 10 ಕೋಟಿ!

  
   ಯಾವುದೇ ದೊಡ್ಡ ಮಟ್ಟದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕೆಂದಾದರೆ ಪೂರ್ವಭಾವಿಯಾಗಿ ಸಾಕಷ್ಟು ದಿನಗಳ ಮುಂಚಿತವಾಗಿ ಅದಕ್ಕೆ ಸಂಬಂಧಿಸಿದ ಪ್ರಚಾರ, ಸಿದ್ಧತೆ, ಇನ್ನಿತರ ಅಗತ್ಯ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ಪ್ರಚಾರವಿಲ್ಲದೆ ಇಂದಿನ ದಿನಗಳಲ್ಲಿ ಯಾವುದೇ ಕಾರ್ಯಕ್ರಮ ಯಶಸ್ವಿಯಾಗಿ ನಡೆಯದು ಎಂಬ ಸನ್ನಿವೇಶ ಸೃಷ್ಟಿಯಾಗಿರುವಾಗ, ಪ್ರಚಾರವೇ ಇಲ್ಲದೆ ಮಹಾಕುಂಭಮೇಳಕ್ಕೆ ಹತ್ತು ಕೋಟಿಯಷ್ಟು ಜನರು ದೇಶದ ಮೂಲೆಮೂಲೆಗಳಿಂದ ಬಂದು ಧನ್ಯರಾಗುತ್ತಾರೆಂದರೆ ನಿಮಗೆ ಅಚ್ಚರಿಯಾಗಬಹುದಲ್ಲವೆ? ನಿಮಗೆ ಅಚ್ಚರಿಯಾಗಬಹುದಾದರೂ ಇದು ಮಾತ್ರ ವಾಸ್ತವ. ಕುಂಭಮೇಳಕ್ಕೆ ಯಾವುದೇ ಪ್ರಚಾರ ಸರ್ಕಾರದಿಂದಾಗಲಿ, ಇತರೆ ಖಾಸಗಿ ಸಂಸ್ಥೆಗಳಿಂದಾಗಲಿ ನಡೆಯುವುದಿಲ್ಲ. ಪತ್ರಿಕೆಗಳಲ್ಲಿ, ಟಿವಿ ವಾಹಿನಿಗಳಲ್ಲಿ ಈ ಬಗ್ಗೆ ಜಾಹೀರಾತು ಕೂಡ ಪ್ರಕಟವಾಗುವುದಿಲ್ಲ. ಪಂಚಾಂಗದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಕುಂಭಮೇಳ ಆರಂಭವಾಗುವ ದಿನವನ್ನು ಚಿಕ್ಕದಾಗಿ ಪ್ರಕಟಿಸಲಾಗಿರುತ್ತದೆ, ಅಷ್ಟೆ. ಅಲ್ಲಿಗೆ ಬರುವ ಕೋಟ್ಯಂತರ ಮಂದಿಗೆ ಅದೊಂದೇ ಸೂಚನೆ. ಇನ್ನಾವುದೇ ಆಮಂತ್ರಣ, ಕರೆ ಅವರಿಗಿರುವುದಿಲ್ಲ. ಆದರೂ ಕುಂಭಮೇಳದಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಹೆಚ್ಚುತ್ತಿದೆಯೇ ಹೊರತು ಕಡಿಮೆಯಾಗುತ್ತಿಲ್ಲ. ಇದೊಂದು ಜಗತ್ತಿನ ವಿಸ್ಮಯ! ಅದಕ್ಕೇ, ಅತೀ ಹೆಚ್ಚು ಜನರು ಸೇರುವ ಜಗತ್ತಿನ ಅತಿ ದೊಡ್ಡ ಸಮಾವೇಶ ಇದೆಂದು ವಿಕ್ಕಿಪೀಡಿಯಾದಲ್ಲೂ ದಾಖಲೆಯಾಗಿರುವುದು.


   ಕುಂಭಮೇಳ ಎಂಬ ಹೆಸರೇ ವಿಚಿತ್ರವಾದುದು. ಪೌರಾಣಿಕ ಇತಿಹಾಸ ಗೊತ್ತಿಲ್ಲದವರಿಗೆ ಇದೆಂತಹ ವಿಚಿತ್ರ ಮೇಳ ಎಂದೆನಿಸದೆ ಇರದು. ಸಂಸ್ಕೃತದಲ್ಲಿ ಕುಂಭವೆಂದರೆ ಮಡಿಕೆ. ಅಷ್ಟನ್ನೇ ಅರ್ಥೈಸಿಕೊಂಡರೆ ಮಡಿಕೆಗಳನ್ನು ಮಾರಾಟ ಮಾಡುವ ಮೇಳ ಇದಾಗಿರಬಹುದೇ ಎಂದು ಕೆಲವರು ವ್ಯಾಖ್ಯಾನಿಸಿದರೆ ಆಶ್ಚರ್ಯವಿಲ್ಲ. ಕುಂಭಮೇಳಕ್ಕೊಂದು ಐತಿಹ್ಯವೇ ಇದೆ. ಪುರಾಣಕಾಲದಲ್ಲಿ ದೇವತೆಗಳು ದೂರ್ವಾಸಮುನಿಯ ಶಾಪದಿಂದ ತಮ್ಮ ಶಕ್ತಿಯನ್ನು ಕಳೆದುಕೊಂಡರಂತೆ. ಅದನ್ನು ಮರಳಿ ಪಡೆಯಲು ಅವರು ಬ್ರಹ್ಮ ಹಾಗೂ ಶಿವನ ಮೊರೆ ಹೋದರು. ಆದರೆ ಬ್ರಹ್ಮ ಹಾಗೂ ಶಿವ ವಿಷ್ಣುವಿನ ಬಳಿ ಹೋಗಿ ಎಂದರಂತೆ. ಬಳಿಕ ದೇವತೆಗಳು ಭಗವಾನ್ ವಿಷ್ಣುವನ್ನು ಪ್ರಾರ್ಥಿಸಿದ ಬಳಿಕ ಕ್ಷೀರಸಾಗರದ ಮಥನ ನಡೆಸಿ ಅಮೃತವನ್ನು ಪಡೆಯಿರಿ. ಆ ಅಮೃತವನ್ನು ಕುಡಿದರೆ ನೀವು ಮತ್ತೆ ಶಕ್ತಿವಂತರಾಗುವಿರಿ ಎಂದನು. ಸಮುದ್ರಮಥನ ನಡೆದಾಗ ಅದರಲ್ಲಿ ತೇಲಿ ಬಂದ ಪದಾರ್ಥಗಳಲ್ಲಿ ಅಮೃತವಿದ್ದ ಕುಂಭವೂ ಒಂದು. ಆದರೆ ಸಮುದ್ರ ಮಥನದಲ್ಲಿ ಪಾಲ್ಗೊಂಡಿದ್ದ ರಾಕ್ಷಸರು ತಮಗೆ ಅಮೃತ ಬೇಕೆಂದರು. ದೇವತೆಗಳು ಬಿಡಲಿಲ್ಲ. ಪರಸ್ಪರ ಕಾದಾಟವಾಗಿ 12 ಹಗಲು ಹಾಗೂ 12 ರಾತ್ರಿಗಳ ಕಾಲ ಇದು ಮುಂದುವರಿಯಿತು. ಈ ನಡುವೆ ವಿಷ್ಣು ಅಮೃತವಿದ್ದ ಕುಂಭವನ್ನು ತನ್ನೊಂದಿಗೆ ಒಯ್ದನೆಂದು ಪುರಾಣ ಕಥೆ ಹೇಳುತ್ತದೆ. ಹಾಗೆ ಅವಸರದಲ್ಲಿ ಅಮೃತ ಕುಂಭವನ್ನು ಒಯ್ಯುವಾಗ ಅದರ ಕೆಲವು ಹನಿಗಳು ಪ್ರಯಾಗ, ಹರಿದ್ವಾರ, ಉಜ್ಜೈನಿ ಹಾಗೂ ನಾಸಿಕಗಳಲ್ಲಿ ಚೆಲ್ಲಿದವೆಂದು ಪ್ರತೀತಿ. ಅಮೃತದ ಹನಿಗಳು ಬಿದ್ದ ಈ ಕ್ಷೇತ್ರಗಳು ಪವಿತ್ರ ಕ್ಷೇತ್ರಗಳಾಗಿ ಅಲ್ಲಿ ಪ್ರತಿ 12 ವರ್ಷಕ್ಕೊಮ್ಮೆ ಲಕ್ಷಾಂತರ, ಈಗ ಕೋಟ್ಯಾಂತರ ಭಕ್ತರು ಆಗಮಿಸಿ ಧನ್ಯರಾಗುತ್ತಿದ್ದಾರೆ. ಕುಂಭಮೇಳವು ಈ ನಾಲ್ಕು ಸ್ಥಳಗಳಲ್ಲಿ ಜರಗುತ್ತದೆ. ಪ್ರತಿ 6 ವರ್ಷಕ್ಕೊಮ್ಮೆ ಹರಿದ್ವಾರ ಹಾಗೂ ಪ್ರಯಾಗಗಳಲ್ಲಿ ಅರ್ಧ ಕುಂಭಮೇಳ ನಡೆದರೆ ಪ್ರತಿ 12 ವರ್ಷಕ್ಕೊಮ್ಮೆ ಪೂರ್ಣ ಕುಂಭಮೇಳವೂ ಪ್ರಯಾಗದಲ್ಲಿ ನಡೆಯುತ್ತಿದೆ. ಗಂಗಾ, ಯಮುನಾ ಹಾಗೂ ಗುಪ್ತಗಾಮಿನಿ ಸರಸ್ವತೀ ನದಿ ಸಂಗಮಿಸುವ ತ್ರಿವೇಣಿ ಸಂಗಮದಲ್ಲಿ ಭಕ್ತರು, ಸಂತರು, ಸಾಧುಗಳು, ಸಂನ್ಯಾಸಿಗಳು ಲಕ್ಷಾಂತರ, ಕೋಟ್ಯಾಂತರ ಸಂಖ್ಯೆಯಲ್ಲಿ ಸ್ನಾನ ಮಾಡಿ ತಮ್ಮ ಜೀವನ ಪಾವನವಾಯಿತೆಂದು ಭಾವಿಸುತ್ತಾರೆ. ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡುವುದೇ ಪ್ರತಿಯೊಬ್ಬರ ಪ್ರಮುಖ ಕರ್ತವ್ಯ. ಆ ಒಂದು ಸ್ನಾನಕ್ಕಾಗಿ ಅದೆಷ್ಟೋ ಸಾವಿರ ಮೈಲಿ ದೂರದಿಂದಲೂ ಭಕ್ತರು ಆಗಮಿಸುತ್ತಾರೆ. ನೂಕು ನುಗ್ಗಲಿದ್ದರೂ ಕಷ್ಟಸಾಧ್ಯವಾದರೂ ಹೇಗೋ ಆ ಪವಿತ್ರ ಸಂಗಮದಲ್ಲಿ ಒಂದು ಮುಳುಗು ಹಾಕಲೇಬೇಕೆಂಬ ದೃಢಸಂಕಲ್ಪ ವಯೋವೃದ್ಧರಿಗೂ ಇರುತ್ತದೆ. ಸಂಕಲ್ಪ ಈಡೇರದೆ ಅಲ್ಲಿಂದ ವಾಪಸ್ ಯಾರೂ ತೆರಳುವುದಿಲ್ಲ. ಅದೇ ಕುಂಭಮೇಳದ ವಿಶೇಷತೆ.


    ಪ್ರಾಚೀನ ಭಾರತದ ಯಾತ್ರೆ ಕೈಗೊಂಡು ಭಾರತದ ಮಹಾನತೆಯ ಬಗ್ಗೆ ಇತಿಹಾಸದಲ್ಲಿ ದಾಖಲಿಸಿದ ಚೈನಾದ ಯಾತ್ರಿಕ ಹ್ಯುಯನ್‌ತ್ಸಾಂಗ್ ಕೂಡ ಕುಂಭಮೇಳದ ಕುರಿತು ಬರೆದಿದ್ದಾನೆ. ಹರ್ಷವರ್ಧನನ ಕಾಲದಲ್ಲಿ ಭಾರತಕ್ಕೆ ಆಗಮಿಸಿದ್ದ ಹ್ಯುಯನ್‌ತ್ಸಾಂಗ್ ದಾಖಲೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ೧೮೯೫ರಲ್ಲಿ ಖ್ಯಾತ ಲೇಖಕ ಮಾರ್ಕ್ ಟ್ವೈನ್ ಕುಂಭಮೇಳವನ್ನು ವೀಕ್ಷಿಸಿ ಅನಂತರ ಆತ ತನ್ನ ಅನುಭವವನ್ನು ದಾಖಲಿಸಿರುವುದು ಹೀಗೆ: “It is wonderful, the power of a faith like that, that can make multitudes upon multitudes of the old and weak and the young and frail enter without hesitation or complaint upon such incredible journeys and endure the resultant miseries without repining. It is done in love, or it is done in fear; I do not know which it is. No matter what the impulse is, the act born of it is beyond imagination, marvelous to our kind of people, the cold whites.”  ಕುಂಭಮೇಳ ಆತನಿಗೆ ಒಂದು ವಿಸ್ಮಯವೆನಿಸಿದ್ದು ಹೀಗೆ. ಕಲ್ಪನೆಗೂ ಮೀರಿದ ಸಂಗತಿ ಇದೆಂದು ಆತ ಬಣ್ಣಿಸಿರುವುದು ಉತ್ಪ್ರೇಕ್ಷೆಯೇನಲ್ಲ.


    ಕುಂಭಮೇಳದಲ್ಲಿ ನಡೆಯುವುದು ಪವಿತ್ರ ಸ್ನಾನ, ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು, ಉದ್ಬೋಧನೆ, ಭಜನೆ, ಕೀರ್ತನೆ, ಬಡವರಿಗೆ ಸಾಮೂಹಿಕ ಅನ್ನದಾನ, ಧಾರ್ಮಿಕ ಉಪನ್ಯಾಸ ಇತ್ಯಾದಿ ಇತ್ಯಾದಿ. ಇದೊಂದು ಸಂಪೂರ್ಣ ಧಾರ್ಮಿಕ ಸಮಾವೇಶ. ಇಲ್ಲಿ ಭಕ್ತಿ, ಧಾರ್ಮಿಕತೆಗೇ ಆದ್ಯತೆ. ಹಾಗಾಗಿಯೇ ಇಲ್ಲಿ ಯಾವುದೇ ಗಲಾಟೆ ಗೌಜು ಇರುವುದಿಲ್ಲ. ಯಾರಿಗೂ ಊಟ ಸಿಗಲಿಲ್ಲವೆಂದು ಇಲ್ಲಿ ಪ್ರತಿಭಟನೆ ಕೇಳಿಬರುವುದಿಲ್ಲ. ತಮಗೆ ಸೂಕ್ತ ವಸತಿ ಸಿಗಲಿಲ್ಲವೆಂದು ಯಾರೂ ಅಪಸ್ವರವೆತ್ತುವುದಿಲ್ಲ. ಘನತೆಗೆ ತಕ್ಕಂತೆ ತಮ್ಮನ್ನು ಗೌರವಿಸಲಿಲ್ಲ ಎಂದು ಪ್ರತಿಷ್ಠಿತರಾರೂ ಇಲ್ಲಿ ಕೊರಗುವುದಿಲ್ಲ. ಏಕೆಂದರೆ ಇದು ಜನರೇ ಆಚರಿಸುವ ಮೇಳ. ಇಲ್ಲಿ ಯಾರಿಗೆ ಯಾರೂ ಗೌರವ ನೀಡಬೇಕಾದ ಅಗತ್ಯವಿರುವುದಿಲ್ಲ. ಎಲ್ಲ ಗೌರವವೂ ಆ ಪರಮಾತ್ಮನಿಗೇ ಮೀಸಲು. ಪವಿತ್ರ ಸ್ನಾನದಿಂದ ಪುನೀತರಾಗಿ ಪರಮಾತ್ಮನ ಕೃಪಾಕಟಾಕ್ಷಕ್ಕೆ ಪಾತ್ರರಾಗುವುದೊಂದೇ ಎಲ್ಲರ ಹೆಬ್ಬಯಕೆ. ಕುಂಭಮೇಳ ನಡೆಯುವ ಸಂದರ್ಭದಲ್ಲಿ ಚರ್ಮ ಸೀಳುವ ತೀವ್ರ ಚಳಿ ಬಾಧಿಸುತ್ತಿದ್ದರೂ ಅಲ್ಲಿಗೆ ಬಂದ ಭಕ್ತರಿಗೆ ಅದೊಂದು ಅಡ್ಡಿ ಎನಿಸುವುದೇ ಇಲ್ಲ. ಅಂತಹ ಚಳಿಯಲ್ಲೂ ತ್ರಿವೇಣಿ ಸಂಗಮದ ಶೀತಲ ನೀರು ಅವರನ್ನು ಕೈಬೀಸಿ ಕರೆಯುತ್ತದೆ. ಸ್ನಾನ ಮಾಡಲು ಪ್ರಚೋದಿಸುತ್ತದೆ. ತುಣುಕು ಬಟ್ಟೆಯನ್ನೂ ಧರಿಸದ ನಗ್ನ ನಾಗಾ ಸಂನ್ಯಾಸಿಗಳಂತೂ ಖಡ್ಗ ಹಿಡಿದು ಹರಹರ ಗಂಗೇ, ಜೈ ಭೋಲೇನಾಥ್ ಎಂದು ಘೋಷಣೆ ಕೂಗುತ್ತಾ ತ್ರಿವೇಣಿ ಸಂಗಮದಲ್ಲಿ ಧುಮುಕಿ ಸ್ನಾನದ ಸಂತೋಷ ಅನುಭವಿಸುವ ಆ ದೃಶ್ಯವನ್ನು ಪ್ರತ್ಯಕ್ಷ ನೋಡಿಯೇ ಸವಿಯಬೇಕು. ಸಾವಿರಾರು ಸಂಖ್ಯೆಯಲ್ಲಿ ಹಿಂಡುಹಿಂಡಾಗಿ ಬರುವ ನಾಗಾ ಸಂನ್ಯಾಸಿಗಳನ್ನು ಕಂಡರೆ ಯಾರೂ ತಮಾಷೆ ಮಾಡಲಾರರು. ಅವರ ಕಾಲಿಗೆರಗಿ ಆಶೀರ್ವಾದ ಬೇಡುತ್ತಾರೆ. ಅವರು ಆಶೀರ್ವದಿಸಿದರೆ ತಮ್ಮ ಜನ್ಮ ಪಾವನವಾದೀತೆಂದು ಆಶಿಸುತ್ತಾರೆ. ಮೈತುಂಬ ಬೂದಿ ಬಳಿದುಕೊಂಡು, ಸಂಜೆಯ ವೇಳೆಗೆ ಗಾಂಜಾ ಸೇವಿಸುತ್ತಲೋ ಇಲ್ಲವೆ ಧ್ಯಾನಸ್ಥ ಸ್ಥಿತಿಯಲ್ಲೋ ಕಣ್ಣುಮುಚ್ಚಿ ಕುಳಿತ ನಾಗಾ ಸಂನ್ಯಾಸಿಗಳು ವಿಚಾರವಾದಿಗಳ ಪಾಲಿಗೆ ಗೇಲಿಯ ವಸ್ತುವಾದರೂ ಅವರನ್ನು ಕುಹಕ ದೃಷ್ಟಿಯಿಂದ ಯಾರೂ ನೋಡುವ ಧೈರ್ಯ ತೋರುವುದಿಲ್ಲ.

 
    ಒಮ್ಮೆ ಕುಂಭಮೇಳದ ಸಂದರ್ಭದಲ್ಲಿ ನಗ್ನ ನಾಗಾ ಸಂನ್ಯಾಸಿಗಳು ಹರಹರ ಮಹಾದೇವ್ ಘೋಷಣೆ ಕೂಗುತ್ತಾ ಗಂಗೆಯ ಸ್ನಾನಕ್ಕೆ ಧುಮುಕಿದರು. ಸ್ನಾನವಾದ ಬಳಿಕ ಅವರೆಲ್ಲ ದಡಕ್ಕೆ ಬರುತ್ತಿರುವಾಗ ಶ್ರೀಮಂತ ಸೇಟ್‌ಜೀ ಒಬ್ಬ 1 ಲಕ್ಷ ರೂ.ಗಳ ನೋಟಿನ ಕಂತೆಯೊಂದನ್ನು ಒಬ್ಬ ನಾಗಾ ಸಂನ್ಯಾಸಿಯ ಕೈಗೆ ನೀಡಿ, ತನ್ನನ್ನು ಆಶೀರ್ವದಿಸಬೇಕೆಂದು ಕೋರಿದ. ನೋಟಿನ ಕಂತೆಯನ್ನು ಕೈಗೆ ತೆಗೆದುಕೊಂಡ ಆ ನಾಗಾ ಸಂನ್ಯಾಸಿ ಒಮ್ಮೆ ಗಹಗಹಿಸಿ ನಗುತ್ತಾ, “ಇನ್ ರುಪಯೋಂಸೇ ಮುಝೆ ಕ್ಯಾ ಫಾಯಿದಾ?” ಎನ್ನುತ್ತಾ ಆ ನೋಟುಗಳನ್ನು ಎಲ್ಲರೂ ನೋಡುತ್ತಿದ್ದಂತೆ ಗಂಗಾನದಿಗೆ ಎಸೆದ. ಪಾಪ, ಭಕ್ತಿಯಿಂದ ಅದನ್ನರ್ಪಿಸಿದ ಸೇಟ್‌ಜೀ ಪಾಡು ಹೇಗಾಗಿರಬಹುದು! ನಾಗಾ ಸಂನ್ಯಾಸಿಗಳೇ ಹಾಗೆ. ಯಾವುದೇ ಐಹಿಕ ಭೋಗಗಳು ಅವರನ್ನು ಕಾಡದು. ಅವರಿರುವುದೇ ಹಿಮಾಲಯದ ಯಾವುದೋ ರಹಸ್ಯ ಸ್ಥಳಗಳಲ್ಲಿ. ತಿನ್ನುವುದು ಕೈಗೆ ಸಿಕ್ಕಿದ ಗೆಡ್ಡೆಗೆಣಸಿನಂತಹ ಕಚ್ಚಾ ಆಹಾರ. ಮೈಮುಚ್ಚಲು ಉಡುಪಿನ ಗೊಡವೆ ಅವರಿಗೆ ಬೇಕಿಲ್ಲ. ಅವರದು ಮುಕ್ತ ಬದುಕು. ಅಂಥವರೂ ಕೂಡ 12 ವರ್ಷಕ್ಕೊಮ್ಮೆ ಕುಂಭಮೇಳದ ಸಂದರ್ಭದಲ್ಲಿ ತಪ್ಪದೇ ಪ್ರಯಾಗಕ್ಕೆ ಬಂದು ಸ್ನಾನ ಮಾಡುತ್ತಾರೆ.


    ಕೋಟ್ಯಾಂತರ ಮಂದಿ ಪಾಲ್ಗೊಳ್ಳುವ ಕುಂಭಮೇಳದಲ್ಲಿ ಯಾವುದೇ ದೊಡ್ಡ ಅವಘಡಗಳು ಸಂಭವಿಸುವುದಿಲ್ಲ ಎನ್ನುವುದು ಇನ್ನೊಂದು ವಿಶೇಷತೆ. ಅಲ್ಲಿ ಲಕ್ಷಾಂತರ ಮಂದಿ ಮಹಿಳೆಯರು ಬರುತ್ತಾರೆ. ಆದರೆ ಯಾವುದೇ ಮಾನಭಂಗದ ಘಟನೆ ನಡೆಯುವುದಿಲ್ಲ. ಕೋಟ್ಯಂತರ ಮಂದಿ ಅಲ್ಲಿ ಬೀಡು ಬಿಟ್ಟಿರುತ್ತಾರೆ. ಆದರೆ ಯಾವುದೇ ಕಳ್ಳತನದ ಪ್ರಸಂಗ ವರದಿಯಾಗುವುದಿಲ್ಲ. ಆದರೆ ಕೆಲವೊಮ್ಮೆ ಜನರ ಅವಸರ ಪ್ರವೃತ್ತಿಯಿಂದ ಚಿಕ್ಕಪುಟ್ಟ ಅವಘಡಗಳು ಸಂಭವಿಸಿವೆ ಎನ್ನುವುದು ನಿಜ. 2003 ರಲ್ಲಿ ನಾಸಿಕದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ 39 ಯಾತ್ರಿಕರು ಕಾಲ್ತುಳಿತಕ್ಕೀಡಾಗಿ ಸಾವಿಗೀಡಾಗಿದ್ದರು. ಸಾಧುವೊಬ್ಬ ಜನರತ್ತ ಎಸೆದ ಕೆಲವು ಬೆಳ್ಳಿ ನಾಣ್ಯಗಳನ್ನು ಆರಿಸಿಕೊಳ್ಳುವ ಧಾವಂತದಲ್ಲಿ ಈ ಅವಘಡ ಸಂಭವಿಸಿತ್ತು. 1954ರ ಕುಂಭಮೇಳದ ಸಂದರ್ಭದಲ್ಲಿ 500 ಮಂದಿ ಕಾಲ್ತುಳಿತಕ್ಕೀಡಾಗಿ ಸಾವಿಗೀಡಾಗಿದ್ದರು. ಈ ಬಾರಿಯ ಕುಂಭಮೇಳದಲ್ಲೂ ಅಲಹಾಬಾದ್ ರೈಲ್ವೇ ನಿಲ್ದಾಣದ ಬಳಿ 36 ಮಂದಿ ಕಾಲ್ತುಳಿತಕ್ಕೀಡಾಗಿ ಅಸುನೀಗಿದ್ದರು. 1892 ರಲ್ಲಿ ಹರಿದ್ವಾರದಲ್ಲಿ ನಡೆದ ಕುಂಭಮೇಳದ ಸಂದರ್ಭದಲ್ಲಿ ಕಾಲರಾ ಸಾಂಕ್ರಾಮಿಕ ರೋಗ ಕಾಣಿಸಿಕೊಂಡಿತ್ತು. ಆದರೆ ಕೋಟ್ಯಂತರ ಮಂದಿ ಸೇರುವ ಅತಿ ದೊಡ್ಡ ಸಮಾವೇಶದಲ್ಲಿ ಇಂತಹ ಚಿಕ್ಕಪುಟ್ಟ ಅವಘಡಗಳು ಸ್ವಾಭಾವಿಕ.

ಜಗತ್ತಿನ ಅತಿ ದೊಡ್ಡ , ಅತಿ ಹೆಚ್ಚು ಸಂಖ್ಯೆಯ ಜನರು ಸೇರುವ ಸಮಾವೇಶವಾಗಿರುವ ಕುಂಭಮೇಳದ ಬಗ್ಗೆ ಈಗಾಗಲೇ ಸಾಕಷ್ಟು ಸಾಕ್ಷ್ಯಚಿತ್ರಗಳು ಬಿಡುಗಡೆಯಾಗಿವೆ. 1982 ರಲ್ಲಿ ಬಂಗಾಳೀ ಚಿತ್ರ ನಿರ್ದೇಶಕ ದಿಲೀಪ್‌ರಾಯ್ ಅಮೃತ ಕುಂಭೇರ್ ಸಂಧಾನೆ ಎಂಬ ಸಾಕ್ಷ್ಯ ಚಿತ್ರವೊಂದನ್ನು ನಿರ್ಮಿಸಿದ್ದರು. ಗ್ರಹಂ ಡೇ 2001 ರಲ್ಲಿ ಕುಂಭಮೇಳ : ದ ಗ್ರೇಟೆಸ್ಟ್ ಶೋ ಆನ್ ಅರ್ಥ್ ಎಂಬ ಚಿತ್ರ ನಿರ್ಮಿಸಿದ್ದ. 2004 ರಲ್ಲಿ ನದೀಂವುದ್ದೀನ್ ಕುಂಭಮೇಳದ ಕುರಿತು ನಿರ್ಮಿಸಿದ ಸಾಕ್ಷ್ಯಚಿತ್ರ – ಕುಂಭಮೇಳ : ಸಾಂಗ್ಸ್ ಆಫ್ ದಿ ರಿವರ್. 2010 ರಲ್ಲಿ ಅಮೆರಿಕದ “ಸಿಬಿಎಸ್ ಸಂಡೇ ಮಾರ್ನಿಂಗ್” ಎಂಬ ಜನಪ್ರಿಯ ಟಿವಿ ಕಾರ್ಯಕ್ರಮದಲ್ಲಿ ಹರಿದ್ವಾರದ ಕುಂಭಮೇಳದ ಕುರಿತು ವಿಸ್ತೃತ ಕವರೇಜ್ ನೀಡಲಾಗಿತ್ತು. 2004 ರಲ್ಲಿ ನಿಕ್ ಡೇ ಎಂಬ ಇನ್ನೊಬ್ಬ ನಿರ್ದೇಶಕ ಶಾರ್ಟ್ ಕಟ್ ಟು ನಿರ್ವಾಣ : ಕುಂಭಮೇಳ ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದ್ದ. ಇಂತಹ ಅದೆಷ್ಟೋ ಸಾಕ್ಷ್ಯಚಿತ್ರಗಳು ನಿರ್ಮಾಣವಾಗಿವೆ.
ಕಳೆದ ಜನವರಿ 14 ರಿಂದ 55 ದಿನಗಳ ಕಾಲ ನಡೆದ ಕುಂಭಮೇಳದಲ್ಲಿ ಭಾಗವಹಿಸಿದವರ ಸಂಖ್ಯೆ ಸುಮಾರು 10 ಕೋಟಿ. ಮಕರ ಸಂಕ್ರಾತಿ ದಿನದಂದು 1 ಕೋಟಿಗೂ ಹೆಚ್ಚು ಭಕ್ತರು ಆಗಮಿಸಿದ್ದರು. ಫೆ. 10 ರ ಮೌನಿ ಅಮವಾಸ್ಯೆಯ ಪವಿತ್ರ ದಿನದಂದು ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದವರ ಸಂಖ್ಯೆ 3 ಕೋಟಿಗೂ ಹೆಚ್ಚು. ವಿದೇಶೀ ಯಾತ್ರಿಕರ ಸಂಖ್ಯೆ ಈ ಬಾರಿ 10 ಲಕ್ಷಕ್ಕೂ ಅಧಿಕ ಮಂದಿ. ಕುಂಭಮೇಳಕ್ಕೆ ಈ ಬಾರಿಯ ಒಟ್ಟು ಬಜೆಟ್ ಗಾತ್ರ 1,200 ಕೋಟಿ ರೂ. (2001 ರ ಕುಂಭಮೇಳಕ್ಕಿಂತ 200 ಕೋಟಿ ಹೆಚ್ಚಿನ ಮೊತ್ತ) ಕುಂಭಮೇಳದ ಕಾರಣಕ್ಕಾಗಿ ಉದ್ಯೋಗ ದೊರಕಿದವರ ಸಂಖ್ಯೆ 6 ಲಕ್ಷ. ಕುಂಭಮೇಳದಿಂದಾಗಿ ಉ.ಪ್ರ. ಸರ್ಕಾರಕ್ಕೆ ಹರಿದು ಬಂದ ಆದಾಯ 12 ಸಾವಿರ ಕೋಟಿ ರೂ. ಭಕ್ತರ ಅನುಕೂಲಕ್ಕಾಗಿ 571 ಕಿ.ಮೀ.ನಷ್ಟು ನೀರಿನ ಪೈಪ್‌ಲೈನ್, 800 ಕಿ.ಮೀ.ನಷ್ಟು ವಿದ್ಯುತ್ ವಯರ್ ಹಾಗೂ 68 ವಿದ್ಯುತ್ ಸಬ್‌ಸ್ಟೇಷನ್‌ಗಳನ್ನು ನಿರ್ಮಿಸಲಾಗಿತ್ತು. ಯಾತ್ರಿಕರ ಆಹಾರ ವ್ಯವಸ್ಥೆಗಾಗಿ 125 ಪಡಿತರ ಅಂಗಡಿಗಳು, 4 ಗೋದಾಮುಗಳನ್ನು ಮೇಳದ ಪ್ರದೇಶದಲ್ಲಿ ತೆರೆಯಲಾಗಿತ್ತು. ವಿಶ್ವ ಹಿಂದೂ ಪರಿಷತ್, ಬಜರಂಗದಳ ಸೇರಿದಂತೆ ಜಗತ್ತಿನಾದ್ಯಂತ ಇರುವ 2500 ಧಾರ್ಮಿಕ ಹಾಗೂ ಸಾಮಾಜಿಕ ಸಂಸ್ಥೆಗಳು, ಸಂಘಟನೆಗಳು ಕುಂಭಮೇಳದಲ್ಲಿ ಈ ಬಾರಿ ಪಾಲ್ಗೊಂಡಿದ್ದವು. ಕುಂಭಮೇಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ನಿಯೋಜಿತರಾಗಿದ್ದ ಪೊಲೀಸರ ಸಂಖ್ಯೆ 30 ಸಾವಿರ. 30 ಹೊಸ ಪೊಲೀಸ್ ಠಾಣೆಗಳನ್ನು ನಿರ್ಮಿಸಲಾಗಿತ್ತು. 72 ಅರೆ ಮಿಲಿಟರಿ ಪಡೆ ಕಂಪೆನಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಮೇಳ ನಡೆಯುವ ಜಾಗ ಹಾಗೂ ಅಲಹಾಬಾದ್ ನಗರಗಳಲ್ಲಿ 120 ಸಿಸಿ ಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. 120 ಆಂಬ್ಯುಲೆನ್ಸ್ ವಾಹನಗಳು ಶ್ರಮಿಸಿವೆ. 100 ಹಾಸಿಗೆಯ ಹೊಸ ಆಸ್ಪತ್ರೆ ಕುಂಭಮೇಳದ ಪ್ರದೇಶದಲ್ಲಿ ನಿರ್ಮಾಣವಾಗಿತ್ತು…  ಹೀಗೆ ಈ ಬಾರಿಯ ಕುಂಭಮೇಳದ ಗಮನಾರ್ಹ ಅಂಶಗಳು ಸಾಕಷ್ಟಿವೆ.
  
    ಕುಂಭಮೇಳ ಆಕರ್ಷಿಸುತ್ತಿರುವುದು ಕೇವಲ ಭಕ್ತರು, ಯಾತ್ರಿಕರನ್ನಷ್ಟೇ ಅಲ್ಲ. ದೂರದ ಹಾರ್ವರ್ಡ್ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನಿಗಳು ಹಾಗೂ ಸಂಶೋಧಕರು ಕೂಡ ಈಗ ಕುಂಭಮೇಳದ ಕುರಿತು ಗಂಭೀರವಾಗಿ ಅಧ್ಯಯನದಲ್ಲಿ ತೊಡಗಿದ್ದಾರೆ. ಕುಂಭಮೇಳದ ಸಂದರ್ಭದಲ್ಲಿ ಸುಮಾರು 50 ಮಂದಿ ಹಾರ್ವರ್ಡ್ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ವೈದ್ಯರು ಹಾಗೂ ಸಂಶೋಧಕರು ಪ್ರಯಾಗಕ್ಕೆ ಬಂದಿಳಿದಿದ್ದರು. ಅವರು ಬಂದಿದ್ದು ಪವಿತ್ರ ಸ್ನಾನಕ್ಕಾಗಿ ಅಲ್ಲ ಅಥವಾ ಪುಣ್ಯ ಸಂಪಾದನೆಗೂ ಅಲ್ಲ. ಕುಂಭಮೇಳಕ್ಕೆ ಲಾಗಾಯ್ತಿನಿಂದ ಯಾಕೆ ಇಷ್ಟೊಂದು ಅಪಾರ ಸಂಖ್ಯೆಯ ಜನರು ಹರಿದು ಬರುತ್ತಿದ್ದಾರೆ, ಇಷ್ಟೊಂದು ಜನರು ಸೇರಿದರೂ ಯಾವುದೇ ಘರ್ಷಣೆ, ಅವಘಡ ಏಕೆ ನಡೆಯುವುದಿಲ್ಲ, ಯಾವುದೇ ಪ್ರಾಥಮಿಕ ವ್ಯವಸ್ಥೆ, ಸೌಲಭ್ಯವಿಲ್ಲದಿದ್ದರೂ ಯಾತ್ರಿಕರು ಯಾಕೆ ಬೇಸರ ಮಾಡಿಕೊಳ್ಳುವುದಿಲ್ಲ… ಮುಂತಾದ ಅನೇಕ ಉತ್ತರ ಸಿಗದ ನಿಗೂಢ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಉತ್ತರ ಹುಡುಕಲು ಕುಂಭಮೇಳದಲ್ಲಿ ಅವರು ಪ್ರಯತ್ನಿಸಿದರು. ಹಲವು ಬಗೆಯ ಅಧ್ಯಯನಗಳನ್ನು ನಡೆಸಿದರು. ಇದಕ್ಕಾಗಿ ಅವರೆಲ್ಲ ಕುಂಭಮೇಳ ಪರಿಸರದ ಬೀದಿಬೀದಿಗಳಲ್ಲಿ ಸುತ್ತಾಡಿದರು. ಭಕ್ತರ ಭಜನೆಗಳನ್ನು ಆಲಿಸಿದರು. ನಗ್ನ ನಾಗಾ ಸಂನ್ಯಾಸಿಗಳನ್ನು ಹತ್ತಿರದಿಂದ ಕಂಡರು. ಕಷ್ಟಪಟ್ಟು ನದಿಗಿಳಿದು ಸ್ನಾನ ಮಾಡಿದರೂ ಮೇಲೆ ಬರುವಾಗ ಧನ್ಯತೆ ಕಾಣುತ್ತಿದ್ದ ಭಕ್ತರನ್ನು ಕಂಡು ಅಚ್ಚರಿಪಟ್ಟರು. ಇಷ್ಟಾದರೂ ಕುಂಭಮೇಳ ತನ್ನೊಳಗೇ ಅಡಗಿಸಿಕೊಂಡಿದ್ದ ನಿಗೂಢತೆಯನ್ನು ಅವರಿಂದ ಭೇದಿಸಲು ಸಾಧ್ಯವಾಗಿಲ್ಲ. ಅವರೆಲ್ಲ ಮುಂದೆ ಹನ್ನೆರಡು ವರ್ಷಗಳ ಬಳಿಕ ನಡೆಯುವ ಕುಂಭಮೇಳಕ್ಕೆ ಮತ್ತೆ ಬಂದು ಅಧ್ಯಯನ ಮಾಡಬಹುದು. ಒಂದಂತೂ ನಿಜ. ಕುಂಭಮೇಳವೆನ್ನುವುದು ಕೇವಲ ಪಾಪ ಪರಿಹಾರಕ್ಕಾಗಿ, ಪುಣ್ಯ ಸಂಪಾದನೆಗಾಗಿ ಇರುವ ಕಾರ್ಯಕ್ರಮವಲ್ಲ. ಅದೊಂದು ನಂಬಿಕೆಯ ಪ್ರತೀಕ. ಗಂಗೆ ಕೊಳಕಾಗಿದ್ದರೂ ಭಕ್ತರಿಗೆ ಅಸಹ್ಯವೆನಿಸುವುದಿಲ್ಲ. ಚಳಿ ಕೊರೆಯುತ್ತಿದ್ದರೂ ಪುಣ್ಯಸ್ನಾನ ಮುಗಿಸದೆ ಮರಳುವ ಮನಸ್ಸಾಗುವುದಿಲ್ಲ. ಕುಂಭಮೇಳ ಇಂತಹ ಕುತೂಹಲಗಳನ್ನು, ನಿಗೂಢತೆಗಳನ್ನು ಬಚ್ಚಿಟ್ಟುಕೊಂಡು ಜಗತ್ತಿನ ವಿಚಾರವಾದಿಗಳನ್ನು ಕಾಡಿಸುತ್ತಲೇ ಇದೆ.

ಅತೀ ಹೆಚ್ಚು ಜನರು ಸೇರುವ ಜಗತ್ತಿನ ಅತೀ ದೊಡ್ಡ ಸಮಾವೇಶವೆಂದರೆ, ಹನ್ನೆರಡು ವರ್ಷಕ್ಕೊಮ್ಮೆ ನಡೆಯುವ ಮಹಾಕುಂಭಮೇಳ. ಯಾವುದೇ ಪ್ರಚಾರವಿಲ್ಲದೆ ಭಕ್ತರು ತಾವಾಗಿಯೇ ಕೋಟ್ಯಂತರ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಕುಂಭಮೇಳ ಈಗ ಹಾರ್ವರ್ಡ್ ವಿ.ವಿ. ವಿಜ್ಞಾನಿಗಳಿಗೂ ಅಧ್ಯಯನದ ವಸ್ತುವಾಗಿದೆ. ಕುಂಭಮೇಳದ ನಿಗೂಢತೆಯನ್ನು ಭೇದಿಸಲು ಅವರು ಮುಂದಾಗಿದ್ದಾರೆ.


Reference : news13 - ನೇರ ನೋಟ